ದೆಹಲಿ: ಜೂನ್ 21ರಂದು ನಡೆಯಲಿರುವ ನೀಟ್ (NEET-UG) ಮರುಪರೀಕ್ಷೆಯ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡುವಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಮತ್ತೊಂದು ಭೀಕರ ಯಡವಟ್ಟು ಮಾಡಿಕೊಂಡಿದೆ. ಮಹಾರಾಷ್ಟ್ರದ ನಾಗಪುರ ಮೂಲದ ವಿದ್ಯಾರ್ಥಿಯೊಬ್ಬನಿಗೆ ಭಾರತದಿಂದ ಬರೋಬ್ಬರಿ 2,500 ಕಿಲೋಮೀಟರ್ ದೂರದಲ್ಲಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ಅಬುದಾಬಿಯಲ್ಲಿ ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡಲಾಗಿದ್ದು, ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಾಗಪುರದ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬ 18 ವರ್ಷದ ವಿದ್ಯಾರ್ಥಿ ತನಗೆ ಎದುರಾದ ಈ ಭೀಕರ ಪರಿಸ್ಥಿತಿಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾನೆ. ಪರೀಕ್ಷೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಹೊಸ ಪ್ರವೇಶ ಪತ್ರವನ್ನು (Admit Card) ಡೌನ್‌ಲೋಡ್ ಮಾಡಿದಾಗ, ಅದರಲ್ಲಿ ಅಬುದಾಬಿಯ ‘ಅಬುದಾಬಿ ಇಂಡಿಯನ್ ಸ್ಕೂಲ್’ ಅನ್ನು ಪರೀಕ್ಷಾ ಕೇಂದ್ರವೆಂದು ನಮೂದಿಸಲಾಗಿತ್ತು.
ವಿದ್ಯಾರ್ಥಿಯು ತನ್ನ ಮೊದಲ ಆದ್ಯತೆಯಾಗಿ ನಾಗಪುರವನ್ನು ಹಾಗೂ ನಂತರದ ಆಯ್ಕೆಗಳಾಗಿ ವರ್ಧಾ ಮತ್ತು ಭಂಡಾರಾ ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದರೂ ಎನ್‌ಟಿಎ ಈ ಬೃಹತ್ ತಾಂತ್ರಿಕ ಲೋಪವೆಸಗಿದೆ.
ತಮ್ಮ ಮಗನಿಗೆ ಪಾಸ್‌ಪೋರ್ಟ್ ಸಹ ಇಲ್ಲದ ಕಾರಣ ಇಷ್ಟು ಕಡಿಮೆ ಅವಧಿಯಲ್ಲಿ ವಿದೇಶಕ್ಕೆ ಕಳುಹಿಸಿ ಪರೀಕ್ಷೆ ಬರೆಸುವುದು ಅಸಾಧ್ಯದ ಮಾತು ಎಂದು ವಿದ್ಯಾರ್ಥಿಯ ತಂದೆ ಮೊಹಮ್ಮದ್ ತಾಲಿಬ್ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಎನ್‌ಟಿಎ ಸಹಾಯವಾಣಿಗೆ ತಕ್ಷಣವೇ ದೂರು ನೀಡಲಾಗಿದ್ದು, ಅಧಿಕಾರಿಗಳು ತಮ್ಮ ತಾಂತ್ರಿಕ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಶನಿವಾರ ಸಂಜೆಯ ವೇಳೆಗೆ ವಿದ್ಯಾರ್ಥಿಗೆ ನಾಗಪುರದಲ್ಲೇ ಪರೀಕ್ಷಾ ಕೇಂದ್ರವನ್ನು ಮರುಹಂಚಿಕೆ ಮಾಡಿ ಹೊಸ ಪ್ರವೇಶ ಪತ್ರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಪೇಪರ್ ಲೀಕ್ ವಿವಾದದಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದ ವಿದ್ಯಾರ್ಥಿಗಳಿಗೆ ಎನ್‌ಟಿಎ ಸಂಸ್ಥೆಯ ಇಂತಹ ಸರಣಿ ಎಡವಟ್ಟುಗಳು ಮತ್ತಷ್ಟು ಆಘಾತವನ್ನು ತಂದೊಡ್ಡುತ್ತಿವೆ ಎಂದು ಪೋಷಕರು ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಅನೀಸ್ ಅಹ್ಮದ್ ಕಠಿಣ ಶಬ್ದಗಳಲ್ಲಿ ಟೀಕಿಸಿದ್ದಾರೆ.
