ದಾವಣಗೆರೆ: ಕಳೆದ ಎರಡು ವರ್ಷಗಳಿಂದ ಸಾಹಿತಿಗಳಿಗೆ ಒಂದರ ಹಿಂದೆ ಒಂದರಂತೆ ಕೊಲೆ ಬೆದರಿಕೆ ಕಾಗದ ಬರೆಯುತ್ತಿದ್ದ ಹಿಂದೂ ಸಂಘಟನೆ ಕಾರ್ಯಕರ್ತನೊಬ್ಬನನ್ನು ಸಿಸಿಬಿ ಪೊಲೀಸರು ದಾವಣಗೆರೆಯಲ್ಲಿ ಬಂಧಿಸಿದ್ದಾರೆ.
ಆರೋಪಿಯು ಸಾಹಿತಿಗಳಾದ ಬಂಜಗೆರೆ ಜಯಪ್ರಕಾಶ್, ಕುಂಬಾರ ವೀರಭದ್ರಪ್ಪ (ಕುಂವೀ)ಬಿ.ಟಿ. ಲಲಿತಾ ನಾಯಕ್, ವೇಣು, ವಸುಂಧರಾ ಭೂಪತಿ ಸೇರಿ ಹಲವರಿಗೆ ಬೆದರಿಕೆ ಪತ್ರಗಳನ್ನು ಬರೆದಿದ್ದ. ಈ ಕುರಿತು ಸಾಹಿತಿಗಳು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ದೂರನ್ನೂ ಸಲ್ಲಿಸಿದ್ದರು.
ಶಿವಾಜಿ ರಾವ್ ಜಾಧವ್ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗಳ ಬಗ್ಗೆ ನೀವು ಮಾತಾಡೊಲ್ಲ, ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡ್ತೀರ ಎಂದು ಅನಾಮಧೇಯ ಪತ್ರ ಬರೆದು ಸಾಹಿತಿಗಳ ಅಡ್ರೆಸ್ಗೆ ಪೋಸ್ಟ್ ಮಾಡುತ್ತಿದ್ದ. ನಿಮ್ಮನ್ನು ಯಾಕೆ ಕೊಲೆ ಮಾಡಬಾರದು.? ನಿಮಗೆ ಯಾಕೆ ಗುಂಡಿಕ್ಕಬಾರದು. ನಿಮ್ಮ ತಲೆ ಯಾಕೆ ಕಡಿಯಬಾರದು, ನಿಮ್ಮ ಆಯುಷ್ಯ ಮುಗಿದಿದೆ ಎಂದು ಪತ್ರದಲ್ಲಿ ಬರೆಯುತ್ತಿದ್ದನು.
ಬಸವ ತತ್ವಗಳ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸುವ ನಿಜಗುಣಾನಂದ ಸ್ವಾಮಿಗಳಿಗೂ ಇತ್ತೀಚೆಗೆ ಬೆದರಿಕೆ ಪತ್ರಗಳು ಬರುತ್ತಿದ್ದವು.
ಆರೋಪಿಯನ್ನು ದಾವಣಗೆರೆ ಮೂಲದ ಶಿವಾಜಿ ರಾವ್ ಜಾಧವ್ ಎಂದು ಗುರುತಿಸಲಾಗಿದ್ದು, ಈ ಹಿಂದೂ ಸಂಘಟನೆಯ ಸದಸ್ಯ ಎನ್ನಲಾಗಿದೆ. ಆದರೆ ಇದುವರೆಗೆ ಯಾವ ಸಂಘಟನೆಗೆ ಸೇರಿದವನು ಎನ್ನುವುದು ಸ್ಪಷ್ಟವಾಗಿಲ್ಲ.
ಸಾಹಿತಿಗಳ ದೂರಿನ ಮೇರೆ ಪೊಲೀಸರು ಆರೋಪಿಯ ವಿರುದ್ಧ ಬೆಂಗಳೂರು ಸೇರಿ ಹಲವೆಡೆ 7 FIR ದಾಖಲಿಸಿದ್ದರು. DG-IGP 7 FIR ಗಳನ್ನು ಸಿಸಿಬಿಗೆ ವರ್ಗಾಯಿಸಿದ್ದರು.
ಆರೋಪಿಯು ಪ್ರಸ್ತುತ ಪೊಲೀಸರ ವಶದಲ್ಲಿದ್ದು ಮುಂದಿನ ತನಿಖೆ ಪ್ರಗತಿಯಲ್ಲಿದೆ.