ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದಿಂದ ಭಾರಿ ಶಾಕ್: ಪ್ರಮುಖ ಕಿಮೋಥೆರಪಿ ಔಷಧಗಳ ಬೆಲೆ ಶೇ.50 ರಷ್ಟು ದಿಢೀರ್ ಹೆಚ್ಚಳ

ದೆಹಲಿ: ದೇಶದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಅತ್ಯಗತ್ಯವಾಗಿ ಬೇಕಾಗುವ ಪ್ರಮುಖ ಕಿಮೋಥೆರಪಿ (Chemotherapy) ಔಷಧಗಳ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರವು ಭಾರಿ ನಿರ್ಧಾರ ಕೈಗೊಂಡಿದೆ. ಜೀವ ರಕ್ಷಕ ಕ್ಯಾನ್ಸರ್ ಮದ್ದುಗಳ ಗರಿಷ್ಠ ಮಾರಾಟ ದರವನ್ನು (Ceiling Prices) ಬರೋಬ್ಬರಿ ಶೇಕಡಾ 50 ರಷ್ಟು ಹೆಚ್ಚಿಸಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ಅಧಿಕೃತ ಆದೇಶ ಹೊರಡಿಸಿದೆ. ಬೆಲೆಗಳು ನಿಯಂತ್ರಣದಲ್ಲಿದ್ದ ಕಾರಣ ಉತ್ಪಾದನಾ ವೆಚ್ಚ ಭರಿಸಲಾಗದೆ ಕಂಪೆನಿಗಳು ಇವುಗಳ ತಯಾರಿಕೆಯನ್ನು ಸ್ಥಗಿತಗೊಳಿಸಿದ್ದವು. ಇದರಿಂದ ದೇಶಾದ್ಯಂತ ಸೃಷ್ಟಿಯಾಗಿದ್ದ ತೀವ್ರ ಕೊರತೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಈ ಕಠಿಣ ಹೆಜ್ಜೆ ಇಟ್ಟಿದೆ. ಆದರೆ, ಈ ದಿಢೀರ್ ದರ ಏರಿಕೆಯು ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮೊದಲ ಹಂತದ ಪ್ರಮುಖ ಕಿಮೋಥೆರಪಿ ಮದ್ದುಗಳಾಗಿ ಬಳಸಲಾಗುವ ಪ್ಲಾಟಿನಂ ಆಧಾರಿತ ‘ಕಾರ್ಬೋಪ್ಲಾಟಿನ್’ ಮತ್ತು ‘ಸಿಸ್ಪ್ಲಾಟಿನ್’ ಇಂಜೆಕ್ಷನ್‌ಗಳ ಗರಿಷ್ಠ ದರವನ್ನು ಎನ್‌ಪಿಪಿಎ ಹೆಚ್ಚಿಸಿದೆ. ಇದರೊಂದಿಗೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆ್ಯಂಟಿ-ಟೆಟಾನಸ್ ಇಮ್ಯುನೊಗ್ಲೊಬ್ಯುಲಿನ್ ಇಂಜೆಕ್ಷನ್‌ಗಳು ಹಾಗೂ ಮಕ್ಕಳ ಮೂರು ಪ್ರಮುಖ ಲಸಿಕೆಗಳ (BCG, ದಡಾರ ಮತ್ತು ರುಬೆಲ್ಲಾ) ಬೆಲೆಗಳನ್ನೂ ಪರಿಷ್ಕರಿಸಲಾಗಿದೆ.

ಪರಿಷ್ಕೃತ ದರಗಳ ವಿವರ ಇಲ್ಲಿದೆ:

  • ಕಾರ್ಬೋಪ್ಲಾಟಿನ್ (10 MG/ML): ಇದರ ಗರಿಷ್ಠ ಬೆಲೆ ಪ್ರತಿ ಮಿಲ್ಲಿ ಲೀಟರ್‌ಗೆ ಇದ್ದ 60.49 ರೂಪಾಯಿಯಿಂದ 90.74 ರೂಪಾಯಿಗೆ ಏರಿಕೆಯಾಗಿದೆ.
  • ಸಿಸ್ಪ್ಲಾಟಿನ್ (1 MG/ML): ಇದರ ಬೆಲೆ ಪ್ರತಿ ಮಿಲ್ಲಿ ಲೀಟರ್‌ಗೆ ಇದ್ದ 7.26 ರೂಪಾಯಿಯಿಂದ 10.89 ರೂಪಾಯಿಗೆ ಹೆಚ್ಚಳವಾಗಿದೆ.
  • ಆ್ಯಂಟಿ-ಟೆಟಾನಸ್ ಇಮ್ಯುನೊಗ್ಲೊಬ್ಯುಲಿನ್ (250 IU): ಈ ವಾಯಲ್‌ನ ಬೆಲೆ 1,912.02 ರೂಪಾಯಿಗೆ ಏರಿದೆ.
  • ಆ್ಯಂಟಿ-ಟೆಟಾನಸ್ ಇಮ್ಯುನೊಗ್ಲೊಬ್ಯುಲಿನ್ (500 IU): ಇದರ ಬೆಲೆ ಬರೋಬ್ಬರಿ 2,881.19 ರೂಪಾಯಿಗೆ ತಲುಪಿದೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ವ್ಯತ್ಯಾಸಗಳಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಈ ಔಷಧಗಳ ಮುಖ್ಯ ಕಚ್ಚಾ ವಸ್ತುವಾದ ‘ಪ್ಲಾಟಿನಂ’ ದರವು ದುಪ್ಪಟ್ಟಾಗಿದೆ. ಇದರಿಂದಾಗಿ ಸಿಪ್ಲಾ, ಇಂಟಾಸ್ ಫಾರ್ಮಾ ಸೇರಿದಂತೆ ಪ್ರಮುಖ ತೈಲ ಉತ್ಪಾದನಾ ಕಂಪೆನಿಗಳು ನಷ್ಟದ ಕಾರಣ ನೀಡಿ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದವು. ಇದರ ಪರಿಣಾಮವಾಗಿ ದೇಶದ ಹೆಸರಾಂತ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಮದ್ದುಗಳ ಭಾರಿ ಅಭಾವ ಸೃಷ್ಟಿಯಾಗಿ ರೋಗಿಗಳ ಚಿಕಿತ್ಸಾ ಚಕ್ರಕ್ಕೆ ಭಂಗ ಬಂದಿತ್ತು.

ಔಷಧ ನಿಯಂತ್ರಣ ಕಾಯ್ದೆ (DPCO) 2013 ರ ಪ್ಯಾರಾ 19 ರ ಅಡಿಯಲ್ಲಿ ತನಗಿರುವ ಅಸಾಧಾರಣ ಅಧಿಕಾರವನ್ನು ಬಳಸಿರುವ ಎನ್‌ಪಿಪಿಎ, ಸಾರ್ವಜನಿಕ ಹಿತದೃಷ್ಟಿಯಿಂದ ಈ ದರ ಏರಿಕೆಗೆ ಒಪ್ಪಿಗೆ ನೀಡಿದೆ. “ಔಷಧಗಳು ಕೈಗೆಟುಕುವ ದರದಲ್ಲಿ ಇರಬೇಕು ನಿಜ, ಆದರೆ ಉತ್ಪಾದನೆ ಅಸಾಧ್ಯವಾಗಿ ಮಾರುಕಟ್ಟೆಯಿಂದಲೇ ಕಣ್ಮರೆಯಾದರೆ ರೋಗಿಗಳು ಇದಕ್ಕಿಂತಲೂ ದುಬಾರಿಯಾದ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗುತ್ತದೆ. ಸಾರ್ವಜನಿಕರ ಜೀವ ರಕ್ಷಣೆಗಾಗಿ ಇವುಗಳ ನಿರಂತರ ಲಭ್ಯತೆಯನ್ನು ಕಾಯ್ದುಕೊಳ್ಳುವುದು ಅನಿವಾರ್ಯ,” ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಪ್ರಸ್ತುತ ಹೆಚ್ಚಿಸಲಾಗಿರುವ ಈ ಬೆಲೆಗಳನ್ನು ಮುಂದಿನ 6 ತಿಂಗಳ ಬಳಿಕ ಮರುಪರಿಶೀಲಿಸಲಾಗುವುದು ಎಂದು ತಿಳಿಸಲಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ದಿನಸಿ ಪದಾರ್ಥಗಳು, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಗ್ಯಾಸ್ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ, ಈಗ ಪ್ರಾಣರಕ್ಷಕ ಕ್ಯಾನ್ಸರ್ ಮದ್ದುಗಳ ಬೆಲೆಯನ್ನು ಶೇಕಡಾ 50 ರಷ್ಟು ಹೆಚ್ಚಿಸಿರುವುದು ಗಂಭೀರ ಆತಂಕ ಮೂಡಿಸಿದೆ. ಸರ್ಕಾರದ ತಪ್ಪು ನೀತಿಗಳಿಂದಾಗಿ ಬಡ ರೋಗಿಗಳು ಚಿಕಿತ್ಸೆ ಇಲ್ಲದೆ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಔಷಧ ಕಂಪೆನಿಗಳ ಲಾಭಕ್ಕಾಗಿ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಟೀಕಿಸಿರುವ ವಿರೋಧ ಪಕ್ಷಗಳು, “ಸರ್ಕಾರಕ್ಕೆ ನಿಜವಾಗಿಯೂ ರೋಗಿಗಳ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಕಾಳಜಿ ಇದ್ದಿದ್ದರೆ, ಕಚ್ಚಾ ವಸ್ತುಗಳ ಬೆಲೆ ಏರಿಕೆಯ ನಷ್ಟವನ್ನು ಸರಿದೂಗಿಸಲು ಉತ್ಪಾದನಾ ಕಂಪೆನಿಗಳಿಗೆ ವಿಶೇಷ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ನೀಡಬೇಕಿತ್ತು. ಅದನ್ನು ಬಿಟ್ಟು ಇಡೀ ಆರ್ಥಿಕ ಹೊರೆಯನ್ನು ರೋಗಿಗಳ ಮೇಲೆ ಹಾಕಿರುವುದು ಅತ್ಯಂತ ಅಮಾನವೀಯ,” ಎಂದು ಕಠಿಣ ಶಬ್ದಗಳಲ್ಲಿ ಖಂಡಿಸಿವೆ.

Related Articles

ಇತ್ತೀಚಿನ ಸುದ್ದಿಗಳು