ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: 47 ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿದ ಎನ್‌ಟಿಎ; ಕೆಲವರ ವಿರುದ್ಧ ಕ್ರಿಮಿನಲ್ ಕೇಸ್!

ನವದೆಹಲಿ: ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕಠಿಣ ಕ್ರಮ ಕೈಗೊಂಡಿದ್ದು, ಬರೋಬ್ಬರಿ 47 ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಶಿಕ್ಷೆ ವಿಧಿಸುವ ತಿದ್ದುಪಡಿ ಮಸೂದೆಯ ಕರಡಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲೇ ಎನ್‌ಟಿಎ ಈ ಕ್ರಮ ಕೈಗೊಂಡಿದೆ.

ಇನ್ನೊಂದೆಡೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಯನ್ನು ತಕ್ಷಣವೇ ಈಡೇರಿಸಬೇಕು, ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (CJP) ಶುಕ್ರವಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

47 ಅಧಿಕಾರಿಗಳನ್ನು ವಜಾಗೊಳಿಸಿದ ಎನ್‌ಟಿಎ

ಸುದ್ದಿ ಸಂಸ್ಥೆ ‘ಎಎನ್‌ಐ’ ವರದಿಯ ಪ್ರಕಾರ, ಶಿಕ್ಷಣ ಸಚಿವಾಲಯದ ಮೂಲಗಳು “ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) 47 ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಅಲ್ಲದೆ, ಈ ಅಧಿಕಾರಿಗಳ ಪೈಕಿ ಕೆಲವರ ವಿರುದ್ಧ ಕಾನೂನು ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಂದಾಗಿ ವಿವಾದಕ್ಕೆ ಈಡಾಗಿದ್ದ ಎನ್‌ಟಿಎ ಸಂಸ್ಥೆಯಲ್ಲಿ ಕೈಗೊಳ್ಳಲಾಗುತ್ತಿರುವ ಪ್ರಮುಖ ಸುಧಾರಣಾ ಕ್ರಮಗಳ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿವೆ.

ಎನ್‌ಟಿಎ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ರಚಿಸಲು ಹಾಗೂ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದ ಸಿಜೆಪಿ

ಕೇಂದ್ರ ಸರ್ಕಾರಕ್ಕೆ ಅಂತಿಮ ಗಡುವು ನೀಡಿರುವ ಸಿಜೆಪಿ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ವಿಚಾರದಲ್ಲಿ ಯಾವುದೇ ಸಂಧಾನಕ್ಕೆ ಅವಕಾಶವಿಲ್ಲ ಮತ್ತು ಈ ಬೇಡಿಕೆಯನ್ನು ಶೀಘ್ರವಾಗಿ ಅಂಗೀಕರಿಸದಿದ್ದರೆ ಪ್ರತಿಭಟನೆಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಶುಕ್ರವಾರ ತಿಳಿಸಿದೆ.

ಕೇಂದ್ರ ಸಚಿವರೊಂದಿಗೆ ಸಿಜೆಪಿ ಪ್ರತಿನಿಧಿಗಳ ಸಭೆ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ಬಗೆಹರಿಸಲು ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರು ನವದೆಹಲಿಯ ವಿಠಲ ಭಾಯಿ ಪಟೇಲ್ ಹೌಸ್‌ನಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು.

ತಿದ್ದುಪಡಿ ಮಸೂದೆ ಕರಡಿಗೆ ಸಂಪುಟ ಅಂಕಿತ

‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024’ ರ ತಿದ್ದುಪಡಿ ಮಸೂದೆಯ ಕರಡಿಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಪ್ರಸ್ತಾವಿತ ತಿದ್ದುಪಡಿ ಮಸೂದೆಯನ್ನು ಜುಲೈ 27 (ಸೋಮವಾರ) ರಂದು ಸಂಸತ್ತಿನಲ್ಲಿ ಮಂಡಿಸಿ, ಚರ್ಚೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಪರೀಕ್ಷೆಗಳಲ್ಲಿ ಪಾರದರ್ಶಕತೆ, ಕಠಿಣ ಕ್ರಮ ಹಾಗೂ ಹೊಣೆಗಾರಿಕೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ನಡೆಸುತ್ತಿರುವ ನಿರಂತರ ಪ್ರತಿಭಟನೆಯ ನಡುವೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಇದಕ್ಕೂ ಒಂದು ದಿನ ಮುನ್ನ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ವಿನೀತ್ ಜೋಶಿ ಅವರನ್ನು ಸರ್ಕಾರ ಹುದ್ದೆಯಿಂದ ಮುಕ್ತಗೊಳಿಸಿದ್ದು, ಅವರ ಜಾಗಕ್ಕೆ ನರೇಶ್ ಪಾಲ್ ಗಂಗವಾರ್ ಅವರನ್ನು ನೇಮಿಸಿದೆ. ಇದಕ್ಕೂ ಕೆಲವು ಗಂಟೆಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ವೀಡಿಯೊ ಸಂದೇಶದ ಮೂಲಕ ಮಾತನಾಡಿ, ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ನೂತನ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದಾಗಿ ಘೋಷಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು