Thursday, March 27, 2025

ಸತ್ಯ | ನ್ಯಾಯ |ಧರ್ಮ

ಅಪರಾಧಗಳಿಗಿಂತ ಭಯಬೀತಗೊಳಿಸುವ ಆದೇಶಗಳು

“..ಅಷ್ಟಕ್ಕೂ ಒಂದು ಮಗುವಿಗೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಪ್ರಯತ್ನ, ಅತ್ಯಾಚಾರದ ಪ್ರಯತ್ನ, ಸಿದ್ಧತೆ, ಅತ್ಯಾಚಾರ ಎಲ್ಲವೂ ನೀಡುವ ಆಘಾತ ಅಗಾಧವಾಗಿ ಕಾಡುವಂತದ್ದು. ಮಕ್ಕಳ ಎಳೆಯ ಮನಸ್ಸಿಗೆ ತನ್ನವರಲ್ಲದವರು ಮುಟ್ಟಿದರೆ, ಅಥವಾ ಘಾಸಿಯಾದರೆ ಅದರ ಪರಿಣಾಮಗಳು ಹಲವಷ್ಟು..” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ

“ದಿನಾ ದಿನಾ ನ್ಯೂಸ್‌ ನೋಡ್ತಿದ್ರೆ ಮಕ್ಳೇ ಮಾಡ್ಕೊಬಾರ್ದು ಅನ್ಸತ್ತೆ ಕಣೇ. ಸ್ವಂತ ತಾಯಿ ತಂದೆ, ಅಜ್ಜಿ ತಾತನ ಜೊತೆ ಕೂಡ ಸೇಫ್‌ ಅನಿಸದೇ ಇರೋ ಈ ಕಾಲದಲ್ಲಿ ಮಕ್ಕಳನ್ನ ಹೊರಗೆ ಕಳಿಸಿ ದಿನಾ ದಿನಾ ಆತಂಕದಲ್ಲಿ ಸಾಯೋದಾ ಹೇಳು” ಗೆಳತಿಯೊಬ್ಬಳು ಮಾತಾಡುವಾಗ ಸುತ್ತಲಿದ್ದ ಎಲ್ಲ ತಾಯಂದಿರಿಗೂ ಅದೇ ಆತಂಕ ಎದೆಭಾರವಾಗಿಸ್ತಾ ಇದ್ದಿದ್ದು ಸ್ಪಷ್ಟವಾಗಿತ್ತು.

“ಎಷ್ಟು ಹುಷಾರಾಗಿದ್ರೂ ಸಾಕಾಗೋದಿಲ್ಲ, ಒಂದು ನಿಮಿಷ ಮಕ್ಕಳು ಕಾಣದಿದ್ರೂ ಆತಂಕ ಆಗತ್ತೆ, ಸ್ಕೂಲಿಗೆ ಕಳಿಸಿದ್ರೂ, ಸ್ಕೂಲ್‌ ವ್ಯಾನಿಗೆ ಕಳಿಸಿದ್ರೂ, ಕೊನೆಗೆ ಪಕ್ಕದ ಮನೆಗೆ ಕಳಿಸಿದ್ರೂ ಮಗುಗೆ ಯಾರಾದ್ರೂ ಏನಾದ್ರೂ ಮಾಡಿಬಿಡ್ತಾರೆ ಅನ್ನೋ ಭಯ ಶುರುವಾಗತ್ತೆ” ಅನ್ನೋ ಮಾತುಗಳಂತೂ ಈಗ ಅಮ್ಮಂದಿರ ನಡುವೆ ಸಾಮಾನ್ಯ.

ಅಪರಾಧಗಳನ್ನು ಕೇಳಿ ನೋಡಿಯೇ ಮಹಿಳೆಯರು ಆತಂಕಗೊಳ್ಳುವಾಗ ಅದಕ್ಕಿಂತ ಭಯಾನಕವಾಗಿ ಕಾಡಲಾರಂಬಿಸಿವೆ ಕಾನೂನುಗಳು.  ಇತ್ತೀಚಿನ ದಿನಗಳಲ್ಲಿ ಅಪರಾಧದ ವಿಕೃತಿಗಿಂತ ನ್ಯಾಯಾಲಯದ ತೀರ್ಪುಗಳು, ಆದೇಶಗಳು ಹೆಚ್ಚು ಬೆಚ್ಚಿ ಬೀಳಿಸುವಂತಿರುವುದು ನಿಜಕ್ಕೂ ಆತಂಕಕಾರಿ.

ಮೈನರ್‌ ಆಗಿದ್ದರೂ ಸಹ ಎದೆಗೆ ಕೈಹಾಕುವುದು, ಪೈಜಾಮದ ಲಾಡಿಯನ್ನು ಬಿಚ್ಚುವುದು ಅತ್ಯಾಚಾರದ ಪ್ರಯತ್ನ ಎನ್ನಲಾಗುವುದಿಲ್ಲ, ಅದು ಕೇವಲ ಸಿದ್ಧತೆಯ ಹಂತ, ಬೆತ್ತಲಾಗಿಸುವ ಪ್ರಯತ್ನ ಎಂದಿದೆ ಅಲಹಾಬಾದ್‌ ನ್ಯಾಯಾಲಯ. 11 ವರ್ಷದ ಮಗುವಿನ ಮೇಲಾಗಿರುವ ಒಂದು ದೌರ್ಜನ್ಯದ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಂತರ ನಿರ್ದೇಶನ ಇದು.

ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎನ್ನುವ ನ್ಯಾಯಾಲಯಗಳು, ಪತ್ನಿಯ ಮೇಲಿನ ಅಸಹಜ ಲೈಂಗಿಕ ದೌರ್ಜನ್ಯ ಕೂಡ ತಪ್ಪಲ್ಲ ಎನ್ನುತ್ತವೆ. ಇಂದೂ ಒಂದು ಹೆಜ್ಜೆ ಮುಂದುವರೆದು ಪತ್ನಿ ಅಪ್ರಾಪ್ತೆಯಾಗಿದ್ದರೂ ಸಹ ಆಕೆಯ ಮೇಲಿನ ಅಸಹಜ ದೌರ್ಜನ್ಯಗಳು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ ಎನ್ನುತ್ತದೆ. ಫೋಕ್ಸೋ ಒಂದು ಅತ್ಯಂತ ಪರಿಣಾಮಕಾರಿ ಕಾಯ್ದೆ ಎಂದಾಗಲೂ ಸಹ ಮಕ್ಕಳ ಮೇಲಿನ, ಅದರಲ್ಲೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳನ್ನು ಪರಿಗಣನೆಗೆ ಸಹ ತೆಗೆದುಕೊಳ್ಳದಂತಹಾ ತೀರ್ಪುಗಳು ಸೃಷ್ಟಿಯಾಗುವುದು ಸಮಾಜದಲ್ಲಿ, ಕಾನೂನಿನಡಿಯಲ್ಲಿ ಭಯದ ವಾತಾವರಣವನ್ನೇ ಸೃಷ್ಟಿಸುತ್ತಿವೆ.

ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ, ಮಗುವಿನ ತಲೆಯನ್ನು ಗೋಡೆಗೆ ಅಪ್ಪಳಿಸಲಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ಆಸ್ಪತ್ರೆಗೆ ಸೇರಿಸಿದ ನಂತರ ಆಕೆಯ ಖಾಸಗಿ ಅಂಗಗಳಿಗೆ ಇಪ್ಪತ್ತ ಎಂಟು ಹೊಲಿಗೆಗಳನ್ನು ಹಾಕಲಾಗಿತ್ತು. ಅತ್ಯಾಚಾರಿಯನ್ನು ಹದಿನೇಳೂವರೆ ವರ್ಷದವನು ಎನ್ನುವ ಕಾರಣಕ್ಕೆ ಬಾಲಾಪರಾಧಿ ಎಂದು ಪರಿಗಣಿಸಲಾಗಿತ್ತು. ಅತ್ಯಾಚಾರ ಮಾಡಲು ಶಕ್ತನಿರುವ ಪುರುಷನನ್ನು ಬಾಲಾಪರಾಧಿ ಎಂದು ಪರಿಗಣಿಸುತ್ತಾ, ಅತ್ಯಾಚಾರಕ್ಕೊಳಗಾಗುವ ಹೆಣ್ಣುಮಗಳ ಸಂಕಟವನ್ನು ಪರಿಗಣಿಸಲು ಹಿಂದೇಟು ಹಾಕಿ ಅದಕ್ಕೆ ಬೇರೆ ಬೇರೆ ರೀತಿಯ ಸ್ಪಷ್ಟನೆ ನೀಡುವ ಪುರುಷ ಪ್ರಧಾನ ವ್ಯವಸ್ಥೆಯ ಕ್ರೂರ ವರ್ತುಲದೊಳಗೆ ಮತ್ತೆ ಮತ್ತೆ ಸಿಲುಕುತ್ತಿದ್ದೇವೆ.

ಭಾರತದಲ್ಲಿ ಮಕ್ಕಳ ಮೇಲಿನ ಹಿಂಸೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತವೆ. Child Rights and You (CRY) ಸಮೀಕ್ಷೆಯ ಅನುಸಾರ 2021ರಲ್ಲಿ 36,381 ಅತ್ಯಾಚಾರ ಹಾಗೂ ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, 2022ರಲ್ಲಿ 38,911 ಪ್ರಕರಣಗಳು ವರದಿಯಾಗಿವೆ.

ಭಾರತದಂತಹ ದೇಶದಲ್ಲಿ ಮರ್ಯಾದೆ, ಹೆಸರು, ಅಸಹಾಯಕತೆ, ಬಡತನ ಎಲ್ಲವೂ ಸೇರಿ ಅತ್ಯಾಚೃಗಳು ವರದಿಯಾಗದೇ ಉಳಿದುಹೋಗುವುದೇ ಹೆಚ್ಚು. ಇಂತಹ ಪ್ರಕರಣಗಳಲ್ಲಿ ಕಾನೂನು ವ್ಯವಸ್ಥೆ ಮಕ್ಕಳಿಗೆ ರಕ್ಷಣೆಯಾಗುವುದರ ಬದಲು ಅತ್ಯಾಚಾರಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡುವ ವ್ಯವಸ್ಥೆಯಾಗಿ ಬದಲಾಗುತ್ತಿರುವುದು ವಿಷಾದನೀಯ.

ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಐಎಎಸ್‌ ಅಧಿಕಾರಿಯೊಬ್ಬಾತ ಮೂರು ವರ್ಷದ ಮಗುವಿನ ಸ್ವಭಾವವೂ ಅತ್ಯಾಚಾರವಾಗುವುದಕ್ಕೆ ಕಾರಣ ಎಂದು ಹೇಳಿಕೆ ಕೊಟ್ಟಿದ್ದರು. ಮೂರು ವರ್ಷದ ಮಗುವಿನ ನಡವಳಿಕೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎನ್ನುವ ಹೇಳಿಕೆ ಕೊಡಬೇಕಾದರೆ ಇನ್ನು ಯಾವ ರೀತಿಯ ನ್ಯಾಯವನ್ನು ತಾನೆ ಆ ಅಧಿಕಾರಿಯಿಂದ ನಿರೀಕ್ಷಿಸಲು ಸಾಧ್ಯವಿದ್ದೀತು.

ಸ್ತನಗಳನ್ನು ಎಳೆಯುವುದು ಮತ್ತು ಪೈಜಾಮವನ್ನು ಬಿಚ್ಚುವುದು ಅತ್ಯಾಚಾರದ ಪ್ರಯತ್ನವಲ್ಲ, ಕೇವಲ ಲೈಂಗಿಕ ದೌರ್ಜನ್ಯ ಎಂದು ತನ್ನ ಮಧ್ಯಂತರ ನಿರ್ದೇಶನದಲ್ಲಿ ಹೇಳಿದೆ. ಸಣ್ಣ ಮಕ್ಕಳಿಗೆ ಸುರಕ್ಷಿತ ಸ್ಪರ್ಶ ಮತ್ತು ಅಸುರಕ್ಷಿತ ಸ್ಪರ್ಶದ ಕುರಿತು ಪೂರ್ವ ಪ್ರಾಥಮಿಕ ತರಗತಿಯಿಂದಲೇ ತಿಳಿಸಿಕೊಡಲಾಗುತ್ತದೆ. ಯಾವುದು ತಮಗೆ ಇಷ್ಟವಾಗುವುದಿಲ್ಲ, ಅಥವಾ ಯಾವುದು ತಮಗೆ ಸುರಕ್ಷಿತವಲ್ಲ ಎಂದು ಅರಿತಿರುವ ಮಕ್ಕಳಿಗೆ ಅವರ ಮೇಲೆ ಇಂತಹ ದೌರ್ಜನ್ಯಗಳಾದಾಗ ಅದನ್ನು ಹೇಗೆ ಎದುರಿಸಬಹುದು,ಅ ದರಿಂದ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರಬಹುದು ಎನ್ನುವುದನ್ನು ಯೋಚಿಸಲೂ ಸಾಧ್ಯವಿಲ್ಲ.

ಜನಸಾಮಾನ್ಯರಿಗೆ ಮಧ್ಯಂತರ ನಿರ್ದೇಶನವೋ, ಹೇಳಿಕೆಯೋ, ತೀರ್ಪೋ ಮತ್ತೊಂದೋ ಎನ್ನುವುದು ತಿಳಿದಿರುವುದಿಲ್ಲ. ಆದರೆ ಒಬ್ಬ ನ್ಯಾಯಮೂರ್ತಿ ಅದನ್ನು ತನ್ನ ಎಕ್ಸ್‌ X ಖಾತೆಯಲ್ಲಿ ಹಾಕಿದ ತಕ್ಷಣವೇ ಸಮಾಜ ಅದನ್ನು ಪರಿಗಣಿಸುತ್ತದೆ. ಈಗಾಗಲೇ ಪ್ರತಿ ಇಪ್ಪತ್ತು ನಿಮಿಷಕ್ಕೆ ಒಂದು ಅತ್ಯಾಚಾರವಾಗುತ್ತಿರುವ ಸಮಯದಲ್ಲಿ ಇಷ್ಟು ಸಂವೇದನಾರಹಿತ ಹೇಳಿಕೆಗಳನ್ನು ನೀಡುವುದರಿಂದ ಸಮಾಜದಲ್ಲಿ ಇನ್ಯಾವ ಮಟ್ಟಿಗೆ ಆತಂಕ ಹರಡಬಹುದು ಎನ್ನುವ ಕಿಂಚಿತ್‌ ಯೋಚನೆಯೂ ಇರದಿರುವುದು ಹೇಳಿಕೆ ನೀಡುವವರ ಮನಸ್ಥಿತಿ ಮತ್ತು ಆಳವಾಗಿ ಬೇರೂರಿರುವ ಪುರುಷ ಪ್ರಧಾನ ವ್ಯವಸ್ಥೆಗೆ ಹಿಡಿದ ಕನ್ನಡಿ.

ಈ ತೀರ್ಪಿನ ಅನುಸಾರ, ಲೈಂಗಿಕ ಕ್ರಿಯೆಗೆ ಪ್ರಯತ್ನ ಪಡುವುದು ಅತ್ಯಾಚಾರದ ಪ್ರಯತ್ನ. ಆದರೆ, ಆಕೆಯ ಉಳಿದ ಭಾಗಗಳ ಮೇಲಾಗುವ ದೌರ್ಜನ್ಯ ಅತ್ಯಾಚಾರದ ಸಿದ್ಧತೆ. ತಾಯಿ ಮತ್ತು ಮಗುವಿಗೆ ಸುರಕ್ಷಿತವೆನಿಸುವ ಇನ್ಯಾವುದೇ ವ್ಯಕ್ತಿ, ಅಥವಾ ವೈದ್ಯರು (ವೈದ್ಯಕೀಯ ಕಾರಣಗಳಾಗಿದ್ದಲ್ಲಿ) ಹೊರತಾಗಿ ಬೇರೆ ಯಾರಾದರೂ ಮಗುವಿನ ಪೈಜಾಮ ಬಿಚ್ಚಲು ಪ್ರಯತ್ನ ಪಟ್ಟಿದ್ದರೆ ಅದಕ್ಕೆ ಲೈಂಗಿಕ ದೌರ್ಜನ್ಯದ ಹೊರತಾದ ಬೇರೆ ಯಾವ ಕಾರಣ ಇರಲು ಸಾಧ್ಯ? ಅತ್ಯಾಚಾರಕ್ಕೆ ಸಿದಧತೆ ನಡೆಸುವವನಿಗೆ, ಪ್ರಯತ್ನ ಪಟ್ಟ ಮೇಲೆ ಅತ್ಯಾಚಾರ ನಡೆಯುವುದಿಲ್ಲ ಎನ್ನುವ ಖಾತರಿ ಏನು? ಅಷ್ಟಕ್ಕೂ ಮಗುವಿಗೆ ಪ್ರತಿಯೊಂದೂ ಆಘಾತವೇ. ಅಪ್ರಾಪ್ತ ವಯಸ್ಸಿನ ಮಗುವನ್ನು ಮುಟ್ಟುವುದು ತಪ್ಪು. ಅದು ಅತ್ಯಾಚಾರವೋ, ದೌರ್ಜನ್ಯವೋ ಅಥಾ ಇನ್ನಾವುದೋ ಹಿಂಸೆಯೋ. ಅದನ್ನು ಸರಳೀಕರಿಸಿ ಅತ್ಯಾಚಾರಿಗಳಿಗೆ ಸುಲಭವಾಗಿ ತಪ್ಪಿಸಿಕೊಳ್ಳುವ ಆಯ್ಕೆಗಳನ್ನು ನ್ಯಾಯಾಲಯಗಳ ಮೂಲಕ ಸೃಷ್ಟಿಯಾಗುತ್ತಿರುವುದು ಆಘಾತಕಾರಿ.

ಫೋಕ್ಸೋದಂತಹ ಪ್ರಕರಣಗಳಲ್ಲಿ ಕಾಯ್ದೆಯ ಪರಿಣಾಮಕಾರಿ ಅನುಷ್ಟಾನದ ಜೊತೆಗೆ ಅದರ ಕುರಿತಾಗಿ ಜನ ಜಾಗೃತಿ ಮೂಡಿಸುವುದು ಬಹಳಷ್ಟು ಅವಶ್ಯಕವಿದೆ. ಮುಖ್ಯವಾಗಿ ಹದಿಹರೆಯದ ಮಕ್ಕಳಿಗೆ ಇದು ಅವರ ಶಿಕ್ಷಣದ ಜೊತೆ ಜೊತೆಗೆ ಸಾಗಬೇಕಾದ ಅರಿವು. ಅಪ್ರಾಪ್ರ ವಯಸ್ಸಿನ ಸಂಬಂಧಗಳು, ಅಪರಾಧಗಳು ಯಾವ ಹಂತಕ್ಕೆ ತಲುಪಬಹುದು ಎನ್ನುವ ಜಾಗೃತಿ ಮಕ್ಕಳಲ್ಲಿ ಮೂಡಿಸಬೇಕಾದುದು ಪ್ರಸ್ತುತ ಅಗತ್ಯ.

ಇತ್ತೀಚೆಗಷ್ಟೇ ಎರಡು ಅತ್ಯಾಚಾರ ಪ್ರಕರಣಗಳಿಂದ ಖುಲಾಸೆಗೊಂಡ ವ್ಯಕ್ತಿಯೊಬ್ಬ ಜೈಲಿನಿಂದ ಬಂದು ಮತ್ತೊಂದು ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದು ಚರ್ಚೆಯಾಗಿತ್ತು.

ಅಷ್ಟಕ್ಕೂ ಒಂದು ಮಗುವಿಗೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಪ್ರಯತ್ನ, ಅತ್ಯಾಚಾರದ ಪ್ರಯತ್ನ, ಸಿದ್ಧತೆ, ಅತ್ಯಾಚಾರ ಎಲ್ಲವೂ ನೀಡುವ ಆಘಾತ ಅಗಾಧವಾಗಿ ಕಾಡುವಂತದ್ದು. ಮಕ್ಕಳ ಎಳೆಯ ಮನಸ್ಸಿಗೆ ತನ್ನವರಲ್ಲದವರು ಮುಟ್ಟಿದರೆ, ಅಥವಾ ಘಾಸಿಯಾದರೆ ಅದರ ಪರಿಣಾಮಗಳು ಹಲವಷ್ಟು. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಅತ್ಯಾಚಾರವಾಗಲೀ ದೌರ್ಜನ್ಯವಾಗಲೀ ಆದಾಗ ಅದರಿಂದ ಚೇತರಿಸಿಕೊಳ್ಳುವುದು ಬಹಳಷ್ಟು ಸಮಯ ಹಿಡಿಯುತ್ತದೆ. ಸೂಕ್ತ ವೈದ್ಯಕೀಯ, ಕೌಟುಂಬಿಕ, ಆಪ್ತ ಸಮಾಲೋಚನಾ ನೆರವಿಲ್ಲದಿದ್ದರೆ ಮಕ್ಕಳು ಬದುಕೆಲ್ಲಾ ನರಕ ಅನುಭವಿಸಬೇಕಾದ ಅನಿವಾರ್ಯತೆ, ಅಸಹಾಯಕತೆ ಉಂಟಾಗುತ್ತದೆ.  ಇಷ್ಟು ಆಳವಾದ ಸಂವೇದನೆಗಳನ್ನು ಪರಿಗಣನೆಗೇ ತೆಗೆದುಕೊಳ್ಳದೇ ಇಷ್ಟು ಉಡಾಫೆಯ ಆದೇಶಗಳು ಹೊರಬರುತ್ತಿರುವುದು ಇನ್ನಷ್ಟು ಅಸುರಕ್ಷಿತ ಸಮಾಜದಲ್ಲಿ ಇದ್ಧೇವೆ ಎಂದು ಆತಂಕ ಹುಟ್ಟಿಸುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page