Sunday, June 16, 2024

ಸತ್ಯ | ನ್ಯಾಯ |ಧರ್ಮ

ನುಡಿನಮನ| ನೆನಪಿನಂಗಳದಲ್ಲಿ  ಗುರು ತಿರುಮಲೇಶರು

ಕವಿ, ಕತೆಗಾರ, ಅನುವಾದಕ, ಭಾಷಾ ವಿಜ್ಞಾನಿ, ವಿಮರ್ಶಕ, ತಿರುಮಲೇಶ್‌ ಕೆ.ವಿ ಯವರು ನಮ್ಮನ್ನು ಅಗಲಿದ್ದಾರೆ. ಭೌತಿಕ ಜಗತ್ತಿನಿಂದ ಅಗಲಿದರೂ ಬರೆದಂತೆ ಬದುಕಿದ ಅವರು ಬರಹಗಳ ಬೌದ್ಧಿಕ ಜಗತ್ತಿನಲ್ಲಿ ಶಾಶ್ವತವಾಗಿರುತ್ತಾರೆ. ಅವರ ಶಿಷ್ಯೆ ಕಾಸರಗೋಡಿನ ನಿವೃತ್ತ ಪ್ರಾಧ್ಯಾಪಕರಾದ ಮಹೇಶ್ವರಿ ಯು, ಹತ್ತಿರದಿಂದ ಕಂಡ ತಮ್ಮ ಗುರುಗಳನ್ನು ನೆನಪಿನ ಮೆರವಣಿಗೆಯಲ್ಲಿ ಒಯ್ಯುತ್ತಾ ಆಪ್ತವಾಗಿ ನುಡಿತೋರಣ ಕಟ್ಟಿದ್ದಾರೆ. ಅಗಲಿದ ಚೇತನಕ್ಕೆ  ಪೀಪಲ್‌ ಮೀಡಿಯಾದ ಭಾವಪೂರ್ಣ ಶ್ರದ್ಧಾಂಜಲಿ.

ಕೆ.ವಿ.ತಿರುಮಲೇಶರು ನನಗೆ ಮೊದಲು ಪರಿಚಯವಾದದ್ದು ಗುರುವಾಗಿ. ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಪದವಿಪೂರ್ವ  ತರಗತಿಯ ಮೊದಲ ವರ್ಷ ನಮಗೆ ಅವರು ಇಂಗ್ಲಿಷ್ ಪಾಠ ಮಾಡಿದ್ದರು. The White Company ಎಂಬ ಗದ್ಯವನ್ನು ಅವರು ನಮಗೆ ಬೋಧಿಸುತ್ತಿದ್ದರು. ಆಗಾಗ ನಡೆಯುತ್ತಿದ್ದ  ‘ವಿದ್ಯಾರ್ಥಿಸಮರʼ(ಮುಷ್ಕರ)ಗಳಿಂದಾಗಿ ಪಾಠವನ್ನು ನಮಗೆ ಅರ್ಥವಾಗುವಂತೆ ಬೋಧಿಸಿ ಮುಗಿಸುವುದು ಅಧ್ಯಾಪಕರಿಗೆ ಸವಾಲಾಗಿತ್ತು.  ಆದರೂ ಮಧ್ಯಯುಗೀನ ಕಾಲದ ಆ ಗದ್ಯಕೃತಿಯ ಬೋಧನೆಯಲ್ಲೂ  ಕಾವ್ಯದ ಮಿಂಚು ಒಮ್ಮೆ ಹೇಗೆ ಹೊಳೆಯಿತೆಂದು ಹೇಳುತ್ತೇನೆ. ಪಠ್ಯದಲ್ಲಿ ಯಾವುದೋ ಆಯುಧದ ಪ್ರಸ್ತಾಪ ಬಂತು. ಅದರ ಬಗ್ಗೆ ಹೇಳುತ್ತಾ more civilized weapon ಎಂದು ಹೇಳಿದರು. ಒಮ್ಮೆಲೇ ಸುಮ್ಮನಾಗಿ ‘no, civilization  has  nothing  to do with weapons. We can better say more polished weapon’ ಎಂದರು. ನನಗೆ ಇದನ್ನು ಕೇಳಿ ಮೈ ರೋಮಾಂಚನವಾಯಿತು. ಅದಲ್ಲವೇ ಕವಿಯ ಪಾಠವೆಂದರೆ!  ಪುಸ್ತಕದ ಉಳಿದ ವಿವರಗಳು ನನಗೆ ನೆನಪಿಲ್ಲ. ಆದರೆ ಕೊಠಡಿ ಸಂಖ್ಯೆ 108ರಲ್ಲಿ ಕುಳಿತು ಈ ಸಾಲುಗಳನ್ನು ಕೇಳಿದ ಗಳಿಗೆ ನನ್ನ ಮನದಲ್ಲಿ ಮಾಸದಿದೆ. ಯುದ್ಧ ಮತ್ತು ಹಿಂಸೆಯ ಕುರಿತಾದ ಅವರ ನಿಲುವು, ಮನುಷ್ಯ ಪ್ರೀತಿಯ ಜೀವ ಕಾರುಣ್ಯದ ಬುದ್ಧನ ಬೋಧನೆಯ ಕುರಿತಾದ ಅವರ ಒಲವು ಅವರ ಅನೇಕ ಕವಿತೆಗಳಲ್ಲಿ ಮತ್ತೆಮತ್ತೆ  ಕಾಣಿಸಿ ಕೊಂಡದ್ದನ್ನೂ ಇಲ್ಲಿ ನೆನೆದು ಕೊಳ್ಳುತ್ತೇನೆ.

ತಿರುಮಲೇಶ್ ಅವರ ಪತ್ನಿ ನಿರ್ಮಲಾ ಆಗ ಸೀನಿಯರ್ ವಿದ್ಯಾರ್ಥಿನಿಯಾಗಿದ್ದರು. ಮದುವೆಯಾದ ಬಳಿಕ ಪತ್ನಿಯನ್ನು ಕಾಲೇಜು ವಿದ್ಯಾಭ್ಯಾಸಕ್ಕೆ ಹಚ್ಚಿ ಪದವಿ ಪೂರೈಸುವಂತೆ ಮುತುವರ್ಜಿ ವಹಿಸಿದ ಗುರುಗಳನ್ನು ಹೆಮ್ಮೆಯಿಂದ ನೆನೆಯುತ್ತೇನೆ. ಆಗೆಲ್ಲ ಮದುವೆಯಾದ ಬಳಿಕ ಶಿಕ್ಷಣವನ್ನು ಮೊಟಕು ಗೊಳಿಸುವುದೇ ಸಾಮಾನ್ಯವಾಗಿದ್ದ ಸಂಗತಿಯಾದ್ದರಿಂದಲೂ, ಅವರು ನಮ್ಮ  ಗುರುಪತ್ನಿಯಾದ್ದರಿಂದಲೂ ನಾವು ಅವರನ್ನು ಕುತೂಹಲದಿಂದ ಗಮನಿಸುತ್ತಿದ್ದೆವು. ನಿರ್ಮಲಾ ಅವರು ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದರು. ಚೆನ್ನಾಗಿ ಹಾಡುತ್ತಿದ್ದರು. ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಅವರು ‘ನಾದ ತನುಮನಿಷಂ ಶಂಕರಂ’  ಎಂಬ ರಚನೆಯನ್ನು ಹಾಡಿದ್ದು ನನಗೆ ನೆನಪಿದೆ. ಅವರು ಮುಂದೆ ಒಳ್ಳೆಯ ಓದುಗರಾಗಿ ತಿರುಮಲೇಶರೊಂದಿಗೆ ಸಾಹಿತ್ಯ ಚರ್ಚೆಗಳಲ್ಲಿ ಭಾಗಿಯಾಗುತ್ತಿದ್ದರು ಎಂದೂ ನನಗೆ ಗೊತ್ತು. 

ತಿರುಮಲೇಶ್ ಸರ್ ನಮ್ಮ ಕಾಲೇಜನ್ನು ಬಿಟ್ಟು ಹೈದರಾಬಾದಿಗೆ ಹೋಗಿ ಅಧ್ಯಯನ, ಅಧ್ಯಾಪನಗಳಲ್ಲಿ ತೊಡಗಿಸಿ ಕೊಂಡರೂ  ಕಾಸರಗೋಡನ್ನು ಮರೆತಿರಲಿಲ್ಲ. ಅವರು ತಮ್ಮ ಗೆಳೆಯರೊಂದಿಗೆ ಹುಟ್ಟುಹಾಕಿದ ನವ್ಯಸಾಹಿತ್ಯ ಸಂಘವು ಕ್ರಿಯಾಶೀಲವಾಗಿತ್ತು . ನಾನು ಅಲ್ಪಸ್ವಲ್ಪ  ಓದು ಬರವಣಿಗೆಯಲ್ಲಿ ಆಸಕ್ತಳಾಗಿದ್ದ ಕಾರಣ ಸಾಹಿತ್ಯದ ನಂಟು ಬೆಸೆಯಿತು. ಅವರೊಡನೆ ಪತ್ರ ಮೈತ್ರಿ, ಊರಿಗೆ ಬಂದಿದ್ದಾಗ ನಡೆದ ಭೇಟಿ, ಮಾತುಕತೆ ಎಲ್ಲವೂ ಅವಿಸ್ಮರಣೀಯ. ಕಾಸರಗೋಡಿನ ಇನ್ನೊಬ್ಬ ಪ್ರಸಿದ್ಧ ಸಾಹಿತಿ ಮತ್ತು ತಿರುಮಲೇಶರ ಗೆಳೆಯ ಎಂ.ವ್ಯಾಸರ ಮನೆಯಲ್ಲಿ ತಿರುಮಲೇಶರು ಊರಿಗೆ ಬಂದದ್ದೇ ನೆಪವಾಗಿ ಒಂದು ಸ್ನೇಹಕೂಟವನ್ನು ಏರ್ಪಡಿಸಿದ್ದರು. ಯಾವುದೇ ಔಪಚಾರಿಕತೆಯಿಲ್ಲದೆ ಹಿರಿಯರು ಕಿರಿಯರು ಸೇರಿ ನಡೆದ ಆ ಕಾರ್ಯಕ್ರಮದಲ್ಲಿ ಸಾಕಷ್ಟು ಸಾಹಿತ್ಯಕ ಚರ್ಚೆ, ಓದು, ಹಾಡು, ವಿನೋದಗಳು ಒಳಗೊಂಡಿದ್ದವು. ನಾನು ತಿರುಮಲೇಶರ ‘ಕರುಣೆಯೆ ಬೆಳಕು’ ಎಂದನು ಬುದ್ಧ ಎಂಬ ರಚನೆಯನ್ನು ರಾಗ ಸಂಯೋಜನೆ ಮಾಡಿ, ಹಾಡಿ ಅವರನ್ನು ಅಚ್ಚರಿಗೊಳಿಸಿದ್ದೆ. ಮುಂದೆಯೂ ಕಾಸರಗೋಡಿನಲ್ಲಿ ಅವರ ಸಾಹಿತ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಅವರ ಕೆಲವು ರಚನೆಗಳಿಗೆ ರಾಗ ಹಾಕಿ ವಿದ್ಯಾರ್ಥಿಗಳಿಗೆ ತರಬೇತು ನೀಡಿ ಹಾಡಿಸಿದ್ದೆ. ಅವರು ಸಂತೋಷದಿಂದ ‘ಈ ರೀತಿ ಇವುಗಳನ್ನು ಹಾಡಬಹುದೆಂದು ಇವುಗಳನ್ನು ಬರೆದಾಗ ನನಗೆ ಗೊತ್ತಿರಲಿಲ್ಲ ನೋಡು’ ಎಂದು ಹೇಳಿದ್ದರು.

ಭಾಷಾ ವಿಜ್ಞಾನಿಯಾಗಿದ್ದ ಅವರಿಗೆ ಶಬ್ದಗಳ ಬಗ್ಗೆ ಅಪರಿಮಿತ ಕುತೂಹಲ. ಅವರೇ ತಮ್ಮನ್ನು ‘ಪದಮೋಹಿ’ ಎಂದು ಹೇಳಿಕೊಂಡಿದ್ದರು. ಊರಿಗೆ ಬಂದಿದ್ದಾಗ ಸಾಮಾನ್ಯ ಮಾತುಕತೆಯಲ್ಲಿ ಸಿಕ್ಕ ವಿಶಿಷ್ಟ ಪದಗಳನ್ನು  ಅವರು ಹೆಕ್ಕಿಕೊಳ್ಳುತ್ತಿದ್ದರು. ಬಳಿಕ ಜಿಜ್ಞಾಸೆ, ವಿವರಣೆ ನಡೆಯುತ್ತಿತ್ತು. ಸಣ್ಣಸಣ್ಣ ಸಂಗತಿಗಳಲ್ಲೂ ಅವರು ತೋರುತ್ತಿದ್ದ ಆಸಕ್ತಿ ಟಿಪಿಕಲ್ ಎನ್ನಬಹುದು. ಒಮ್ಮೆ ಮಂಜೇಶ್ವರ ಗೋವಿಂದ ಪೈಯವರ ನಿವಾಸ ( ಗಿಳಿವಿಂಡು ಆಗಿನ್ನೂ ಸಾಕಾರ ಗೊಂಡಿರಲಿಲ್ಲ.)ದಲ್ಲಿ ಪೈಯವರ ಕುರಿತಾಗಿ ನಡೆದ ಕಾರ್ಯಕ್ರಮಕ್ಕೆ ಬಂದಿದ್ದ ಅವರು ಪೈ ನಿವಾಸದ ಹಿತ್ತಲಲ್ಲಿದ್ದ ವಿಶೇಷವಾದ ಮರಗಿಡಗಳ ಬಗ್ಗೆ ಕುತೂಹಲವನ್ನು ತೋರಿದ್ದರು. ಅಲ್ಲೊಂದು ನಾಗಲಿಂಗ ಪುಷ್ಪದ ಮರವಿತ್ತು. ಮಾತ್ರವಲ್ಲ ಅದರಲ್ಲಿ ತುಂಬಾ ಹೂಗಳಿದ್ದವು. ಅದನ್ನು ಮಗುವಿನಂತೆ ಬಹಳ ಕುತೂಹಲದಿಂದ ನೋಡಿ, ವಿವರವಾಗಿ ಪರೀಕ್ಷಿಸಿ ಸಂಭ್ರಮ ಪಟ್ಟಿದ್ದರು. ಅವರ ಪ್ರತಿಭೆ ಬಾನಾಡಿಯಂತೆ ಜಗದಗಲ ವಿಸ್ತರಿಸಿದರೂ ಅವರು ಕೊನೆಯವರೆಗೂ ಒಂದರ್ಥದಲ್ಲಿ ಅಪ್ಪಟ ಮಗುವಾಗಿದ್ದರು. ಹಾಗಾಗಿಯೇ ಮಕ್ಕಳ ಸಾಹಿತ್ಯವೂ ಸೇರಿದಂತೆ ಅವರ ಸೃಜನಶೀಲತೆಯ ಸ್ರೋತ ಬತ್ತದೆ ನಿರಂತರವಾಗಿತ್ತು.

ಮೊನ್ನೆಯಷ್ಟೇ ಸಂಭವಿಸಿದ  ಅವರ ಸಾವಿನ ನಿಮಿತ್ತ ಹೀಗೆ ನೆನಪುಗಳ ಮೆರವಣಿಗೆ ಸಾಗುತ್ತಲೇ ಇದೆ.

ಮಹೇಶ್ವರಿ.ಯು

ಕಾಸರಗೋಡಿನ ಇವರು ನಿವೃತ್ತ ಪ್ರಾಧ್ಯಾಪಕಿ, ಕವಯಿತ್ರಿ ಹಾಗೂ ವಿಮರ್ಶಕಿ.

Related Articles

ಇತ್ತೀಚಿನ ಸುದ್ದಿಗಳು