Friday, January 23, 2026

ಸತ್ಯ | ನ್ಯಾಯ |ಧರ್ಮ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮನೇಗ್ರಾ ಮರುನಾಮಕರಣಕ್ಕೆ ತೀವ್ರ ವಿರೋಧ – ಸುಧೀರ್ ಕುಮಾರ್ ಮುರೋಳ್ಳಿ

ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನೇಗ್ರಾ)ಗೆ ಮರುನಾಮಕರಣ ಮಾಡಿರುವ ಕ್ರಮಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಮುಖ್ಯ ಸಂಯೋಜಕ ಸುಧೀರ್ ಕುಮಾರ್ ಮುರೋಳ್ಳಿ, ಈ ಕ್ರಮವು ಮಹಾತ್ಮ ಗಾಂಧಿ ಹಾಗೂ ಗ್ರಾಮೀಣ ಭಾರತದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಹುಬ್ಬಳ್ಳಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅತಿಥಿಗಳಾಗಿ ಮಾತನಾಡಿದ ಸುಧೀರ್ ಕುಮಾರ್ ಮುರೋಳ್ಳಿಯವರು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಮಾತನಾಡಿದರು.

ಗ್ರಾಮ ಸ್ವರಾಜ್ಯದ ಕನಸನ್ನು ಮಹಾತ್ಮ ಗಾಂಧಿಯವರು ಕಂಡಿದ್ದರು. ಬಾಬಾಸಾಹೇಬ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ಸ್ವೀಕಾರವಾದ ನಂತರ ಗ್ರಾಮ ಆಡಳಿತ, ಅಧಿಕಾರ ವಿಕೇಂದ್ರೀಕರಣದ ಕುರಿತು ವ್ಯಾಪಕ ಚರ್ಚೆಗಳು ನಡೆದವು. ಸ್ಥಳೀಯ ಸಂಸ್ಥೆಗಳಿಗೆ ಮಾನ್ಯತೆ ನೀಡಿದ ಈ ಯೋಜನೆ ಕಾಂಗ್ರೆಸ್ ಸರ್ಕಾರದದ್ದೇ ಎಂದು ಅವರು ಹೇಳಿದರು.

ವಿದರ್ಭದಲ್ಲಿ ರೈತ ಆತ್ಮಹತ್ಯೆಗಳು ಹೆಚ್ಚಾದ ಸಂದರ್ಭದಲ್ಲಿ ಯುಪಿಎ ಸರ್ಕಾರ ರೈತರ ನೆರವಿಗಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದಿತು. ವಿಶ್ವದಾದ್ಯಂತ ಗಮನ ಸೆಳೆದ ಈ ಮಹತ್ವದ ಯೋಜನೆಗೆ ಮಹಾತ್ಮ ಗಾಂಧಿಯವರ ಹೆಸರನ್ನು ಇಟ್ಟು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತು. ಆ ಸಮಯದಲ್ಲಿ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರಿಂದಲೂ ವಿರೋಧ ಇರಲಿಲ್ಲ ಎಂದು ಮುರೋಳ್ಳಿ ನೆನಪಿಸಿದರು.

ಮನೇಗ್ರಾ ಯೋಜನೆ ಜನರ ಕೈಯಲ್ಲಿದ್ದ ಯೋಜನೆ. ಬಡವರು, ಕೂಲಿ ಕಾರ್ಮಿಕರು ಜಾಬ್ ಕಾರ್ಡ್ ಮೂಲಕ ಸ್ಥಳೀಯ ಆಡಳಿತವನ್ನು ಸಂಪರ್ಕಿಸಿದಾಗ ಕೆಲಸ ಸಿಗುತ್ತಿತ್ತು. ಈ ಯೋಜನೆಯಿಂದ ಗ್ರಾಮೀಣ ಅಭಿವೃದ್ಧಿ ಸಾಧ್ಯವಾಗಿ ಬಡವರ ಬದುಕು ಹಸನಾಯಿತು. ಆದರೆ ಈಗ ಕೇಂದ್ರ ಸರ್ಕಾರ ಹೆಸರಿನ ಬದಲಾವಣೆ ಮೂಲಕ ರಾಮನಿಗೆ ಅವಮಾನ ಮಾಡಿದೆ. ‘ವೀಜಿ ರಾಮಜೀ’ ಎಂಬ ಹೆಸರಿಗೆ ಯಾವುದೇ ಅರ್ಥವಿಲ್ಲ; ನಿಜವಾದ ರಾಮನ ಮಹತ್ವವನ್ನು ಕುಗ್ಗಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದರು.

ಮನೇಗ್ರಾ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿರುವುದು ಗಾಂಧಿ ವಿರೋಧಿತನದ ಸ್ಪಷ್ಟ ಸಾಕ್ಷಿ. ಜೊತೆಗೆ, ಕಡಿಮೆ ಬೆಳೆ ಬೆಳೆಯುವ ಪ್ರದೇಶಗಳಲ್ಲಿ ಯೋಜನೆ ಜಾರಿಗೊಳಿಸದ ಕಾಯ್ದೆಗಳು ಗ್ರಾಮೀಣ ಭಾರತದ ವಾಸ್ತವತೆಗೆ ವಿರುದ್ಧವಾಗಿವೆ. ಜನರ ಪರಮಾಧಿಕಾರವನ್ನು ಕೇಂದ್ರ ಸರ್ಕಾರದ ಪರಮಾಧಿಕಾರಕ್ಕೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು.

ಹಿಂದೆ 100ಕ್ಕೆ 100ರಷ್ಟು ಕೇಂದ್ರ ಸರ್ಕಾರದ ಹೊಣೆಗಾರಿಕೆಯಿದ್ದ ಯೋಜನೆಯನ್ನು ಈಗ 60:40ರ ಅನುಪಾತದಲ್ಲಿ ಕೇಂದ್ರ–ರಾಜ್ಯಗಳ ಹೊಣೆಗಾರಿಕೆಗೆ ಹಂಚಲಾಗಿದೆ. ಇದರಿಂದ ಯೋಜನೆಯ ಪರಿಣಾಮಕಾರಿತ್ವ ಕುಂದಲಿದೆ. ಅತಿಯಾದ ತಾಂತ್ರಿಕತೆಗೆ ಒತ್ತು ನೀಡಿ ಬಡವರ ಹೊಟ್ಟೆಗೆ ಹೊಡೆಯುವಂತಹ ಹೊಸ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ ಎಂದು ಮುರೋಳ್ಳಿ ಟೀಕಿಸಿದರು.

“ಹಳ್ಳಿಗಳು ಮತ್ತು ಗ್ರಾಮೀಣ ಭಾರತವನ್ನು ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಮೊದಲು ಮನೇಗ್ರಾ ಯೋಜನೆ ನ್ಯಾಯಪರ, ಜನಪರ ಹಾಗೂ ಬಡವರ ಪರವಾಗಿತ್ತು. ಈಗಿನ ಬದಲಾವಣೆಗಳು ಅದರ ಆತ್ಮವನ್ನೇ ಹಾಳು ಮಾಡುತ್ತಿವೆ,” ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page