ಗಲ್ಫ್‌ ಯುದ್ಧದ ಹೊಡೆತ: ರಾಜ್ಯದಲ್ಲಿ ಈರುಳ್ಳಿ ಬೆಲೆ ಕುಸಿತ, ರೈತರು ಸಂಕಷ್ಟದಲ್ಲಿ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ರಾಜ್ಯದ ಕೃಷಿ ಕ್ಷೇತ್ರಕ್ಕೂ ತೀವ್ರ ಹೊಡೆತ ಬಿದ್ದಿದ್ದು, ಬೀದರ್ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಲ್ಫ್ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಈರುಳ್ಳಿ ಸಾಗಾಟ ಸ್ಥಗಿತಗೊಂಡ ಪರಿಣಾಮ ಮಾರುಕಟ್ಟೆಯಲ್ಲಿ ಬೆಲೆ ಭಾರೀ ಕುಸಿತ ಕಂಡಿದೆ.

ಪ್ರಸ್ತುತ ಪ್ರತಿ ಕೆ.ಜಿ. ಈರುಳ್ಳಿ 4ರಿಂದ 6 ರೂಪಾಯಿವರೆಗೆ ಮಾತ್ರ ಮಾರಾಟವಾಗುತ್ತಿದ್ದು, ರೈತರಿಗೆ ಬೆಳೆದ ಬೆಳೆಗೂ ವೆಚ್ಚವೂ ವಾಪಸ್ ಸಿಗದ ಪರಿಸ್ಥಿತಿ ಎದುರಾಗಿದೆ. ಭಾಲ್ಕಿ ತಾಲೂಕಿನ ಹಾಲಹಿಪ್ಪಾರ್ಗಾ ಗ್ರಾಮದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆ ಬೆಳೆಯಲಾಗುತ್ತಿದ್ದು, ಸುಮಾರು 300 ಎಕರೆ ಪ್ರದೇಶದಲ್ಲಿ ಈ ಬೆಳೆ ವ್ಯಾಪಿಸಿದೆ. ಸಾಮಾನ್ಯವಾಗಿ ಈ ಪ್ರದೇಶದಿಂದ ಸಾವಿರಾರು ಕ್ವಿಂಟಾಲ್ ಈರುಳ್ಳಿ ಹೈದ್ರಾಬಾದ್ ಮೂಲಕ ವಿದೇಶಗಳಿಗೆ ರಫ್ತಾಗುತ್ತಿತ್ತು. ಆದರೆ ಯುದ್ಧದ ಹಿನ್ನೆಲೆ ರಫ್ತು ಸಂಪೂರ್ಣವಾಗಿ ನಿಂತಿದೆ.

ಇದರ ಪರಿಣಾಮವಾಗಿ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದು, ಕೆಲವರು ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಹ ಹಿಂಜರಿಯುತ್ತಿದ್ದಾರೆ. ಇನ್ನೊಂದೆಡೆ, ಕೂಲಿ ಕಾರ್ಮಿಕರ ಕೊರತೆ ಮತ್ತು ಹೆಚ್ಚಿದ ಕೂಲಿ ದರಗಳು ರೈತರ ಮೇಲೆ ಹೆಚ್ಚುವರಿ ಹೊರೆ ತಂದಿವೆ. ಈ ಹಿನ್ನೆಲೆಯಲ್ಲಿ ಕೆಲವು ರೈತರು ಬೆಳೆಗಳನ್ನು ಗ್ರಾಮದಲ್ಲೇ ಕಡಿಮೆ ದರಕ್ಕೆ ಹಂಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ಎಕರೆ ಈರುಳ್ಳಿ ಬೆಳೆ ಬೆಳೆಸಲು ಸುಮಾರು 50ರಿಂದ 55 ಸಾವಿರ ರೂಪಾಯಿ ವೆಚ್ಚವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ ಕೇವಲ 400ರಿಂದ 600 ರೂಪಾಯಿ ಮಾತ್ರ ಸಿಗುತ್ತಿದೆ. ಮೂರು ತಿಂಗಳ ಕಾಲ ದುಡಿದು ಬೆಳೆದ ಬೆಳೆ ಲಾಭ ತರುವುದಿಲ್ಲದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಚುನಾವಣಾ ಸಂದರ್ಭದಲ್ಲಿ ರಾಜಕೀಯ ನಾಯಕರ ಗಮನ ರೈತರ ಸಮಸ್ಯೆಗಳ ಕಡೆ ಇಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಬೆಲೆ ಏರಿಕೆಯಾಗುವ ನಿರೀಕ್ಷೆಯಲ್ಲಿ ಕೆಲ ರೈತರು ತಮ್ಮ ಬೆಳೆಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಲಿದೆ ಎಂಬುದು ಅನಿಶ್ಚಿತವಾಗಿದೆ.

Related Articles

ಇತ್ತೀಚಿನ ಸುದ್ದಿಗಳು