Wednesday, August 21, 2024

ಸತ್ಯ | ನ್ಯಾಯ |ಧರ್ಮ

ಮೋದಿ ಸರ್ಕಾರ ಈಗ ಪೂರ್ತಿಯಾಗಿ ಯೂ ಟರ್ನ್‌ ಸರ್ಕಾರ!

ಹೊಸ ದೆಹಲಿ: 2014ರಿಂದ ಮೊನ್ನೆಯ ಲೋಕಸಭಾ ಚುನಾವಣೆಯವರೆಗೂ ಮೋದಿಯವರ ಸರ್ಕಾರ ಆಡಿದ್ದೇ ಆಟವಾಗಿತ್ತು. ಅದು ತಾನು ತೆಗೆದುಕೊಂಡ ನಿರ್ಧಾರದಿಂದ ಹಿಂದಕ್ಕೆ ಬರುತ್ತಲೇ ಇರಲಿಲ್ಲ. 2021ರ ರೈತ ಹೋರಾಟ ಬಿಟ್ಟರೆ ಕೇಂದ್ರ ಮೋದಿ ಸರ್ಕಾರವನ್ನು ಯಾರಿಗೂ ಅಲ್ಲಾಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಅದು ರೈತರ ಪ್ರತಿಭಟನೆಗೆ ಮಣಿದು ಮೂರು ಕಾನೂನುಗಳನ್ನು ಹಿಂಪಡೆದಿತ್ತು. ಆದರೆ ಅದಕ್ಕೂ ಅದು ವರ್ಷಕ್ಕೂ ಹೆಚ್ಚು ಕಾಲ ಸಮಯವನ್ನು ತೆಗೆದುಕೊಂಡಿತ್ತು. ದೆಹಲಿ ಗಡಿಯಲ್ಲಿ ನೂರಾರು ರೈತರು ಹೋರಾಟದಲ್ಲಿ ಮಡಿದಿದ್ದರು.

ಆದರೆ ಈಗ ಕಾಲಚಕ್ರ ತಿರುಗಿದೆ. ಈಗ ಇರುವುದು ಮೋದಿ ಸರ್ಕಾರವಲ್ಲ, ಎನ್‌ಡಿಎ ಸರ್ಕಾರ. ಈಗಿನ ಸರ್ಕಾರ ಎರಡು ಹೆಜ್ಜೆ ಮುಂದಿಟ್ಟರೆ ಮೂರು ಹೆಜ್ಜೆ ಹಿಂದಕ್ಕೆ ಇಡಬೇಕಾದ ಅನಿವಾರ್ಯತೆಯನ್ನು ಅದು ತಲುಪಿದೆ.

ಅಗ್ರೆಸಿವ್‌ ಗವರ್ನಮೆಂಟ್‌ ಟು ಯೂ ಟರ್ನ್‌ ಗವರ್ನಮೆಂಟ್

ತನಗಿದ್ದ ಬಹುಮತವನ್ನು ಬಳಸಿಕೊಂಡು ವಿರೋಧ ಪಕ್ಷಗಳ ಮೇಲೆ ಸವಾರಿ ಮಾಡುತ್ತಿದ್ದ ಮೋದಿ-ಶಾ ಈಗ ತಣ್ಣಗಾಗಿದ್ದಾರೆ. ಬಹುಮತವಿರುವ ಸರ್ಕಾರವಿಲ್ಲದ ಕಾರಣ ಮೋದಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಎರಡೆರಡು ಬಾರಿ ಯೋಚಿಸುವಂತಾಗಿದೆ. ಇಟ್ಟ ಹೆಜ್ಜೆಗಳನ್ನೂ ಹಿಂದಕ್ಕೆ ಇಡಬೇಕಾಗಿ ಬರುತ್ತಿದೆ.

ಈ ವರ್ಷ ಸರ್ಕಾರ ಬಂದ ಮೇಲೆ ಮೋದಿ ತನ್ನ ಮೊದಲಿನ ಅಗ್ರೆಸ್ಸಿನೆಸ್‌ ಜೊತೆ ಸರ್ಕಾರಿ ಯಂತ್ರದ ಆಕ್ಸಲೇಟರ್‌ ತುಳಿದು ವೇಗವಾಗಿ ಮುನ್ನುಗ್ಗಲು ಹೋಗಿ ಮತ್ತೆ ಮತ್ತೆ ಯೂಟರ್ನ್‌ ತೆಗೆದುಕೊಂಡಿದ್ದಾರೆ. ವಿಪಕ್ಷಗಳು ಹಾಗೂ ಮಿತ್ರಪಕ್ಷಗಳು ಅವರಿಗೆ ಇದು ಹಿಂದಿನ ದಿನಗಳಲ್ಲ ನೋಡಿಕೊಂಡು ಹೆಜ್ಜೆಯಿಡಿ ಎಂದು ಮತ್ತೆ ಮತ್ತೆ ಅವರನ್ನು ಎಚ್ಚರಿಸುತ್ತಿವೆ.

ಮೂರನೇ ಅವಧಿಗೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಇಡೀ ದೃಶ್ಯವೇ ಬದಲಾಯಿತು. ಕೇವಲ ಮೂರು ತಿಂಗಳಲ್ಲಿ ಕೇಂದ್ರ ಸರ್ಕಾರ ನಾಲ್ಕು ವಿಚಾರಗಳಲ್ಲಿ ಹಿಂದೆ ಸರಿದಿದೆ. ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೀಟು ಕಡಿಮೆಯಾದ ಕಾರಣಕ್ಕೋ ಅಥವಾ ಮಿತ್ರಪಕ್ಷಗಳ ಮೇಲೆ ಅವಲಂಬಿತವಾಗಿ ಸರ್ಕಾರ ನಡೆಸುವುದರಿಂದಲೋ ಯಾವುದೇ ನಿರ್ಧಾರಕ್ಕೆ ವಿರೋಧ ಬಂದರೆ ಮೋದಿ ಸರ್ಕಾರ ತಕ್ಷಣ ಹಿಂದಕ್ಕೆ ಸರಿಯುತ್ತಿದೆ.

ಮೊದಲ ಯೂಟರ್ನ್

ಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಸಾರ ಸೇವೆಗಳ (ನಿಯಂತ್ರಣ) ಕಾಯ್ದೆಯನ್ನು ಜಾರಿಗೆ ತರಲು ಬಯಸಿ ಕರಡನ್ನು ಸಹ ಸಿದ್ಧಪಡಿಸಿತ್ತು.‌ ಆದರೆ ಇದಕ್ಕೆ ಸಂಪಾದಕರ ಮಂಡಳಿಗಳು ಹಾಗೂ ವಿರೋಧ ಪಕ್ಷಗಳು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದ ಕಾರಣ ಮೋದಿ ಸರ್ಕಾರ ಅದನ್ನು ಹಿಂಪಡೆಯಿತು. ಈ ಕಾನೂನು ಬಂದಷ್ಟೇ ವೇಗವಾಗಿ ಕಪಾಟು ಸೇರಿಕೊಂಡಿತು.

ವಕ್ಫ್ (ತಿದ್ದುಪಡಿ) ಮಸೂದೆ

ಇದೇ ರೀತಿಯಾಗಿ ವಕ್ಫ್‌ ಕಾನೂನಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವುದಾಗಿ ಹೊರಟಿದ್ದ ಮೋದಿ ಸರ್ಕಾರ ವಿಪಕ್ಷಗಳು ಮತ್ತು ಮುಸ್ಲಿಂ ನಾಯಕರ ದಾಳಿಗೆ ಬೆಚ್ಚಿಬಿದ್ದು ಮಸೂದೆಯ ಕರಡನ್ನು ಪರಿಶೀಲನೆಗೆ ಒಪ್ಪಿಸಿ ಅದಕ್ಕಾಗಿ ಒಂದು ಸಂಸತ್‌ ಸಮಿತಿಯನ್ನೂ ನಿರ್ಮಿಸಿದೆ.

ಕೇಂದ್ರವು ಮುಸ್ಲಿಮೇತರರನ್ನು ವಕ್ಫ್ ಮಂಡಳಿಗೆ ಸೇರಿಸಲು ಯತ್ನಿಸುತ್ತಿದೆ ಎಂಬುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಈ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಯ ಪರಿಗಣನೆಗೆ ಕಳುಹಿಸಬೇಕಾಯಿತು.

ಸ್ಥಿರಾಸ್ತಿಯ ಮಾರಾಟದ ಲಾಭದ ಮೇಲೆ ವಿಧಿಸಲಾಗುವ ಬಂಡವಾಳ ಲಾಭದ ಮೇಲೆ ತೆರಿಗೆ ವಿಧಿಸುವ ವಿಷಯದಲ್ಲೂ ಕೇಂದ್ರ ತನ್ನ ಹೆಜ್ಜೆಯನ್ನು ಹಿಂದಕ್ಕಿಟ್ಟಿದೆ.

ಜೊತೆಗೆ ನಿನ್ನೆ ಲ್ಯಾಟರಲ್‌ ಎಂಟ್ರಿ ಎನ್ನುವ ನೇರ ನೇಮಕಾತಿ ಪ್ರಕಟಣೆಯನ್ನೂ ಹಿಂಪಡೆಯುವ ಮೂಲಕ ಮೋದಿ ಸರ್ಕಾರ ಮತ್ತೊಮ್ಮೆ ಯೂಟರ್ನ್‌ ತೆಗೆದುಕೊಂಡು ಮೂರು ತಿಂಗಳಲ್ಲಿ ನಾಲ್ಕು ಯೂಟರ್ನ್‌ ತೆಗೆದುಕೊಂಡಂತಾಗಿದೆ.

ಇನ್ನು ಇನ್ಶ್ಯೂರೆನ್ಸ್‌ ಕಂತುಗಳ ಮೇಲಿನ ತೆರಿಗೆಯ ಕುರಿತು ಪಕ್ಷದ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಈ ಕುರಿತು ಮೋದಿಯಾಗಲೀ, ಹಣಕಾಸು ಸಚಿವಯಾಗಲೀ ತಲೆಕೆಡಿಸಿಕೊಂಡಂತಿಲ್ಲ. ನಿತಿನ್‌ ಗಡ್ಕರಿ ವಿಮಾ ಕಂತುಗಳ ಮೇಲೆ ತೆರಿಗೆ ವಿಧಿಸುವುದನ್ನು ವಿರೋಧಿಸಿ ಪತ್ರ ಬರೆದು ಸುದ್ದಿಯಾಗಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page