Thursday, September 11, 2025

ಸತ್ಯ | ನ್ಯಾಯ |ಧರ್ಮ

ಕುಮಾರಣ್ಣನ ಜೇಬಲ್ಲಿದ್ದ ಪೆನ್ ಡ್ರೈವ್ ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯ್ತು: ಡಿಸಿಎಂ ಡಿ.ಕೆ. ಶಿವಕುಮಾರ್

ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ತೋರಿಸಿ ತಮ್ಮ ಜೇಬಲ್ಲಿಟ್ಟುಕೊಂಡಿದ್ದ ಪೆನ್ ಡ್ರೈವ್ ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯಿತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಹಾಸನ ಸಂಸದರ ಪೆನ್ ಡ್ರೈವ್ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಶನಿವಾರ ಉತ್ತರಿಸಿದರು.

ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಹಾಸನ ನಾಯಕರ ವಿರುದ್ಧ ಲೈಂಗಿಕ ಹಗರಣ ಆರೋಪ ಬರುತ್ತಿದ್ದು, ಈ ಬಗ್ಗೆ ಎಸ್ಐಟಿ ತನಿಖೆ ಮಾಡಬೇಕು ಎಂದು ಕೇಳಿರುವ ಬಗ್ಗೆ ಪ್ರಶ್ನಿಸಿದಾಗ ಅವರು ಉತ್ತರಿಸಿದ್ದು ಹೀಗೆ;

“ಕುಮಾರಸ್ವಾಮಿ ಅವರು ತೋರಿಸುತ್ತಿದ್ದ ಪೆನ್ ಡ್ರೈವ್ ಯಾವುದು, ಅದರಲ್ಲಿ ಏನಿದೆ ಎಂಬುದು ಆಗ ನನಗೆ ಗೊತ್ತಿರಲಿಲ್ಲ. ಅದರಲ್ಲಿ ಏನಿದೆ ಎಂದು ಈಗ ಗೊತ್ತಾಯಿತು. ಈ ಪೆನ್ ಡ್ರೈವ್ ಬಗ್ಗೆ ಕುಮಾರಣ್ಣನಿಗೆ ಚೆನ್ನಾಗಿ ಗೊತ್ತು. ಅವರ ಜೇಬಿನಲ್ಲೇ ಇಟ್ಟುಕೊಂಡಿದ್ದನ್ನು ಮಾಧ್ಯಮದವರಿಗೆ ತೋರಿಸಿದ್ದರು. ಹೀಗಾಗಿ ಇದರ ಬಗ್ಗೆ ಕುಮಾರಸ್ವಾಮಿ ಅವರನ್ನು ನೀವು ಕೇಳಬೇಕು. ಇದಕ್ಕೆ ಉತ್ತರಿಸಲು ಅವರೇ ಸೂಕ್ತ ವ್ಯಕ್ತಿ ಎಂದರು.

ಮಾಧ್ಯಮಗಳು ಈ ಹಗರಣದ ವಿಚಾರದಲ್ಲಿ ಸುಳ್ಳು ಹೇಳುತ್ತಿವೆ. ಅದು ಬರೀ ಹಾಸನದ ನಾಯಕನದಲ್ಲ. ಹಾಸನ ಲೋಕಸಭಾ ಕ್ಷೇತ್ರದ ಎಡಿಎ ಮೈತ್ರಿ ಕೂಟದ ಅಭ್ಯರ್ಥಿಯದ್ದು, ಸಂಸದನದ್ದು. ಹೀಗಾಗಿ ಈ ವಿಚಾರವಾಗಿ ಪ್ರಧಾನಮಂತ್ರಿಗಳು, ವಿಜಯೇಂದ್ರ, ಶೋಭಕ್ಕ, ಅಶೋಕ್, ಕುಮಾರಣ್ಣ, ಗಂಡಸ್ಥನದ ಬಗ್ಗೆ ಮಾತನಾಡುತ್ತಿದ್ದ ಅಶ್ವತ್ಥ್ ನಾರಾಯಣ ಅವರು ಉತ್ತರ ನೀಡಬೇಕು. ನಮ್ಮ ಹೆಸರಿಗೆ ಮಸಿ ಬಳಿಯಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅವರೇ ದೂರು ಕೊಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ಓದಿದೆ. ಮಹಿಳಾ ಆಯೋಗದ ಅಧ್ಯಕ್ಷರು ಇದೆಲ್ಲವನ್ನು ನೋಡಿ ರಾಜ್ಯ ಗೃಹ ಸಚಿವರು ಹಾಗೂ ಸಿಎಂಗೆ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ನೀವು (ಮಾಧ್ಯಮದವರು) ಯಾಕೆ ಮೌನ ತಾಳುತ್ತಿದ್ದೀರಿ? ಈ ವಿಚಾರದಲ್ಲಿ ನೀವು ರಾಜ್ಯದ ಜನತೆಗೆ ಬೆಳಕು ಚೆಲ್ಲಬೇಕು ಎಂದು ಮನವಿ ಮಾಡುತ್ತೇನೆ” ಎಂದರು.

ಎಸ್ಐಟಿ ತನಿಖೆ ಬಗ್ಗೆ ಸರ್ಕಾರದ ನಿಲುವೇನು ಎಂದು ಕೇಳಿದಾಗ, “ಈ ಬಗ್ಗೆ ಮುಖ್ಯಮಂತ್ರಿ, ಗೃಹಮಂತ್ರಿಗಳನ್ನು ಕೇಳಬೇಕು. ನಾನು ಸರ್ಕಾರದ ಭಾಗವಾಗಿದ್ದರು, ಇನ್ನೂ ಈ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಸಿಎಂ ಜತೆ ಚರ್ಚೆ ಮಾಡಲು ಆಗಿಲ್ಲ” ಎಂದರು.

ಸಂತ್ರಸ್ತ ಮಹಿಳೆಯರ ಪರವಾಗಿ ಕಾಂಗ್ರೆಸ್ ನಿಲ್ಲಲಿದೆಯೇ ಎಂದು ಕೇಳಿದಾಗ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಬಹುಮುಖ್ಯ ಆಧಾರಸ್ತಂಭ. ನೀವು ನಿಮ್ಮ ನಡುವಣ ಪೈಪೋಟಿ, ಆಂತರಿಕ ವಿಚಾರಕ್ಕೆ, ಬೇರೆಯವರಿಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಇಂತಹ ದೊಡ್ಡ ವಿಚಾರಗಳನ್ನು ಮುಚ್ಚಿಹಾಕುತ್ತಿರುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಭಾವಿಸುತ್ತೇನೆ. ನಮ್ಮ ಆತ್ಮಸಾಕ್ಷಿಗಾದರೂ ನಾವು ಕೆಲಸ ಮಾಡಬೇಕು ಅಲ್ಲವೇ” ಎಂದರು.

ಕುಮಾರಸ್ವಾಮಿ ಈ ಪ್ರಕರಣದಲ್ಲಿ ನನ್ನ ಹೆಸರು ಹೇಳಲಿ: ಡಿಸಿಎಂ ಸವಾಲು
ಮಹಿಳೆಯರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ, ಅವರಿಗೆ ಒಳ್ಳೆಯದಾಗುತ್ತಾ ಎಂದು ಕುಮಾರಸ್ವಾಮಿ ಅವರು ನಿಮ್ಮ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ ಎಂದು ಮಾಧ್ಯಮಗಳು ಕೇಳಿದಾಗ, “ಅವರು ನನ್ನ ಹೆಸರು ಹೇಳಿ ಮಾತನಾಡಲಿ. ಆಮೇಲೆ ನನ್ನ ಪುರಾಣ, ನನ್ನ ಕಥೆ, ನನ್ನ ನುಡಿಮುತ್ತುಗಳನ್ನು ಹೇಳುತ್ತೇನೆ. ಹಾಗಾದರೆ ಆ ಹೆಣ್ಣು ಮಕ್ಕಳ ಮಾನ ಹರಣವಾಗಿರುವುದನ್ನು ಕುಮಾರಸ್ವಾಮಿ ಅವರು ಈ ರೀತಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರಾ?” ಎಂದು ಮರುಪ್ರಶ್ನಿಸಿದರು.

ಸರ್ಕಾರ ಈ ವಿಚಾರದಲ್ಲಿ ಜವಾಬ್ದಾರಿ ನಿರ್ವಹಿಸಬೇಕಲ್ಲವೇ ಎಂದು ಕೇಳಿದಾಗ, “ಮಾಧ್ಯಮಗಳು ಮೊದಲು ಈ ಬಗ್ಗೆ ರಾಜ್ಯದ ಜನರಿಗೆ ಬೆಳಕು ಚೆಲ್ಲಲಿ. ಮಹಿಳಾ ಆಯೋಗ ಹಂತ ಹಂತವಾಗಿ ಏನು ಮಾಡಬೇಕೋ ಮಾಡಲಿ. ನೀವು ಈ ವಿಚಾರವಾಗಿ ಹೆಚ್ಚಿನ ತನಿಖೆ ಮಾಡಿ ಮಾಹಿತಿ ಒದಗಿಸಿಕೊಟ್ಟರೆ ನಾವು ಕೂಡ ಮುಂದಿನ ಹೆಜ್ಜೆ ಬಗ್ಗೆ ಗಮನ ಹರಿಸುತ್ತೇವೆ” ಎಂದು ತಿಳಿಸಿದರು.

ಇಬ್ಬರು ಸಂತ್ರಸ್ತೆಯರು ಡಿಜಿ ಅವರಿಗೆ ದೂರು ನೀಡಿರುವ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ತಿಳಿದುಕೊಂಡು ಆಮೇಲೆ ಮಾತನಾಡುತ್ತೇನೆ. ಮಾಹಿತಿ ಇಲ್ಲದೆ ಮಾತನಾಡಬಾರದು” ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page