Friday, June 14, 2024

ಸತ್ಯ | ನ್ಯಾಯ |ಧರ್ಮ

ಪತಂಜಲಿ ಸಂಸ್ಥೆಯ ಪ್ರತೀ ಸುಳ್ಳಿನ ಜಾಹೀರಾತಿಗೆ ತಲಾ ಒಂದು ಕೋಟಿ ದಂಡ! : ಸುಪ್ರೀಂಕೋರ್ಟ್ ಎಚ್ಚರಿಕೆ

ರೋಗಗಳನ್ನು ಗುಣಪಡಿಸುವುದಾಗಿ ಹೇಳಿಕೊಳ್ಳುವ ಪತಂಜಲಿ ಆಯುರ್ವೇದ ಉತ್ಪನ್ನಗಳ ಪ್ರತಿ ಜಾಹೀರಾತಿನಲ್ಲಿ ಮಾಡಲಾದ ಪ್ರತಿ ಸುಳ್ಳು ಹೇಳಿಕೆಗಳಿಗೆ ತಲಾ ₹1 ಕೋಟಿ ವೆಚ್ಚದ ದಂಡ ವಿಧಿಸುವುದಾಗಿ ಸುಪ್ರೀಂ ಕೋರ್ಟ್ ಪತಂಜಲಿ ಸಂಸ್ಥೆಗೆ ಎಚ್ಚರಿಕೆ ನೀಡಿದೆ.

ಸಾಕ್ಷ್ಯಾಧಾರಿತ ಔಷಧದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ ಮತ್ತು ಅದರ ಮುಂದುವರಿದ ಜಾಹೀರಾತುಗಳಿಗಾಗಿ ಸುಪ್ರೀಂಕೋರ್ಟ್ ಬಾಬಾ ರಾಮ್‌ದೇವ್ ಒಡೆತನದ ಪತಂಜಲಿ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಅಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ಪತಂಜಲಿ ಆಯುರ್ವೇದ ಸಂಸ್ಥೆಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಮತ್ತು ತಪ್ಪುದಾರಿಗೆಳೆಯುವ ವೈದ್ಯಕೀಯ ಜಾಹೀರಾತುಗಳ ಬಗ್ಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.

ಕಳೆದ ವರ್ಷ ಆಗಸ್ಟ್‌ನ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಲೋಪತಿ ಮತ್ತು ಅದರ ಅಭ್ಯಾಸ ಮಾಡುವ ವೈದ್ಯರನ್ನು ಬಾಬಾ ರಾಮ್ ದೇವ್ ಹಾಗೂ ಅವರ ಒಡೆತನದ ಪತಂಜಲಿ ಸಂಸ್ಥೆ ಅಪಖ್ಯಾತಿ ಮಾಡುವ ಪ್ರಯತ್ನ ನಡೆಸಿತ್ತು. ನಂತರದ ದಿನಗಳಲ್ಲಿ ಪತಂಜಲಿ ರಾಯಭಾರಿ ವಿರುದ್ಧ IMA (Indian medical association) ಹಲವು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವ ಮೂಲಕ ಕಾನೂನು ಸಮರಕ್ಕೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ರಾಮ್ದೇವ್ ಅವರನ್ನು ಪ್ರಶ್ನಿಸಿತ್ತು.

ರಾಮ್‌ದೇವ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಸಾರ್ವಜನಿಕವಾಗಿ ಕಾಯಿಲೆಗಳನ್ನು ಗುಣಪಡಿಸುವ ಔಷಧದ ಬಗ್ಗೆ ಸುಳ್ಳು ಪ್ರಚಾರ), 269 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕೃತ್ಯ), 504 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

IMA ದೂರಿನ ಪ್ರಕಾರ, ಸಾಂಕ್ರಾಮಿಕ ಸಮಯದಲ್ಲಿ, ರಾಮ್‌ದೇವ್ ಅವರು ವೈದ್ಯಕೀಯ ಭ್ರಾತೃತ್ವ, ಭಾರತ ಸರ್ಕಾರ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ಇತರ ಮುಂಚೂಣಿ ಸಂಸ್ಥೆಗಳು ಬಳಸುತ್ತಿರುವ ಔಷಧಿಗಳ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡುತ್ತಿದ್ದರು. ಬಾಬಾ ರಾಮ್ ದೇವ್ ಇಂತಹ ಹಲವು ಅಪಪ್ರಚಾರದ ಹೇಳಿಕೆಗಳನ್ನು ನೀಡಿರುವ ಹಲವು ನಿದರ್ಶನಗಳಿವೆ, ಇವೆಲ್ಲವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು IMA ಸುಪ್ರೀಂಕೋರ್ಟ್ ಗೆ ಒತ್ತಿಹೇಳಿದೆ.

ರಾಮದೇವ್ ಪರ ವಕೀಲ ಪ್ರಭಾಸ್ ಬಜಾಜ್ ಅವರೊಂದಿಗೆ ಹಿರಿಯ ವಕೀಲ ಪಿ.ಎಸ್.ಪಟ್ವಾಲಿಯಾ ವಾದ ಮಂಡಿಸಿದರು. ಪತಂಜಲಿ ಆಯುರ್ವೇದ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿದ್ದರು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ವಾದ ಮಂಡಿಸಿದರು. ಮುಂದಿನ ಫೆಬ್ರವರಿ 5, 2024 ರಂದು ಈ ಪ್ರಕರಣ ತೆಗೆದುಕೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು