Wednesday, October 1, 2025

ಸತ್ಯ | ನ್ಯಾಯ |ಧರ್ಮ

ಜುಬಿನ್ ಗಾರ್ಗ್ ಸಾವು ಪ್ರಕರಣ: ಸಂಘಟಕ ಶ್ಯಾಮಕನು ಮಹಂತಾ ಮತ್ತು ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ ಬಂಧನ, ಗುವಾಹಟಿಗೆ ಕರೆತಂದ ಎಸ್‌ಐಟಿ

ಗುವಾಹಟಿ: ಗಾಯಕ ಜುಬಿನ್ ಗಾರ್ಗ್ ಅವರ ಸಾವಿಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ನಾರ್ತ್ ಈಸ್ಟ್ ಇಂಡಿಯಾ ಫೆಸ್ಟಿವಲ್ (NEIF) ಮುಖ್ಯ ಸಂಘಟಕ ಶ್ಯಾಮಕನು ಮಹಂತಾ ಮತ್ತು ಜುಬಿನ್ ಗಾರ್ಗ್ ಅವರ ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ ಅವರನ್ನು ಬಂಧಿಸಲಾಗಿದೆ.

ಸಿಂಗಾಪುರದಿಂದ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಮಹಂತಾ ಅವರನ್ನು ಬಂಧಿಸಲಾಯಿತು. ಇತ್ತ ಸಿದ್ಧಾರ್ಥ ಶರ್ಮಾ ಅವರನ್ನು ಗುರುಗ್ರಾಮದ ಅಪಾರ್ಟ್‌ಮೆಂಟ್‌ನಿಂದ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಇಬ್ಬರನ್ನೂ ಬುಧವಾರ ಮುಂಜಾನೆ ಗುವಾಹಟಿಗೆ ಕರೆತರಲಾಗಿದೆ. ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ಸಮುದ್ರದಲ್ಲಿ ಮುಳುಗಿ ನಿಧನರಾದ ಜುಬಿನ್ ಅವರ 13 ನೇ ದಿನದ ವಿಧಿವಿಧಾನಗಳಿಗಾಗಿ ಜೋರ್ಹತ್‌ನಲ್ಲಿರುವ ಜುಬಿನ್ ಅವರ ಪತ್ನಿ ಗರಿಮಾ ಸೈಕಿಯಾ ಗಾರ್ಗ್ ಅವರು, “ಅಂತಿಮ ಕ್ಷಣಗಳಲ್ಲಿ ಅವರಿಗೆ ಏನಾಯಿತು ಎಂದು ತಿಳಿಯಲು ನಾವೆಲ್ಲರೂ ಕಾಯುತ್ತಿದ್ದೇವೆ, ಈಗ ಇಬ್ಬರನ್ನು ಅಸ್ಸಾಂಗೆ ಕರೆತರಲಾಗಿದ್ದರಿಂದ ತಮಗೆ ಸಂತೃಪ್ತಿ ಇದೆ” ಎಂದು ವರದಿಗಾರರಿಗೆ ತಿಳಿಸಿದರು.

ತನಿಖಾ ತಂಡದ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ ಮತ್ತು ಸಿಂಗಾಪುರದಲ್ಲಿ ನಿಖರವಾಗಿ ಏನಾಯಿತು ಎಂಬುದನ್ನು ಶೀಘ್ರದಲ್ಲೇ ತಿಳಿಯುವ ಭರವಸೆ ಇದೆ ಎಂದು ಗರಿಮಾ ಹೇಳಿದ್ದಾರೆ.

ಗಾಯಕನ ಸಾವಿನ ಬಗ್ಗೆ ತನಿಖೆ ನಡೆಸಲು ವಿಶೇಷ ಡಿಜಿಪಿ ಎಂ.ಪಿ. ಗುಪ್ತಾ ನೇತೃತ್ವದಲ್ಲಿ ಅಸ್ಸಾಂ ಸರ್ಕಾರವು 10 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು. ಈ ತಂಡವು ಮಹಂತಾ, ಶರ್ಮಾ, ಸಿಂಗಾಪುರ ಅಸ್ಸಾಂ ಅಸೋಸಿಯೇಶನ್ ಸದಸ್ಯರು ಹಾಗೂ ಉತ್ಸವಕ್ಕಾಗಿ ಸಿಂಗಾಪುರಕ್ಕೆ ಹೋಗಿದ್ದ ಇತರರು ಸೇರಿದಂತೆ ಹಲವರಿಗೆ ಹಾಜರಾಗಿ ಹೇಳಿಕೆಗಳನ್ನು ದಾಖಲಿಸುವಂತೆ ನೋಟಿಸ್ ನೀಡಿತ್ತು.

ಈ ಹಿಂದೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಮಹಂತಾ ಮತ್ತು ಶರ್ಮಾ ಅವರು ಅಕ್ಟೋಬರ್ 6 ರೊಳಗೆ ಸಿಐಡಿ ಮುಂದೆ ಹಾಜರಾಗುವಂತೆ ಇಂಟರ್‌ಪೋಲ್ ಮೂಲಕ ‘ಲುಕ್‌ಔಟ್ ನೋಟಿಸ್’ ಜಾರಿ ಮಾಡಲಾಗಿದೆ ಎಂದು ಹೇಳಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page