Sunday, June 16, 2024

ಸತ್ಯ | ನ್ಯಾಯ |ಧರ್ಮ

ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷ

ರಾಹುಲ್‌ ಗಾಂಧಿಯವರ ʼಭಾರತ್‌ ಜೋಡೋʼ ಎಂಬ ಐತಿಹಾಸಿಕ ಪಾದಯಾತ್ರೆಗೆ ಇಂದಿಗೆ ಒಂದು ವರುಷ (ಸೆ7). ದ್ವೇಶದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇನೆ ಎಂಬ ಸಂದೇಶದೊಂದಿಗೆ ಕನ್ಯಾಕುಮಾರಿಯಿಂದ ಶ್ರೀನಗರದ ವರೆಗೂ ನಡೆಯುತ್ತಾ ‘ನಿಜಭಾರತ’ವನ್ನು ಅರಿಯುವ ಪ್ರಯತ್ನವನ್ನು ರಾಹುಲ್‌  ಮಾಡಿದರು. ಈ ಯಾತ್ರೆ ಅವರನ್ನು ದೇಶದ ಅತ್ಯಂತ ಜನಪ್ರಿಯ ರಾಜಕೀಯ ನಾಯಕನನ್ನಾಗಿ  ಹೊರಹೊಮ್ಮಿಸಿರುವುದಂತೂ ಸತ್ಯ – ಶ್ರೀನಿವಾಸ ಕಾರ್ಕಳ.

“ಮೊದಲು ಅವರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ಆನಂತರ ಅವರು ನಿಮ್ಮನ್ನು ಅಪಹಾಸ್ಯ ಮಾಡುತ್ತಾರೆ, ಬಳಿಕ ನಿಮ್ಮೊಂದಿಗೆ ಜಗಳಾಡುತ್ತಾರೆ, ಅಂತಿಮವಾಗಿ ಜಯ ನಿಮ್ಮದು”

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರ ತನಕ ಕಾಂಗ್ರೆಸ್ ಪಾದಯಾತ್ರೆ ನಡೆಯಲಿದೆ ಎಂಬ ಸುದ್ದಿ ನಿಧಾನಕ್ಕೆ ಹರಡಲಾರಂಭಿಸಿದಾಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳದವರೇ ಹೆಚ್ಚು. ನೆಲಕಚ್ಚಿದ್ದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಇಮೇಜ್, ರಾಹುಲ್ ಗಾಂಧಿ ಪಪ್ಪು, ಆತ ಗಂಭೀರ ರಾಜಕಾರಣಿಯಲ್ಲ, ಸದಾ ವಿದೇಶ ಯಾತ್ರೆಯಲ್ಲಿರುತ್ತಾನೆ ಎಂದು ಬಿಜೆಪಿ ಪ್ರೊಪಗಾಂಡಾ ಮಶೀನ್ ಸಾವಿರಾರು ಕೋಟಿ ವ್ಯಯಿಸಿ ಸಮರ್ಥವಾಗಿ ಮಾಡಿದ ಅಪಪ್ರಚಾರ, ಕೆಲವು ತಿಂಗಳುಗಳ ಕಾಲದ, ಹಲವು ಸಾವಿರ ಕಿಲೋಮೀಟರ್ ಗಳ ನಡಿಗೆ ಹೀಗೆ ಇದಕ್ಕೆ ಇದ್ದ ಕಾರಣಗಳು ಅನೇಕ.

ಆದರೆ, ಪಾದಯಾತ್ರೆ ನಡೆಸಿಯೇ ತೀರಬೇಕು ಎಂಬ ಛಲದೊಂದಿಗೆ ರಾಹುಲ್ ಗಾಂಧಿ ಮತ್ತು ಅವರ ಸಂಗಡಿಗರು ಕಳೆದ ವರ್ಷ ಈ ದಿನ (ಸೆಪ್ಟಂಬರ್ 7, 2022) ಯಾತ್ರೆ ಆರಂಭಿಸಿದ ಕೆಲವೇ ದಿನಗಳಲ್ಲಿ ಯಾತ್ರೆಯ ಬಗ್ಗೆ ಅನೇಕರಲ್ಲಿ ಇದ್ದ ಇಂತಹ ಅನುಮಾನಗಳ ಮಂಜು ಕರಗಲಾರಂಭಿಸಿತು. ತಮಿಳುನಾಡು ದಾಟಿ, ಕೇರಳದ ಒಂದೊಂದು ಪಟ್ಟಣವನ್ನೂ ಯಾತ್ರಾರ್ಥಿಗಳು ಹಾದು ಹೋಗುತ್ತಿದ್ದಂತೆ ಅಭೂತಪೂರ್ವ ಜನಬೆಂಬಲ ಸಿಗಲಾರಂಭಿಸಿತು. ಯಾತ್ರೆ ದೇಶದ ಸುದ್ದಿಯಾಗಲಾರಂಭಿಸಿತು.

ಕಾರ್ಯಕ್ರಮ ಬರಿಯ ನಡಿಗೆಗೆ ಸೀಮಿತವಾಗಿರಲಿಲ್ಲ. ಪ್ರತಿಯೊಂದು ಊರಿನಲ್ಲಿಯೂ ರಾಹುಲ್ ಗಾಂಧಿ ಅಲ್ಲಿನ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಕುಶಲಕರ್ಮಿಗಳು, ಮಹಿಳೆಯರು ಹೀಗೆ ಸಮಾಜದ ಎಲ್ಲ ವರ್ಗದ ಶ್ರಮಜೀವಿಗಳನ್ನು ಭೇಟಿಯಾಗಿ ಅವರ ಭಾವನೆಗಳಿಗೆ ಕಿವಿಯಾದರು. ಇದರಿಂದ ಜನರಿಗೂ ರಾಹುಲ್ ರನ್ನು ಹತ್ತಿರದಿಂದ ನೋಡಿ ಮಾತನಾಡಿಸುವ ಅವಕಾಶ ದೊರೆತರೆ, ರಾಹುಲ್ ಅವರಿಗೂ ‘ನಿಜಭಾರತ’ವನ್ನು ಅರಿಯುವ ಅವಕಾಶ ದೊರೆಯಿತು.

ಯಾತ್ರೆಯ ಉದ್ದಕ್ಕೂ ಹವಾಮಾನ ಬದಲಾಗುತ್ತಲೇ ಇತ್ತು. ತೀವ್ರ ಮಳೆ, ಸುಡುವ ಬಿಸಿಲು, ಕೊರೆಯುವ ಚಳಿ, ದಿಗಿಲುಗೊಳಿಸುವ ಮಂಜಿನ ಮಳೆ ಇದು ಒಂದೆಡೆಯಾದರೆ, ರಾಜಸ್ತಾನ, ಹಿಮಾಚಲ ಪ್ರದೇಶ ಹೊರತುಪಡಿಸಿ ಪ್ರತಿಯೊಂದು ರಾಜ್ಯವೂ ಕಾಂಗ್ರೆಸ್ ಅಧಿಕಾರದಲ್ಲಿಲ್ಲದ ಮತ್ತು ಅನೇಕ ರಾಜ್ಯಗಳು ಕಾಂಗ್ರೆಸ್ ಬಗ್ಗೆ ಶತ್ರುತ್ವ ಭಾವನೆ ಹೊಂದಿದ್ದ ಬಿಜೆಪಿ ಆಳ್ವಿಕೆಯ ರಾಜ್ಯಗಳು. ಹಾಗಾಗಿ ಯಾತ್ರೆಗೆ ರಾಜಕೀಯ ನೆಲೆಯಲ್ಲಿ ತೊಂದರೆ ಕೊಡುವ ಕೆಲಸಗಳು ಸಾಗಿಯೇ ಇದ್ದವು.

ಮಾಧ್ಯಮಗಳ ಕುತಂತ್ರ

ದೇಶದ ಬಹುತೇಕ ಮಾಧ್ಯಮಗಳು ಮೋದಿ ಸರಕಾರದ ಬೆದರಿಕೆ ಅಥವಾ ಆಮಿಷಕ್ಕೆ ಬಲಿಯಾಗಿ ತಮ್ಮ ಮಾಧ‍್ಯಮ ಧರ್ಮಕ್ಕೆ ಎಂದೋ ತಿಲಾಂಜಲಿ ನೀಡಿ, ಸರಕಾರದ ಪದತಲದಲ್ಲಿ ತಮ್ಮ ಮಿದುಳು ಮತ್ತು ಹೃದಯವನ್ನು ಇರಿಸಿದ ಕಾರಣ, ಸಹಜವಾಗಿಯೇ ಈ ಯಾತ್ರೆಯನ್ನು ಅವು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಿದವು. ಏನಾದರೂ ವಿವಾದ ಆದಾಗ ಅದನ್ನು ದೊಡ್ಡದಾಗಿ ಬಿಂಬಿಸಿದವು. ಆದರೆ ಜನಸಾಮಾನ್ಯರು ಮತ್ತು ಸೋಶಿಯಲ್ ಮೀಡಿಯಾ ದೊಡ್ಡ ಮಟ್ಟದಲ್ಲಿ ರಾಹುಲ್ ಬೆನ್ನಿಗೆ ನಿಂತಾಗ ಮುಖ್ಯವಾಹಿನಿ ಮಾಧ್ಯಮಗಳಿಗೆ ಇರಿಸುಮುರಿಸಾಯಿತು. ‘ನಿಮಗೆ ಮಾಧ್ಯಮ ಬೆಂಬಲ ಅನಿವಾರ್ಯ ಅಲ್ಲ, ನಿಮ್ಮ ಕೆಲಸದಲ್ಲಿ ಸತ್ವ ಇದ್ದರೆ ಪ್ರಚಾರ, ಪ್ರಸಿದ್ಧಿ ತನ್ನಿಂದ ತಾನಾಗಿ ಸಿಕ್ಕೇ ಸಿಗುತ್ತದೆ’ ಎಂಬುದನ್ನು ರಾಹುಲ್ ರ ಈ ಪಾದಯಾತ್ರೆ ಸಾಬೀತುಪಡಿಸಿತು.

ಈ ನಡುವೆ, ಮತ್ತೊಮ್ಮೆ ಕೋವಿಡ್ ಬಂದಿದೆ, ಹಾಗಾಗಿ ಯಾತ್ರೆ ಮುಂದುವರಿಸಕೂಡದು ಎಂಬ ಆದೇಶದ ಮೂಲಕ ಮತ್ತೆ ಯಾತ್ರೆಗೆ ತಡೆ ಹಾಕುವ ಯತ್ನ ಮೋದಿ ಸರಕಾರದಿಂದ ನಡೆಯಿತು. ಉದ್ದೇಶ ಸ್ಪಷ್ಟ- ಇಡೀ ದೇಶದ ಗಮನ ಭಾರತ್ ಜೋಡೋ ಮೇಲೆ ಕೇಂದ್ರೀಕರಣಗೊಂಡಿತ್ತು. ರಾಹುಲ್ ರ ಜನಪ್ರಿಯತೆ ಹೆಚ್ಚುತ್ತಿತ್ತು.

ರಾಹುಲ್ ಮತ್ತು ಅವರ ಸಂಗಡಿಗರು ನಡೆದೇ ನಡೆದರು. ಜಯರಾಮ್ ರಮೇಶ್, ದಿಗ್ವಿಜಯ್ ಸಿಂಗ್ ರಂಥ ಹಿರಿಯರೂ ಈ ಕಿರಿಯರೊಂದಿಗೆ ಯಾತ್ರೆಯ ಉದ್ದಕ್ಕೂ ಹೆಜ್ಜೆ ಹಾಕಿದರು.  ಜಮ್ಮು ಕಾಶ್ಮೀರದ ಮೂಲಕ ಶ್ರೀನಗರವನ್ನೂ ತಲಪಿದರು.

ಕಾಶ್ಮೀರ ಅಂದರೆ ಉಗ್ರರ ಚಟುವಟಿಕೆಗಳಿಂದ ನಲುಗಿರುವ ಪ್ರದೇಶ. ಯಾತ್ರೆಗೆ ಏನಾಗುವುದೋ ಎಂಬ ಭಯವಿತ್ತು. ಆದರೆ ರಾಹುಲ್ ಗೆ ಬೆದರಿಕೆ ಬಿಡಿ, ಅಲ್ಲಿ ಹೊಲಗಳಲ್ಲಿ ದುಡಿಯುವ ಜನಸಾಮಾನ್ಯರೂ ಓಡೋಡಿ ಬಂದು ರಾಹುಲ್ ಗೆ ಪ್ರೀತಿಯ ಸ್ವಾಗತ ಕೋರಿದರು. ಅಂತೂ ಶ್ರೀನಗರದಲ್ಲಿ ಸುರಿವ ಧಾರಾಕಾರ ಹಿಮ ಮಳೆಯ ನಡುವೆ ರಾಹುಲ್ ಭಾಷಣದೊಂದಿಗೆ ಭಾರತ್ ಜೋಡೋ ಯಾತ್ರೆ ಮುಕ್ತಾಯ ಕಂಡಿತು (ಜನವರಿ 30, 2023).

ಬದಲಾದ ಗ್ರಹಿಕೆ

ಈಗಾಗಲೇ ಹೇಳಿದ ಹಾಗೆ ಭಾರತ್ ಜೋಡೋ ಯಾತ್ರೆಯು ರಾಹುಲ್ ಬಗ್ಗೆ ಅನೇಕರಲ್ಲಿ ಇದ್ದ ಗ್ರಹಿಕೆಯನ್ನೇ ಬದಲಾಯಿಸಿತು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿತು. ವಿಶೇಷವಾಗಿ, ರಾಹುಲ್ ಜನರೊಂದಿಗೆ ಪ್ರೀತಿಯಿಂದ ಬೆರೆಯುವ ರೀತಿಯು ಅವರನ್ನು ಎಲ್ಲರೂ ಪ್ರೀತಿಸುವಂತೆ, ಮತ್ತು ‘ನಮ್ಮ ನೋವುಗಳಿಗೆ ಸ್ಪಂದಿಸುವ ನಾಯಕನೊಬ್ಬ ಇಲ್ಲಿದ್ದಾನೆ’ ಎಂದು ಜನರು ಇಷ್ಟಪಡುವಂತೆ ಮಾಡಿತು. ಸ್ವಿಗ್ಗಿ, ಜೊಮೆಟೋ ಡೆಲಿವರಿ ಬಾಯ್ ಗಳ ಒಡನಾಟದಿಂದ ಹಿಡಿದು, ಬಸ್ ಪ್ರಯಾಣಿಕರೊಂದಿಗೆ, ಟ್ರಕ್ ಡ್ರೈವರ್ ಗಳೊಂದಿಗೆ, ಬೈಕ್ ಮೆಕ್ಯಾನಿಕ್ ಗಳೊಂದಿಗೆ, ತರಕಾರಿ ಮಾರುಕಟ್ಟೆಯ ಕೆಲಸಗಾರರೊಂದಿಗೆ, ಹೊಲದಲ್ಲಿ ದುಡಿಯುವ ಕಾರ್ಮಿಕ ಮಹಿಳೆಯರೊಂದಿಗೆ ಆತ ನಡೆಸಿದ ಸಂವಾದಗಳು, ಕೆಲವರನ್ನು ತನ್ನ ಮನೆಗೇ ಕರೆಸಿ ಉಪಚರಿಸಿದ ರೀತಿ ಆತನಿಗೆ ಎಲ್ಲಿಲ್ಲದ ಜನಪ್ರಿಯತೆಯನ್ನು ತಂದುಕೊಟ್ಟಿತು.

ತರಕಾರಿ ಮಾರುವ ರಾಮೇಶ್ವರ್ ನನ್ನು ಮನೆಗೆ ಕರೆಸಿ ತನ್ನ ಹತ್ತಿರದ ಬಂಧುವೋ ಏನೋ ಎಂಬಂತೆ ಆತನನ್ನು ಉಪಚರಿಸಿದ ಬಗೆ ಆತನ ಮಾನವೀಯ ಮುಖವನ್ನು ದರ್ಶಿಸಿತು. ರಾಹುಲ್ ರ ವೀಡಿಯೋಗಳನ್ನು ಈಗ ಮಿಲಿಯಗಟ್ಟಲೆ ಜನ ವೀಕ್ಷಿಸುತ್ತಾರೆ. ಇತ್ತೀಚೆಗೆ ಲಾಲೂ ಯಾದವ್ ಜತೆಗೆ ಆತನ ಮಾಂಸದಡುಗೆಯ ಕಾರ್ಯಕ್ರಮದ ವೀಡಿಯೋ ಜನಪ್ರಿಯತೆಯಲ್ಲಿ ಹೊಸ ದಾಖಲೆಯನ್ನೇ ಬರೆಯಿತು.

ಈಗ ಎರಡು ಕಾರಣಕ್ಕೆ ರಾಹುಲ್ ಗಾಂಧಿ ಜನಪ್ರಿಯರಾಗುತ್ತಿದ್ದಾರೆ. ಆತ ಮಂಕೀ ಬಾತ್ ನ ಸ್ವಗತ ನಡೆಸುವ ಬದಲು ಆಲಿಸುವ ಗುಣ ಹೊಂದಿದ್ದಾರೆ, ಆತನಲ್ಲಿ ಪ್ರೀತಿ, ಕರುಣೆ, ವಿನಯ, ಸ್ನೇಹಶೀಲತೆ, ಪರೋಪಕಾರ ಇತ್ಯಾದಿ ಮಾನವೀಯ ಗುಣಗಳಿವೆ ಎನ್ನುವುದು ಮೊದಲ ಕಾರಣವಾದರೆ, ಕುಸಿಯುತ್ತಿರುವ ಮೋದಿ ಜನಪ್ರಿಯತೆ ಇನ್ನೊಂದು ಕಾರಣ.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಸ್ವರ್ಗವನ್ನೇ ಧರೆಗಿಳಿಸುವುದಾಗಿ ಜನರನ್ನು ನಂಬಿಸಿದ್ದರು ಮತ್ತು ಬಹುತೇಕರು ಅದನ್ನು ದೃಢವಾಗಿ ನಂಬಿದ್ದರು ಕೂಡಾ. ಆದರೆ ಅವರು ಅಧಿಕಾರಕ್ಕೆ ಬಂದು ಬಹುತೇಕ ಹತ್ತು ವರ್ಷಗಳಾಗುತ್ತಿವೆ. ಹಾಗಾಗಿ ಅವರ ಮಾತು ಮತ್ತು ಕೃತಿಯ ನಡುವಿನ ಅಂತರವನ್ನು ನಿಕಷಕ್ಕೊಡ್ಡಲು ಜನರಿಗೆ ಈಗ ಸಾಧ್ಯವಾಗುತ್ತಿದೆ.

ಮೋದಿ ವಿರೋಧಿ ಅಲೆ

ತಿರುಗಿ ನೋಡಿದರೆ ಜನರಿಗೆ ಆದ ಅನುಕೂಲಗಳಿಗಿಂತ ತೊಂದರೆಯೇ ಹೆಚ್ಚು. ಇದು ಧನಿಕರ ಪರ ಇರುವ ಸರಕಾರ ಎಂಬುದು ಕ್ರಮೇಣ ಜನರಿಗೆ ಖಾತ್ರಿಯಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಸಹಜವಾಗಿಯೇ ಅಧಿಕಾರದ ಎರಡು ಅವಧಿಗಳ ಬಳಿಕ ಒಂದು ಸರಕಾರದ ಬಗ್ಗೆ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗುತ್ತದೆ. ಅದು ಈಗ ಮೋದಿ ಸರಕಾರವನ್ನು ಕಾಡುತ್ತಿದೆ.

ಮೋದಿ ಈಗಾಗಲೇ ಪರೀಕ್ಷೆಗೆ ಒಳಗಾದವರು (ಟೆಸ್ಟೆಡ್). ರಾಹುಲ್ ಇನ್ನೂ ಪರೀಕ್ಷೆಗೆ ಒಳಗಾಗದವರು. ಈ ಎಲ್ಲ ಕಾರಣಕ್ಕೆ, ‘ದೂರದ ಬೆಟ್ಟ ನುಣ್ಣಗೆ’, ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಕವಿವಾಣಿಯಂತೆಯೂ ರಾಹುಲ್ ಬಗ್ಗೆ ಜನರಲ್ಲಿ ನಿರೀಕ್ಷೆ ಹೆಚ್ಚುತ್ತಿದೆ. ಗೋದಿ ಮಾಧ್ಯಮಗಳು ‘ಇನ್ನು ಮುಂದೆ ಎಂದೆಂದೂ ಮೋದಿ’ ಎಂದು ಎಷ್ಟೇ ಅಪಪ್ರಚಾರ ನಡೆಸಿದರೂ ಸತ್ಯ ಅವರಿಗೂ ಗೊತ್ತಿದೆ. ಮೋದಿಯವರ ಪರಮ ಭಕ್ತರು ನಡೆಸಿದ ಸಮೀಕ್ಷೆಗಳಲ್ಲಿಯೂ ರಾಹುಲ್ ಬಗ್ಗೆ ಜನರ ಬೆಂಬಲ ಹೆಚ್ಚುತ್ತಿರುವುದು ರುಜುವಾತಾಗುತ್ತಿದೆ.

ಈ ಬೆಳವಣಿಗೆಗಳು ರಾಹುಲ್ ಗಾಂಧಿಗೆ ಮತ್ತು ಕಾಂಗ್ರೆಸ್ ಗೆ ವರವಾಗುತ್ತದೋ, ಅಂತಿಮವಾಗಿ ಅವರನ್ನು ಅಧಿಕಾರದ ಸಿಂಹಾಸನಕ್ಕೆ ತಲಪಿಸುತ್ತದೋ ಎನ್ನುವುದನ್ನು ಕಾಲವೇ ಹೇಳಬೇಕು. ಆದರೆ, ಸದ್ಯದ ಮಟ್ಟಿಗೆ ಮೋದಿಯವರನ್ನು ಹಿಂದಿಕ್ಕಿ, ರಾಹುಲ್ ಗಾಂಧಿ ದೇಶದ ಅತ್ಯಂತ ಜನಪ್ರಿಯ ರಾಜಕೀಯ ನಾಯಕನಾಗಿ ಹೊರಹೊಮ್ಮಿರುವುದಂತೂ ಸತ್ಯ ಮತ್ತು ಅದರಲ್ಲಿ ಐತಿಹಾಸಿಕ ‘ಭಾರತ್ ಜೋಡೋ ಯಾತ್ರೆ’ಯ ಪಾಲು ಬಹು ದೊಡ್ಡದಿರುವುದೂ ಅಷ್ಟೇ ಸತ್ಯ.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿ-ರಾಹುಲ್ ಗಾಂಧಿಯ ಭಾರತ ಯಾತ್ರೆ

Related Articles

ಇತ್ತೀಚಿನ ಸುದ್ದಿಗಳು