Saturday, June 22, 2024

ಸತ್ಯ | ನ್ಯಾಯ |ಧರ್ಮ

ಕುಮಾರಸ್ವಾಮಿ ಸತ್ಯಹರಿಶ್ಚಂದ್ರನ ಮೊಮ್ಮಗನಾ, ನಿಮ್ಮ ಕಡೆಯವರು ಏನೆಲ್ಲ ಹಂಚುತ್ತಿದ್ದಾರೆ ಹೇಳಬೇಕಾ?: ಡಿಸಿಎಂ ಡಿ‌.ಕೆ.ಶಿವಕುಮಾರ್ ವಾರ್ನಿಂಗ್‌

ಬೆಂಗಳೂರು, ಏ.26: “ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದೆಯೇ ಹೇಳಿ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯವರು ಏನನ್ನು ಹಂಚುತ್ತಿದ್ದಾರೆ ಎಂದು ತೋರಿಸಲೆ. ಅವರು ಸತ್ಯ ಹರಿಶ್ಚಂದ್ರನ ಮೊಮ್ಮಗ. ನಾನೇನು ಎನ್ನುವುದು ಜನಕ್ಕೆ ಗೊತ್ತಿದೆ. ನಾನು ಕಂಡಿತವಾಗಿಯೂ ಸತ್ಯ ಹರಿಶ್ಚಂದ್ರ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಿಡಿಕಾರಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಉತ್ತರಿಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಕೂಪನ್ ಕಾರ್ಡ್ ಗಳನ್ನು ಹಂಚುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ ಅವರು ತಿರುಗೇಟು ಕೊಟ್ಟಿದ್ದು ಹೀಗೆ:

“ಮುನಿರತ್ನ, ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಹಂಚುತ್ತಿದ್ದಾರೆ. ನಾವು ಹಂಚುತ್ತಿರುವುದು ನಮ್ಮ ಪ್ರಣಾಳಿಕೆ ಕಾರ್ಡ್” ಎಂದರು.
10 ಸಾವಿರ ಮೌಲ್ಯದ ಕೂಪನ್ ಕಾರ್ಡ್ ನೀಡಲಾಗುತ್ತಿದೆ ಎಂದು ಮರು ಪ್ರಶ್ನಿಸಿದಾಗ “ಇಷ್ಟಾದರೂ ಭಯ ಬಂದಿದೆಯಲ್ಲ. ಹೆದರಿಕೊಂಡು ರಣ ಹೇಡಿತರ ಬೇರೆ ಕಡೆ ಹೋಗಿದ್ದಾರೆ‌. ಅವರೇ ಚುನಾವಣೆಗೆ ನಿಂತುಕೊಳ್ಳಬೇಕಿತ್ತು. ಅಮಾಯಕರನ್ನು ನಿಲ್ಲಿಸಿ ಮಂಡ್ಯಕ್ಕೆ ಓಡಿ ಹೋಗಿದ್ದಾರೆ. ಕುಮಾರಸ್ವಾಮಿ ಏನೇನು ಮಾಡುತ್ತಿದ್ದಾರೆ, ಏನೇನು ಹಂಚುತ್ತಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲವೇ? ಮುನಿರತ್ನನ ಮೂಲಕ ಗೋಲ್ಡ್ ಕಾರ್ಡ್ ಮಾಡಿ ಹಂಚುತ್ತಿದ್ದಾರೆ‌. ಸಿನಿಮಾ ಸ್ಟೈಲ್ ಅಲ್ಲಿ ಮಾಡಿದ್ದಾರೆ. ಅವರೇಕೆ ಇಷ್ಟೊಂದು ಹತಾಶರಾಗಿದ್ದಾರೆ. ಹರಿಶ್ಚಂದ್ರನ ಮೊಮ್ಮಗ ಏನು ಹಂಚಿದ್ದಾನೆ.

ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿ, ಹೆಣ್ಣು ಮಕ್ಕಳನ್ನು ಅಗೌರವದಿಂದ ಕಂಡಿದ್ದಾರೆ. ಮಾಧ್ಯಮಗಳಲ್ಲಿ ಅವರ ಕರ್ಮಕಾಂಡ ತೋರಿಸುತ್ತಿದ್ದರು. ಇದರ ವಿರುದ್ದ ಹೊಸ ಕಾನೂನು ಮಾಡಬೇಕು ಎಂದು ಯಾರೋ ಹೇಳುತ್ತಿರುವುದನ್ನು ನಾನು ಕೇಳಿದೆ” ಎಂದರು.

ಸಂಸದನೊಬ್ಬ ಹೆಣ್ಣುಮಕ್ಕಳ ಜೊತೆ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದಾಗ “ಇದರ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ, ಡಾ.ಮಂಜುನಾಥ್, ರೇವಣ್ಣ ಅವರನ್ನು ಕೇಳಿ. ನಾನು ಉತ್ತರ ಕೊಡಲು ಆಗುವುದಿಲ್ಲ. ಅವರ ಆಚಾರ ವಿಚಾರ ಎಲ್ಲವೂ ಅವರೇ. ನನಗೆ ಇದನ್ನು ನೋಡಿ ಅವಮಾನವಾಗುತ್ತಿದೆ” ಎಂದರು

ಕೆಪಿಸಿಸಿ ಅಧ್ಯಕ್ಷರು ಬುದ್ದಿವಂತರೇ, ಅವರು ಏನು ಮಾಡಿದ್ದಾರೆ ಎನ್ನುವ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ “ನಾವು ಮಾಡಿರುವುದಕ್ಕೆ, ಮಾಡುತ್ತೇವೆ ಎಂದು ಹೇಳಿದ್ದಕ್ಕೆ ಜನ ಈಚೆ ಬಂದು ನಮಗೆ 136 ಸ್ಥಾನ ಕೊಟ್ಟಿದ್ದಾರೆ. ನೀನೇನು ಮಾಡಲಿಲ್ಲ ಅದಕ್ಕೆ ಜನ 18 ಸ್ಥಾನಗಳನ್ನು ಕೊಟ್ಟಿರುವುದು” ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಐಟಿ ದಾಳಿ:
ಐಟಿ ದಾಳಿ ವಿಚಾರವಾಗಿ ಕೇಳಿದಾಗ “ಕೇವಲ ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಐಟಿ ಅಧಿಕಾರಿಗಳು ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಒಬ್ಬ ಬಿಜೆಪಿಯವರನ್ನು ಹಿಡಿದಿಲ್ಲ. ಐಟಿ ಅಧಿಕಾರಿಗಳಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಬ್ಲಾಕ್ ಅಧ್ಯಕ್ಷನಿಗೆ ಐಟಿ ಅಧಿಕಾರಿಯೊಬ್ಬ ಕಾಂಗ್ರೆಸ್ ಅಲ್ಲಿ ಯಾಕೆ ಇದ್ದಿಯಾ, ಬಿಜೆಪಿಗೆ ಹೋಗು ಎಂದು ಹೇಳುತ್ತಾರೆ. ಸುರೇಶ್ ಕಾರು ಚಾಲಕ ರಘು ಎಂಬಾತನ ಮಗ, ಹೆಂಡತಿಗೆ ಚಿತ್ರಹಿಂಸೆ ನೀಡಿದ್ದಾರೆ. ಎಲ್ಲರಿಗೂ ಕಿರುಕುಳ ನೀಡುತ್ತಿದ್ದು, ಏನೇನು ಕಿರುಕುಳ ನೀಡಿದರು ಎಂದು ಚುನಾವಣೆ ಮುಗಿದ ನಂತರ ಎಲ್ಲರಿಂದಲೂ ಅಫಿಡವಿಟ್ ಸಲ್ಲಿಸಲಿದ್ದೇನೆ. ಕಿರುಕುಳದ ವಿರುದ್ದ ಡಿಜಿ ಅವರನ್ನು ಭೇಟಿ ಮಾಡಿ ದೂರು ನೀಡಲಿದ್ದೇನೆ” ಎಂದರು.

ಎಲ್ಲಾ ವರ್ಗದ ಜನ ಕಾಂಗ್ರೆಸ್ ಪರ ನಿಲ್ಲುತ್ತಾರೆ:
ಕರ್ನಾಟಕದ ಜನರು ಉತ್ತಮ ತೀರ್ಪು ನೀಡಲಿದ್ದಾರೆ. ಅದರಲ್ಲೂ ಮಹಿಳೆಯರು ಕಾಂಗ್ರೆಸ್ ಪಕ್ಷದ ಪರವಾಗಿ ನಿಲ್ಲಲಿದ್ದಾರೆ. ಯುವಕರಿಗೆ, ಮಹಿಳೆಯರಿಗೆ 1 ಲಕ್ಷ ಹಣ, 25 ಲಕ್ಷ ಆರೋಗ್ಯ ವಿಮೆ ಸೇರಿದಂತೆ ಅನೇಕ ಭರವಸೆಗಳನ್ನು ನೀಡಿದ್ದೇವೆ. ಕಾಂಗ್ರೆಸ್ ಪಕ್ಷ ಉತ್ತಮ ಪ್ರಣಾಳಿಕೆ ನೀಡಿದೆ. ಗ್ಯಾರಂಟಿ ಮೂಲಕ ನುಡಿದಂತೆ ನಡೆದಿದ್ದೇವೆ, ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಯುವಕರ ಬಾಳಿನಲ್ಲಿ ಕಾಂಗ್ರೆಸ್ ಬದಲಾವಣೆ ತರಲಿದೆ ಆದ ಕಾರಣ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಜನರು ಜವಾಬ್ದಾರಿಯಿಂದ ಮತ ಚಲಾಯಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರ ಕಷ್ಟ ನಿವಾರಣೆ ಮಾಡಿವೆ. ಅದರಲ್ಲೂ ಮಹಿಳೆಯರಿಗೆ ಅನುಕೂಲವಾಗಿದೆ. ಮಹಿಳೆಯರು ಬಹಳ ಸಂತೋಷದಿಂದ ಮತದಾನದಲ್ಲಿ ಭಾಗವಹಿಸುತ್ತಿದ್ದಾರೆ. ನಾವು ಸುಮಾರು 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಸೂಚನೆ ಇದೆ. ಮೊದಲ ಹಂತದ 14 ಕ್ಷೇತ್ರದಲ್ಲಿ 10 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಒಟ್ಟು 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಇದು ಜ್ಯೋತಿಷ್ಯವಲ್ಲ, ರಾಜಕೀಯ ಪಾಂಡಿತ್ಯ. ಗೌಡರ ಕುಟುಂಬ ಸೇರಿದಂತೆ 4 ಸ್ಥಾನವೂ ಬರವುದಿಲ್ಲ.

ಬೆಜೆಪಿ ಗೊಂದಲದಲ್ಲಿ ಮುಳುಗಿದೆ. ರೈತರು, ತಾಯಂದಿರು, ಯುವ ಸಮುದಾಯ, ಎಲ್ಲಾ ವರ್ಗದ ಜನರು ಹಾಗೂ ದಳ- ಬಿಜೆಪಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಬೇಕು ಎಂದು ತೀರ್ಮಾನ ಮಾಡಿದ್ದಾರೆ” ಎಂದರು.

ಕಾಂಗ್ರೆಸ್ ಹತಾಶೆಯಿಂದ ಕೂಡಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ “ಅವರು ಹತಾಶರಾಗಿದ್ದಾರೆ ಅದನ್ನು ನಮ್ಮ ಮೇಲೆ ಹೇಳುತ್ತಿದ್ದಾರೆ. ಪ್ರಧಾನಿಗಳೇ ಹತಾಶರಾಗಿ ಮಂಗಳಸೂತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಸ್ಥಾನಕ್ಕೆ ತಕ್ಕಂತೆ ಮಾತನಾಡುತ್ತಿಲ್ಲ. ಸಮಾಜದಲ್ಲಿ ಅಸಮಾನತೆ ಇರಬಾರದು ಎಂದು ಹೇಳಬೇಕಾದವರೆ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಸಂವಿಧಾನದ ಮೇಲೆ ಪ್ರಮಾಣ ಮಾಡಿರುತ್ತೇವೆ. ಬೇಧ ಭಾವ ಮಾಡುವುದು ಅಪರಾಧ” ಎಂದರು.

“ಜನರು ಕಿಟಕಿ, ಬಾಗಿಲು ತೆರೆದುಕೊಂಡಿರಿ ಬೆಳಕು ನಿಮ್ಮ ಮನೆಗೆ ಬರಲಿದೆ. ಬಿಜೆಪಿಗೆ 10 ವರ್ಷ ಕೊಟ್ಡರೂ ಏನೂ ಕೆಲಸ ಮಾಡಿಲ್ಲ. ದೇಶದ, ರಾಜ್ಯದ ಜನರಿಗೆ ಸುವರ್ಣ ಅವಕಾಶ. ಕಾಂಗ್ರೆಸ್ ಬದುಕಿನ ರಾಜಕಾರಣ ಮಾಡಿದೆ, ಅವರು ಬದುಕಿನ ಭಾವನೆ ಮೇಲೆ ರಾಜಕೀಯ ಮಾಡಿದ್ದಾರೆ. ಬಿಜೆಪಿ ಬಡವರಿಗೆ ಏನೂ ಮಾಡಿಲ್ಲ. ಶೋಭಕ್ಕ ಒಂದು ಕಾಲದಲ್ಲಿ ಸೀರೆ, ಸೈಕಲ್ ಕೊಟ್ಟಿದ್ದರು ಅದು ಬಿಟ್ಟರೇ ಏನೂ ಮಾಡಿಲ್ಲ. ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಕೊಟ್ಟ ಯಾವುದೇ ಕಾರ್ಯಕ್ರಮ ಗಳನ್ನು ಅವರಿಗೆ ನಿಲ್ಲಿಸಲು ಆಗಲಿಲ್ಲ” ಎಂದರು.

ಜೆ.ಪಿ.ನಡ್ಡಾ ಉತ್ತರ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದರ ಬಗ್ಗೆ ಕೇಳಿದಾಗ “ಆಕಾಶದಿಂದ ಯಾರೇ ಕೆಳಗೆ ಉದುರಲಿ ಕಾಂಗ್ರೆಸ್ ಪಕ್ಷಕ್ಕೆ ಏನೂ ಮಾಡಲು ಆಗುವುದಿಲ್ಲ“ ಎಂದರು.

Related Articles

ಇತ್ತೀಚಿನ ಸುದ್ದಿಗಳು