Tuesday, December 30, 2025

ಸತ್ಯ | ನ್ಯಾಯ |ಧರ್ಮ

ಜನವರಿ 1 ಕ್ಕೆ ಡಾ. ಗುರುರಾಜ್ ಹೆಬ್ಬಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸ್ಮರಣಾರ್ಥ ಕಾರ್ಯಕ್ರಮ

ಹಾಸನ : ಡಾ. ಗುರುರಾಜ ಹೆಬ್ಬಾರ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಸಾಮಾಜಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜನಕಲ್ಯಾಣ ಮತ್ತು ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೋಹನ್ ಅವರು ತಿಳಿಸಿದರು.

ಕಾಮಧೇನು ಸಹಕಾರಿ ವಿದ್ಯಾಶ್ರಮ ನಿಯಮಿತ, ಹಾಸನ ಹಾಗೂ ಡಾ. ಗುರುರಾಜ ಹೆಬ್ಬಾರ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್, ಹಾಸನ ಇವರ ವತಿಯಿಂದ, ಜನಕಲ್ಯಾಣ ರೀಸರ್ಚ್ ಅಂಡ್ ಚಾರಿಟೇಬಲ್ ಟ್ರಸ್ಟ್, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್), ಸಂಜೀವಿನಿ ಸಹಕಾರಿ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಹಿಮ್ಸ್, ಪರಿಪೂರ್ಣ ಚಾರಿಟೇಬಲ್ ಟ್ರಸ್ಟ್, ವಿದ್ಯಾಸೌಧ ಶಿಕ್ಷಣ ಸಂಸ್ಥೆ, ಪ್ರಶಾಂತಿ ಸೇವಾ ಟ್ರಸ್ಟ್ ಹಾಗೂ ಕಟ್ಟಾಯ ಹೋಬಳಿ ಗ್ರಾಮಸ್ಥರ ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮವು ಜ. 1 ರಂದು ಬೆಳಿಗ್ಗೆ 10 ಗಂಟೆಗೆ ಹಾಸನ ತಾಲೂಕಿನ ಗವೇನಹಳ್ಳಿ ಬೈಪಾಸ್ ರಸ್ತೆಯಲ್ಲಿರುವ ಚೈತನ್ಯ ಮಂದಿರ (ವೃದ್ಧಾಶ್ರಮ)ದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ದೇಹದಾನ–ನೇತ್ರದಾನ ನೋಂದಣಿ ಕಾರ್ಯಕ್ರಮ (2025–26), ಪ್ರತಿಭಾ ಪುರಸ್ಕಾರ ವಿತರಣೆ ಹಾಗೂ ಡಾ. ಗುರುರಾಜ ಹೆಬ್ಬಾರ್ ಸೇವಾ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಾರ್ಯಕ್ರಮವನ್ನು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರೂ ಹಾಗೂ ಸಂಜೀವಿನಿ ಸಹಕಾರಿ ಆಸ್ಪತ್ರೆಯ ಅಧ್ಯಕ್ಷರಾದ ಸ್ವರೂಪ್ ಪ್ರಕಾಶ್ ಅವರು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಾ. ಕೆ.ಪಿ. ಪುತ್ತೂರಾಯ (ವಿಶ್ರಾಂತ ನಿರ್ದೇಶಕರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ) ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಮಧೇನು ಸಹಕಾರಿ ವಿದ್ಯಾಶ್ರಮದ ಅಧ್ಯಕ್ಷರಾದ ಎಂ. ಮಾಧವ ಶೆಣೈ ವಹಿಸಲಿದ್ದಾರೆ.

ಡಾ. ಗುರುರಾಜ ಹೆಬ್ಬಾರ್ ಸೇವಾ ಪ್ರಶಸ್ತಿಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಡಾ. ವಿಜಯಲಕ್ಷ್ಮೀ ಐ. ಬಾಳೆಕುಂದ್ರಿ (ಮಕ್ಕಳ ಹೃದ್ರೋಗ ತಜ್ಞರು, ಜಯದೇವ ಹೃದ್ರೋಗ ಸಂಸ್ಥೆ, ಬೆಂಗಳೂರು) ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಆರತಿ ಕೆ.ಟಿ. (ಸಾಧ್ಯ ಟ್ರಸ್ಟ್ ಫಾರ್ ಸೋಸಿಯಲ್ ಡೆವಲಪ್ಮೆಂಟ್, ವಿಜಯನಗರ ಜಿಲ್ಲೆ) ಅವರಿಗೆ ಪ್ರದಾನ ಮಾಡಲಾಗುತ್ತದೆ. ಪ್ರತಿಭಾ ಪುರಸ್ಕಾರವನ್ನು ಸರ್ಕಾರಿ ಪ್ರೌಢಶಾಲೆ, ಕಟ್ಟಾಯದ ವಿದ್ಯಾರ್ಥಿನಿ ಕುಮಾರಿ ಸಂಸ್ಕೃತಿ ಅವರಿಗೆ ನೀಡಲಾಗುತ್ತದೆ. 2025–26ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಎನ್‌ಎಸ್‌ಎಸ್ ಸ್ವಯಂಸೇವಕ ಪ್ರಶಸ್ತಿಯನ್ನು ಸರ್ಕಾರಿ ವಿಜ್ಞಾನ ಕಾಲೇಜು, ಹಾಸನದ ಚಂದನ್ ಕೆ.ಎಸ್. ಅವರಿಗೆ ಡಾ. ಜಿ.ಬಿ. ಶಿವರಾಜ್ ದತ್ತಿ ಪ್ರಶಸ್ತಿಯಾಗಿ ವಿತರಿಸಲಾಗುತ್ತದೆ.

ಸಭಾ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಸ್ವಾಗತ ಭಾಷಣ, ಉದ್ಘಾಟನೆ, ಸನ್ಮಾನ, ಪ್ರಶಸ್ತಿ ವಿತರಣೆ, ಮುಖ್ಯ ಅತಿಥಿಗಳ ಹಾಗೂ ಅಧ್ಯಕ್ಷರ ಭಾಷಣ, ವಂದನಾರ್ಪಣೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಶ್ರೀ ಸತ್ಯಸಾಯಿ ಬಾಬಾ ಸೇವಾ ಸಮಿತಿಯಿಂದ ಭಜನಾ ಕಾರ್ಯಕ್ರಮ ಹಾಗೂ ಸಾಧ್ಯ ಶಾಲೆಯ ಮಕ್ಕಳಿಂದ ನೃತ್ಯ ಕಾರ್ಯಕ್ರಮವೂ ಏರ್ಪಡಿಸಲಾಗಿದೆ ಎಂದರು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಲಕ್ಷ್ಮೀ ನಾರಾಯಣ್, ಪ್ರತಿಭಾ ರಾಘವೇಂದ್ರ, ಗಣೇಶ್, ಮಾದವ್ ಶೆಣೈ ಹಾಗೂ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page