ಭಯೋತ್ಪಾದಕನ ಮಗನನ್ನು ಭಯೋತ್ಪಾದಕ ಎಂದು ಪರಿಗಣಿಸುವುದನ್ನು ನಿಲ್ಲಿಸಿ: ಕೇಂದ್ರಕ್ಕೆ ಒಮರ್‌ ಅಬ್ದುಲ್ಲಾ ಆಗ್ರಹ

ಶ್ರೀನಗರ: ಆದಷ್ಟು ಬೇಗ ರಾಜ್ಯ ಸ್ಥಾನಮಾನವನ್ನು ಮರಳಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ.

2019ರಿಂದ ಜಾರಿಯಲ್ಲಿರುವ ಪೊಲೀಸ್ ಪರಿಶೀಲನೆಯನ್ನು ಸುಲಭಗೊಳಿಸಬೇಕು ಮತ್ತು ‘ಭಯೋತ್ಪಾದಕನ ಮಗನನ್ನು ಭಯೋತ್ಪಾದಕ ಎಂದು ಪರಿಗಣಿಸಬಾರದು’ ಎಂದು ಅವರು ಕೋರಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಮರ್ ಅಬ್ದುಲ್ಲಾ ಗುರುವಾರ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದರು. ರಾಜ್ಯದ ಸ್ಥಾನಮಾನವಿದ್ದರೆ ಸಾಕಷ್ಟು ಕೆಲಸ ಮಾಡಲು ಸಾಧ್ಯ ಆದರೆ ಕೇಂದ್ರಾಡಳಿತ ಪ್ರದೇಶ ಸರ್ಕಾರವಾಗಿ ಅದು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಭದ್ರತಾ ವಿಷಯದಲ್ಲಿ ಕೇಂದ್ರ ಸರ್ಕಾರದ ಪಾತ್ರ ಬಹಳ ಸೀಮಿತವಾಗಿರುತ್ತದೆ ಎಂದು ಹೇಳಿದರು. 2019ರಿಂದ ಈ ಭಾಗದಲ್ಲಿ ಕಟ್ಟುನಿಟ್ಟಿನ ಪೊಲೀಸ್ ಪರಿಶೀಲನೆ ಪ್ರಕ್ರಿಯೆ ಜಾರಿಯಾಗಲಿದ್ದು, ಇದನ್ನು ಸುಗಮಗೊಳಿಸುವಂತೆ ಮನವಿ ಮಾಡಲಾಗಿದೆ. ಈ ಕುರಿತು ಈಗಾಗಲೇ ಸಿಐಡಿ ಮುಖ್ಯಸ್ಥರ ಜತೆ ಮಾತನಾಡಿದ್ದೇನೆ ಎಂದರು. ಶೇಖ್ ಅಬ್ದುಲ್ಲಾ ಜಯಂತಿಯನ್ನು ರಜೆ ಪಟ್ಟಿಯಿಂದ ತೆಗೆದು ಹಾಕಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಿಂದ 200 ಯೂನಿಟ್ ತನಕ ಉಚಿತ ವಿದ್ಯುತ್ ಯೋಜನೆ ಜಾರಿಯಾಗಲಿದೆ ಎಂದರು.

Related Articles

ಇತ್ತೀಚಿನ ಸುದ್ದಿಗಳು