Thursday, June 13, 2024

ಸತ್ಯ | ನ್ಯಾಯ |ಧರ್ಮ

ಹಂಗೇರಿಯ ಅಂಬೇಡ್ಕರ್ ಶಾಲೆಯಲ್ಲಿ ಯೂರೋಪಿನ ದಮನಿತರು!

ಹಂಗೇರಿಯ  ಸಣ್ಣ ಪಟ್ಟಣವಾದ ಸಜೋಕಾಜಾದ ಐದು ಸ್ಥಳಗಳಲ್ಲಿ ಯುರೋಪಿನ ಅಸ್ಪೃಶ್ಯರಾದ ರೋಮಾ ಜನರಿಗಾಗಿ ಡಾ. ಅಂಬೇಡ್ಕರ್ ಬುದ್ಧಿಸ್ಟ್ ಶಾಲೆಯನ್ನು ಆರಂಭಿಸಿ  ಅಂಬೇಡ್ಕರ್ ಅವರ ಬೋಧನೆಗಳ ಮೂಲಕ ಭವಿಷ್ಯದ ಸವಾಲುಗಳಿಗೆ ಅವರನ್ನು ಸಿದ್ಧ ಗೊಳಿಸುಲ್ಲಿ ಟಿಬೋರ್ ಮತ್ತು ಇನ್ನೊಬ್ಬ ರೋಮಾ ನಾಯಕ  ಜಾನೋಸ್ ಹಂಗೇರಿ  ಪ್ರಯತ್ನಿಸುತ್ತಿದ್ದಾರೆ. ಅಂಬೇಡ್ಕರ್‌ ನೆನಕೆಯಲ್ಲಿ ರಂಜಿತಾ ಜಿ ಎಚ್‌ ಬರೆದಿರುವ ಲೇಖನ ಇಲ್ಲಿದೆ. 

ಒಂದು ವರ್ಷದ ಉಕ್ರೇನ್ -ರಷ್ಯಾದ ಯುದ್ಧದಿಂದಾಗಿ  ಪೂರ್ವ ಯೂರೋಪಿನ ಬಡ  ದೇಶಗಳಿಂದ ಹಲವು ಸಾವಿರ ನಿರಾಶ್ರಿತರು ಹಾಗೂ ನಾಗರೀಕರು ಉತ್ತಮ ಜೀವನ – ಆಶ್ರಯ ಬಯಸಿ  ಜರ್ಮನಿ ಹಾಗೂ ಇತರೆ ದೇಶಗಳಿಗೆ ವಲಸೆ ಬಂದರು. ರಷ್ಯಾದ ನೆರೆಯ ಪುಟ್ಟ ಮಾಜಿ ಸೋವಿಯತ್  ರಾಷ್ಟ್ರ  ಮೊಲ್ಡೊವಾದಲ್ಲಿ ಕೆಲ ಸಮಯ  ನೆಲೆಸಿದ್ದ  ಉಕ್ರೇನ್ ನಾಗರಿಕರು ಹಾಗೂ ಇತರೆ ಮಾಲ್ಡೋವಾದ ನಾಗರಿಕರು ಬರ್ಲಿನ್‌ ಪ್ರವೇಶಿಸುವಾಗ  ಪೂರ್ವಗ್ರಹ ಪೀಡಿತ  ಅಧಿಕಾರಿಗಳು  ಅವರನ್ನು  ಸಾಮಾನ್ಯವಾಗಿ ‘ರೋಮಾ’ ಎಂದು ಭಾವಿಸಿದ್ದರಿಂದ  ಪ್ರವೇಶ ನಿರಾಕರಣೆಗೊಳಗಾಗುವಂಥ ಹಲವು ನಕಾರಾತ್ಮಕ ಅನುಭವಗಳನ್ನು ಎದುರಿಸಬೇಕಾಯಿತು. 

 ಜರ್ಮನ್ ಸರ್ಕಾರದಲ್ಲಿ ರೋಮಾ ಮತ್ತು ಸಿಂಟಿ ವಿರುದ್ಧದ  ತಾರತಮ್ಯ ನಿವಾರಣಾ ಯೋಜನೆಯ ಹೊಣೆ ಹೊತ್ತಿರುವ ಫರ್ಸ್ಟ್  ಕಮಿಷನರ್ ಮೆಹ್ಮೆತ್ ಡೈಮಾಗುಲರ್, ಉಕ್ರೇನ್‌ನಿಂದ ಜರ್ಮನಿವರೆಗಿನ  ತಮ್ಮ ಪ್ರಯಾಣದ ಎಲ್ಲಾ ಹಂತಗಳಲ್ಲಿ ಉಕ್ರೇನ್‌ವಾಸಿ ರೋಮಾ ಜನಾಂಗದ  ವಿರುದ್ಧ ತಾರತಮ್ಯ ಮಾಡಲಾಗಿದೆ ಎಂದು ದೃಢಪಡಿಸಿದರು. ಒಂದು ಪ್ರಕರಣದಲ್ಲಿ, ಜರ್ಮನಿಯ ಪೊಲೀಸರು ಮತ್ತು ರೈಲು ಸಿಬ್ಬಂದಿ 30 ಕ್ಕೂ ಹೆಚ್ಚು ಜನರನ್ನು ರೈಲಿನಿಂದ ಕೆಳಗಿಳಿಯಲು ಒತ್ತಾಯಿಸಿದರು ಏಕೆಂದರೆ ರೋಮಾಗಳಾಗಿದ್ದರಿಂದ ಅವರ  “ನಿರಾಶ್ರಿತರ  ಸ್ಥಿತಿ” ಯುರೋಪಿಯನ್ನರಿಗೆ ಎಂದೂ ಸಂದೇಹ ತರುವಂಥದ್ದು.

ಆಂಟಿಜಿಗನಿಸಂ ಜರ್ಮನಿಯಲ್ಲಿ ರೋಮಾ ಮತ್ತು ಸಿಂಟಿ ವಿರುದ್ಧದ ಅಪರಾಧಗಳ ಹೆಚ್ಚಳಕ್ಕೆ ಕಾರಣವಾಗಿದೆ. “2022 ರಲ್ಲಿ, 12 ಹಿಂಸಾತ್ಮಕ ಅಪರಾಧಗಳನ್ನು ಒಳಗೊಂಡಂತೆ 145 ಆಂಟಿಜಿಗನಿಸ್ಟ್ ಅಪರಾಧಗಳು ವರದಿಯಾಗಿವೆ” ಎಂದು ಜರ್ಮನ್ ಸರ್ಕಾರವು ಎಡ ಪಕ್ಷದ ಸಂಸದೀಯ ಗುಂಪಿನ ಪ್ರಶ್ನೆಗೆ ಉತ್ತರಿಸಿದೆ. 2017 ರಲ್ಲಿ ಈ ಅಪರಾಧಗಳನ್ನು ದಾಖಲಿಸಲು ಪ್ರಾರಂಭಿಸಿದ ನಂತರ ಇದು ಅತ್ಯಧಿಕ ಅಂಕಿಅಂಶವಾಗಿದೆ. ಆದರೆ ಇದು ಬಹುಶಃ “ವಾಸ್ತವ ಸ್ಥಿತಿಯ  ಒಂದು ಭಾಗವನ್ನು” ಮಾತ್ರ ತೋರಿಸಿದೆ ಎಂಬುದು  ಡೈಮಗುಲರ್ ರ ಅಭಿಪ್ರಾಯ. 

ರೋಮಾ ಜನಾಂಗದ ಇತಿಹಾಸ

ರೋಮಾ (ಜಿಪ್ಸಿಗಳು) ಎಂಬ  ಉತ್ತರ ಭಾರತದ ಪಂಜಾಬ್ ಪ್ರದೇಶದಲ್ಲಿ ಹುಟ್ಟಿದ  ಈ  ಅಲೆಮಾರಿ ಜನಾಂಗವು 8 ಮತ್ತು 10ನೇ ಶತಮಾನದ ನಡುವೆ ಯುರೋಪ್ ನ್ನು ಪ್ರವೇಶಿಸಿತು. ಯುರೋಪಿಯನ್ನರು ಅವರು ಈಜಿಪ್ಟ್‌ನಿಂದ ಬಂದವರು ಎಂದು ತಪ್ಪಾಗಿ ನಂಬಿ ಅವರನ್ನು “ಜಿಪ್ಸಿಗಳು” ಎಂದು ಕರೆದರು. ಜರ್ಮನಿಯಲ್ಲಷ್ಟೇ ಅಲ್ಲದೆ ಎರಡನೇ ಮಹಾಯುದ್ಧದಲ್ಲಿ ಜರ್ಮನಿಯು ಆಕ್ರಮಿಸಿಕೊಂಡ ಪೂರ್ವ ಯೂರೋಪಿನ ದೇಶಗಳಲ್ಲಿ  ಅತೀ ಹೆಚ್ಚು ಸಂಖ್ಯೆಯ ಸಿಂಟಿ ಮತ್ತು ರೋಮಾ ಕುಟುಂಬಗಳು  ನೆಲೆಸಿದ್ದವು. ಈ  ಎರಡೂ ಗುಂಪುಗಳು ಸಂಸ್ಕೃತ ಆಧಾರಿತ ರೋಮಾನಿ ಎಂಬ ಸಾಮಾನ್ಯ ಭಾಷೆಯ ಉಪಭಾಷೆಗಳನ್ನು ಮಾತನಾಡುತ್ತವೆ. “ರೋಮಾ” ಎಂಬ ಪದವು ಸಿಂಟಿ ಮತ್ತು ರೋಮಾ ಗುಂಪುಗಳನ್ನು ಒಳಗೊಂಡಿದ್ದರೂ , ಕೆಲವು ರೋಮಾಗಳು ತಮ್ಮನ್ನು  “ಜಿಪ್ಸಿಗಳು” ಎಂದು ಗುರುತಿಸಿಕೊಳ್ಳಲು ಬಯಸುತ್ತಾರೆ. ಪರ್ಷಿಯಾ, ನೈರುತ್ಯ ಏಷ್ಯಾ ಮತ್ತು  ಬಾಲ್ಕನ್ ದೇಶಗಳ  ಮೂಲಕ ತಮ್ಮ ವಲಸೆಯ ಸಮಯದಲ್ಲಿ ಕೆಲವು ರೋಮಾಗಳು ಕ್ರಿಶ್ಚಿಯನ್ ಮತ್ತು ಕೆಲವರು ಮುಸ್ಲಿಂ ಧರ್ಮದ ಅನುಯಾಯಿಗಳಾದರು .

ಶತಮಾನಗಳಿಂದ ರೋಮಾ ಜನಾಂಗವು ಯುರೋಪಿನಾದ್ಯಂತ  ತಿರಸ್ಕಾರ, ಕಿರುಕುಳ ಮತ್ತು ಬಹಿಷ್ಕಾರಕ್ಕೊಳಗಾಗಿದೆ.‘ಜಿಪ್ಸಿ’ ಗೆ ಜರ್ಮನ್ ನಲ್ಲಿ ಬಳಸಲಾಗುವ ‘ಜಿಗೆನರ್’ ಎಂಬ ಪದವು ಗ್ರೀಕ್ ಮೂಲದ್ದಾಗಿದ್ದು  ಅದರ ಅರ್ಥ  ‘ಅಸ್ಪೃಶ್ಯ’ ಎಂದು. ಯುರೋಪ್‌ನಲ್ಲಿ ಸಿಂಟಿ ಮತ್ತು ರೋಮಾ ವಿರುದ್ಧ ನಡೆದ  ನಾಜಿ ಅಪರಾಧಗಳ ಕಾರಣದಿಂದಾಗಿ  ಜರ್ಮನಿಯು ಅವರೆಡೆಗೆ ತಾನು ಪೂರೈಸಬೇಕಾದ  ಒಂದು ಗುರುತರ ಜವಾಬ್ದಾರಿಯನ್ನು ಹೊಂದಿದೆ: ಜರ್ಮನ್ನರ  ‘ನಿರ್ನಾಮ ಅಭಿಯಾನ’ವು ಉಕ್ರೇನ್ ಭೂಪ್ರದೇಶದಲ್ಲಿಯೂ ‘ಗುಂಡುಗಳಿಂದ ಹತ್ಯಾಕಾಂಡ’ (Holocaust by Bullets) ಎಂಬ ಹೆಸರಿನಲ್ಲಿ  ನಡೆಯಿತು. 

1900 ರ ದಶಕದ ಆರಂಭದ ವೇಳೆಗೆ ನಿಜವಾದ ಅಲೆಮಾರಿ ರೋಮಾಗಳ ಸಂಖ್ಯೆಯು ಅನೇಕ ಸ್ಥಳಗಳಲ್ಲಿ ಇಳಿಮುಖವಾಗಿತ್ತು. 1920-30ರ ದಶಕದ ಹೊತ್ತಿಗಾಗಲೇ ಅವರು  ನೆಲೆ ನಿಂತು ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ಸರ್ಕಾರೀ ನೌಕರಿಯಲ್ಲೂ ತೊಡಗಿದ್ದರು.  ಆದರೆ ಯುದ್ಧದಲ್ಲಿ ಯೆಹೂದಿಗಳೊಂದಿಗೆ ರೋಮಾ ಹಾಗೂ ಸಿಂಟಿ ಜನರ ಮೇಲೆ ನಡೆದ ಸಾಮೂಹಿಕ ಹತ್ಯೆ ಹಾಗೂ ದಬ್ಬಾಳಿಕೆಗಳು  ಮತ್ತೆ ಅವರನ್ನು ನಿರಾಶ್ರಿತರನ್ನಾಗಿಸಿ ಆಘಾತಕ್ಕೆ ದೂಡಿದವು. 

 ಡಾ. ಅಂಬೇಡ್ಕರ್ ಬುದ್ಧಿಸ್ಟ್ ಶಾಲೆ

ಪೂರ್ವ ಯೂರೋಪಿನ ಹಂಗೇರಿಯ ಒಟ್ಟು ಜನಸಂಖ್ಯೆಯ ಶೇಕಡಾ 7 ರಷ್ಟಿರುವ  ರೋಮಾ ಜನಾಂಗವು  ಈ ದೇಶದ  ಅತಿದೊಡ್ಡ ಅಲ್ಪಸಂಖ್ಯಾತ ಗುಂಪಾಗಿದೆ. 1948 ರಿಂದ 1989 ರವರೆಗಿನ ಕಮ್ಯುನಿಸ್ಟ್ ಯುಗದಲ್ಲಿ ಜಾರಿಗೊಳಿಸಲಾದ ಸಾಮಾಜಿಕ ಸಮಾನತೆ ಯೋಜನೆಗಳಿಂದಾಗಿ ರೋಮಾ ಜನರಿಗೆ ಉದ್ಯೋಗದಲ್ಲಿ ಮೀಸಲಾತಿಯು  ಕಾನೂನುಬದ್ಧವಾಗಿ ಕಡ್ಡಾಯವಾಗಿತ್ತು. ಆನಂತರದ ಸರ್ಕಾರಗಳು ಅಂಥ ಬದ್ಧತೆಯನ್ನೇನೂ ತೋರಿಸಲಿಲ್ಲ. 2011ರ ಯುರೋಪಿಯನ್ ಒಕ್ಕೂಟದ   ಸಮೀಕ್ಷೆಯು ಶೇಕಡಾ 55 ರಷ್ಟು ಹಂಗೇರಿಯನ್ ರೋಮಾ ಜನರು 16 ವರ್ಷಕ್ಕಿಂತ ಮುಂಚೆಯೇ ಶಾಲೆಯನ್ನು ತೊರೆದಿದ್ದಾರೆ ಎಂದು ಹೇಳುತ್ತಿದೆ .

ಈ ಶಾಲೆಯ ಸಹ ಸಂಸ್ಥಾಪಕರಾದ  ಡೆರ್ಡಾಕ್ ಟಿಬೋರ್ ( ಸಮಾಜಶಾಸ್ತ್ರಜ್ಞರು ಮತ್ತು ಹಂಗೇರಿಯನ್ ಸಂಸತ್ತಿನ ಮಾಜಿ ಸದಸ್ಯ, ನಂತರ  ರೋಮಾ ಸಮುದಾಯಕ್ಕಾಗಿನ  ಕೆಲಸದಲ್ಲಿ ತೊಡಗಿಸಿಕೊಂಡವರು) ಪ್ಯಾರಿಸ್‌ನಲ್ಲಿ ಬಾಬಾಸಾಹೇಬರ ಕುರಿತ ಪುಸ್ತಕವೊಂದನ್ನು ಓದಿದರು. ಮತ್ತು ಹೊಸ ಪ್ರಪಂಚವೊಂದು ಅವರ ಮುಂದೆ ತೆರೆದುಕೊಂಡಿತು. ಭಾರತದಲ್ಲಿ ದಲಿತರು ಮತ್ತು ಯುರೋಪಿನ ರೋಮಾಗಳು ಎದುರಿಸುತ್ತಿರುವ ತಾರತಮ್ಯದ ನಡುವಿನ ಸಾಮ್ಯತೆಗಳನ್ನು ಅವರು ತಕ್ಷಣವೇ ಗುರುತಿಸಿದರು. ಸಂದರ್ಶನದಲ್ಲಿ ತಿಬೊರ್ ಹೇಳಿದಂತೆ ಈ ಮುಂಚೆಯೂ ಅವರಿಗೆ ಅನೇಕ ಏಷ್ಯನ್ ಹಾಗೂ ಬೌದ್ಧ ಧರ್ಮದ ಅನುಯಾಯಿಗಳಾದ ಸ್ನೇಹಿತರಿದ್ದರು. ಆದರೆ ಅವರ್ಯಾರೂ ಅಂಬೇಡ್ಕರ್ ಕುರಿತಾಗಿ ಅವರೊಂದಿಗೆ ಚರ್ಚಿಸಿರಲಿಲ್ಲ. 

ಅಂಬೇಡ್ಕರ್ ಕುರಿತು ಓದಿದ ನಂತರ, ಟಿಬೋರ್ ಮತ್ತು ಇತರ ರೋಮಾ ಕಾರ್ಯಕರ್ತರು ಹಲವು ವರ್ಷಗಳಿಂದ ಭಾರತದಲ್ಲಿ ಅಂಬೇಡ್ಕರ್ ರ ಚಿಂತನೆಯನ್ನು ಅನುಸರಿಸುವ  ಬೌದ್ಧರೊಂದಿಗೆ ಕೆಲಸ ಮಾಡುತ್ತಿರುವ ಫ್ರೆಂಡ್ಸ್ ಆಫ್ ವರ್ಲ್ಡ್ ಬೌದ್ಧ ಆರ್ಡರ್ (FWBO) ನೊಂದಿಗೆ ಸಂವಾದ ನಡೆಸಿದರು. 2005 ಮತ್ತು 2007 ರಲ್ಲಿ ಟಿಬೋರ್ ಮತ್ತು ಜಾನೋಸ್ ಅವರು ಮಹಾರಾಷ್ಟ್ರಕ್ಕೆ ಭೇಟಿ ನೀಡಿದರು.

ಜಾನೋಸ್ ಓರ್ಸೋಸ್ ರ ಐದು ವಾರಗಳ  ಭಾರತದ  ಪ್ರಯಾಣವು ಅವರ ಪ್ರಕಾರ ಒಂದು ಜೀವನವನ್ನು ಬದಲಾಯಿಸುವ ಅನುಭವ. “ಡಾ. ಅಂಬೇಡ್ಕರ್ ಅವರ ಬೋಧನೆಗಳ ಆಧಾರದ ಮೇಲೆ ದಲಿತರು ಶಿಕ್ಷಣವನ್ನು ಅತೀ ಮುಖ್ಯ ಎಂದು ಭಾವಿಸುತ್ತಾರೆ ಹಾಗೂ  ತಮ್ಮ ವಿಧಿಯ ಸಂಪೂರ್ಣ ಮಾಲೀಕತ್ವವನ್ನು ಹೊಂದಿದ್ದಾರೆ ಎಂದು ನಾನು ಕಂಡು ಕೊಂಡೆ. ಈ ಬಲವಾದ ಆಧ್ಯಾತ್ಮಿಕ ನಿಲುವು ದಲಿತರ ಜೀವನದಲ್ಲಿ ಬೆರಗುಗೊಳಿಸುವ ಬದಲಾವಣೆಗಳಿಗೆ ಮತ್ತು ಸಂಘಟನೆ- ಸಬಲೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ” ಎಂದು ಅವರು ಹೇಳುತ್ತಾರೆ. 

ಭಾರತದಲ್ಲಿ ಅಂಬೇಡ್ಕರ್ ಅವರ ಸಾಮಾಜಿಕ ಪರಿವರ್ತನೆಯ ತತ್ತ್ವಶಾಸ್ತ್ರ ಮತ್ತು ದಲಿತರಿಗಾಗಿ ಅವರ ಹೋರಾಟದಿಂದ ಪ್ರೇರಣೆ ಪಡೆದು ಟಿಬೋರ್ ಮತ್ತು ಇನ್ನೊಬ್ಬ ರೋಮಾ ನಾಯಕ  ಜಾನೋಸ್ ಹಂಗೇರಿಯ  ಸಣ್ಣ ಪಟ್ಟಣವಾದ ಸಜೋಕಾಜಾದ 5 ಸ್ಥಳಗಳಲ್ಲಿ ಈ ಶಾಲೆಯನ್ನು ಆರಂಭಿಸಿ  ರೋಮಾ ಸಮುದಾಯದ ಸಮಾನ ಹಕ್ಕುಗಳ ಹೋರಾಟದಲ್ಲಿ ಅಂಬೇಡ್ಕರ್ ವಿಚಾರಗಳನ್ನು ನಿಯೋಜಿಸಲು ಪ್ರಯತ್ನಿಸುತ್ತಿದ್ದಾರೆ.

ಸಜೋಕಾಜಾ, ಈ  ಹಿಂದೆ  ಕೈಗಾರಿಕಾ ಮತ್ತು ಗಣಿಗಾರಿಕೆ ಕೇಂದ್ರವಾಗಿದ್ದು ವಿಸ್ತಾರವಾದ ಹಂಗೇರಿಯನ್ “ರಸ್ಟ್ ಬೆಲ್ಟ್”  ನ ಭಾಗವಾಗಿತ್ತು. ರೋಮಾಗಳು ಹೆಚ್ಚಾಗಿ ಹತ್ತಿರದ ಗಣಿಗಳು  ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಗಣಿಗಾರಿಕೆ ಉದ್ಯಮವು ಕುಸಿದ ನಂತರ, ಮೂಲತಃ ಗಣಿಗಾರರಿಗೆ 1980 ರ ದಶಕದಲ್ಲಿ ನಿರ್ಮಿಸಲಾಗಿದ್ದ ಪಾಳು ಬಿದ್ದ ಕಟ್ಟಡಗಳಲ್ಲಿ  ಇಂದು ರೋಮಾಗಳು ವಾಸಿಸುತ್ತಿದ್ದಾರೆ. ಕಳಪೆ ನಿರ್ವಹಣೆ ಮತ್ತು ಅತೀ  ಬಡತನದಿಂದ ಕಟ್ಟಡಗಳು ಕುಸಿತದ ಅಂಚಿನಲ್ಲಿವೆ. ಮೂಲಸೌಕರ್ಯಗಳನ್ನು ರೋಮಾ ಸಮುದಾಯಕ್ಕೆ ಸಂಪೂರ್ಣವಾಗಿ ನಿರಾಕರಿಸಲಾಗಿದೆ. 

ಆದರೆ ತಮ್ಮ ಬೌದ್ಧ ಧರ್ಮದ ಅನುಯಾಯಿಗಳ ಸಂಪರ್ಕಜಾಲದಿಂದ  ಈ ಸಣ್ಣ ಶಾಲೆಯ ವಿದ್ಯಾರ್ಥಿಗಳಿಗಾಗಿ ಬುಡಾಪೆಸ್ಟ್ ಮತ್ತು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳೊಂದಿಗೆ (ಉದಾಹರಣೆಗೆ, ಆಸ್ಟ್ರಿಯಾ, ಫ್ರಾನ್ಸ್ ಮತ್ತು ಸ್ಲೋವಾಕಿಯಾ) ಅನುಕೂಲಕರ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳನ್ನು ರೂಪಿಸಿರುವ ಕುರಿತು ಓರ್ಸೋಸ್ ಹೆಮ್ಮೆಯಿಂದ ವಿವರಿಸುತ್ತಾರೆ “ಅಂತಹ ಪ್ರವಾಸಗಳು ಪ್ರಮುಖ ಪ್ರೇರಕ ಅಂಶಗಳಾಗಿವೆ. ಏಕೆಂದರೆ ವಿದ್ಯಾರ್ಥಿಗಳು “ಕೊಳಕು ಜಿಪ್ಸಿಗಳು” ಎಂದು ಪರಿಗಣಿಸದ ಗೆಳೆಯರನ್ನು ಪಡೆಯಬಹುದು ಮತ್ತು  ಅಭಿವೃದ್ಧಿಯ ವಿಭಿನ್ನ ಮಾದರಿಯನ್ನು ಸಹ ನೋಡುತ್ತಾರೆ”.

ಈ ಮಾದರಿಯು  ಯಶಸ್ವಿಯಾಗುವುದೋ  ಇಲ್ಲವೋ  ಎಂಬುದನ್ನು ಸಮಯವೇ ನಿರ್ಧರಿಸುತ್ತದೆ; ಆದರೆ, ಸಂಸ್ಥೆಯನ್ನು ನಿರ್ಮಿಸಲು ಅಂತಾರಾಷ್ಟ್ರೀಯ ಸಂಪರ್ಕಗಳನ್ನು ರೂಪಿಸಿ ಬಳಸಿಕೊಂಡ ರೀತಿ ಅದ್ಭುತವಾದದ್ದು. ಹಾಗೆಯೇ ಹಂಗೇರಿಯ ಹಳ್ಳಿಯ ಸನ್ನಿವೇಶದಲ್ಲಿ ಅಂಬೇಡ್ಕರ್ ತತ್ವಗಳು, ಆಚರಣೆಗಳು ಮತ್ತು ಮೌಲ್ಯಗಳ ಆಮದು ಮತ್ತು ಅನುವಾದವು ಸಮಕಾಲೀನ ಹಂಗೇರಿಯನ್ ಜನಾಂಗೀಯ-ರಾಷ್ಟ್ರೀಯವಾದಿ ಭೂದೃಶ್ಯದಲ್ಲಿ  ಅಲ್ಪಸಂಖ್ಯಾತ ಯುವಕರನ್ನು ಸಬಲೀಕರಣಗೊಳಿಸಲು ನಿರ್ಣಾಯಕ ಮಾದರಿಯಾಗಿ ಒದಗಿ ಬಂದಿದೆ ಎಂದು ಹೇಳಬಹುದು. 

(ಈ ಲೇಖನಕ್ಕಾಗಿ ಪೂರಕ ಮಾಹಿತಿಯನ್ನು ಜೆಕಟ್ಯೆರಿನಾ ಡುನಾಜೆವಾ, ಅಸಿಸ್ಟೆಂಟ್ ಪ್ರೊಫೆಸರ್  ಪಜ್ಮನಿ ಪೀಟರ್ ಕ್ಯಾಥೋಲಿಕ್ ವಿಶ್ವವಿದ್ಯಾಲಯ ಮತ್ತು ಪ್ಯಾಟ್ರಿಕ್ ಸಿಯಾಸ್ಚಿ, ನ್ಯೂ ಸ್ಕೂಲ್ ಫಾರ್ ಸೋಶಿಯಲ್ ರಿಸರ್ಚ್, ನ್ಯೂಯಾರ್ಕ್ ಅವರ  ಪರ್ಯಾಯ ಶಿಕ್ಷಣ ಮತ್ತು ರೋಮಾ ಸಬಲೀಕರಣ: ಡಾ. ಅಂಬೇಡ್ಕರ್ ಬೌದ್ಧ ಶಾಲೆಯ ಕುರಿತ ಅಧ್ಯಯನ  ಮಹಾ ಪ್ರಬಂಧದಿಂದ -ಹಾಗೂ ಇನ್ನಿತರ ಮೂಲಗಳಿಂದ  ಪಡೆಯಲಾಗಿದೆ)‌

ರಂಜಿತಾ ಜಿ ಎಚ್

ಬರಹಗಾರರು

Related Articles

ಇತ್ತೀಚಿನ ಸುದ್ದಿಗಳು