ಡೀಸೆಲ್ ಖಾಲಿ ಬಸ್ ಸಂಚಾರ ಬಂದ್ – ಕುಷ್ಟಗಿ ಡಿಪೊ ಎದುರು ಪ್ರತಿಭಟನೆ

ಕೊಪ್ಪಳ: ಡೀಸೆಲ್ (Diesel) ಕೊರತೆಯಿಂದ ಕುಷ್ಟಗಿ ಸಾರಿಗೆ ಘಟಕದ ಕೆಲವು ಮಾರ್ಗಗಳಲ್ಲಿ ಬಸ್ ಸಂಚಾರ (Bus) ಸ್ಥಗಿತಗೊಂಡಿರುವುದನ್ನು ಖಂಡಿಸಿ ಶಾಸಕ ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ (Bjp) ಕಾರ್ಯಕರ್ತರು ಬುಧವಾರ ಡಿಪೊ ಎದುರು ಪ್ರತಿಭಟನೆ (Protest) ನಡೆಸಿದರು.ಬಸ್‌ಗಳ ಸಂಚಾರ ಕಡಿಮೆಯಾಗಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಾರಿಗೆ ಘಟಕದಲ್ಲಿ ಡೀಸೆಲ್ ಲಭ್ಯವಿಲ್ಲದ ಕಾರಣ ಕೆಲವು ಮಾರ್ಗಗಳ ಬಸ್‌ಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯ ವೇಳೆ ಎರಡು ಖಾಲಿ ಕೊಡಗಳನ್ನು ಹಿಡಿದು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಯಿತು. ಸಂಗ್ರಹವಾದ ಹಣದಿಂದ ಐದು ಖಾಸಗಿ ವಾಹನಗಳನ್ನು ವ್ಯವಸ್ಥೆ ಮಾಡಿ, ತೊಂದರೆಗೆ ಸಿಲುಕಿದ್ದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ಕಳುಹಿಸಿಕೊಡಲಾಯಿತು.ಈ ವೇಳೆ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ್, ಸಾರಿಗೆ ಬಸ್‌ಗಳ ಸಂಚಾರ ಸ್ಥಗಿತದಿಂದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು. ಸಾರಿಗೆ ಘಟಕದಲ್ಲಿ ಹಣದ ಕೊರತೆಯಿಂದ ಡೀಸೆಲ್ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಸಾರಿಗೆ ಇಲಾಖೆಗೆ ₹8 ಸಾವಿರ ಕೋಟಿ ನಷ್ಟವಾಗಿದೆ ಎಂದು ಸಚಿವರೇ ಹೇಳಿರುವುದನ್ನು ಉಲ್ಲೇಖಿಸಿದ ಅವರು, ಕುಷ್ಟಗಿಯಲ್ಲಿ ಎದುರಾಗಿರುವ ಡೀಸೆಲ್ ಸಮಸ್ಯೆ ರಾಜ್ಯ ಸಾರಿಗೆ ವ್ಯವಸ್ಥೆಯ ಸ್ಥಿತಿಗೆ ಉದಾಹರಣೆಯಾಗಿದೆ ಎಂದು ಟೀಕಿಸಿದರು.ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದು ಕುಷ್ಟಗಿಯಲ್ಲಿನ ಪರಿಸ್ಥಿತಿಯಿಂದಲೇ ಸ್ಪಷ್ಟವಾಗುತ್ತಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಆರೋಪಿಸಿದರು. ಸಾರ್ವಜನಿಕರಿಗೆ ಅಗತ್ಯವಾಗಿರುವ ಸಾರಿಗೆ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಆಗ್ರಹಿಸಿದರು.

Related Articles

ಇತ್ತೀಚಿನ ಸುದ್ದಿಗಳು