Thursday, April 17, 2025

ಸತ್ಯ | ನ್ಯಾಯ |ಧರ್ಮ

ಬಡವರ ರಕ್ತ ಹೀರಿ ಶ್ರೀಮಂತರ ಖಜಾನೆ ತುಂಬಿಸಿದ್ದೊಂದೆ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆ: ಕೃಷ್ಣ ಬೈರೇಗೌಡ ಕಿಡಿ

• ಕೇಂದ್ರ ಬಿಜೆಪಿಯದ್ದು ಶ್ರೀಮಂತರ ಪರ ಸರ್ಕಾರ
• ಬಡವರನ್ನು ಸುಲಿದು ಶ್ರೀಮಂತರ ಜೇಬು ತುಂಬಿಸುತ್ತಿದ್ದಾರೆ
• ತೈಲಗಳ ಮೇಲೆ ಶೇ.250 ರಿಂದ ಶೇ.500ರ ವರೆಗೆ ತೆರಿಗೆ ಏರಿಕೆ
• ಹಳ್ಳಿ ಹಳ್ಳಿಗೂ ಹೋರಾಟವನ್ನು ತಲುಪಿಸಲು ಕರೆ

ಸತತ ಬೆಲೆ ಏರಿಕೆ ಮೂಲಕ ಬಡವರ ರಕ್ತವನ್ನು ಹೀರಿ ಅಂಬಾನಿ-ಅದಾನಿ ಸೇರಿದಂತೆ ಶ್ರೀಮಂತರ ಖಜಾನೆ ತುಂಬಿಸಿದ್ದೊಂದೆ ಕಳೆದ 11 ವರ್ಷದ ಕೇಂದ್ರ ಸರ್ಕಾರದ ಸಾಧನೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದರು.

ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಗುರುವಾರ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳು, ಸತತ ಬೆಲೆ ಏರಿಕೆ ಹಾಗೂ ಅವೈಜ್ಞಾನಿಕ ತೆರಿಗೆ ಪದ್ಧತಿಯ ವಿರುದ್ಧ ಆಕ್ರೋಶ ಹೊರಹಾಕಿದರು.   

“ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಒಂದು ಲೀಟರ್ ಡೀಸೆಲ್ ಮೇಲಿನ ತೆರಿಗೆ 3.40 ರೂಪಾಯಿ ಇತ್ತು. ಆದರೆ, ಬಿಜೆಪಿ ಅವಧಿಯಲ್ಲಿ ಈ ಪ್ರಮಾಣವನ್ನು 20 ರೂಪಾಯಿಗೆ ಏರಿಸಲಾಗಿದೆ. ಲೀಟರ್ ಪೆಟ್ರೋಲ್ ಗೆ 9.20 ರೂಪಾಯಿ ಇದ್ದ ತೆರಿಗೆಯನ್ನು ಇದೀಗ 20 ರೂಪಾಯಿಗೆ ಏರಿಸಲಾಗಿದೆ. ಅಡಿಗೆ ಅನಿಲವನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಂದು ಸಿಲಿಂಡರ್ ಅನ್ನು 400 ರೂಪಾಯಿಗೆ ನೀಡಲಾಗುತ್ತಿತ್ತು. ಆ ಬೆಲೆಯೂ ಇದೀಗ ಸಾವಿರ ರೂಪಾಯಿ ದಾಟಿದೆ” ಎಂದು ಟೀಕಿಸಿದರು.

“ಕಳೆದ ಮೂರು ಅವಧಿಯ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಸರಾಸರಿಯಾಗಿ ಶೇ.250 ರಿಂದ ಶೇ.500 ರಷ್ಟು ಏರಿಕೆಯಾಗಿದೆ. ಎಣ್ಣೆ, ಬೇಳೆ, ಸಿಮೆಂಟ್, ಸ್ಟೀಲ್ ಸೇರಿದಂತೆ ಸಾಮಾನ್ಯರು ಬಳಸುವ ಎಲ್ಲಾ ವಸ್ತುಗಳ ಬೆಲೆಯೂ ದಿನೇ ದಿನೇ ಗಗನಕ್ಕೆ ಏರುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರ ಜನ ಸಾಮಾನ್ಯರ ಬಡವರ ರಕ್ತವನ್ನು ತಿಗಣೆ ಹೀರಿದಂತೆ ಸುಲಿಗೆ ಮಾಡುತ್ತಿದೆ” ಎಂದು ಆಕ್ರೋಶ ಹೊರಹಾಕಿದರು.

ಮುಂದುವರೆದು, “ಕೇಂದ್ರ ಬಿಜೆಪಿ ಸರ್ಕಾರ ಏಕೆ ಹೀಗೆ ಬಡವರನ್ನು ಸುಲಿಯುತ್ತಿದೆ ಎಂಬ ವಿಚಾರವನ್ನೂ ನಾವು ಅರಿತುಕೊಳ್ಳಬೇಕು. ಏಕೆಂದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶ್ರೀಮಂತರ ಕಾರ್ಪೊರೇಟ್ ತೆರಿಗೆಯನ್ನು ಶೇ.30 ಕ್ಕೆ ಏರಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಇದೀಗ ಶ್ರೀಮಂತರ ತೆರಿಗೆಯನ್ನು ಇಳಿಸಿ ಆ ಹೊರೆಯನ್ನು ಬಡವರ ಮೇಲೆ ಹಾಕುತ್ತಿದೆ. ಬಡವರಿಂದ ಸುಲಿದು ಅದಾನಿ-ಅಂಬಾನಿಯಂತಹ ಶ್ರೀಮಂತರ ಜೇಬು ತುಂಬಿಸುತ್ತಿದೆ. ಇದು ಶ್ರೀಮಂತರ ಪರ ಸರ್ಕಾರವಾಗಿದ್ದು, ಪರಿಣಾಮ ದೇಶದಲ್ಲಿ ಶ್ರೀಮಂತರ ಹಾಗೂ ಬಡವರ ನಡುವಿನ ಅಂತರ ಹೆಚ್ಚುತ್ತಲೇ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.

ಸ್ವಿಸ್ ಬ್ಯಾಂಕಿನ ಕಪ್ಪು ಹಣ ಎಲ್ಲಿ?
“ಪ್ರಧಾನಿ ನರೇಂದ್ರ ಮೋದಿ ಅವರು ತಾವು ಅಧಿಕಾರಕ್ಕೆ ಬಂದರೆ ಭಾರತೀಯರು ಸ್ವಿಜ್ ಬ್ಯಾಂಕಿನಲ್ಲಿಟ್ಟಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಹೇಳಿದ್ದರು. ಖಾತೆ ಹಣ ಹಾಕುವುದಿರಲಿ, ಕನಿಷ್ಟ ಒಂದು ರೂಪಾಯಿ ಕಪ್ಪು ಹಣವನ್ನೂ ಭಾರತಕ್ಕೆ ವಾಪಸ್ ತರಲಾಗಲಿಲ್ಲ” ಎಂದು ಲೇವಡಿ ಮಾಡಿದರು.

“ವಿಜಯ್ ಮಲ್ಯ, ನೀರವ್ ಮೋದಿ, ಮೇಹುಲ್ ಚೋಕ್ಸಿ ಸೇರಿದಂತೆ ಅನೇಕ ಶ್ರೀಮಂತ ಉದ್ಯಮಿಗಳು ಭಾರತದ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ವಿದೇಶಕ್ಕೆ ಓಡಿ ಹೋಗಿದ್ದಾರೆ. ಕನಿಷ್ಟ ಅವರನ್ನೂ ಸಹ ಭಾರತಕ್ಕೆ ಎಳೆದು ತರಲಾಗದವರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಚಾರ್ಜ್ ಶೀಟ್ ಹಾಕ್ತಾರೆ.  ವಿಪಕ್ಷಗಳ ನಿರ್ಣಾಮಕ್ಕೆ ಮುಂದಾಗಿದ್ದಾರೆ” ಎಂದು ಕುಹಕವಾಡಿದರು.

ಹೋರಾಟವನ್ನು ಪ್ರತಿ ಹಳ್ಳಿಯಲ್ಲೂ ಮುನ್ನಡೆಸಿ:
“ಬಿಜೆಪಿ ಸರ್ಕಾರದ ಬೆಲೆ ಏರಿಕೆ ಹಾಗೂ ಜನ ವಿರೋಧಿ ಆಡಳಿತದ ವಿರುದ್ಧದ ಹೋರಾಟವನ್ನು ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಪ್ರತಿ ಹಳ್ಳಿಗೂ ತಲುಪಿಸಬೇಕು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಕರೆ ನೀಡಿದರು.

“ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಪ್ರತಿಯೊಬ್ಬ ಕಾಂಗ್ರೆಸಿಗರು ಬೀದಿಗಿಳಿದು ಹೋರಾಟ ನಡೆಸಬೇಕು. ಸಾಮಾಜಿಕ ಜಾಲತಾಣಗಳ ಮೂಲಕವೂ ಈ ವಿಚಾರಗಳನ್ನು ಜನ ಸಾಮಾನ್ಯರ ಗಮನಕ್ಕೆ ತರಬೇಕು. ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಇಳಿಸುವವರೆಗೆ ನಮ್ಮ ಹೋರಾಟ ಮುಂದುವರೆಯಬೇಕು” ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page