Home ದೇಶ ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ, 15 ದಿನಗಳಲ್ಲಿ ಆರನೇ ಘಟನೆ

ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ, 15 ದಿನಗಳಲ್ಲಿ ಆರನೇ ಘಟನೆ

0

ಎನ್ ಡಿಎ ಆಡಳಿತವಿರುವ ಬಿಹಾರದಲ್ಲಿ ಸತತವಾಗಿ ಸೇತುವೆ ಕುಸಿಯುತ್ತಿರುವ ಘಟನೆಗಳು ಆತಂಕಕ್ಕೆ ಕಾರಣವಾಗಿವೆ. ಇತ್ತೀಚೆಗೆ ಮತ್ತೊಂದು ಸೇತುವೆ ಕುಸಿದಿದೆ.

ಸಿವಾನ್ ಜಿಲ್ಲೆಯ ಗಂಡಕಿ ನದಿಗೆ ನಿರ್ಮಿಸಲಾದ ಈ ಕಿರು ಸೇತುವೆಯ ಒಂದು ಭಾಗವು ಬುಧವಾರ ಬೆಳಿಗ್ಗೆ ಕುಸಿದಿದೆ. ಸೇತುವೆ ಕುಸಿತಕ್ಕೆ ನಿಖರ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉಪ ಅಭಿವೃದ್ಧಿ ಆಯುಕ್ತ ಮುಖೇಶ್ ಕುಮಾರ್ ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ ಡಿಯೋರಿಯಾ ಬ್ಲಾಕ್‌ನಲ್ಲಿ ಸೇತುವೆಯ ಒಂದು ಭಾಗ ಕುಸಿದಿದೆ. ಸೇತುವೆ ಕುಸಿತಕ್ಕೆ ನಿಖರ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ʼಮುಂಜಾನೆ 5 ಗಂಟೆಗೆ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಸೇತುವೆಯನ್ನು 1982-83ರಲ್ಲಿ ನಿರ್ಮಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಈ ಸೇತುವೆಯ ದುರಸ್ತಿ ಕಾರ್ಯ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

ಆದರೆ, ಇದು 15 ದಿನಗಳಲ್ಲಿ ರಾಜ್ಯದಲ್ಲಿ ಆರನೇ ಸೇತುವೆ ಕುಸಿತವಾಗಿದೆ. 11 ದಿನಗಳ ಅವಧಿಯಲ್ಲಿ ಸಿವಾನ್ ಜಿಲ್ಲೆಯಲ್ಲಿ ಇದು ಎರಡನೇ ಘಟನೆ ಎಂಬುದು ಗಮನಾರ್ಹ. ಕಳೆದ ತಿಂಗಳು 22ರಂದು ಸಿವಾನ್ ಜಿಲ್ಲೆಯಲ್ಲಿ ಕಿರು ಸೇತುವೆ ಕುಸಿದಿತ್ತು. ಜಿಲ್ಲಾಧಿಕಾರಿ ಮುಕುಲ್ ಕುಮಾರ್ ಗುಪ್ತಾ ಮಾತನಾಡಿ, ದಾರುಂಡ ಹಾಗೂ ಮಹಾರಾಜ ಗಂಜ್ ಬ್ಲಾಕ್ ಗಳ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಾಲುವೆಯ ಮೇಲೆ ನಿರ್ಮಿಸಿರುವ ಈ ಸೇತುವೆ ಹಲವು ವರ್ಷಗಳ ಹಿಂದಿನದಾಗಿದ್ದು, ಕಾಲುವೆಯಲ್ಲಿ ನೀರು ಹರಿದು ಸೇತುವೆಯ ಪಿಲ್ಲರ್ ಗಳು ಹಾಳಾಗಿವೆ.

ಜೂನ್ 27ರಂದು ಕಿಶನ್‌ಬಾಗ್ ಜಿಲ್ಲೆ, ಜೂನ್ 23ರಂದು ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ, ಜೂನ್ 22 ರಂದು ಸಿಶನ್ ಮತ್ತು ಜೂನ್ 19ರಂದು ಅರಾರಿಯಾದಲ್ಲಿ ಇದೇ ರೀತಿ ಸೇತುವೆಗಳು ಕುಸಿದವು. ನಂತರ ಜೂನ್ 29ರಂದು ಮಧುಬನಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಹಠಾತ್ ಕುಸಿದಿತ್ತು.

ಸೇತುವೆಗಳು ಒಂದರ ಹಿಂದೆ ಒಂದರಂತೆ ಕುಸಿಯುತ್ತಿರುವುದರಿಂದ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನದಿಗಳು ಮತ್ತು ಕಾಲುವೆಗಳ ಮೇಲೆ ನಿರ್ಮಿಸಲಾದ ಸೇತುವೆಗಳ ಬಲದ ಬಗ್ಗೆ ಹಲವು ಅನುಮಾನಗಳಿವೆ. ರಾಜ್ಯ ಸರಕಾರ ಕೈಗೊಂಡಿರುವ ಸಾರ್ವಜನಿಕ ಕಾಮಗಾರಿಗಳಲ್ಲಿ ಗುಣಮಟ್ಟದ ಲೋಪ ಹಾಗೂ ಅವ್ಯವಹಾರಗಳಿಂದ ಈ ಘಟನೆಗಳು ನಡೆಯುತ್ತಿರುವುದು ವ್ಯಾಪಕ ಆತಂಕಕ್ಕೆ ಕಾರಣವಾಗಿದೆ. ಸರಣಿ ಅಪಘಾತಗಳ ಬಗ್ಗೆ ಅಧಿಕಾರಿಗಳು ಕೂಡ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇವೆಲ್ಲವೂ ಆಕಸ್ಮಿಕವಾಗಿ ಕುಸಿದುಬಿದ್ದಿವೆಯೇ? ಅಥವಾ ಯಾರಾದರೂ ಅದನ್ನು ಬೇಕೆಂದೇ ಕಿತ್ತುಹಾಕುತ್ತಿದ್ದಾರೆಯೇ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ.

You cannot copy content of this page

Exit mobile version