Tuesday, June 18, 2024

ಸತ್ಯ | ನ್ಯಾಯ |ಧರ್ಮ

ಒಂದು ದೇಶ, ಒಂದು ಚುನಾವಣೆ: ನೂರು ಸವಾಲು, ಸಾವಿರ ಆತಂಕ!

ಅಧಿಕಾರ ಕೇಂದ್ರೀಕರಣದ ಏಕೈಕ ಗುರಿ ಹೊಂದಿರುವ, ‘ಏಕ’ಗಳ ದುಷ್ಟ ಕಾರ್ಯಸೂಚಿಯ ಭಾಗವಾಗಿ, ಈಗಾಗಲೇ ಬಹುತೇಕ ರಾಜ್ಯಗಳ ಎಲ್ಲ ಅಧಿಕಾರಗಳನ್ನೂ ಕಸಿದುಕೊಳ್ಳಲಾಗಿದೆ. ಜಿ ಎಸ್ ಟಿ ಬಂದ ಮೇಲೆ ರಾಜ್ಯಗಳು ಆರ್ಥಿಕ ಸ್ವಾವಲಂಬನೆಯೂ ಇಲ್ಲದೆ ಕೇಂದ್ರದ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಲ್ಲುವಂತಾಗಿದೆ. ಇದೀಗ ‘ಒಂದು ದೇಶ ಒಂದು ಚುನಾವಣೆ’ಯ ಹೆಸರಿನಲ್ಲಿ ಭಾರತದ ಫೆಡರಲ್ ಸ್ವರೂಪದ ಶವಪೆಟ್ಟಿಗೆಗೆ ಕೊನೆಯ ಮೊಳೆ ಜಡಿಯುವ ಯತ್ನ ನಡೆದಿದೆ – ಶ್ರೀನಿ ಕಾಲಂʼ ನಲ್ಲಿ ಶ್ರೀನಿವಾಸ ಕಾರ್ಕಳ  

ಹಿಂದೆ ರೋಮನ್ ಸಾಮ್ರಾಜ್ಯದಲ್ಲಿ ಕೊಲೋಸಿಯಂಗಳನ್ನು (ವಿಶಿಷ್ಟ ಸ್ಟೇಡಿಯಂ) ನಿರ್ಮಿಸಿ, ಅದರಲ್ಲಿ ಮನುಷ್ಯ ಮನುಷ್ಯರ ನಡುವೆ, ಪ್ರಾಣಿ ಪ್ರಾಣಿಗಳ ನಡುವೆ, ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಕಾದಾಟ ಏರ್ಪಡಿಸಲಾಗುತ್ತಿತ್ತಂತೆ. ಇದರ ಉದ್ದೇಶ ಜನರಿಗೆ ಮನರಂಜನೆ ನೀಡುವುದಷ್ಟೇ ಆಗಿರಲಿಲ್ಲ. ಬದಲಿಗೆ, ಮನರಂಜನೆಯ ಮೂಲಕ ಜನರು ತಮ್ಮನ್ನು ಕಾಡುವ ಜ್ವಲಂತ ವಿಷಯಗಳನ್ನು ಮರೆಯುವಂತೆ ಮಾಡುವುದು, ಅವರು ಅರಸನ ವಿರುದ್ಧ ಸಿಟ್ಟಿಗೇಳದಂತೆ ನೋಡಿಕೊಳ್ಳುವುದೂ ಆಗಿತ್ತಂತೆ. ಇತಿಹಾಸದಲ್ಲಿ ಫ್ಯಾಸಿಸ್ಟ್ ಮನಸ್ಥಿತಿಯ ದುಷ್ಟ ಆಡಳಿತಗಾರರೆಲ್ಲ ಕಾಲ ಕಾಲಕ್ಕೆ ಈ ತಂತ್ರವನ್ನು ಬಳಸುತ್ತಲೇ ಬಂದಿದ್ದಾರೆ. ಅದಕ್ಕೆ ಈಗಿನ ಭಾರತವೂ ಹೊರತಲ್ಲ.

ಕಳೆದ ಸುಮಾರು ಒಂದು ದಶಕದ ಆಡಳಿತವನ್ನು ಪರಾಂಬರಿಸಿದರೆ, ಅಲ್ಲಿ ಜನವಿರೋಧಿಯಾದ ಒಂದು ನೀತಿಯನ್ನು ಅಥವಾ ಕಾನೂನನ್ನು ಜಾರಿಗೊಳಿಸುವ ಮುನ್ನ, ಸರಕಾರವು ಜನರ ಗಮನವನ್ನು ಬೇರೆಡೆ ತಿರುಗಿಸಿದ ಅಸಂಖ್ಯ ಉದಾಹರಣೆಗಳನ್ನು ನೋಡಬಹುದು. ಎಲ್ಲಿಯವರೆಗೆ ಎಂದರೆ, ಸರಕಾರ ತನ್ನ ಸಂಘಟನೆಗಳ ಮೂಲಕ ಅಥವಾ ಗೋದಿ ಮೀಡಿಯಾಗಳ ಮೂಲಕ ಒಂದು ಅಪ್ರಸ್ತುತ ವಿಷಯವನ್ನು ರಾಷ್ಟ್ರೀಯ ಚರ್ಚೆಯ ವಿಷಯವಾಗಿ ಮಾಡುತ್ತಿದೆ ಎಂದರೆ, ಅದರ ಹಿಂದೆ ಸದ್ದಿಲ್ಲದೆ ಸರಕಾರವು ಏನೋ ಒಂದು ಜನವಿರೋಧಿ ಕಾರ್ಯಕ್ರಮದ ಮಸಲತ್ತು ನಡೆಸುತ್ತಿದೆ ಎಂದೇ ಅರ್ಥ. ಈ ಹಿನ್ನೆಲೆಯಲ್ಲಿಯೇ ಹಿರಿಯ ರಾಜಕಾರಣಿಯೊಬ್ಬರು, ‘ನಿಮ್ಮನ್ನು ಹಿಂದೂ ಮುಸ್ಲಿಂ ಎಂದು ಹೊಡೆದಾಟಕ್ಕೆ ಹಚ್ಚಿ, ನೀವು ಗಲಾಟೆಯಲ್ಲಿ ನಿರತರಾಗಿದ್ದಾಗಲೇ, ಸರಕಾರ ಅತ್ತ ತಮ್ಮ ಆಪ್ತ ಉದ್ಯಮಿಗಳಿಗೆ ಕಳ್ಳತನ ಮಾಡಲು ಅವಕಾಶ ಮಾಡಿಕೊಡುತ್ತದೆ, ನಿಮಗೆ ಹಾನಿ ಉಂಟು ಮಾಡುವ ಭಯಂಕರ ನಿರ್ಧಾರಗಳನ್ನು ಸದ್ದಿಲ್ಲದೆ ತೆಗೆದುಕೊಳ್ಳುತ್ತದೆ, ಹಾಗಾಗಿ ಅವರ ಹುನ್ನಾರವನ್ನು ಅರ್ಥಮಾಡಿಕೊಳ್ಳಿ’ ಎಂದಿದ್ದರು.

ಇತ್ತೀಚೆಗೆ ಮಣಿಪುರದ ಬೆತ್ತಲೆ ಮೆರವಣಿಗೆ ಮತ್ತು ಗ್ಯಾಂಗ್ ರೇಪ್ ಪ್ರಕರಣ ದೇಶದಾದ್ಯಂತದ ಮಾತ್ರವಲ್ಲ ಜಾಗತಿಕ ಸುದ್ದಿಯಾಗಿ, ಸರಕಾರಕ್ಕೆ ಮುಜುಗರವಾಗುವಂತಹ ಪರಿಸ್ಥಿತಿ ನಿರ್ಮಾಣವಾದಾಗ ಸ್ವತಃ ನಮ್ಮ ಪ್ರಧಾನಿಗಳು ‘ಸಮಾನ ನಾಗರಿಕ ಸಂಹಿತೆ’ಯ (ಯುಸಿಸಿ) ಪ್ರಸ್ತಾವ ಮಾಡಿ ಜನರ ಗಮನ ಬೇರೆಡೆಗೆ ತಿರುಗಿಸಿದ್ದರು (ಈಗ ನಿರೀಕ್ಷೆಯಂತೆಯೇ ಯುಸಿಸಿ ನೆನೆಗುದಿಗೆ ಬಿದ್ದಿದೆ). ಈಗ ಅದಾನಿ ಹಗರಣ ಸರಕಾರದ ಕೊರಳು ಸುತ್ತಿಕೊಳ್ಳುತ್ತಿದೆ, ‘ಇಂಡಿಯಾ’ ಮೈತ್ರಿಕೂಟ ಬಲಗೊಳ್ಳುತ್ತಿದೆ ಎನ್ನುವಾಗ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದೆ. ‘ಒಂದು ದೇಶ ಒಂದು ಚುನಾವಣೆ’ಯ ಪ್ರಸ್ತಾವವನ್ನು ತೇಲಿಬಿಡಲಾಗಿದ್ದು, ಇಡೀ ದೇಶ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವಂತೆ ಮಾಡಲಾಗಿದೆ.!

ಏಕಗಳ ರೋಗ!

2014 ರಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಒಕ್ಕೂಟ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಇದ್ದಕ್ಕಿದ್ದಂತೆ ಈ ‘ಒಂದು ದೇಶ, ಒಂದು ಮತಧರ್ಮ, ಒಂದು ಸಂಸ್ಕೃತಿ, ಒಂದು ಭಾಷೆ’ ಹೀಗೆ ಒಂದುಗಳ ಹಿಂದೆ ಬಿದ್ದು, ಭಾರತದ ಬುನಾದಿಯಾದ ಬಹುತ್ವಕ್ಕೇ ಕೊಡಲಿಯೇಟು ನೀಡುವ ಕೆಲಸಗಳು ಆರಂಭವಾದವು. ‘ಒಂದು.. ಒಂದು.. ಒಂದು..’ ಎಂಬುದು ನಮ್ಮ ಪ್ರಧಾನಿಗಳಿಗೆ ಅತ್ಯಂತ ಪ್ರಿಯವಾದ ಪರಿಕಲ್ಪನೆ.

ಇದೇ ಹಾದಿಯಲ್ಲಿ ಸುಮಾರು ಒಂಬತ್ತು ವರ್ಷಗಳ ಹಿಂದೆಯೇ ಕೇಳಿ ಬರಲಾರಂಭಿಸಿದ ಒಂದು ಪ್ರಸ್ತಾಪ ‘ಒಂದು ದೇಶ, ಒಂದು ಚುನಾವಣೆ’. ಅಂದರೆ, ಲೋಕಸಭೆ ಮತ್ತು ರಾಜ್ಯಗಳ ಶಾಸನ ಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದು. ಬೇರೆ ಬೇರೆ ಕಾಲದಲ್ಲಿ ಚುನಾವಣೆ ನಡೆಸುವುದರಿಂದ ಚುನಾವಣಾ ನೀತಿ ಸಂಹಿತೆಯ ಕಾರಣಕ್ಕೆ ಅಭಿವೃದ್ಧಿ ಚಟುವಟಿಕೆಗಳು ಕುಂಠಿತವಾಗುತ್ತವೆ, ಅಪಾರ ಖರ್ಚು ವೆಚ್ಚವಾಗುತ್ತದೆ ಎನ್ನುವುದೆಲ್ಲ ಕಣ್ಣಿಗೆ ಮಣ್ಣೆರಚುವ ಸಬೂಬುಗಳು. ಸರಕಾರ ನಡೆಸುವ ಪಕ್ಷವೊಂದು ಇಂತಹ ಕೆಲಸಕ್ಕೆ ಅತ್ಯಾತುರ ತೋರಿಸುತ್ತದೆ ಎಂದರೆ ಅದಕ್ಕೆ ಸ್ವಂತದ ಏನಾದರೂ ಲಾಭವಿದ್ದೇ ಇರುತ್ತದೆಯಲ್ಲವೇ ಎನ್ನುವುದನ್ನು ಅರ್ಥಮಾಡಿಕೊಳ್ಳಲು ವಿಶೇಷ ಬುದ್ಧಿಮತ್ತೆಯ ಅಗತ್ಯವೇನೂ ಇಲ್ಲ. ಏಕೈಕ ವ್ಯಕ್ತಿಯನ್ನು ನಂಬಿಕೊಂಡಿರುವ ರಾಜಕೀಯ ಪಕ್ಷ ಬಿಜೆಪಿಯ ನರೇಂದ್ರ ಮೋದಿಯವರಿಗೆ ದೇಶದಾದ್ಯಂತದ ಚುನಾವಣಾ ಪ್ರಚಾರ ಕಾಲದಲ್ಲಿ ಇಡೀ ವರ್ಷ ತೊಡಗಿಕೊಳ್ಳಲು ಕಷ್ಟವಾಗುತ್ತದೆ, ಅಲ್ಲದೆ ಏಕಕಾಲದ ಚುನಾವಣೆಯಿಂದ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಕ್ಕೆ ಹೆಚ್ಚು ಅನುಕೂಲ, ಹಾಗಾಗಿ ಇಂತಹ ಯತ್ನ ಎಂಬ ಕೆಲವರ ಆರೋಪ ಅಷ್ಟು ಸುಲಭದಲ್ಲಿ ಎತ್ತಿ ಎಸೆಯುವಂಥದ್ದೂ ಅಲ್ಲ.

ಈಗಾಗಲೇ ಉಲ್ಲೇಖಿಸಿದ ಹಾಗೆ, ಕಳೆದ ಒಂಬತ್ತು ವರ್ಷಗಳ ಹಿಂದೆಯೇ ಈ ಏಕಕಾಲದ ಚುನಾವಣಾ ಪ್ರಸ್ತಾವ ಮಾಡಲಾಗಿದ್ದು, ಆ ಬಗ್ಗೆ ದೇಶದಾದ್ಯಂತ ವ್ಯಾಪಕ ಚರ್ಚೆ ನಡೆದಿದೆ. ಪತ್ರಿಕೆಗಳು ಲೇಖನ, ಸಂಪಾದಕೀಯ ಬರೆದು ಅದು ಭಾರತದಂತಹ ದೇಶದಲ್ಲಿ ಹೇಗೆ ಸಾಧುವೂ ಅಲ್ಲ, ಸಾಧ್ಯವೂ ಅಲ್ಲ ಎಂಬುದನ್ನು ವಿವರವಾಗಿ ಹೇಳಿವೆ. ಈಗಾಗಲೇ ಎರಡು ಸಮಿತಿಗಳು ಈ ವಿಷಯದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈಗ ಮಾಜಿ ರಾಷ್ಟ್ರಪತಿ ಕೋವಿಂದರ ನೇತೃತ್ವದಲ್ಲಿ ಮೂರನೇ ಸಮಿತಿಯನ್ನೂ ರಚಿಸಲಾಗಿದೆ (ಎಲ್ಲರನ್ನೂ ಒಳಗೊಳ್ಳದ ಅದರ ಸ್ವರೂಪದ ಬಗ್ಗೆ ಭಾರೀ ಆಕ್ಷೇಪ ವ್ಯಕ್ತವಾಗಿದೆ).

ಸವಾಲುಗಳು

1. ಇದರ ಅನುಷ್ಠಾನಕ್ಕೆ ಕಡಿಮೆ ಎಂದರೆ ಸಂವಿಧಾನದ 5 ಪರಿಚ್ಛೇದಗಳಲ್ಲಿ ತಿದ್ದುಪಡಿ ತರಬೇಕಾಗುತ್ತದೆ. ಅಂದರೆ, ಸಂಸತ್ ನ ಕಾಲಾವಧಿಗೆ ಸಂಬಂಧಿಸಿದ ಪರಿಚ್ಛೇದ 83, ರಾಷ್ಟ್ರಪತಿಗಳ ಮೂಲಕ ಸಂಸತ್ತಿನ ವಿಸರ್ಜನೆಗೆ ಸಂಬಂಧಿಸಿದ ಪರಿಚ್ಛೇದ 85, ರಾಜ್ಯ ಶಾಸನಸಭೆಗಳ ಕಾಲಾವಧಿಗೆ ಸಂಬಂಧಿಸಿದ ಪರಿಚ್ಛೇದ 172, ರಾಜ್ಯ ಶಾಸನಸಭೆಗಳ ವಿಸರ್ಜನೆಗೆ ಸಂಬಂಧಿಸಿದ ಪರಿಚ್ಛೇದ 174, ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯ ಪರಿಚ್ಛೇದ 356.

2. ಒಂದು ಪೂರ್ವ ಅಗತ್ಯವಾಗಿ, ಈ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಸಹಮತ ಬೇಕಾಗುತ್ತದೆ.

3. ಆಡಳಿತದ ಒಕ್ಕೂಟ ಸಂರಚನೆಗೆ ಸಂಬಂಧಿಸಿದಂತೆ ಎಲ್ಲ ರಾಜ್ಯ ಸರಕಾರಗಳ ಸಹಮತ ಪಡೆದುಕೊಳ್ಳುವುದು ಅನಿವಾರ್ಯ.

4. ಚುನಾವಣೆಗಳು ಏಕಕಾಲದಲ್ಲಿ ನಡೆಯುವಂತೆ ನೋಡಿಕೊಳ್ಳಲು, ಶಾಸನಸಭೆಯ ಕಾಲಾವಧಿಗೆ ಸಂಬಂಧಿಸಿದಂತೆ ಪ್ರಸ್ತಾವಿಸಲಾಗಿರುವ ‘ಮೊಟಕುಗೊಳಿಸುವಿಕೆ’ ಅಥವಾ ‘ವಿಸ್ತರಣೆ’ಯನ್ನು ಸಂವಿಧಾನದ ಮೂಲ ಸಂರಚನೆಯ ತತ್ತ್ವದ (ಬೇಸಿಕ್ ಸ್ಟ್ರಕ್ಚರ್ ಡಾಕ್ಟ್ರೀನ್) ನ ನೆಲೆಯಲ್ಲಿ ಪರಿಶೀಲಿಸಬೇಕಾಗುತ್ತದೆ.

5. ಏಕಕಾಲದಲ್ಲಿ ಚುನಾವಣೆ ನಡೆಸಲು ಹೆಚ್ಚುವರಿ ಇವಿಎಮ್ ಗಳು (ಮತಯಂತ್ರಗಳು)/ ವಿವಿಪ್ಯಾಟ್ ಗಳು ಬೇಕಾಗುತ್ತವೆ. ಸದ್ಯ, ಸುಮಾರು 10,00,000 ಮತಗಟ್ಟೆಗಳು ದೇಶದಲ್ಲಿವೆ. ಏಕಕಾಲದ ಚುನಾವಣೆ ನಡೆಸಿದರೆ, ಪ್ರತಿಯೊಂದು ಮತಗಟ್ಟೆಗೆ ಎರಡು ಸೆಟ್ ಇವಿಎಂ ಗಳು ಬೇಕಾಗುತ್ತವೆ. ಕನಿಷ್ಠ 40% ಬ್ಯಾಲೆಟಿಂಗ್ ಯುನಿಟ್ ಗಳು (ಬಿಯು) ಮತ್ತು 20 % ಕಂಟ್ರೋಲ್ ಯುನಿಟ್ ಗಳು (ಸಿಯು) ರಿಸರ್ವ್ ಆಗಿ ಇರಬೇಕಾಗುತ್ತವೆ. ಆದ್ದರಿಂದ ಏಕಕಾಲದ ಚುನಾವಣೆಗೆ ಕನಿಷ್ಠ ಬೇಕಾಗುವ ಬ್ಯಾಲೆಟಿಂಗ್ ಯುನಿಟ್ ಗಳು ಸುಮಾರು 28,00,000 ಮತ್ತು ಕಂಟ್ರೋಲ್ ಯುನಿಟ್ ಗಳು ಸುಮಾರು 24,00,000. ಬೆಲೆ ನಿಗದಿಗೊಳಿಸುವ ಸಮಿತಿಯ ಪ್ರಕಾರ ಪ್ರತೀ ಇವಿಎಂ ಗೆ ಅಂದಾಜು 8000 (ಬಿಯು) ಮತ್ತು 9500 (ಸಿಯು) ರುಪಾಯಿ ತಗಲುತ್ತದೆ. ಅಂದರೆ, ಇವಿಎಂ ಖರೀದಿಸಲು ಅಂದಾಜು 3,570.90 ಕೋಟಿ ರುಪಾಯಿ ಬೇಕಾಗುತ್ತದೆ.

6. ವಿವಿಪ್ಯಾಟ್ ವ್ಯವಸ್ಥೆಯನ್ನು  ದೇಶದುದ್ದಗಲಕ್ಕೂ ಬಳಸಲಾಗುತ್ತಿದೆ. ಏಕಕಾಲದ ಚುನಾವಣೆ ನಡೆಸಿದರೆ ದುಪ್ಪಟ್ಟು ಸಂಖ್ಯೆಯ ವಿವಿಪ್ಯಾಟ್ ಗಳು ಬೇಕಾಗುತ್ತವೆ. ಅಂದರೆ, ಅಂದಾಜು 25,00,000 ವಿವಿಪ್ಯಾಟ್ ಗಳು ಬೇಕಾಗುತ್ತವೆ (10,00,000 ಮತಗಟ್ಟೆಗಳಿಗೆ 25% ರಿಸರ್ವ್ ಎಂದಿಟ್ಟುಕೊಂಡರೆ). ಇವಿಎಂ ದರ ನಿಗದಿ ಸಮಿತಿಯು ಪ್ರತೀ ವಿವಿಪ್ಯಾಟ್ ಗೆ 22,813 ರುಪಾಯಿ ನಿಗದಿಪಡಿಸಿದೆ. 25,00,000 ವಿವಿಪ್ಯಾಟ್ ಗಳಿಗೆ ಬೇಕಾಗುವ ಹಣ 5713.25 ಕೋಟಿ ರುಪಾಯಿ.

7. ಅಂದರೆ, ಏಕಕಾಲದ ಚುನಾವಣೆಯ ಅಗತ್ಯ ಪೂರೈಸಲು ಇವಿಎಂ ಮತ್ತು ವಿವಿಪ್ಯಾಟ್ ಗೆ 9,284.15 ಕೋಟಿ ರುಪಾಯಿ ಬೇಕಾಗುತ್ತದೆ.

8. ಒಂದು ಮತಯಂತ್ರದ ಆಯುಷ್ಯ ಕೇವಲ 15 ವರ್ಷ. ಅಂದರೆ, ಒಂದು ಯಂತ್ರವನ್ನು ಮೂರು ಅಥವಾ ನಾಲ್ಕು ಬಾರಿ ಮಾತ್ರ ಬಳಸಬಹುದು. ಪ್ರತೀ 15 ವರ್ಷದ ಬಳಿಕ ಹೊಸ ಮತಯಂತ್ರ ಖರೀದಿಸಲು ಮತ್ತೆ ಭಾರೀ ವೆಚ್ಚ ಮಾಡಬೇಕಾಗುತ್ತದೆ.

9. ಇವಿಎಂ ಗಳ ದಾಸ್ತಾನಿಗೆ ದುಪ್ಪಟ್ಟು ಸಂಖ್ಯೆಯ ಸಂಗ್ರಹಾಗಾರಗಳು (ವೇರ್ ಹೌಸ್) ಬೇಕಾಗುತ್ತವೆ. ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇವಿಎಂ ಇಡಲು ಸೂಕ್ತ ಸಂಗ್ರಹಾಗಾರಗಳು ಇಲ್ಲದ ಕಾರಣ, ಅವನ್ನು ಖಾಸಗಿ ಕಟ್ಟಡಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇಡುವ ಪರಿಸ್ಥಿತಿ ಇದೆ.

10. ಹೆಚ್ಚುವರಿ ಚುನಾವಣಾ ಸಿಬ್ಬಂದಿ ಮತ್ತು ಹೆಚ್ಚುವರಿ ಭದ್ರತಾ ಸಿಬ್ಬಂದಿಯ ಅಗತ್ಯವಿದ್ದು (ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ) ಸರಕಾರಕ್ಕೆ ಇದು ಭಾರೀ ಹೊರೆಯಾಗುತ್ತದೆ.

ಒಕ್ಕೂಟ ವ್ಯವಸ್ಥೆಗೆ ಮಾರಕ

ಇವು ತಾಂತ್ರಿಕ ವಿಚಾರಗಳು. ಇನ್ನು ಸಂಸದೀಯ ಪ್ರಜಾತಂತ್ರಕ್ಕೆ ಸಂಬಂಧಿಸಿದಂತೆ ಇಲ್ಲಿ ಕಾಣಿಸಿಕೊಳ್ಳುವ ಪ್ರಶ್ನೆಗಳಾದರೋ ಅನೇಕ.

1. ಲೋಕಸಭೆಗೆ ಮತ್ತು ರಾಜ್ಯದ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆದು ಸರಕಾರ ಅಸ್ತಿತ್ವಕ್ಕೆ ಬಂದ ಕೇವಲ ಕೆಲವೇ ಸಮಯದಲ್ಲಿ ಒಕ್ಕೂಟ ಸರಕಾರ ಬಹುಮತದ ಕೊರತೆಯಿಂದ ಪತನಗೊಂಡಿತು ಎಂದಿಟ್ಟುಕೊಳ್ಳೋಣ. ಆಗ ರಾಜ್ಯಗಳಿಗೂ ಮತ್ತೆ ಚುನಾವಣೆ ನಡೆಸುವುದೇ? ಆಗ ಆಗುವ ಅರ್ಥಿಕ ಹೊರೆ ಮತ್ತು ಆಡಳಿತಾತ್ಮಕ ತೊಂದರೆಗಳು ಎಷ್ಟು?

2. ಯಾವುದಾದರೂ ಒಂದು ರಾಜ್ಯದ ಸರಕಾರ ಪತನಗೊಂಡರೆ ಅಗ ಬಹುಮತವಿಲ್ಲದ ಆ ಸರಕಾರವನ್ನು ಮುಂದುವರಿಯಲು ಅವಕಾಶ ನೀಡಲಾಗುವುದೇ? ಅಥವಾ ಏಕಕಾಲದ ಚುನಾವಣೆ ನಡೆಯುವವರೆಗೂ ಅಲ್ಲಿ ರಾಷ್ಟಪತಿ ಆಳ್ವಿಕೆಯೇ? ಹಾಗೆ ಮಾಡಿದಲ್ಲಿ ಅದು ಕಾನೂನು ಬಾಹಿರ ಎನಿಸುವುದಿಲ್ಲವೇ? ಮತ್ತು ಜನರು ತಮ್ಮದೇ ಆದ ಸರಕಾರ ಹೊಂದುವ ಹಕ್ಕಿನಿಂದ ವಂಚಿತರಾದಂತೆ ಆಗುವುದಿಲ್ಲವೇ?

3. ಕೇಂದ್ರದಲ್ಲಿರುವ ಸರಕಾರವು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಿ, ವಿಧಿ 356ರ ವಿಶೇಷಾಧಿಕಾರದ ಮೂಲಕ ರಾಜ್ಯ ಸರಕಾರಗಳನ್ನು ಉರುಳಿಸಿ, ರಾಷ್ಟ್ರಪತಿ ಆಳ್ವಿಕೆಯ ಹಿಂಬಾಗಿಲಿನಿಂದ ಆ ರಾಜ್ಯದ ಮೇಲೆ ತನ್ನ ನಿಯಂತ್ರಣ ಸಾಧಿಸಬಹುದಲ್ಲವೇ? ಇದರ ವಿರುದ್ಧ ರಕ್ಷಣೆ ಏನು?

4. ಚುನಾವಣೆ ಎದುರಿಸಲು ಈ ಕಾಲದಲ್ಲಿ ಅಪಾರ ಆರ್ಥಿಕ ಸಂಪನ್ಮೂಲ ಬೇಕಾಗುತ್ತದೆ (ಇತ್ತೀಚಿನ ವರದಿಗಳ ಪ್ರಕಾರ ಬಿಜೆಪಿ ಬಳಿ 3,596 ಕೋಟಿ ರುಪಾಯಿ ಇದ್ದರೆ, ಶತಮಾನ ಇತಿಹಾಸದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಬಳಿ ಇರುವುದು ಕೇವಲ 162 ಕೋಟಿ ರುಪಾಯಿ!). ಇಲ್ಲಿ ಎಲ್ಲರಲ್ಲೂ ಸಮಾನತೆ ಇರುವುದು ಸಾಧ್ಯವೇ? ‘ಲೆವೆಲ್ ಪ್ಲೇಯಿಂಗ್ ಫೀಲ್ಡ್’ ಇಲ್ಲದ ಮೇಲೆ ಅದೆಂತಹ ಪ್ರಜಾತಂತ್ರ?!

5. ಏಕಕಾಲದ ಚುನಾವಣೆಯಲ್ಲಿ ರಾಷ್ಟ್ರೀಯ ವಿಷಯಗಳೇ ಮುಖ್ಯವಾದರೆ ಆಗ ಪ್ರಾದೇಶಿಕ ಪಕ್ಷಗಳ ಕತೆಯೇನು (ಜನರು ಇನ್ನೂ, ಕೇಂದ್ರದ ವಿಚಾರದಲ್ಲಿ ಒಂದು ಪಕ್ಷಕ್ಕೆ ಮತ್ತು ರಾಜ್ಯದ ವಿಚಾರದಲ್ಲಿ ಇನ್ನೊಂದು ಪಕ್ಷಕ್ಕೆ ಮತ ನೀಡುವಷ್ಟು ವಿವೇಚನಾವಂತರಾಗಿಲ್ಲ ಎನ್ನುವುದನ್ನು ಮರೆಯದಿರೋಣ)? ಅವು ಕ್ರಮೇಣ ನಾಶವಾಗಿ ಹೋಗುವುದಿಲ್ಲವೇ?

ತೀವ್ರ ವಿರೋಧ

‘ಒಂದು ದೇಶ ಒಂದು ಚುನಾವಣೆ’ಯ ನೆಪದಲ್ಲಿ ಮೋದಿ ಸರಕಾರದ ಹುನ್ನಾರದ ಬಗ್ಗೆ ಪ್ರತಿಪಕ್ಷಗಳಿಗೆ ಅರಿವಿದ್ದೇ ಇದೆ. ಹಾಗಾಗಿಯೇ ‘ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ಈ ನಡೆ ಒಕ್ಕೂಟ ಸಂರಚನೆಯನ್ನು ದುರ್ಬಲಗೊಳಿಸುವ ಒಂದು ಯತ್ನ, ಇದು ಅಂತಿಮವಾಗಿ ಅಧಿಕಾರದ ಕೇಂದ್ರೀಕರಣದ ಮೂಲಕ ಭಾರತ ಎಂಬ ಒಕ್ಕೂಟದ ಮೂಲತತ್ತ್ವಕ್ಕೇ ವಿರುದ್ಧವಾದುದು’ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ. ‘ಇದು ಜನತಂತ್ರಕ್ಕೆ ವಿರುದ್ಧವಾದುದು, ಇದು ಭಾರತದಂತಹ ದೇಶದಲ್ಲಿ ಕಾರ್ಯಸಾಧ್ಯವಲ್ಲದ್ದು, ಇದು ಇನ್ನಷ್ಟು ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ, ಈಗ ಹಿಂದಿನಂತೆ ಒಂದು ಪಕ್ಷ ದೇಶದಾದ್ಯಂತ ಅಧಿಕಾರ ಹಿಡಿಯುವ ಪರಿಸ್ಥಿತಿಯೂ ಇಲ್ಲ’ ಎಂದು ಕಮ್ಯುನಿಸ್ಟ್ ನಾಯಕ ಸೀತಾರಾಮ್ ಯಚೂರಿ ಹೇಳಿದ್ದಾರೆ.

ಅಧಿಕಾರ ಕೇಂದ್ರೀಕರಣದ ಏಕೈಕ ಗುರಿ ಹೊಂದಿರುವ, ‘ಏಕ’ಗಳ ದುಷ್ಟ ಕಾರ್ಯಸೂಚಿಯ ಭಾಗವಾಗಿ, ಈಗಾಗಲೇ ಬಹುತೇಕ ರಾಜ್ಯಗಳ ಎಲ್ಲ ಅಧಿಕಾರಗಳನ್ನೂ ಕಸಿದುಕೊಳ್ಳಲಾಗಿದೆ. ಜಿ ಎಸ್ ಟಿ ಬಂದ ಮೇಲೆ ರಾಜ್ಯಗಳು ಆರ್ಥಿಕ ಸ್ವಾವಲಂಬನೆಯೂ ಇಲ್ಲದೆ ಕೇಂದ್ರದ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಲ್ಲುವಂತಾಗಿದೆ. ಕೃಷಿ, ಶಿಕ್ಷಣ, ಪೊಲೀಸ್ ಹೀಗೆ ಎಲ್ಲದರ ಮೇಲೆಯೂ ಒಕ್ಕೂಟ ಸರಕಾರ ನಿಯಂತ್ರಣ ಸ್ಥಾಪಿಸಿದೆ. ಇದೀಗ ‘ಒಂದು ದೇಶ ಒಂದು ಚುನಾವಣೆ’ಯ ಹೆಸರಿನಲ್ಲಿ ಭಾರತದ ಫೆಡರಲ್ ಸ್ವರೂಪದ ಶವಪೆಟ್ಟಿಗೆಗೆ ಕೊನೆಯ ಮೊಳೆ ಜಡಿಯುವ ಯತ್ನ ನಡೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದಂತೆ ‘ಇದು ಒಕ್ಕೂಟದ ಮೇಲೆ ಮಾತ್ರವಲ್ಲ, ಅದರ ಪ್ರತಿಯೊಂದು ರಾಜ್ಯದ ಮೇಲೂ ನಡೆಯಲಿರುವ ದಾಳಿ’. ಆದರೆ, ಭಾರತದಂತಹ ಬಹುದೊಡ್ಡ ಮತ್ತು ಸಂಕೀರ್ಣ ಪರಿಸ್ಥಿತಿಗಳಿರುವ ದೇಶದಲ್ಲಿ ಈ ಪ್ರಸ್ತಾವವನ್ನು ಜಾರಿಗೊಳಿಸುವುದು ಸುಲಭಸಾಧ್ಯವಲ್ಲ ಎನ್ನುವುದೊಂದೇ ಸದ್ಯದ ಸಮಾಧಾನ.

ಶ್ರೀನಿವಾಸ ಕಾರ್ಕಳ

ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.

ಇದನ್ನೂ ಓದಿ-ಮಿಝೋರಾಂ ಮೇಲಣ ಬಾಂಬ್ ದಾಳಿ: ವಾಸ್ತವ ಏನು?

Related Articles

ಇತ್ತೀಚಿನ ಸುದ್ದಿಗಳು