ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧದ ದೋಷಾರೋಪಣೆ ನೋಟಿಸ್ ವಜಾ: ಸಭಾಪತಿ ಹಾಗೂ ಸ್ಪೀಕರ್ ನಿರ್ಧಾರ

ದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಪಕ್ಷಗಳು ಸಲ್ಲಿಸಿದ್ದ ದೋಷಾರೋಪಣೆ (Impeachment) ನಿರ್ಣಯದ ನೋಟಿಸ್‌ಗಳನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಸೋಮವಾರ ತಿರಸ್ಕರಿಸಿದ್ದಾರೆ. ಜ್ಞಾನೇಶ್ ಕುಮಾರ್ ಅವರು “ಪಕ್ಷಪಾತಿ ಮತ್ತು ತಾರತಮ್ಯದ” ನಡವಳಿಕೆ ಹೊಂದಿದ್ದಾರೆ ಹಾಗೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಮೂಲಕ “ಸಾರ್ವಜನಿಕ ವಿಶ್ವಾಸವನ್ನು ಕುಂದಿಸುತ್ತಿದ್ದಾರೆ” ಎಂದು ಆರೋಪಿಸಿ ಪ್ರತಿಪಕ್ಷಗಳು ಈ ನೋಟಿಸ್ ನೀಡಿದ್ದವು.

ಭಾರತದ ಸಂಸದೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಆಗ್ರಹಿಸಿ ಮಾರ್ಚ್ 12 ರಂದು ನೋಟಿಸ್ ನೀಡಲಾಗಿತ್ತು. ಲೋಕಸಭೆಯಲ್ಲಿ 130 ಸಂಸದರು ಮತ್ತು ರಾಜ್ಯಸಭೆಯಲ್ಲಿ 63 ಸಂಸದರು ಈ ನೋಟಿಸ್‌ಗೆ ಸಹಿ ಹಾಕಿದ್ದರು. ಆದರೆ, ಸಲ್ಲಿಕೆಯಾದ 25 ದಿನಗಳ ನಂತರ ಎರಡೂ ಸದನಗಳ ಸಚಿವಾಲಯಗಳು ತಮ್ಮ ದೈನಂದಿನ ಬುಲೆಟಿನ್‌ನಲ್ಲಿ ಈ ನೋಟಿಸ್‌ಗಳನ್ನು ತಿರಸ್ಕರಿಸಿರುವುದಾಗಿ ಪ್ರಕಟಿಸಿವೆ. ನ್ಯಾಯಾಧೀಶರ (ವಿಚಾರಣೆ) ಕಾಯ್ದೆ, 1968 ರ ಅಡಿಯಲ್ಲಿ ತಮಗೆ ಇರುವ ಅಧಿಕಾರವನ್ನು ಬಳಸಿ ಸ್ಪೀಕರ್ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ, ಆದರೆ ತಿರಸ್ಕಾರಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ.

ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ನಾಯಕ ಡೆರೆಕ್ ಒ’ಬ್ರಿಯಾನ್, “ನೋಟಿಸ್ ತಿರಸ್ಕರಿಸಲಾಗಿದೆ, ಆದರೆ ಕಾರಣ ಮಾತ್ರ ನೀಡಿಲ್ಲ. ಬಿಜೆಪಿ ನಮ್ಮ ಸಂಸತ್ತನ್ನು ನಿರಂತರವಾಗಿ ಅಪಹಾಸ್ಯ ಮಾಡುತ್ತಿದೆ” ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಈ ಹಿಂದೆ ನ್ಯಾಯಮೂರ್ತಿಯೊಬ್ಬರ ವಿರುದ್ಧದ ಅರ್ಜಿಯನ್ನು ಅಂಗೀಕರಿಸಿದ್ದ ಮಾಜಿ ಅಧ್ಯಕ್ಷ ಜಗದೀಪ್ ಧಂಖರ್ ಅವರ ರಾಜೀನಾಮೆಯನ್ನು ನೆನಪಿಸುವ ಮೂಲಕ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಜ್ಞಾನೇಶ್ ಕುಮಾರ್ ಅವರ ನೇಮಕಾತಿಯೇ ಸಂಶಯಾಸ್ಪದವಾಗಿದೆ ಮತ್ತು ಅವರು ಕಾರ್ಯಾಂಗದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂಬುದು ಪ್ರತಿಪಕ್ಷಗಳ ಪ್ರಮುಖ ಆರೋಪವಾಗಿತ್ತು. ಅದರಲ್ಲೂ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ‘ಮತಗಳ ಕಳ್ಳತನ’ದ ಕುರಿತಾದ ಹೇಳಿಕೆಗೆ ಅಫಿಡವಿಟ್ ಸಲ್ಲಿಸಲು ಅಂತಿಮ ಗಡುವು ನೀಡಿದ್ದ ಕುಮಾರ್, ಇದೇ ರೀತಿಯ ಆರೋಪ ಮಾಡಿದ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಆರೋಪಿಸಲಾಗಿದೆ. 74 ವರ್ಷಗಳ ಇತಿಹಾಸದಲ್ಲಿ ದೋಷಾರೋಪಣೆ ನೋಟಿಸ್ ಎದುರಿಸಿದ ಮೊದಲ ಸಿಇಸಿ ಎಂಬ ಅಪಖ್ಯಾತಿಗೆ ಜ್ಞಾನೇಶ್ ಕುಮಾರ್ ಭಾಜನರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು