Sunday, June 23, 2024

ಸತ್ಯ | ನ್ಯಾಯ |ಧರ್ಮ

ತುಳುನಾಡ ದೈವಗಳಿಗೆ ಅಪಮಾನ: ಸಾಂಸ್ಕೃತಿಕ ಯಜಮಾನಿಕೆಯ, ವೈದಿಕ ವಸಾಹತುಶಾಹಿಯ ಅತ್ಯುತ್ತಮ ಉದಾಹರಣೆ

ತುಳುವ ಸಮುದಾಯಗಳು ತಲೆ ತಲಾಂತರದಿಂದ, ಭಕ್ತಿ ಭಾವದೊಂದಿಗೆ ತಮ್ಮ ಬದುಕಿನ ಭಾಗವೆಂಬಂತೆ ಆಚರಿಸಿಕೊಂಡು ಬಂದಿರುವ ಭೂತಾರಾಧನೆಯು ಭಾರತೀಯ ಸಂಸ್ಕೃತಿಯಲ್ಲಿಯೇ ಬಹಳ ವಿಶಿಷ್ಟವಾದುದು. ದ್ರಾವಿಡ ಸಂಸ್ಕೃತಿಯ ಭಾಗವಾಗಿರುವ ಈ ಅವೈದಿಕ ಪರಂಪರೆಗೂ ಆನಂತರ ಇಲ್ಲಿಗೆ ಬಂದ ವೈದಿಕ ಪರಂಪರೆಗೂ ಯಾವ ಸಂಬಂಧವೂ ಇಲ್ಲ. ಭೂತಾರಾಧನೆಗೆ ಸಂಬಂಧಿಸಿದ ದೈವಗಳ ಹುಟ್ಟು, ಆರಾಧನಾ ಕ್ರಮಗಳು, ಪಾಡ್ದನಗಳು, ವೀರತ್ವ, ದೈವತ್ವ ಮತ್ತು ಭಕ್ತಿಯ ಕಲ್ಪನೆಗಳು ಇತ್ಯಾದಿಗಳನ್ನು ಅವಲೋಕಿಸುವಾಗ ಇದು ಸ್ಪಷ್ಟವಾಗುತ್ತದೆ.

ಆದರೆ, ಬಹಳ ಕಾಲದಿಂದ ನಮ್ಮ ಅಮೂಲ್ಯ ಜನಪದ ಪರಂಪರೆಗಳಿಗೆ ಅತ್ಯಂತ ಮಾರಕವಾದ ಸಾಂಸ್ಕೃತಿಕ ರಾಜಕಾರಣವೊಂದು ಸದ್ದಿಲ್ಲದೆ ಕ್ರಿಯಾಶೀಲವಾಗಿದ್ದು, ಅದರ ಭಾಗವಾಗಿಯೇ ಈ ಜನಪದ ಪರಂಪರೆಯ ಮೂಲಗುಣಗಳನ್ನು ನಾಶಪಡಿಸಿ  ಅವನ್ನು ವೈದಿಕ ಪರಂಪರೆಯ ಭಾಗವಾಗಿ ನೋಡುವ, ಮಾಡುವ, ವ್ಯಾಖ್ಯಾನಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲಿ ಈ ತುಳು ದೈವಗಳಿಗೆ ವೈದಿಕ ಪುರಾಣ ಕತೆಯ ಹಿನ್ನೆಲೆಯನ್ನು ಒದಗಿಸಲಾಗಿರುತ್ತದೆ, ಅದೇ ರೀತಿಯಲ್ಲಿ ಈ ದೈವಗಳ ಮೂಲ ಹೆಸರನ್ನು ಬದಲಿಸಿ ಸಂಸ್ಕೃತೀಕರಣಗೊಳಿಸಲಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ದ್ರಾವಿಡ ಸಂಸ್ಕೃತಿಯ ಈ ದೈವಗಳು ವೈದಿಕ ಸಂಸ್ಕೃತಿಯ ದೇವರುಗಳ ಅಡಿಯಾಳಾಗಿರುತ್ತಾರೆ. ಕಾರ್ಕಳ ಬಳಿಯ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪರಶುರಾಮನ ಅಡಿಯಾಳುಗಳಂತೆ ತುಳುವರ ಆರಾಧ್ಯ ದೈವಗಳನ್ನು ಕೂರಿಸಿರುವುದು ಈ ಸಾಂಸ್ಕೃತಿಕ ಯಜಮಾನಿಕೆಯ, ವೈದಿಕ ವಸಾಹತುಶಾಹಿಯ ಅತ್ಯುತ್ತಮ ಉದಾಹರಣೆ.

ದ್ರಾವಿಡರಿಗೆ ರಾಮ, ಕೃಷ್ಣ ಮೊದಲಾದ ವೈದಿಕ ದೇವರುಗಳಿಗಿಂತಲೂ ಪಂಜುರ್ಲಿ, ಜುಮಾದಿ ಇತ್ಯಾದಿ ಜನಪದ ದೈವಗಳು ಹೆಚ್ಚು ಹತ್ತಿರದವರು. ಅವರು ಹೆದರುವುದು ದೇವರುಗಳಿಗಲ್ಲ, ದೈವಗಳಿಗೆ. ದೈವ ದೇವರು, ನಂಬಿಕೆ, ಆಚರಣೆಗಳು ಮತ್ತು ಸಾಂಸ್ಕೃತಿಕ ಪ್ರತೀಕಗಳೇ ಜನರ ಅಸ್ಮಿತೆಯ ಆಧಾರಶಿಲೆ. ನಮ್ಮ ಸಾಂಸ್ಕೃತಿಕ ಪ್ರತೀಕಗಳ ಮೇಲಿನ ಹಲ್ಲೆಯೆಂದರೆ ಅದು ನಮ್ಮ ಅಸ್ಮಿತೆಯ ಮೇಲಿನ ಹಲ್ಲೆ. ಅಸ್ಮಿತೆಯೇ ಇಲ್ಲವಾದ ಮೇಲೆ ನಮಗೆಲ್ಲಿಯ ಅಸ್ತಿತ್ವ?

ಇದು ಮೌನವಾಗಿ ಕೂರುವ ಕಾಲವಲ್ಲ. ತುಳುನಾಡಿನ ಮೂಲ ಸಂಸ್ಕೃತಿಯನ್ನು ಅವಮಾನಿಸುವ ಮತ್ತು ತುಳುವರನ್ನು ಸಾಂಸ್ಕೃತಿಕವಾಗಿ ಎರಡನೆಯ ದರ್ಜೆಯ ಪ್ರಜೆಗಳನ್ನಾಗಿಸುವ ಆರ್ಯನ್ ವೈದಿಕ ಸಂಸ್ಕೃತಿಯ ಈ ಕುತಂತ್ರದ ವಿರುದ್ಧ ಪ್ರಬಲ ಪ್ರತಿರೋಧ ಅಭಿಯಾನದ ಅಗತ್ಯವಿದೆ. ಇಲ್ಲವಾದರೆ ತೌಳವ ಸಂಸ್ಕೃತಿಯ ಬುಡಕ್ಕೆ ಪರಶುರಾಮನ ಕೊಡಲಿಯಿಡುವ ದಿಶೆಯಲ್ಲಿ ಇವರು ಇನ್ನಷ್ಟು ಧೈರ್ಯದಿಂದ ಮತ್ತು ವೇಗದಿಂದ ಮುಂದುವರಿಯುವುದರಲ್ಲಿ ಯಾವ ಅನುಮಾನವೂ ಇಲ್ಲ.

ಶ್ರೀನಿವಾಸ ಕಾರ್ಕಳ

ಚಿಂತಕರು

Related Articles

ಇತ್ತೀಚಿನ ಸುದ್ದಿಗಳು