ದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಅಧಿಕಾರದಿಂದ ವಜಾಗೊಳಿಸಲು ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಮಹಾಭಿಯೋಗ ನಿರ್ಣಯ ಮಂಡಿಸಲು ಒಪ್ಪಿಕೊಂಡಿವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಗುರುವಾರ ಬಹಿರಂಗಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಅಥವಾ ಲೋಕಸಭೆಯಲ್ಲಿ ಮಹಾಭಿಯೋಗ ನಿರ್ಣಯ ಮಂಡಿಸಬೇಕೆ ಎಂದು ನಿರ್ಧರಿಸಿದ ನಂತರ, ಆಯಾ ಪಕ್ಷಗಳ ಸದಸ್ಯರಿಂದ ಸಹಿಗಳನ್ನು ಸಂಗ್ರಹಿಸಲಾಗುವುದು ಎಂದು ಅವರು ಹೇಳಿದರು.
ಲೋಕಸಭೆಯಲ್ಲಿ ಮಹಾಭಿಯೋಗ ನಿರ್ಣಯ ಮಂಡಿಸಲು, ಕನಿಷ್ಠ 100 ಸಂಸದರು ಮತ್ತು ರಾಜ್ಯಸಭೆಯಲ್ಲಿ ಕನಿಷ್ಠ 50 ಸದಸ್ಯರು ಅಗತ್ಯವಿದೆ. ಈ ತಿಂಗಳ 21ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗಲಿದೆ.
ರಾಜ್ಯಸಭೆ ಅಥವಾ ಲೋಕಸಭೆಯಲ್ಲಿ ಮಹಾಭಿಯೋಗ ನಿರ್ಣಯ ಮಂಡಿಸಿದ ನಂತರ ಅಧ್ಯಕ್ಷರು ಅಥವಾ ಸ್ಪೀಕರ್ ತನಿಖೆ ನಡೆಸಲು ಮೂರು ಸದಸ್ಯರ ಸಮಿತಿಯನ್ನು ರಚಿಸುತ್ತಾರೆ. ನ್ಯಾಯಮೂರ್ತಿ ವರ್ಮಾ ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದಾಗ ಅವರ ನಿವಾಸದಲ್ಲಿ ಸುಟ್ಟ ಕರೆನ್ಸಿ ನೋಟುಗಳ ಬಂಡಲ್‌ಗಳು ಪತ್ತೆಯಾಗಿತ್ತು.