ಅದಿರು ನಾಪತ್ತೆ ಪ್ರಕರಣ ಸಂಬಂಧ ಆರು ಪ್ರಕರಣಗಳಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ಗೆ ಜನಪ್ರತಿನಿಧಿಗಳ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷ ವಿಧಿಸಿ ತೀರ್ಪು ನೀಡಿದೆ. ಎಲ್ಲಾ ಆರು ಪ್ರಕರಣಗಳ ಒಟ್ಟಾರೆ ಪರಿಗಣಿಸಿ ಈ ಶಿಕ್ಷೆ ಪ್ರಕಟವಾಗಿದೆ.
ಈ ಹಿಂದೆ ನ್ಯಾಯಾಲಯ ಶಾಸಕ ಸತೀಶ್ ಸೈಲ್ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಈಗ ಎಲ್ಲಾ ಪ್ರಕರಣಗಳನ್ನು ಪರಿಗಣಿಸಿ ಏಳು ವರ್ಷ ಶಿಕ್ಷೆ ಪ್ರಕಟಿಸಿದೆ.
ಶಿಕ್ಷೆ ಅವಧಿಯನ್ನು ಕಡಿಮೆ ಮಾಡಬೇಕು ಎಂದು ಶಾಸಕ ಸೈಲ್ ಮನವಿ ಮಾಡಿದ್ದರು. ಆದರೆ ಇದೀಗ 7 ವರ್ಷ ಜೈಲು ಆಗಿರುವುದರಿಂದ ಶಾಸಕ ಸ್ಥಾನವೂ ಅನರ್ಹ ಆಗಲಿದೆ.
ವಂಚನೆ ಪ್ರಕರಣದಲ್ಲಿ 7 ವರ್ಷ ಸಜೆ, ಒಳಸಂಚು ಆರೋಪ ಪ್ರಕರಣದಲ್ಲಿ 5 ವರ್ಷ ಹಾಗೂ ಅದಿರು ಕಳ್ಳತನ ಪ್ರಕರಣದಲ್ಲಿ 3 ವರ್ಷ ಸಜೆ ವಿಧಿಸಿ ಕೋರ್ಟ್ ಆದೇಶಿಸಿದೆ. ಜೊತೆಗೆ, ಒಟ್ಟು 9 ಕೋಟಿ 60 ಲಕ್ಷ ರೂ. ದಂಡ ವಿಧಿಸಲಾಗಿದೆ.
ಮುಟ್ಟುಗೋಲು ಹಾಕಿದ್ದ 11,312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೇ ಸಾಗಾಟ ಮಾಡಲಾಗಿತ್ತು. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, ಮಹೇಶ್ ಬಿಳಿಯೆ, ಮಲ್ಲಿಕಾರ್ಜುನ ಶಿಪ್ಪಿಂಗ್ ಹಾಗೂ ಶಾಸಕ ಸತೀಶ್ ಸೈಲ್ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದು ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಿತ್ತು.