Sunday, June 16, 2024

ಸತ್ಯ | ನ್ಯಾಯ |ಧರ್ಮ

ಕೆಲವೇ ದಿನಗಳಲ್ಲಿ ಶತಕ ದಾಟಲಿದೆ ಈರುಳ್ಳಿ

ಟೊಮೆಟೊ ನಂತರ ಈಗ ಈರುಳ್ಳಿ ಬೆಲೆ ಗಗನಕ್ಕೆ ಏರುತ್ತಿದ್ದು ಶತಕದ ಅಂಚು ಮುಟ್ಟಲು ಇನ್ನು ಹೆಚ್ಚು ಸಮಯ ಬೇಕಾಗಿಲ್ಲ ಎಂದು ಅಂದಾಜಿಸಲಾಗಿದೆ. ಈರುಳ್ಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ರೀತಿಯಲ್ಲಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಸಗಟು ಮತ್ತು ಚಿಲ್ಲರೆ ಮಾರಾಟ ದರ ಏರಿಕೆ ಕಾಣುತ್ತಿದೆ ಎಂದು ವ್ಯಾಪಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ಗರಿಷ್ಠ ₹70 ರೂಪಾಯಿಯಂತೆ ಮಾರಾಟ ಆಗುತ್ತಿದ್ದು, ಪೂರೈಕೆ ಸುಧಾರಿಸದೇ ಇದ್ದರೆ ಕೆ.ಜಿಗೆ ₹100ರ ಗಡಿ ದಾಟುವ ಸಾಧ್ಯತೆ ಇದೆ.

ಈ ಮಟ್ಟದ ಬೆಲೆ ಏರಿಕೆಗೆ ಮಳೆ ಕೊರತೆಯೇ ಮುಖ್ಯ ಕಾರಣ ಎಂನ್ನಲಾಗಿದೆ. ದಾಖಲೆ ಮಟ್ಟದಲ್ಲಿ ಮಳೆ ಇಳಿಕೆಯಿಂದಾಗಿ ಹಲವೆಡೆ ಇಳುವರಿ ತಗ್ಗಿದರೆ, ಇನ್ನೂ ಕೆಲವು ಭಾಗಗಳಲ್ಲಿ ಬೆಳೆಯೇ ನಾಶವಾಗಿದೆ. ಆದರೆ ಈರುಳ್ಳಿಯ ಬೇಡಿಕೆ ಮಾತ್ರ ಹೆಚ್ಚಾಗುತ್ತಿದೆ. ಈ ಕಾರಣಗಳಿಂದಾಗಿ ಈರುಳ್ಳಿ ದರದಲ್ಲಿ ಏರಿಕೆ ಕಾಣುತ್ತಿದೆ ಎಂದು ಎಪಿಎಂಸಿ ಅಧಿಕಾರಿಗಳು, ವ್ಯಾಪಾರಿಗಳು ಹೇಳುತ್ತಿದ್ದಾರೆ.

ಮಹಾರಾಷ್ಟ್ರದಿಂದ ಪೂರೈಕೆ ಕಡಿಮೆ ಆಗಿದೆ. ಪೂರೈಕೆ ಸ್ಥಿತಿ ಸುಧಾರಿಸದೇ ಇದ್ದರೆ ದೀಪಾವಳಿ ವೇಳೆಗೆ ಕೆ.ಜಿಗೆ ₹100ನ್ನು ದಾಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಈರುಳ್ಳಿ ಶತಕ ದಾಟಲಿದೆ.

ಇನ್ನು ರಾಜ್ಯದ ಈರುಳ್ಳಿ ಬೆಳೆಯುವ ಪ್ರದೇಶಗಳಾದ ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ, ಹಿರಿಯೂರು ಭಾಗಗಳಲ್ಲಿ ಇಳುವರಿ ಕೂಡ ಕುಂಠಿತವಾಗಿದೆ. ಈ ಬಾರಿ 10,950 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಹೊಂದಲಾಗಿತ್ತು. ಮಳೆ ಕೊರತೆಯಿಂದ 6,214 ಹೆಕ್ಟೇರ್‌ನಲ್ಲಿ ಮಾತ್ರ ಬೆಳೆಯಲು ಸಾಧ್ಯವಾಗಿದೆ. ಇನ್ನು ಎಷ್ಟೋ ಕಡೆಗಳಲ್ಲಿ ಬೆಳೆದ ಬೆಳೆ ಇಳುವರಿ ತೀರಾ ಕಡಿಮೆ ಆಗಿದ್ದು, ಕೆಲವು ಕಡೆ ನೀರಿನ ಅಭಾವ ಈರುಳ್ಳಿ ಬೆಳೆಯಲಾಗಿಲ್ಲ.

Related Articles

ಇತ್ತೀಚಿನ ಸುದ್ದಿಗಳು