Saturday, August 17, 2024

ಸತ್ಯ | ನ್ಯಾಯ |ಧರ್ಮ

ಜನಪರ ಕಾಳಜಿಯ ಸರ್ಕಾರ ನಮ್ಮದು: ಸಚಿವ ಬಿ ಝೆಡ್ ಜಮೀರ್ ಅಹ್ಮದ್ ಖಾನ್

ಜನರ ಸಮಸ್ಯೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲೇ ಪರಿಹರಿಸುವ ಹಿತದೃಷ್ಟಿಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ತ್ವರಿತ ಪರಿಹಾರ ಒದಗಿಸಲು ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಜನಪರ ಕಾಳಜಿ ಇರುವ ಸರ್ಕಾರವಾಗಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಜಮೀರ್ ಅಹ್ಮದ್ ಖಾನ್ ಅವರು ಹೇಳಿದರು.


ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ‘ಜನಸ್ಪಂದನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಜನರು ಇದ್ದಲ್ಲಿಗೆ ಸರ್ಕಾರದ ಸೇವೆಗಳು ತಲುಪಬೇಕು ಎನ್ನುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನಿರ್ದೇಶನದಂತೆ, ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಜಿಲ್ಲಾಡಳಿತದಿಂದ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದರು.


ಸಾರ್ವಜನಿಕರ ದೂರು, ಅಹವಾಲುಗಳನ್ನು ಆಲಿಸಿ, ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಮತ್ತು ಉಳಿದವುಗಳನ್ನು ಕಡಿಮೆ ಕಾಲಮಿತಿಯಲ್ಲಿ ಪರಿಹರಿಸಲಾಗುವುದು. ಉತ್ತಮ ಆಡಳಿತ ನೀಡಲು ಮತ್ತು ಸರಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಿಸಲು ಅಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಜಿಲ್ಲೆಯಲ್ಲಿ ಈಗಾಗಲೇ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ನಡೆಸಲಾಗಿದೆ. ಈ ಹಿಂದೆ ನಡೆದ ಜಿಲ್ಲಾ ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಒಟ್ಟು 380 ಅರ್ಜಿ ಸಲ್ಲಿಕೆಯಾಗಿದ್ದವು. ಅದರಲ್ಲಿ ಬಹಳಷ್ಟು ವಸತಿ ಮತ್ತು ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಸ್ತಿ ಅಹವಾಲು ಸಲ್ಲಿಕೆಯಾಗಿದ್ದವು. ಇನ್ನುಳಿದಂತೆ ಕಾಲಕ್ರಮೇಣವಾಗಿ ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಿದರು.


ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ಜನರ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಪರಿಹರಿಸಲು ಅಧಿಕಾರಿಗಳು ಮುಂದಾಗಬೇಕು. ಜಿಲ್ಲೆಯ ಸಮಸ್ಯೆಗಳನ್ನು ಜಿಲ್ಲಾ ಹಂತದಲ್ಲೇ ಪರಿಹರಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕಾಗಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.


ವಸತಿ ಇಲಾಖೆಗೆ ರೂ.500 ಕೋಟಿ ಅನುದಾನ:


ಬಡವರು ಸ್ವಂತ ಸೂರು ಹೊಂದಬೇಕು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜನವರಿ ತಿಂಗಳಲ್ಲಿ ಕ್ಯಾಬಿನೆಟ್‌ನಲ್ಲಿ ವಸತಿ ಇಲಾಖೆಗೆ ರೂ.500 ಕೋಟಿ ಅನುದಾನ ಬಿಡುಗಡೆ ಮಾಡಿದರು. ಅದರಂತೆ ಫೆಬ್ರವರಿಯಲ್ಲಿ 36,789 ಮನೆಗಳನ್ನು ನೀಡಿದ್ದೇವೆ. ಮುಂದಿನ ತಿಂಗಳಲ್ಲಿ 38,200 ಮನೆಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದರು.


ಬಡವರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳು:
ರಾಜ್ಯದ ಬಡಜನರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿತಂದಿದ್ದು, ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳದೆ ಜನ ಸಾಮಾನ್ಯರ ಸುಸ್ಥಿರ ಜೀವನ ಸುಧಾರಣೆ ಮಾಡುವ ಉದ್ದೇಶದಿಂದ ಈ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.


ರೈತರು ಭಯಪಡುವ ಆತಂಕವಿಲ್ಲ:


ಈ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಅಣೆಕಟ್ಟೆಯ 19 ನೇ ಕ್ರಸ್ಟ್ ಗ್ರೇಟ್‌ನ ಸರಪಳಿಯು ಕಳೆದ ವಾರ ತುಂಡಾದ ಹಿನ್ನಲೆಯಲ್ಲಿ ಕಳೆದ 5 ದಿನಗಳಿಂದ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ನಿನ್ನೆಯಷ್ಟೇ ಮೊದಲ ಹಂತದ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಉಳಿದ ನಾಲ್ಕು ಹಂತದ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಆದಕಾರಣ ರೈತರು ಆತಂಕ ಪಡಬಾರದು ಎಂದು ಸಚಿವರು ಅಭಯ ನೀಡಿದರು.


ಈ ಕಾರ್ಯದಲ್ಲಿ ಭಾಗಿಯಾದ 35 ಸಿಬ್ಬಂದಿಗಳಿಗೆ ಔತಣಕೂಟ ಏರ್ಪಡಿಸಲಾಗಿದೆ ಮತ್ತು ರೂ.50 ಸಾವಿರ ಬಹುಮಾನ ನೀಡಿ ಸನ್ಮಾನಿಸಲಾಗುವುದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page