Tuesday, July 2, 2024

ಸತ್ಯ | ನ್ಯಾಯ |ಧರ್ಮ

ಡಿ.6ರಂದು RSS, BJP ವಿರುದ್ಧ ʼದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶʼ

ಬೆಂಗಳೂರು : ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 66ನೇ ಪರಿನಿಬ್ಬಾಣ ದಿನದ ಅಂಗವಾಗಿ ಡಿಸೆಂಬರ್‌ 6ರಂದು “ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ”ಹಮ್ಮಿಕೊಂಡಿದ್ದು, ದೇಶದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ಹಾಳು ಮಾಡುತ್ತಿರುವ RSS, BJP ದುರಾಡಳಿತದ ವಿರುದ್ದ ಜನರೊಡನೆ ಧ್ವನಿ ಎತ್ತಲು ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ.

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ನೇತೃತ್ವದಡಿ ಆಯೋಜಿಸಿರುವ ಈ ಬೃಹತ್‌ ಸಮಾವೇಶವು  ಡಿಸೆಂಬರ್‌ 6 ರಂದು ಬೆಳಗ್ಗೆ 11 ಗಂಟೆಗೆ ನಗರದ ಬಸವನಗುಡಿಯ ನ್ಯಾಷನಲ್‌ ಕಾಲೇಜು ಆಟದ ಮೈದಾನಲ್ಲಿ ನಡೆಯಲಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಸದಸ್ಯರುಗಳು, ʼಭಾರತ ಮೂಲತಃ ವೈವಿಧ್ಯಮಯ ದೇಶ, ಇಲ್ಲಿ ನಾನಾ ಜಾತಿ, ಧರ್ಮ, ಆಚಾರ, ವಿಚಾರ, ಉಡುಗೆ, ತೊಡುಗೆ ಅವರವರ ಪದ್ಧತಿಗೆ ಅನುಗುಣವಾಗಿ, ಅನುಸಾರವಾಗಿ ಆಚರಣೆಯ ವಿಧಾನಗಳಿವೆ. ಇದುವೆ ಅನೇಕತೆಯಲ್ಲಿ ಏಕತೆಯನ್ನು ಸಾರುವ ವೈಶಿಷ್ಟ್ಯ. ಆದ್ದರಿಂದಲೇ ಈ ದೇಶವನ್ನು ಬಹುತ್ವ ಭಾರತವೆಂದು (Multi Religious Society) ಎಂದು ನಮ್ಮ ಪೂರ್ವಿಕರು ಕರೆದಿರುವುದು, ಇದುವೇ ಪ್ರಜಾಪ್ರಭುತ್ವದ ಗುಣಲಕ್ಷಣ, ಅಂದರೆ ಭಾರತದ ಸೌಂದರ್ಯ ಎಂದು ಹೇಳಿದ್ದಾರೆ.

ಸರ್ವಜನಾಂಗದ ಶಾಂತಿಯ ತೋಟವೆಂಬ ಭಾರತಕ್ಕೆ BJP, ಸಂಘ ಪರಿವಾರ ಎನ್ನುವ ತೋಳಗಳು ನುಗ್ಗಿ ಇಡೀ ದೇಶದ ವಾತಾವರಣವನ್ನು ಕಲುಷಿತಗೊಳಿಸಿದೆ. 2014 ರಲ್ಲಿ ಅಧಿಕಾರಕ್ಕೆ ಬಂದ RSS ಪ್ರಾಯೋಜಿತ 56 ಎದೆ ಇಂಚಿನ ವಿಶ್ವಗುರು ಎಂದು ಕರೆಯಲ್ಪಡುವ ಪ್ರಧಾನಮಂತ್ರಿ ನರೇಂದ್ರಮೋದಿಯವರು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ “ನಾನು ನಿಮ್ಮ ಪ್ರಧಾನಮಂತ್ರಿಯಲ್ಲಿ ಪ್ರಧಾನ ಸೇವಕ ಎಂದು ಉದ್ಘರಿಸಿದರು, ಆದರೆ ಅದು ಬರಿ ಮಾತಿನಲ್ಲೇ ಉಳಿಯಿತು” ಎಂದಿದ್ದಾರೆ.

ಇನ್ನು ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲರ ಸಾಂಸ್ಥಿಕ ಹತ್ಯೆಯ ಮೂಲಕ ತನ್ನ ಇನ್ನಿಂಗ್ಸ್‌ನ್ನು ಶುರು ಮಾಡಿದ ನರೇಂದ್ರಮೋದಿ ಸರ್ಕಾರ, ABVP ಮೂಲಕ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ/ ಎಸ್.ಟಿ / ಒ.ಬಿ.ಸಿ. ವಿದ್ಯಾರ್ಥಿಗಳನ್ನು ಗುರಿ ಮಾಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತಾ ಬಂದಿದೆ ಎಂದು ಸಂಘಟಕರು ಆರೋಪಿಸಿದ್ದಾರೆ.

ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯ ಎನ್ನಿಸಿಕೊಂಡಿರುವ JNU (ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ) RSS ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳನ್ನು ಎತ್ತಿಕಟ್ಟಿ ಅಲ್ಲಿನ ವಿದ್ಯಾರ್ಥಿಗಳ ನಡುವೆ ವಿಷಬೀಜವನ್ನು ಬಿತ್ತಿ ಇಡೀ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಿತು, ಮುಂದುವರೆದು “ಶಿಕ್ಷಣವನ್ನು ಕೇಸರೀಕರಣಗೊಳಿಸಲು ತನ್ನೆಲ್ಲಾ ಕಸರತ್ತನ್ನು ಮುಂದುವರೆಸಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ ದಿಢೀರನೆ ಜಾರಿಗೆ ತಂದ GST ಮತ್ತು Note Ban ಕಾರಣಗಳಿಂದಾಗಿ ದೇಶದ ಅರ್ಥ ವ್ಯವಸ್ಥೆ ಪಾತಾಳಕ್ಕೆ ಕುಸಿಯಿತು. ಅನೇಕ ಸಣ್ಣ ಸಣ್ಣ ಕೈಗಾರಿಕೆಗಳು, ಕಂಪೆನಿಗಳು ಮುಚ್ಚಿದ ಪರಿಣಾಮವಾಗಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಇಂತಹ ಜನ ವಿರೋಧಿ ನೀತಿಗಳನ್ನು ಪ್ರಶ್ನೆ ಮಾಡಿದವರನ್ನು “ಅರ್ಬನ್ ನಕ್ಸಲ್ (Urban Naxal) ಗಳೆಂದು ಹಣೆಪಟ್ಟಿ ಕಟ್ಟಿ ಜೈಲಿಗೆ ಹಾಕಿತು ಎಂದು ತಿಳಿಸಿದ್ದಾರೆ.

ದಲಿತ, ಆದಿವಾಸಿ, ಕಾರ್ಮಿಕ ವರ್ಗಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ವಿಫಲವಾಗಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ದಲಿತ ಹೋರಾಟಗಾರರನ್ನು, ಮಾನವ ಹಕ್ಕುಗಳ ಹೋರಾಟಗಾರರನ್ನು, ಆದಿವಾಸಿಗಳ ಪರ ಹೋರಾಟ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು UAPA (ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ) ಅಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಜೈಲಿಗೆ ತಳ್ಳಿತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಂದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಭಿನ್ನ ಆಲೋಚನೆಗಳ ಮೇಲೆ ದಾಳಿ ಮಾಡುವುದು, ಭಿನ್ನ ಧ್ವನಿಗಳನ್ನು ದಮನ ಮಾಡುವುದು, ಭಿನ್ನ ವಿಚಾರಗಳನ್ನು ಹತ್ತಿಕ್ಕುವುದು ಸರ್ವೆ ಸಾಮಾನ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಪ್ಪು ಆರ್ಥಿಕ ನೀತಿಗಳನ್ನು ಪ್ರಶ್ನೆ ಮಾಡಿದರೆ, ನ್ಯಾಯ ವಂಚಿತರಿಗೆ ನ್ಯಾಯವನ್ನು ಕೇಳಿದರೆ ದೇಶ ದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ. ಸಂವಿಧಾನದ ಆಶಯಗಳಿಗೆ ತಿಲಾಂಜಲಿ ನೀಡಿ ಬುಡಮೇಲುಗೊಳಿಸಿ ಪ್ರಜಾಸತ್ತೆಗೆ ಎಳ್ಳು ನೀರು ಬಿಡಲಾಗಿದೆ ಎಂದು ಸಮಿತಿ ಹೇಳಿಕೊಂಡಿದೆ.

ಈ ಹಿನ್ನಲೆಯಲ್ಲಿ ನಮ್ಮ ಪೂರ್ವಿಕರಾದ ಬುದ್ಧ, ಬಸವಣ್ಣ, ಜ್ಯೋತಿಬಾಪುಲೆ, ಸಾವಿತ್ರಿಬಾಪುಲೆ, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯಾರ್, ಟಿಪ್ಪು ಸುಲ್ತಾನ್, ಪೆರಿಯಾರ್, ನಾರಾಯಣಗುರು, ಕನಕದಾಸ, ಕುವೆಂಪು, ಭಗತ್‌ಸಿಂಗ್, ವಿವೇಕಾನಂದ, ಪ್ರೊ.ಬಿ. ಕೃಷ್ಣಪ್ಪ ಮತ್ತು ವಚನಕಾರರು, ಸೂಫಿ ಸಂತರು, ತತ್ವಪದಕಾರರು, ದುಡಿಯುವ ಜನರು ಕಟ್ಟಿದ ಈ ಬಹುತ್ವ ಭಾರತವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ, ಈ ದೇಶಕ್ಕೆ ಗಂಡಾಂತರಕಾರಿಯಾಗಿರುವ RSS ಎಂಬ ವಿಶ ಸರ್ಪವನ್ನು ಕೊನೆಗಾಣಿಸಲು ಮತ್ತು ಇದರ ಎಲ್ಲಾ ಪುಂಡಾಟಿಕೆಗಳನ್ನು ನಿಗ್ರಹಿಸಲು ಹಾಗೂ ಸಾಮಾಜಿಕ ನ್ಯಾಯ, ಮೀಸಲಾತಿಯನ್ನು ಅಪ್ರಸ್ತುತಗೊಳಿಸಲು ಹವಣಿಸುತ್ತಿರುವ ಬಿ.ಜೆ.ಪಿ.ಯ ದುರಾಡಳಿತದ ವಿರುದ್ಧ ಜನರನ್ನು ಸಂಘಟಿಸಲು ರಾಜ್ಯ ಮಟ್ಟದ ಸಮಾವೇಶನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು