Thursday, January 8, 2026

ಸತ್ಯ | ನ್ಯಾಯ |ಧರ್ಮ

ಮನರೇಗಾ ರದ್ದು–VBGRAMG ಕಾಯಿದೆ ವಿರೋಧ: ಕಾನೂನು ಸಮರಕ್ಕೆ ಸಂಪುಟ ಸಭೆಯಲ್ಲಿ ತೀರ್ಮಾನ

ರಾಜ್ಯದಲ್ಲಿ ಮನರೇಗಾ ಕಾಯಿದೆಯನ್ನು ರದ್ದುಪಡಿಸಿ, ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ VBGRAMG ಕಾಯಿದೆಯ ಸಾಂವಿಧಾನಿಕ, ಕಾನೂನು ಹಾಗೂ ಸಾಮಾಜಿಕ ಪರಿಣಾಮಗಳ ಕುರಿತು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು. ಈ ಕುರಿತು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಿದ ಸಚಿವ ಸಂಪುಟ, ಕಾಯಿದೆಯ ವಿವಿಧ ನಿಬಂಧನೆಗಳನ್ನು ಪರಿಶೀಲಿಸಿತು.

ಚರ್ಚೆಯ ಬಳಿಕ VBGRAMG ಕಾಯಿದೆಯನ್ನು ಅಂಗೀಕರಿಸದಿರಲು ಸರ್ವಾನುಮತದಿಂದ ತೀರ್ಮಾನಿಸಲಾಗಿದ್ದು, ಕಾಯಿದೆಯ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಲಾಗಿದೆ.

VBGRAMG ಕಾಯಿದೆಗೆ ವಿರೋಧದ ಪ್ರಮುಖ ಆಧಾರಗಳು:
* ಭಾರತೀಯ ಸಂವಿಧಾನದ 21ನೇ ವಿಧಿಗೆ ವಿರುದ್ಧ
ಈ ಕಾಯಿದೆಯು ಉದ್ಯೋಗದ ಹಕ್ಕು ಮತ್ತು ನಾಗರಿಕರ ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ.
* ಪಂಚಾಯತ್ ವ್ಯವಸ್ಥೆಯ ಹಕ್ಕುಗಳಿಗೆ ಧಕ್ಕೆ
ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಆಶಯಗಳಿಗೆ ವಿರುದ್ಧವಾಗಿ ಪಂಚಾಯತ್‌ಗಳ ನ್ಯಾಯಸಮ್ಮತ ಅಧಿಕಾರಗಳನ್ನು ಕಿತ್ತುಕೊಳ್ಳಲಾಗಿದೆ. ತಳಮಟ್ಟದ ಯೋಜನಾ ಸ್ವಾತಂತ್ರ್ಯಕ್ಕೆ ರಾಜಿಯಾಗಿದೆ.
* ಒಕ್ಕೂಟ ವ್ಯವಸ್ಥೆಗೆ ಗಂಭೀರ ಹೊಡೆತ
ರಾಜ್ಯಗಳನ್ನು ಸಮಾಲೋಚನೆ ಪ್ರಕ್ರಿಯೆಯಿಂದ ಹೊರಗಿಟ್ಟು, ಒಟ್ಟು ವೆಚ್ಚದ 40%ನ್ನು ರಾಜ್ಯಗಳು ಭರಿಸಬೇಕೆಂದು ಒತ್ತಾಯಿಸಲಾಗಿದೆ. ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನಿಯಮಗಳು ಮತ್ತು ಷರತ್ತುಗಳನ್ನು ವಿಧಿಸಿದೆ.
* ಗ್ರಾಮೀಣ ಜನರ ಸಾಮಾಜಿಕ–ಆರ್ಥಿಕ ಹಕ್ಕುಗಳ ಉಲ್ಲಂಘನೆ
ಕೇಂದ್ರ ಸರ್ಕಾರ ಸೂಚಿಸಿದ ಪ್ರದೇಶಗಳಲ್ಲಿ ಮಾತ್ರ ಕೆಲಸ ಒದಗಿಸಲಾಗುತ್ತಿದ್ದು, ರಾಜ್ಯಗಳು ನಿಗದಿಪಡಿಸಿದ ಕನಿಷ್ಠ ವೇತನಕ್ಕೆ ಯಾವುದೇ ಖಾತರಿಯಿಲ್ಲ. ಕೇಂದ್ರ ನಿಗದಿಪಡಿಸಿದ ದರದಲ್ಲಿ ವೇತನ ನೀಡುವ ವ್ಯವಸ್ಥೆ ಅನ್ಯಾಯಕರವಾಗಿದೆ.
* ಗ್ರಾಮ ಸ್ವರಾಜ್ ತತ್ವಕ್ಕೆ ವಿರುದ್ಧ
ಮಹಾತ್ಮ ಗಾಂಧೀಜಿ ಕನಸಿನ ಗ್ರಾಮ ಸ್ವರಾಜ್‌ಗೆ ಈ ಕಾಯಿದೆ ವಿರುದ್ಧವಾಗಿದೆ. ಪಂಚಾಯತ್‌ಗಳಿಗೆ ಸ್ಥಳೀಯ ಅಗತ್ಯತೆ ಹಾಗೂ ಕಾಮಗಾರಿಗಳ ಆದ್ಯತೆ ನಿರ್ಧರಿಸುವ ಸ್ವಾತಂತ್ರ್ಯವಿಲ್ಲ.

ಮುಂದಿನ ಕ್ರಮ:
VBGRAMG ಕಾಯಿದೆಯ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಜೊತೆಗೆ, ವಿಶೇಷ ಗ್ರಾಮ ಸಭೆಗಳನ್ನು ನಡೆಸಿ ಈ ಕಾಯಿದೆಯ ದುಷ್ಪರಿಣಾಮಗಳ ಕುರಿತು ಜನರಿಗೆ ಅರಿವು ಮೂಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಜನವಿರೋಧಿ ಕಾಯಿದೆಯನ್ನು ಜನಸಾಮಾನ್ಯರ ನ್ಯಾಯಾಲಯಕ್ಕೆ ಕೊಂಡೊಯ್ಯಲಾಗುವುದು ಎಂದು ಸಚಿವ ಸಂಪುಟ ಸ್ಪಷ್ಟಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page