ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಆನೆ ದಾಳಿ ನೀರಾವರಿ ಯೋಜನೆಗಳ ಕೊಡುಗೆ

PPrasad Raxid

Prasad Raxid ಅಂಕಣ

• 2 ನಿಮಿಷದ ಓದು

ಆನೆ ದಾಳಿ ನೀರಾವರಿ ಯೋಜನೆಗಳ ಕೊಡುಗೆ

ಇದೀಗ  ಸುಮಾರು ಹದಿನೈದು ವರ್ಷಗಳಿಂದ ಆನೆಗಳಿಂದ ಹಾವಳಿ ಹೆಚ್ಚಾಗಿ ಪ್ರಾರಂಭವಾಯಿತು. ಈ ವಿದ್ಯಮಾನ ನಮ್ಮ ನೀರಾವರಿ ಯೋಜನೆಗಳ ಕೊಡುಗೆ ಎನ್ನುತ್ತಾರೆ ʼಕಾಡು ಹೆಜ್ಜೆಯ ಜಾಡು ಹಿಡಿದುʼ ಅಂಕಣದಲ್ಲಿ ರಂಗಕರ್ಮಿ ಪ್ರಸಾದ್‌ ರಕ್ಷಿದಿ.

ಕೇವಲ ಮೂವತ್ತು ವರ್ಷಗಳ ಹಿಂದಿನ ವಿದ್ಯಮಾನಗಳನ್ನು ಗಮನಿಸಿದರೆ ಆನೆದಾಳಿಯೆಂಬ ವಿಚಾರವೇ ಕಂಡುಬರುವುದಿಲ್ಲ. ಅಪರೂಪಕ್ಕೊಮ್ಮೆ ಆನೆಗಳು ದಾರಿತಪ್ಪಿ ಬಂದಾಗಲೋ ಇಲ್ಲವೇ ಮದವೇರಿದ ಆನೆಗಳು ಮಾಡಿದ ಹಾವಳಿಯೋ ಬಿಟ್ಟರೆ ಈ ರೀತಿ ವ್ಯಾಪಕವಾಗಿ ಮತ್ತು ನಿರಂತರವಾಗಿ ಆನೆಗಳು ಜನವಸತಿಗಳತ್ತ ಬಂದುದೇ ಇಲ್ಲ. ಇದೀಗ  ಸುಮಾರು ಹದಿನೈದು ವರ್ಷಗಳಿಂದ ಆನೆಗಳಿಂದ ಹಾವಳಿ ಹೆಚ್ಚಾಗಿ ಪ್ರಾರಂಭವಾಯಿತು.

ಈ ರೀತಿ ಉಪಟಳ ನೀಡುವ ಆನೆಗಳಲ್ಲಿ ಎರಡು ವಿಧವಾದ ಆನೆಗಳಿವೆ. ಮೊದಲನೆಯವು ಹೆಚ್ಚು ತೊಂದರೆ ಕೊಡುವ, ಮತ್ತು ಯಾವಾಗಲೂ ಜನವಸತಿಗಳ ಪಕ್ಕದಲ್ಲೇ ಇರುವ ಆನೆಗಳ ಗುಂಪು. ಇವು ಬಯಲುಸೀಮೆಗೂ ಧಾಳಿಮಾಡುತ್ತವೆ. ಹಗಲು ಹತ್ತಿರದಲ್ಲಿರುವ ಕಾಡಿನಲ್ಲಿ ಆಶ್ರಯ ಪಡೆದು ರಾತ್ರಿವೇಳೆ ಆಹಾರ ಅರಸಿ ಹೊರಡುತ್ತವೆ. ಈ ವಿದ್ಯಮಾನ ನಮ್ಮ ನೀರಾವರಿ ಯೋಜನೆಗಳ ಕೊಡುಗೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜಲಾಶಯಗಳ ನಿರ್ಮಾಣವಾದಾಗಲೆಲ್ಲ ಆನೆಗಳ ಆಶ್ರಯ ತಾಣಗಳ ಕೆಲವು ಪ್ರದೇಶಗಳು ಮುಳುಗಡೆಯಾಗುತ್ತವೆ. ಆನೆಗಳು ಸ್ಥಳಾಂತರಗೊಳ್ಳುತ್ತವೆ. ಹಾಸನ -ಕೊಡಗಿನ ಗಡಿಭಾಗಗಳಲ್ಲಿ, ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳು ಈ ಬಗೆಯವು. ತಮ್ಮ ಸಹಜ ನೆಲೆಗಳನ್ನು ಕಳೆದುಕೊಂಡಿರುವ  ಈ ಆನೆಗಳು ಅನಿವಾರ್ಯವಾಗಿ ಹಳ್ಳಿಗಳತ್ತ ಬಂದು ಸುಲಭದಲ್ಲಿ ಸಿಗುವ ಬೆಳೆಗಳನ್ನು ತಿಂದು ಬದುಕುವುದನ್ನು ಕಲಿತುಬಿಟ್ಟಿವೆ. ಕಾಡಿನಲ್ಲಿ ಅಲೆದು ಆಹಾರ ಸಂಪಾದಿಸುವುದನ್ನು ಸಂಪೂರ್ಣವಾಗಿ ಮರೆತಿರುವ  ಈ ಆನೆಗಳು ಜನವಸತಿಗಳ ಪಕ್ಕದಲ್ಲೇ ಇರುತ್ತವೆ.

ಇವು ಸಾಮಾನ್ಯವಾಗಿ ರಾತ್ರಿ ವೇಳೆ ಬೆಳೆತಿಂದು- ನಾಶಮಾಡಿ ಬೆಳಗಿನ ಜಾವ ತಮ್ಮ ಅಡಗುದಾಣ ಸೇರುತ್ತವೆ. ಒಂದು ಕಾಡಾನೆ ತನ್ನ ಆಹಾರಕ್ಕಾಗಿ ದಿನವೊಂದಕ್ಕೆ ಹತ್ತು ಹದಿನೈದು ಕಿ.ಮೀಗಳಷ್ಟು ಸಂಚರಿಸುತ್ತದೆ. ಅಷ್ಟು ವಿಸ್ತಾರವಾದ ಪ್ರದೇಶ  ಅಡಗುತಾಣಗಳಲ್ಲಿ ಇಲ್ಲ. ಇವು ಮುಂಜಾನೆ ಸ್ವಸ್ಥಾನ ಸೇರುವ ತವಕದಲ್ಲಿರುವಾಗ ಅಡ್ಡ ಸಿಕ್ಕಿದ ಯಾವುದೇ ಪ್ರಾಣಿ ಅಥವಾ ಮನುಷ್ಯರ ಮೇಲೆ ಧಾಳಿ ಮಾಡುತ್ತವೆ. ಯಂತ್ರೋಪಕರಣಗಳನ್ನೂ ಹಾಳುಮಾಡುತ್ತವೆ. ಆ ಹೊತ್ತಿನಲ್ಲಿ ಹೊಲಗಳತ್ತ ಹೊರಟ ರೈತ ಕಾರ್ಮಿಕರೇ ಹೆಚ್ಚಾಗಿ ಇಂಥ ಆನೆಗಳಿಂದ ಧಾಳಿಗೊಳಗಾಗಿದ್ದಾರೆ. ಈ ಆನೆಗಳನ್ನು ಹಿಡಿದು ಸ್ಥಳಾಂತರಿಸಿದರೂ ಅವು ಮರಳಿ ಬರುತ್ತವೆ. ಇಂತಹ ಆನೆಗಳನ್ನು ಪುಂಡಾನೆಗಳೆಂದು ಕರೆಯುತ್ತಾರೆ.

ಎರಡನೆಯ ವಿಧದ ಆನೆಗಳು ಈ ರೀತಿಯವಲ್ಲ. ಅಪರೂಪಕ್ಕೊಮ್ಮೆ ದಟ್ಟ ಅರಣ್ಯಗಳಿಂದ ಹೊರಬಂದು ಹಿಂದಿರುಗುವ ಈ ಆನೆಗಳಿಗೆ ಬಾಳೆ- ಬೈನೆಗಳಂತಹ ಸಸ್ಯಗಳೇ ಸುಲಭದ ತುತ್ತು. ಇವುಗಳು ಇತರೆ ಬೆಳೆಗಳನ್ನು ನಾಶಮಾಡುವುದು ಕಡಿಮೆ. ಹೆಚ್ಚಿನ ಸಂದರ್ಭಗಳಲ್ಲಿ ಇವು ದಾರಿ ತಪ್ಪಿ ಬರುವ ಆನೆಗಳು. ಸಾಮಾನ್ಯ ಪರಿಸ್ಥಿತಿಯಲ್ಲಿ ಇಂತಹ ಆನೆಗಳು ನೇರವಾಗಿ ಮನುಷ್ಯನನ್ನೇ ಗುರಿಯಾಗಿಸಿ ಧಾಳಿ ಮಾಡುವುದಿಲ್ಲ. ಕೆಲವುಬಾರಿ ಇವುಗಳನ್ನು ಓಡಿಸಲೆಂದು ಮಾಡಿದ ಗಲಾಟೆಯಿಂದ ಸಿಟ್ಟಿಗೆದ್ದು ಅಥವಾ ಇವುಗಳನ್ನು ಗಾಯಗೊಳಿಸಿದ ಸಂದರ್ಭಗಳಲ್ಲಿ ರೊಚ್ಚಿಗೆದ್ದು ಧಾಳಿ ಮಾಡಿವೆ. ಇವು ಹಿಂಡು ಹಿಂಡಾಗಿ ಬರುವುದು ಕಡಿಮೆ.

ಮಲೆನಾಡಿನಲ್ಲಿ ಕಾಡು ಪ್ರಾಣಿಗಳು ಅರಣ್ಯದ ಅಂಚಿನ ಹಳ್ಳಗಳಿಗೆ ಬಂದುಹೋಗುವುದು ಅನೇಕ ವರ್ಷಗಳಿಂದಲೂ ಮಾಮೂಲಾದ ಸಂಗತಿಯಾಗಿತ್ತು. ಮಲೆನಾಡಿನ ಜನ ಕಾಡುಪ್ರಾಣಿಗಳ ಜೊತೆಗೆ ಸಹಬಾಳ್ವೆಯನ್ನು ಸಾಧಿಸಿ ಕೊಂಡಿದ್ದರು. ಇಂದು ರಕ್ಷಿತಾರಣ್ಯ ಆಗಿರುವ ಮಲೆನಾಡಿನ ತಾಲ್ಲೂಕುಗಳ ದಟ್ಟ ಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಸಕಲೇಶಪುರ ತಾಲ್ಲೂಕಿನ ಚಂದ್ರಮಂಡಲ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆಗೂಡು, ಎಂಬ ಹೆಸರಿನ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದು ಕೂಡಾ ಜನವಸತಿಯಿರುವ ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯುತ್ತದೆ. ಹಾಗಾದರೆ ಇದೆಲ್ಲ ಎಂದಿನಿಂದ ಪ್ರಾರಂಭವಾಯಿತು? ಏಕೆ ಪ್ರಾರಂಭವಾಯಿತು? ಮುಂದೆ ನೋಡೋಣ.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ.

PPrasad Raxid

Prasad Raxid

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು