Tuesday, June 18, 2024

ಸತ್ಯ | ನ್ಯಾಯ |ಧರ್ಮ

ಉತ್ತರಕಾಶಿ ಸುರಂಗ ಕುಸಿತ : ‘ಕಾರ್ಮಿಕರ ರಕ್ಷಣೆಗೆ ಇನ್ನೂ 15 ದಿನ ಬೇಕಾಗಬಹುದು’ ಎಂದ ಅಧಿಕಾರಿಗಳು

ಉತ್ತರಾಕಾಂಡದ ಉತ್ತರ ಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದು 10 ದಿನ ಕಳೆದರೂ ಕಾರ್ಮಿಕರ ರಕ್ಷಣೆ ಆಗಿಲ್ಲ. ಸುಮಾರು 60 ಅಡಿ ಉದ್ದಕ್ಕೆ ಕುಸಿದಿರಬಹುದಾದ ಸುರಂಗದಲ್ಲಿ 41 ಕಾರ್ಮಿಕರು ಸಿಲುಕಿಕೊಂಡಿದ್ದು, ಅವರ ರಕ್ಷಣೆಗೆ ಇನ್ನೂ 15 ದಿನಗಳು ಆಗಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ ಶುಕ್ರವಾರ ಮಧ್ಯಾಹ್ನ ಆಗರ್ ಯಂತ್ರ ಉಪಯೋಗಿಸಿ ಸುರಂಗವನ್ನು ಕೊರೆದು ಕಾರ್ಮಿಕರ ರಕ್ಷಣೆಗೆ ಮುಂದಾಗಿತ್ತು. ಆದರೆ ಮಧ್ಯದಲ್ಲಿ ದೊಡ್ಡದಾದ ಕಲ್ಲು ಬಂಡೆ ಬಂದ ಹಿನ್ನೆಲೆಯಲ್ಲಿ ಕಾರ್ಮಿಕರು ಇರುವ ಜಾಗದಲ್ಲೇ ಭೂಮಿ ಕುಸಿಯಬಹುದಾದ ಸಾಧ್ಯತೆ ಕಂಡುಬಂದ ಕಾರಣ ಅದನ್ನು ಅಲ್ಲಿಗೇ ನಿಲ್ಲಿಸಲಾಯಿತು.

ಮುಂದಿನ ಎರಡು ದಿನಗಳಲ್ಲಿ ಡ್ರಿಲ್ಲಿಂಗ್ ಮೆಷಿನ್ ಸಹಾಯದಿಂದ ಕಾರ್ಮಿಕರನ್ನು ಹೊರತರುವ ಎಲ್ಲಾ ಪ್ರಯತ್ನಗಳು ನಡೆದಿವೆ. ಸಧ್ಯಕ್ಕೆ ಡ್ರಿಲ್ಲಿಂಗ್ ಮಷಿನ್ ಸೂಕ್ತ ಆಯ್ಕೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದೂ ಕೂಡ ಕೆಲಸ ಮಾಡದಿದ್ದರೆ ಕಾರ್ಮಿಕರ ರಕ್ಷಣೆಗೆ ಇನ್ನೂ 15 ದಿನವರೆಗೂ ಹಿಡಿಯಬಹುದು ಎಂದು ಹೇಳಲಾಗಿದೆ.

ಈಗಾಗಲೇ 6 ಇಂಚಿನ ಪೈಪ್ ಮೂಲಕ 41 ಕಾರ್ಮಿಕರು ಸುರಕ್ಷತೆಯಿಂದ ಇರುವ ಬಗ್ಗೆ ವಿಡಿಯೋ ಸಾಕ್ಷಿ ಹೊರ ಬಿದ್ದಿದೆ. ಹಾಗೆಯೇ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಚಪಾತಿ, ವೆಜ್​ ಪಲಾವ್, ಮಟರ್​ ಪನೀರ್​ನಂತಹ ಬೇಯಿಸಿದ ಆಹಾರ ಪದಾರ್ಥಗಳನ್ನು 6 ಇಂಚಿನ ಪೈಪ್ ಮೂಲಕ ರವಾನಿಸಲಾಗುತ್ತಿದೆ. ಆಹಾರ ಪದಾರ್ಥಗಳ ಜೊತೆಗೆ ಆಕ್ಸಿಜನ್ ಮತ್ತು ನೀರನ್ನು ಕಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಏಳೆಂಟು ದಿನಗಳಿಂದ ಘಟನಾ ಸ್ಥಳದಲ್ಲಿ ಎನ್​ಡಿಆರ್​ಎಫ್ , ಎಸ್​ಡಿಆರ್​ಎಫ್, ಐಟಿಬಿಪಿ, ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಕಾರ್ಮಿಕರ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು