Home ಅಪರಾಧ ಒಡಿಶಾ | ಸೆಪ್ಟಿಕ್ ಟ್ಯಾಂಕ್ ಒಳಗೆ ಇಳಿದ ಆರು ಮಂದಿ ಉಸಿರುಗಟ್ಟಿ ಸಾವು

ಒಡಿಶಾ | ಸೆಪ್ಟಿಕ್ ಟ್ಯಾಂಕ್ ಒಳಗೆ ಇಳಿದ ಆರು ಮಂದಿ ಉಸಿರುಗಟ್ಟಿ ಸಾವು

0

ಕಾಲಹಂಡಿ (ಒಡಿಶಾ): ಹೊಸದಾಗಿ ನಿರ್ಮಿಸಲಾಗುತ್ತಿದ್ದ ಸೆಪ್ಟಿಕ್ ಟ್ಯಾಂಕ್‌ಗೆ ಇಳಿದ ಆರು ಮಂದಿ ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿರುವ ಭೀಕರ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.

ಕಾಲಹಂಡಿ ಜಿಲ್ಲೆಯ ಮದನ್‌ಪುರ್-ರಾಂಪೂರ್ ಬ್ಲಾಕ್ ವ್ಯಾಪ್ತಿಯ ಗೌಡ ಕರ್ಲಾಮಕುಂಟ ಗ್ರಾಮದ ಮನೆಯೊಂದರಲ್ಲಿ ಹೊಸ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲಾಗುತ್ತಿತ್ತು. ಟ್ಯಾಂಕ್‌ನ ಮೇಲ್ಛಾವಣಿಗೆ ಹಾಕಲಾಗಿದ್ದ ಸೆಂಟ್ರಿಂಗ್ ಸಾಮಗ್ರಿಗಳನ್ನು ಹೊರಗೆ ತೆಗೆಯಲು ಮಂಗಳವಾರ ಬೆಳಿಗ್ಗೆ ಸೆಂಟ್ರಿಂಗ್ ಮೇಸ್ತ್ರಿಯೊಬ್ಬರು ಮೊದಲು ಒಳಗಿಳಿದಿದ್ದರು. ಆದರೆ ಟ್ಯಾಂಕ್ ಒಳಗಿದ್ದ ವಿಷಾನಿಲವನ್ನು ಸೇವಿಸಿದ ಅವರು ಉಸಿರಾಡಲು ಸಾಧ್ಯವಾಗದೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಅವರನ್ನು ರಕ್ಷಿಸಲು ಮುಂದಾದ ಇನ್ನೂ ಇಬ್ಬರು ಮೇಸ್ತ್ರಿಗಳು ಮತ್ತು ಒಬ್ಬ ಕೂಲಿ ಕಾರ್ಮಿಕ ಒಳಗಿಳಿದಿದ್ದಾರೆ. ಅವರ ಬೆನ್ನಲ್ಲೇ ಆ ಮನೆಯ ಮಾಲೀಕ ನಿಮೈಪಾಲ್ ಹಾಗೂ ಅವರ ಪುತ್ರ ಆಕಾಶ್ ಪಾಲ್ ಕೂಡ ಟ್ಯಾಂಕ್‌ಗೆ ಇಳಿದಿದ್ದು, ಎಲ್ಲರೂ ವಿಷಾನಿಲದ ಪ್ರಭಾವದಿಂದ ಒಳಗೆಯೇ ಪ್ರಜ್ಞೆ ಕಳೆದುಕೊಂಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ತಕ್ಷಣವೇ ರಕ್ಷಣಾ ಕಾರ್ಯ ಕೈಗೊಂಡು ಎಲ್ಲರನ್ನೂ ಹೊರತೆಗೆದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ, ಅವರು ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮೃತರನ್ನು ಮೂವರು ಮೇಸ್ತ್ರಿಗಳು, ಒಬ್ಬ ಕೂಲಿ ಕಾರ್ಮಿಕ ಹಾಗೂ ಮನೆಯ ಮಾಲೀಕ ಮತ್ತು ಅವರ ಮಗ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರ ಅಸ್ವಸ್ಥಗೊಂಡಿರುವ ಮತ್ತೊಬ್ಬ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾ ಮುಖ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಎಂ ಮೋಹನ್ ಚರಣ್ ಮಾಝಿ ತೀವ್ರ ಸಂತಾಪ: ಈ ದಾರುಣ ಘಟನೆಗೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ತೀವ್ರ ಆಘಾತ ಮತ್ತು ಪ್ರಗಾಢ ಕಳವಳ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಮ್ಮ ಆಳವಾದ ಸಾಂತ್ವನ ಹೇಳಿರುವ ಮುಖ್ಯಮಂತ್ರಿಯವರು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ (CMRF) ಪ್ರತಿಯೊಬ್ಬ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿಗಳ ತುರ್ತು ಆರ್ಥಿಕ ಸಹಾಯ ಧನವನ್ನು ಘೋಷಿಸಿದ್ದಾರೆ.

You cannot copy content of this page

Exit mobile version