Home ಅಂಕಣ ಒಳಗಿನ ʼತನ್ನತನ’ಕ್ಕೆ ಬೇಕಿದೆ ಸ್ವಾಗತ!

ಒಳಗಿನ ʼತನ್ನತನ’ಕ್ಕೆ ಬೇಕಿದೆ ಸ್ವಾಗತ!

0

ಅಂದು ಆಫ್ ಲೈನ್ ಕ್ಲಾಸಿನ ಮೊದಲ ದಿನ. ಕಾಲೇಜ್ ಶುರುವಾಗಿ ಒಂದೂವರೆ ವರ್ಷವಾಗಿದ್ದರೂ, ಅಂದೇ ಮೊದಲು ನಾವು ಕಾಲೇಜ್  ಕ್ಯಾಂಪಸ್ಸಿಗೆ ಹೋಗಿದ್ದು. ಪ್ರತೀ ದಿನ ಆನ್ ಲೈನ್ ಕ್ಲಾಸಿನಲ್ಲಿ ಒಟ್ಟಿಗೆ ಪಾಠ ಕೇಳುತ್ತಿದ್ದರೂ, ಯಾರೂ ಒಬ್ಬರನ್ನೊಬ್ಬರು  ನೋಡಿರಲಿಲ್ಲ. ಎದುರು ಬದುರು ನಿಂತು ಮಾತನಾಡಿರಲಿಲ್ಲ.

ಅಂದು ಕ್ಲಾಸಿಗೆ ಬಂದ ಎಲ್ಲ ಪ್ರೊಫೆಸರ್ ಗಳು ತಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದರು. ನಮಗೂ ಕೂಡಾ ಪರಿಚಯ ಮಾಡಿಕೊಳ್ಳಲು ಹೇಳಿದರು. ನಮ್ಮ ಹೆಸರು, ಸ್ಥಳ ಮತ್ತು ಸರ್ವನಾಮ ಹೇಳಿ ಪರಿಚಯ ಮಾಡಿಕೊಳ್ಳಿ ಎಂದು ಹೇಳಿದರು.

 “ಸರ್ವನಾಮ”…!  ನಾನು ಮೊದಲ ಬಾರಿಗೆ ಕೇಳುತ್ತಿದ್ದೆ. (ಸರ್ವನಾಮವೆಂದರೆ ನಾಮಪದದ ಬದಲು ಬಳಸುವ ಪದ. ಉದಾಹರಣೆಗೆ ಅವರು, ಅವನು, ಅವಳು, ಅದು, ಇದು ಇತ್ಯಾದಿ) ನನ್ನ ಜೀವನದ ಈ ಹದಿನೆಂಟು ವರ್ಷದಲ್ಲಿ ಎಂದೂ ಯಾರೂ ನಿನ್ನ ಸರ್ವನಾಮವೇನೆಂದು ನನ್ನನ್ನು ಕೇಳಿರಲಿಲ್ಲ . ಹೌದು, ಎಲ್ಲರೂ ಬಾಹ್ಯ ಚಹರೆಗಳನ್ನು ನೋಡಿಯೇ ‘ಏ ಅವಳು ಹುಡುಗಿ, ಅವನು ಹುಡುಗ’ ಎಂದು ಸರ್ವನಾಮವನ್ನು ನಿರ್ಧರಿಸಿಬಿಟ್ಟಿರುತ್ತಾರೆ. ನಾವು ಹೇಗೆ ಕರೆಸಿಕೊಳ್ಳಲು ಇಷ್ಟಪಡುತ್ತೇವೆ ಅಥವಾ ನಮ್ಮನ್ನು ಹೇಗೆ ಗುರುತಿಸಿಕೊಳ್ಳಲು ಬಯಸುತ್ತೇವೆ ಎಂದು ಯಾರೂ ನಮ್ಮನ್ನು ಕೇಳುವುದೇ ಇಲ್ಲ. ಬಾಹ್ಯ ಮಾತ್ರವಲ್ಲದ ‘ಒಳಗಿನ ತನ್ನತನ’ ಏನೆಂದು ಯಾರೂ ಅರಿಯಲು ಪ್ರಯತ್ನಿಸುವುದೇ ಇಲ್ಲ. ಆದ್ದರಿಂದ ಯಾರೂ ಹೀಗೆ ನಿಮ್ಮ ಸರ್ವನಾಮ ಏನೆಂದು  ಕೇಳುವುದೇ ಇಲ್ಲ!

ಕಾಲೇಜಿಗೆ ಸೇರಿದ ಆ ಸಮಯದಲ್ಲಿ ನನಗೂ ಇವೆಲ್ಲ ಹೊಸತು. ಸರ್ವನಾಮವೆಂಬ ಮಾತನ್ನು ಕೇಳಿದ ತಕ್ಷಣ ಮೊದಲಿಗೆ, ಇದರಲ್ಲಿ ಕೇಳುವಂತಹದು ಏನಿದೆ? ಎನಿಸಿತು. ನಂತರ ಎಲ್ಲರೂ ತಮ್ಮ ಪರಿಚಯ ಮಾಡಿಕೊಳ್ಳಲು ಶುರು ಮಾಡಿದಾಗ ಸರ್ವನಾಮ ನಮ್ಮ ಬಾಹ್ಯ ರೂಪದ್ದಲ್ಲ, ಮನಸ್ಸಿನದೆಂದು ತಿಳಿಯಿತು. ಅದು ವ್ಯಕ್ತಿಯ ರೂಪ, ಲಿಂಗ, ಎಲ್ಲವನ್ನು ಮೀರಿರುವುದಾಗಿಯೂ, ತಮ್ಮನ್ನು ‘ಅವನು, ಅವಳು, ಅವರು’, ಎಂದು ಕರೆದುಕೊಳ್ಳುವುದು ಅವರವರ ಮನಸ್ಸಿನ ಇಚ್ಚೆಗೆ ಸಂಬಂಧಿಸಿದ್ದೆಂದು ಅರಿವಾಯಿತು.

 ಕ್ಲಾಸಿನಲ್ಲಿ ಎಲ್ಲರೂ ತಮ್ಮ ಸರ್ವನಾಮದೊಂದಿಗೆ ‘ಅವನು, ಅವಳು’, ಹೀಗೆ ಪರಿಚಯ ಮಾಡಿಕೊಳ್ಳುತ್ತಿದ್ದರು. ಒಬ್ಬ ಹುಡುಗಿ ತನ್ನ ಸರ್ವನಾಮ ‘ಅವನು’ ಅಥವಾ ‘ಅವರು’ ಎಂದು ಹೇಳಿದಳು ಮತ್ತೂ ಕೆಲ ವಿದ್ಯಾರ್ಥಿಗಳು ತಾವು ‘ಅವರು’ ಎಂದು ಮಾತ್ರ ಗುರುತಿಸಿಕೊಳ್ಳುವುದಾಗಿ ಹೇಳಿದಾಗ, ನನಗೆ ಆಶ್ಚರ್ಯ! ಇದು ಹೇಗೆ ಸಾಧ್ಯ?

ಅವಳು \ ಅವನು (ಹುಡುಗಿ\ ಹುಡುಗ) ತಮ್ಮನ್ನು (ಅವರು) ಎಂದು ಹೇಗೆ ಮತ್ತು  ಏಕೆ ಗುರುತಿಸಿಕೊಳ್ಳುತ್ತಾರೆ?  ಈ ವಿಷಯಗಳನ್ನೆಲ್ಲ ಅರಿತು ಅರಗಿಸಿಕೊಳ್ಳಲು  ಕೆಲ ದಿನ ಬೇಕಾದರೂ, ನನಗೆ ಹೊಸ ಪ್ರಪಂಚಕ್ಕೆ, ಕಲಿಕೆಗಳಿಗೆ, ತೆರೆದುಕೊಳ್ಳಲು ಕುತೂಹಲ ಮತ್ತು ಖುಷಿ ಇತ್ತು. ಇವೆಲ್ಲದರ ನಡುವೆ ನನ್ನಲ್ಲಿ ಮೂಡಿದ ಪ್ರಶ್ನೆ ಏನೆಂದರೆ, ನಾನು ಇಷ್ಟು ವರ್ಷ ಯಾಕೆ ಇಂತಹ ಮೂಲಭೂತವಾದ ವಿಚಾರಗಳಿಗೆ ಒಡ್ಡಿಕೊಂಡಿಲ್ಲ ಎಂದು!

ಮೊದಲಿಗೆ ಜನರಿಗೆ L G B T Q, Queer ಅಥವಾ ವಿವಿಧ Identity ಗಳ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ತಿಳಿದಿದ್ದರೂ, ಸಮಾಜದಲ್ಲಿ ಅವರನ್ನು ಪೂರ್ಣವಾಗಿ ಸ್ವೀಕರಿಸುವ ಮನೋಭಾವವಿಲ್ಲ. ಹಾಗಾಗಿ ಇಂತಹ ವಿಷಯಗಳು ಪ್ರತಿದಿನದ ಜೀವನದಲ್ಲಿ ಒಳಗಾಗುವುದಾಗಲಿ, ಚರ್ಚೆಯಾಗುವುದಾಗಲಿ ಇಲ್ಲ. ಇದೇ ಸಮಯದಲ್ಲಿನ ಮತ್ತೊಂದು ಪ್ರಶ್ನೆಯೆಂದರೆ, ಹೀಗಿದ್ದ ಮೇಲೆ ನನ್ನ ಕಾಲೇಜಿನಲ್ಲಿ ಇದೆಲ್ಲ ಹೇಗೆ ಸಾಮಾನ್ಯ? ಎಲ್ಲರೂ ಹೇಗೆ ಇಂತಹ ವಿಷಯಗಳನ್ನು ಪೂರ್ಣ ಮನಸ್ಸಿನಿಂದ ಸ್ವೀಕರಿಸುತ್ತಾರೆ? ಹೇಗೆ ವಿದ್ಯಾರ್ಥಿಗಳು ಕೂಡ ‘ತಮ್ಮತನ’ವನ್ನು ಗುರುತಿಸಿಕೊಳ್ಳುತ್ತಾರೆ?.

ಕಾಲೇಜಿನಲ್ಲಿ ಕೆಲವು ತಿಂಗಳು ಕಳೆದ ನಂತರ ನನಗೆ ಕ್ರಮೇಣ ಅರಿವಾಗತೊಡಗಿತು. ನಾನು ಓದುತ್ತಿರುವ ಕ್ರೈಸ್ಟ್ ಯೂನಿವರ್ಸಿಟಿಗೆ ಬರುವ ಬಹುತೇಕ ಎಲ್ಲ ಮಕ್ಕಳ ಪೋಷಕರು ವಿದ್ಯಾವಂತರು, ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗದವರಾಗಿರುತ್ತಾರೆ. ಅವರು ಚಿಕ್ಕ ವಯಸ್ಸಿನಿಂದ ಮಕ್ಕಳನ್ನು ಬಹಳ ಸ್ವತಂತ್ರವಾಗಿ ಬೆಳೆಸಿದ್ದು, ಮನೆಯಲ್ಲಿ ಇಂತಹ ಸೂಕ್ಷ್ಮ ವಿಷಯಗಳನ್ನು ತಾವೂ ಅರ್ಥ ಮಾಡಿಕೊಂಡು ಮಕ್ಕಳ ಆಯ್ಕೆಗಳಿಗೆ ಬೆಂಬಲ ನೀಡುವ ಮನಸ್ಥಿತಿ ಉಳ್ಳವರಾಗಿರುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಬಹುತೇಕರಿಗಿರುವ ಆರ್ಥಿಕ ಭದ್ರತೆಯು, ಇಂತಹ ವಿಷಯಗಳಲ್ಲಿ ಮುಕ್ತವಾಗಿರಲು ಬೇಕಾದಂತಹ ಆತ್ಮವಿಶ್ವಾಸ ನೀಡಿದೆ. ಹಾಗಾಗಿ ಅವರು ಸಮಾಜದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹದ್ದೇ ಹಿನ್ನೆಲೆಯ ವಿದ್ಯಾರ್ಥಿಗಳು ಮತ್ತು ಮುಕ್ತ ಮನಸ್ಸಿನ ಪ್ರೊಫೆಸರ್ ಗಳಿಂದಾಗಿ ಕಾಲೇಜಿನ ವಾತಾವರಣದಲ್ಲಿ ಅವರನ್ನು ತೆರೆದ ಮನಸಿನಿಂದ ಒಪ್ಪಿಕೊಳ್ಳುವುದು ಸಾಧ್ಯವಾಗಿದೆ. ಇದರಿಂದಾಗಿ ಅವರಿಗೂ  ಮುಕ್ತವಾಗಿ  ತೆರೆದುಕೊಳ್ಳಲು ಸಾವಕಾಶವಾಗಿದೆ.

ಆದರೆ ಇದೇ ವಿಷಯಗಳು ಹೊರಗೆ ತುಂಬಾ ಸೂಕ್ಷ್ಮ. ಕೆಲವರಿಗೆ ಅವರೇನೆಂದು ತಿಳಿದುಕೊಳ್ಳುವ ವಾತಾವರಣ ಅಥವಾ ಅವಕಾಶ ಇರುವುದಿಲ್ಲ. ಅವರೇನೆಂದು ವ್ಯಕ್ತಪಡಿಸಲು ಬೆಂಬಲವಿರುವುದಿಲ್ಲ. ಹಾಗಾಗಿ ಸರ್ವನಾಮ (pronoun) \ Identity) ದಂತಹ ಮುಖ್ಯ ಮತ್ತು ಮೂಲಭೂತವಾದ ವಿಷಯಗಳು ಪರದೆಯ ಮರೆಯಲ್ಲೇ ಉಳಿದುಬಿಡುತ್ತವೆ.

ಗೌತಮಿ  ತಿಪಟೂರು
ಬೆಂಗಳೂರಿನ ಕ್ರೈಸ್ಟ್‌ ಯೂನಿವರ್ಸಿಟಿಯಲ್ಲಿ ‌ʼಲಿಬರಲ್‌ ಆರ್ಟ್ಸ್ʼ ಓದುತ್ತಿದ್ದಾರೆ.

You cannot copy content of this page

Exit mobile version