Saturday, June 15, 2024

ಸತ್ಯ | ನ್ಯಾಯ |ಧರ್ಮ

ಹತಾಶ ಬಿಜೆಪಿಯಿಂದ ತೆಲಂಗಾಣದಲ್ಲಿ ಆಪರೇಷನ್ ಕಮಲ! ಸಿಕ್ಕಿಬಿದ್ದ ಖದೀಮರು

ತೆಲಂಗಾಣದಲ್ಲಿ ಸಾಲು ಸಾಲು ಬಿಜೆಪಿ ನಾಯಕರು ಪಕ್ಷ ಬಿಟ್ಟು ಬೇರೆ ಪಕ್ಷಗಳನ್ನು ಸೇರುತ್ತಿರುವ ಹಿನ್ನೆಲೆಯಲ್ಲಿ ಹತಾಶೆಗೆ ಬಿದ್ದ ತೆಲಂಗಾಣ ಬಿಜೆಪಿ ‘ಆಪರೇಷನ್ ಕಮಲ’ಕ್ಕೆ ಕೈ ಇಟ್ಟು ಸಿಕ್ಕಿಹಾಕಿಕೊಂಡಿದೆ. ಅಕ್ಟೋಬರ್26 ರ ಬುಧವಾರ ಹೈದರಾಬಾದ್ ನ ಫಾರ್ಮ್ ಹೌಸ್ ಒಂದರಲ್ಲಿ ಶಾಸಕರ ಖರೀದಿಗೆಂದು ತಂದಿದ್ದಾರೆ ಎನ್ನಲಾದ 15 ಕೋಟಿ ಹಣದ ಜೊತೆಗೇ ಬಿಜೆಪಿ ನಾಯಕರನ್ನು ತೆಲಂಗಾಣ ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಪಕ್ಷ ತೊರೆದ ತೆಲಂಗಾಣ ಬಿಜೆಪಿ ಪ್ರಮುಖ ನಾಯಕ :

ಬಿಜೆಪಿ ಪಕ್ಷದ ಹತಾಶ ಸ್ಥಿತಿಗೆ ಪ್ರಮುಖ ಕಾರಣ ಹುಡುಕುತ್ತಾ ಹೋದರೆ, ಅಕ್ಟೋಬರ್ 26 ರಂದು ತೆಲಂಗಾಣದ ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಮಾಜಿ ರಾಜ್ಯಸಭಾ ಸಂಸದ ಆನಂದ ಭಾಸ್ಕರ್ ರಾಪೋಲು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ತಮ್ಮನ್ನು ಕಡೆಗಣಿಸಲಾಗಿದೆ ಮತ್ತು ಅವಮಾನಿಸಲಾಗಿದೆ ಎಂದು ಬಿಜೆಪಿ ನಾಯಕರು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಆರೋಪಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಠಾಗೆ ಬರೆದ ಪತ್ರದಲ್ಲಿ  “ಸಾಮಾಜಿಕ ರಕ್ಷಣೆ, ಸಾಮಾಜಿಕ ನ್ಯಾಯ, ಮತ್ತು ಸಾಮಾಜಿಕ ಸಬಲೀಕರಣವು ಬಿಜೆಪಿ ಪಕ್ಷದ ದೃಷ್ಟಿಗೆ ದೂರವಾಗಿದೆ. ಜಾತಿ ಆಧಾರಿತ ಜನಗಣತಿಗೆ ಸಹ, ಪಕ್ಷ ಮತ್ತು ಕೇಂದ್ರ ಸರ್ಕಾರವು ವಿರುದ್ಧವಾಗಿದೆ. ಆಗಿನಿಂದ ನನಗೆ ಭಯವಾಗಿದೆ. ಪ್ರಾದೇಶಿಕ ಅಸ್ಮಿತೆ ಮತ್ತು ಪ್ರಾದೇಶಿಕ ಭಾಷಾ ಭಾವನೆಗಳು ತೆಲಂಗಾಣ ಪ್ರತಿಬಿಂಬವಾದ ಕಾರಣದಿಂದ ಬಿಜೆಪಿ ಪಕ್ಷದ ಸಮರ್ಥನೆ ಮಾಡಲು ಇದು ಖಂಡಿತಾ ಸಕಾಲವಲ್ಲ. ಬಿಜೆಪಿ ಪಕ್ಷ ಏಕ ಭಾಷೆಯ ಪ್ರಾಬಲ್ಯವನ್ನು ಪ್ರೋತ್ಸಾಹಿಸಿದೆ” ಎಂದು ಆನಂದ ಭಾಸ್ಕರ್ ರಾಪೋಲು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಆಪರೇಷನ್ ಕಮಲಕ್ಕೆ ಸ್ಕೆಚ್ ; ಸಿಕ್ಕಿ ಬಿದ್ದ ಖದೀಮರು
ಬಿಜೆಪಿ ನಾಯಕ ಆನಂದ ಭಾಸ್ಕರ್ ರಾಪೋಲು ಪ್ರಾದೇಶಿಕ ಅಸ್ಮಿತೆ, ಏಕಭಾಷೆ ಹೇರಿಕೆ ಮತ್ತು ಕೆಲವು ಪ್ರಮುಖ ಕಾರಣಗಳಿಟ್ಟು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತೆಲಂಗಾಣದಲ್ಲಿ ಪ್ರಮುಖ ನಾಯಕರೊಬ್ಬರನ್ನು ಕಳೆದುಕೊಳ್ಳುವ ಮುನ್ಸೂಚನೆ ಇದ್ದ ಬಿಜೆಪಿ, “ಜಾಗೃತಗೊಂಡು” TRS(ಭಾರತ ರಾಷ್ಟ್ರ ಸಮಿತಿ) ಪಕ್ಷದ ಶಾಸಕರ ‘ಆಪರೇಷನ್ ಕಮಲ’ಕ್ಕೆ ಮುಂದಾಗಿದೆ. ತೆಲಂಗಾಣದ ಸೈಬರಾಬಾದ್  ಪೊಲೀಸರು ಅಝಿಜ್ ನಗರದ ಫಾರ್ಮ್ ಹೌಸ್ ಒಂದರ ಮೇಲೆ‌ ದಾಳಿ ಮಾಡಿದ್ದು, ಬರೋಬ್ಬರಿ 15 ಕೋಟಿ ರೂ. ಹಣ ಮತ್ತು ಹಣದ ವಾರಸುದಾರರು ಎನ್ನಲಾದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಮೂವರೂ ಬಿಜೆಪಿ ಪಕ್ಷದ ಪ್ರಮುಖ ಮುಖಂಡರು ಎನ್ನಲಾಗಿದೆ.

ಬಂಧಿತ ಆರೋಪಿಗಳು ಹರಿಯಾಣದ ಫರಿದಾಬಾದ್ ಮೂಲದ ಪೂಜಾರಿಯಾಗಿರುವ ಸತೀಶ್ ಶರ್ಮಾ (33), ತಿರುಪತಿಯ ಶ್ರೀಮನಾಥ ರಾಜ ಪೀಠದ ಪೀಠಾಧಿಪತಿ D. ಸಿಂಹಯಾಜಿ(45), ಹಾಗೂ ಸರೂರನಗರದ ಉದ್ಯಮಿ ನಂದಕುಮಾರ್ (48) ಎನ್ನುವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹಣದ ಮೂಲದ ಬಗ್ಗೆ ತನಿಖೆ ನಡೆಸಿದ್ದಾರೆ. ಮುಖ್ಯವಾದ ವಿಚಾರ ಎಂದರೆ ಸೆರೆ ಸಿಕ್ಕ ಆರೋಪಿಗಳು ಇದ್ದ ಫಾರಂ ಹೌಸ್ ಶಾಸಕ ಪೈಲಟ್ ರೋಹಿತ್‌ ರೆಡ್ಡಿಗೆ ಸೇರಿದ್ದು, ಶಾಸಕ ರೋಹಿತ್‌ ರೆಡ್ಡಿಯನ್ನೂ ಖರೀದಿಸಲು ಯತ್ನಿಸಲಾಗಿದೆಯಂತೆ. ಅಲ್ಲದೇ TRS ಶಾಸಕರಾದ ಹರ್ಷವರ್ಧನ್‌ ರೆಡ್ಡಿ, ರೇಗ ಕಾಂತಾರಾವ್‌, ಗುವ್ವಲ ಬಾಲರಾಜ್‌ರನ್ನು ಖರೀದಿಸುವ ಯೋಜನೆ ಕೂಡ ಇತ್ತು ಎನ್ನಲಾಗಿದೆ. ಜೊತೆಗೆ ಒಬ್ಬೊಬ್ಬ ಶಾಸಕರಿಗೂ ತಲಾ 100 ಕೋಟಿ ರೂ. ಆಫರ್ ನೀಡಲಾಗಿದೆ ಎನ್ನುವ ಆರೋಪ ಕೂಡಾ ಕೇಳಿಬಂದಿದೆ.

ತನ್ನದೇ ಪಕ್ಷದಲ್ಲಿ ನಾಯಕರನ್ನು ಸೃಷ್ಟಿಸಿಕೊಳ್ಳಲಾಗದ ಬಿಜೆಪಿ, ಇತರೆ ಪಕ್ಷದ ನಾಯಕರಿಗೆ ಹಣದ ಆಮಿಷ ಒಡ್ಡಿ ‘ಆಪರೇಷನ್ ಕಮಲ’ದ ಮೂಲಕ ಪ್ರಜಾಪ್ರಭುತ್ವ ವಿರೋಧಿ ನಡೆಗೆ ತೆಲಂಗಾಣ ಭಾಗದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜಾಲತಾಣಗಳಲ್ಲಿ ಈಗಾಗಲೇ #TelanganaNotForSale ಅಭಿಯಾನ ಶುರುವಾಗಿದ್ದು, TRS (ಭಾರತ ರಾಷ್ಟ್ರ ಸಮಿತಿ) ಪಕ್ಷದ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಹೊರತುಪಡಿಸಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಪ್ರಮುಖ ನಾಯಕರನ್ನು ಕಳೆದುಕೊಳ್ಳುತ್ತಿದೆ. ಕೇರಳ, ತಮಿಳುನಾಡಿನಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನೇ ಸ್ಥಾಪಿಸಿಲ್ಲ. ಆಂದ್ರ ಮತ್ತು ತೆಲಂಗಾಣದಲ್ಲಿ ಒಂದೊಂದಾಗಿ ಬಿಜೆಪಿ ಪಕ್ಷದಿಂದ ಪ್ರಮುಖ ನಾಯಕರು ಶಾಸಕರನ್ನು ಬಿಜೆಪಿ ಕಳೆದುಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲೂ ರಾಜಕೀಯ ಅಸ್ತಿರತೆ ಇದ್ದು, ಅಲ್ಲಿನ ಪ್ರಮುಖ ಪಕ್ಷ ಶಿವಸೇನೆಯೊಂದಿಗಿನ ವೈರತ್ವ ದಿನೇ ದಿನೇ ಹೆಚ್ಚಾಗುತ್ತಿದೆ. ಏಕನಾಥ ಶಿಂಧೆ ನೇತೃತ್ವದಲ್ಲಿ ಸರ್ಕಾರ ರಚಿಸಿದ ಬಿಜೆಪಿ ಬಗ್ಗೆ ಶಿವಸೇನೆಗೆ ಅಸಮಾಧಾನವಿದೆ. ಹಾಗಾಗಿ ಸಧ್ಯಕ್ಕಂತೂ ಶಿವಸೇನೆಯೊಂದಿಗೆ ಬಿಜೆಪಿ ಸೇರುವ ಮಾತೇ ಇಲ್ಲ. ಇನ್ನು ಸಮೀಕ್ಷೆ ಮತ್ತು ಬಿಜೆಪಿ ಮೇಲಿನ ವ್ಯಾಪಕ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳೂ ಕಂಡುಬಂದಿದೆ. ಹಾಗೊಂದು ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ಆಗದೇ ಹೋದರೆ, ಮುಂದಿನ ದಿನಗಳಲ್ಲಿ ಇಡೀ ದಕ್ಷಿಣ ಭಾರತ ಬಿಜೆಪಿ ಮುಕ್ತ ಪ್ರದೇಶವಾಗಲಿದೆ.

ಕಳೆದ 2019 ರಿಂದ ಬಿಜೆಪಿಯು ತೆಲಂಗಾಣದಲ್ಲಿ “ಆಪರೇಷನ್ ಕಮಲ” ವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಪಕ್ಷವು ಇನ್ನೂ ಬಲವನ್ನು ಕಂಡುಕೊಳ್ಳದ ಮತ್ತೊಂದು ದಕ್ಷಿಣ ರಾಜ್ಯವಾಗಿದೆ. ಈ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಮತ್ತು ಬೆಂಬಲಿಗರ ನೇತೃತ್ವದಲ್ಲಿ ಸರ್ಕಾರ ರಚಿಸಿದಷ್ಟೇ ಸಲೀಸಾಗಿ ಎಲ್ಲಾ ರಾಜ್ಯಗಳಲ್ಲೂ ಸರ್ಕಾರ ರಚಿಸಬಹುದು ಎಂಬ ಬಿಜೆಪಿ ಕನಸಿಗೆ ತಣ್ಣೀರು ಎರಚಿದಂತಾಗಿದೆ. ತೆಲಂಗಾಣದ TRS ಶಾಸಕರ ಕಡೆಯಿಂದಲೇ ಬಂದ ಮಾಹಿತಿಯಂತೆ ಒಬ್ಬೊಬ್ಬ ಶಾಸಕರಿಗೆ 100 ಕೋಟಿಯ ಆಮಿಷ ಎಂದರೆ ಸಾಮಾನ್ಯ ಮಾತಲ್ಲ. ಆ ಮಟ್ಟಿಗೆ ಬಿಜೆಪಿ ಇತರೆ ಪಕ್ಷದ ಶಾಸಕರ ಕೊಳ್ಳಲು ಸಾವಿರಾರು ಕೋಟಿ ವ್ಯಯಕ್ಕೂ ಸಿದ್ದವಾಗಿದೆ ಎಂದರೆ ಬಿಜೆಪಿ ತನ್ನೊಳಗೆ ಅದೆಷ್ಟು ಭ್ರಷ್ಟ ಹಣ ಇಟ್ಟುಕೊಂಡಿರಬಹುದು ಎಂಬುದು ಸಧ್ಯದ ಪ್ರಶ್ನೆ.

Related Articles

ಇತ್ತೀಚಿನ ಸುದ್ದಿಗಳು