Monday, July 28, 2025

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಥಗಿತ ; ಬಿಜೆಪಿ ದುರುದ್ದೇಶ ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ – ಸಿದ್ದರಾಮಯ್ಯ

“ಚುನಾವಣಾ ಸಮಯದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಕಾಂಗ್ರೆಸ್ ಪಕ್ಷ ಹಣದ ಕೊರತೆಯಿಂದ ಗೋಳಾಡುವಂತೆ ಮಾಡಬೇಕೆನ್ನುವುದೇ ಬಿಜೆಪಿ ಸರ್ಕಾರದ ದುರುದ್ದೇಶ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

“ನರೇಂದ್ರ ಮೋದಿ ಅವರ ಹಿಂದಿರುವ “ದುಷ್ಟ ಶಕ್ತಿ’’ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಲಯವನ್ನು ಕೂಡಾ ಬುಡಮೇಲು ಮಾಡಲು ಹೊರಟಿದೆ. ಇದನ್ನು ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ” ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

“ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮ ಅಧಿಕಾರದ ದುರುಪಯೋಗ ಮಾತ್ರವಲ್ಲ ವಿರೋಧ ಪಕ್ಷಗಳನ್ನು ಹಣಿಯುವ ಸರ್ವಾಧಿಕಾರಿ ನಡೆಯಾಗಿದೆ. ಕಾನೂನುಬಾಹಿರವಾದ ಈ ಕ್ರಮವನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ನಿರ್ದೆಶನ ನೀಡಬೇಕು” ಎಂದು ಆಗ್ರಹಪಡಿಸುತ್ತೇನೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಚುನಾವಣಾ ಸಮಯದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಕಾಂಗ್ರೆಸ್ ಪಕ್ಷ ಹಣದ ಕೊರತೆಯಿಂದ ಗೋಳಾಡುವಂತೆ ಮಾಡಬೇಕೆನ್ನುವುದೇ ಬಿಜೆಪಿ ಸರ್ಕಾರದ ದುರುದ್ದೇಶವಾಗಿದೆ. ನಮ್ಮ ಪಕ್ಷದ ಖಾತೆಯಲ್ಲಿರುವುದು ಪಕ್ಷದ ಅಭಿಮಾನಿಗಳಾದ ಸಾಮಾನ್ಯ ಜನರಿಂದ ಸಂಗ್ರಹವಾಗಿರುವ ಹಣ, ಅದರಲ್ಲಿರುವುದು ದೊಡ್ಡ ಉದ್ಯಮಪತಿಗಳದ್ದಲ್ಲ. ಹೀಗಿದ್ದರೂ ಯಾಕೆ ಇಂತಹ ಕ್ರಮ?” ಎಂದು ಪ್ರಶ್ನಿಸಿದ್ದಾರೆ.

“ಚುನಾವಣಾ ಬಾಂಡ್ ಗಳ ಮೂಲಕ ಉದ್ಯಮಿಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿ ತಮ್ಮ ಖಾತೆಗೆ ತುಂಬಿಸಿಕೊಂಡಿರುವ ಭಾರತೀಯ ಜನತಾ ಪಕ್ಷದ ಬಗ್ಗೆ ಚುನಾವಣಾ ಆಯೋಗ ಮೌನವಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಆಯೋಗ ತಕ್ಷಣ ಇದನ್ನು ಗಮನಿಸಿ ನಮ್ಮ ಪಕ್ಷಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.”

“ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯಲ್ಲಿ ಸೋಲಿನ ಭಯ ಹುಟ್ಟಿಕೊಂಡಿದೆ. ಸಾರ್ವಜನಿಕವಾಗಿ ಎದೆಯುಬ್ಬಿಸಿ ಏನೇ ಕೊಚ್ಚಿಕೊಂಡರೂ ಆಂತರ್ಯದಲ್ಲಿರುವ ಆತ್ಮಸಾಕ್ಷಿ ಸತ್ಯವನ್ನೇ ಹೇಳುತ್ತದೆ. 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಾಯಲ್ಲಿ ಹೇಳಿಕೊಂಡರೂ ವಾಸ್ತವದ ಸ್ಥಿತಿ ಏನೆನ್ನುವುದು ನರೇಂದ್ರ ಮೋದಿಗೆ ಗೊತ್ತಿದೆ. ಈ ಭಯದ ಕಾರಣದಿಂದಲೇ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವ ಸೇಡಿನ ಕ್ರಮಕ್ಕೆ ಮುಂದಾಗಿದೆ” ಎಂದು ಆರೋಪಿಸಿದ್ದಾರೆ.

“ಪ್ರಧಾನಿ ನರೇಂದ್ರಮೋದಿಯವರು ಒಂದು ಮುಖವಾಡ ಅಷ್ಟೆ, ಅದರ ಹಿಂದೆ ಸರ್ಕಾರವನ್ನು ಮನ್ನಡೆಸವ ಒಂದು “ದುಷ್ಟ ಶಕ್ತಿ’’ ಇದೆ ಎಂದು ನಮ್ಮ ನಾಯಕರಾಗಿರುವ ರಾಹುಲ್ ಗಾಂಧಿಯವರು ಹೇಳಿರುವುದು ಸರಿಯಾಗಿದೆ. ಈ “ದುಷ್ಟ ಶಕ್ತಿ’’ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಲಯವನ್ನು ಕೂಡಾ ಬುಡಮೇಲು ಮಾಡಲು ಹೊರಟಿದೆ. ಇದನ್ನು ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ” ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page