Thursday, August 21, 2025

ಸತ್ಯ | ನ್ಯಾಯ |ಧರ್ಮ

ಗಾಜಾ ನರಮೇಧ: ಭಾರತದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಾರದಂತೆ ಇಸ್ರೇಲ್‌ ವಿರುದ್ಧ ನಿಷೇಧ ಹೇರಿದ ಒಲಿಂಪಿಯಾಡ್ ಮಂಡಳಿ

ಈ ವಾರ ಭಾರತದಲ್ಲಿ ನಡೆಯುತ್ತಿರುವ ವಾರ್ಷಿಕ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದ ಅಂತರರಾಷ್ಟ್ರೀಯ ಒಲಿಂಪಿಯಾಡ್ (IOAA) ನ ಜಾಗತಿಕ ಆಡಳಿತ ಮಂಡಳಿಯು, ಇಸ್ರೇಲ್ ದೇಶವನ್ನು ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ನಿಷೇಧಿಸಲು ನಿರ್ಧರಿಸಿದೆ. ಆದರೆ ಇಸ್ರೇಲಿ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಆಗಸ್ಟ್ 18ರಂದು IOAA ಮಂಡಳಿಯ ಈ ನಿರ್ಧಾರವನ್ನು ಕೈಗೊಂಡಿದ್ದು, ಈ ಕುರಿತು ಇಸ್ರೇಲ್‌ ಗಾಜಾದಲ್ಲಿ ನಡೆಸಿರುವ ದೌರ್ಜನ್ಯಗಳನ್ನು ಉಲ್ಲೇಖಿಸಿ ಜಗತ್ತಿನಾದ್ಯಂತ 530 ಕ್ಕೂ ಹೆಚ್ಚು ಅಧ್ಯಾಪಕರು, ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಸಹಿ ಮಾಡಿದ ಲಿಖಿತ ಮನವಿ ಸಲ್ಲಿಸಿದ್ದರು.

ಒಲಿಂಪಿಯಾಡ್‌ನಲ್ಲಿ ದೇಶವನ್ನು ಭಾಗವಹಿಸದಂತೆ ತಡೆಯುವಂತೆ ಅವರು ಮಂಡಳಿಗೆ ಆಗ್ರಹಿಸಿದ್ದರು.

64 ದೇಶಗಳ ಪ್ರತಿನಿಧಿಗಳನ್ನು ಹೊಂದಿರುವ 118 ಸದಸ್ಯರ ಮಂಡಳಿಯು, ಇಸ್ರೇಲ್ ದೇಶವನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು “ಗಮನಾರ್ಹ ಬಹುಮತ” ದೊಂದಿಗೆ ಅನುಮೋದಿಸಿದ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು IOAA ಮಂಡಳಿಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾದ ಅನಿಕೇತ್ ಸುಳೆ ಅವರು ದಿ ಟೆಲಿಗ್ರಾಫ್‌ಗೆ ತಿಳಿಸಿದರು. 10ಕ್ಕಿಂತ ಕಡಿಮೆ ಸದಸ್ಯರು ಪ್ರಸ್ತಾವನೆಯ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಅವರು ಹೇಳಿದರು.

2007 ರಲ್ಲಿ ಪ್ರಾರಂಭವಾದ IOAA, ಪ್ರಪಂಚದಾದ್ಯಂತದ ಹಿರಿಯ ಶಾಲಾ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ವಿಷಯದಲ್ಲಿ ಸವಾಲಿನ ಪರೀಕ್ಷೆಗಳನ್ನು ಎದುರಿಸಲು ಪ್ರೇರೇಪಿಸುತ್ತದೆ.

ಮುಂಬೈನ ಹೋಮಿ ಭಾಭಾ ವಿಜ್ಞಾನ ಶಿಕ್ಷಣ ಕೇಂದ್ರ ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಗಳು ಆಗಸ್ಟ್ 12-21ರವರೆಗೆ 2025ರ ಆವೃತ್ತಿಯನ್ನು ಆಯೋಜಿಸಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದರ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡಿದ್ದರು.

ಇಸ್ರೇಲ್ ಇದುವರೆಗೆ IOAA ಸಮಾವೇಶಕ್ಕೆ ತಂಡವನ್ನು ಕಳುಹಿಸಿಲ್ಲವಾದರೂ, ಈಗ ಆ ದೇಶವು ಭಾಗವಹಿಸುವ ರಾಷ್ಟ್ರವಾಗಿ ಸೇರಲು ಅಥವಾ ಭವಿಷ್ಯದ ಒಲಿಂಪಿಯಾಡ್‌ಗಳಲ್ಲಿ ಅದರ ಧ್ವಜವನ್ನು ಇಲ್ಲಿ ಪ್ರದರ್ಶಿಸಲು ಸಾಧ್ಯವಿಲ್ಲ.

“ಈ ಕ್ರಮವು ಭವಿಷ್ಯದ ಸಂಭಾವ್ಯ ಭಾಗವಹಿಸುವಿಕೆಗೆ ಸಂಬಂಧಿಸಿದೆ” ಎಂದು ಸುಳೆ ಹೇಳಿದರು. ಮಂಡಳಿಯ ಸದಸ್ಯರನ್ನು ರಕ್ಷಿಸಲು ಪ್ರಸ್ತಾವನೆಯನ್ನು ಬೆಂಬಲಿಸಿದ ದೇಶಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು. ಮಂಡಳಿಯು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ಮತ ಚಲಾಯಿಸುವವರೆಗೆ ಅಮಾನತು ಮುಂದುವರಿಯುತ್ತದೆ.

ಅದೇ ರೀತಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ರಷ್ಯಾ ಮತ್ತು ಬೆಲಾರಸ್ ದೇಶಗಳನ್ನು 2022 ರಲ್ಲಿ ಉಕ್ರೇನ್‌ನಲ್ಲಿನ ಅವುಗಳ ಮಿಲಿಟರಿ ಕ್ರಮಗಳಿಗಾಗಿ ಅಮಾನತುಗೊಳಿಸಿತ್ತು.

ಆದರೆ ಇಸ್ರೇಲ್‌ನ ವಿದ್ಯಾರ್ಥಿಗಳು ತಮ್ಮ ದೇಶವನ್ನು ಪ್ರತಿನಿಧಿಸದೆ IOAA ನಲ್ಲಿ ವೈಯಕ್ತಿಕವಾಗಿ ಸ್ಪರ್ಧಿಸಬಹುದು ಎಂದು ಸುಳೆ ಹೇಳಿದರು.

ಆಗಸ್ಟ್ 1 ರಂದು IOAA ಮಂಡಳಿಗೆ ಸಲ್ಲಿಸಿದ ಮನವಿಯಲ್ಲಿ, ಒಲಿಂಪಿಯಾಡ್‌ನ ಸ್ಫೂರ್ತಿಯು ಸದಸ್ಯ ರಾಷ್ಟ್ರಗಳು ಅಂತರರಾಷ್ಟ್ರೀಯ ಕಾನೂನನ್ನು ಅನುಸರಿಸಬೇಕು ಮತ್ತು ವಿದ್ಯಾರ್ಥಿಗಳ ಹಕ್ಕುಗಳನ್ನು ಗೌರವಿಸಬೇಕು ಎಂದು ವಾದಿಸಲಾಗಿತ್ತು.

“ಈ ನಿಯಮಗಳನ್ನು ಇಸ್ರೇಲ್ ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ನಾವು ವಿಷಾದದಿಂದ ಗಮನಿಸಿದ್ದೇವೆ. ಗಾಜಾದಲ್ಲಿ ಇಸ್ರೇಲ್‌ನ ಸುದೀರ್ಘ ಕಾರ್ಯಾಚರಣೆಯು ಸಾವಿರಾರು ಮಕ್ಕಳನ್ನು ಒಳಗೊಂಡಂತೆ 60,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಕೊಂದಿದೆ” ಎಂದು ಮನವಿಯಲ್ಲಿ ಹೇಳಲಾಗಿದೆ.

ಮನವಿಗೆ ಸಹಿ ಮಾಡಿದವರಲ್ಲಿ ಚೆನ್ನೈ ಗಣಿತ ಸಂಸ್ಥೆಯ ಅಲೋಕ್ ಲಧಾ ಮತ್ತು ರೋನಕ್ ಸೋನಿ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಸಂದೀಪ್ ತ್ರಿವೇದಿ, ಫ್ರಾನ್ಸ್‌ನ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್‌ನ ಅಹ್ಮದ್ ಅಬ್ಬೆಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ರವೀಂದರ್ ಬನ್ಯಾಲ್, ನ್ಯಾಷನಲ್ ಸೆಂಟರ್ ಫಾರ್ ರೇಡಿಯೋ ಅಸ್ಟ್ರೋಫಿಸಿಕ್ಸ್‌ನ ನಿಸ್ಸಿಮ್ ಕಣೇಕರ್, ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥಿಯರಿಟಿಕಲ್ ಸೈನ್ಸಸ್‌ನ ಸುವ್ರತ್ ರಾಜು, ಮತ್ತು ಫ್ರಾನ್ಸ್‌ನ ಇನ್‌ಸ್ಟಿಟ್ಯೂಟ್ ಆಫ್ ಥಿಯರಿಟಿಕಲ್ ಫಿಸಿಕ್ಸ್‌ನ ಪಿಯರ್ ವಾನ್ಹೋವ್ ಸೇರಿದ್ದಾರೆ.

ಒಲಿಂಪಿಯಾಡ್‌ಗಳು ಪ್ರತಿಷ್ಠೆಯನ್ನು ಹೊಂದಿದ್ದು, ಇಸ್ರೇಲಿ ಸಮಾಜದಿಂದ ಮಹತ್ವದವೆಂದು ಪರಿಗಣಿಸಲ್ಪಟ್ಟಿದ್ದರಿಂದ IOAA ಮಂಡಳಿಯ ನಿರ್ಧಾರವು ಮಹತ್ವದ್ದಾಗಿದೆ ಎಂದು ರಾಜು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page