Friday, July 18, 2025

ಸತ್ಯ | ನ್ಯಾಯ |ಧರ್ಮ

ನಮ್ಮ ಸರ್ಕಾರ ಸದಾ ಕನ್ನಡದ ಸಾಹಿತ್ಯ, ಸಂಸ್ಕೃತಿಯ ಪರವಾಗಿ ಕೆಲಸ ಮಾಡುತ್ತದೆ: ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು ಜು 17: ನಮ್ಮ ಸರ್ಕಾರ ಸದಾ ಕನ್ನಡದ ಸಾಹಿತ್ಯ, ಸಂಸ್ಕೃತಿಯ ಪರವಾಗಿ ಕೆಲಸ ಮಾಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2024-25ನೇ ಸಾಲಿನ ಜೀವಮಾನ ಸಾಧನೆಯ ವಿವಿಧ ಪ್ರಶಸ್ತಿಗಳನ್ನು ವಿತರಿಸಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು.

ಪ್ರಶಸ್ತಿಗಳನ್ನು ನಿರೀಕ್ಷಿಸದೇ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿದೆ. ಇದರ ಅಂಗವಾಗಿ 18 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿದ್ದೇವೆ. ಇದರಲ್ಲಿ ಮೂರು ಪ್ರಶಸ್ತಿಗೆ 10 ಲಕ್ಷ ರೂಪಾಯಿ ನೀಡಲಾಗುತ್ತಿದೆ, ಉಳಿದ ಪ್ರಶಸ್ತಿಗಳಿಗೆ 5 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಆದರೆ, ಪುರಸ್ಕೃತರ ಸಾಧನೆಗೆ ಈ ಹಣ ಸಮವಲ್ಲ. ಆದರೆ, ಇದು ಕನ್ನಡ ಸಂಸ್ಕೃತಿಯ ಕೆಲಸಕ್ಕೆ ಕೊಡುವ ಗೌರವ ಎಂದರು.

ಬಹಳ ಮಂದಿ ಸಂಸ್ಕೃತಿ ವಿಚಾರದಲ್ಲಿ ಸಾಧನೆ ಮಾಡುತ್ತಲೇ ಇರುತ್ತಾರೆ. 2000 ವರ್ಷಗಳ ಇತಿಹಾಸ ಇರುವ ಕನ್ನಡದ ಸಾಂಸ್ಕೃತಿಕ ಸಂಪತ್ತು ಇಡೀ ವಿಶ್ಬಕ್ಕೆ ಮಾದರಿಯಾಗಿದೆ ಎಂದರು.

ಕನ್ನಡ ಸಂಸ್ಕೃತಿ, ಸಾಹಿತ್ಯದ ಕೆಲಸದಲ್ಲಿ ನಮ್ಮ ಸರ್ಕಾರ ಹಿಂದೆ ಬೀಳುವುದಿಲ್ಲ. ಇನ್ನೂ ಹೆಚ್ಚಿನ ಪ್ರೋತ್ಸಾಹ ಕೊಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

ರಾಜ್ಯದ ಮೊದಲ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿದ್ದವನು ನಾನು. ನಾನು ಸಾಹಿತ್ಯದ ವಿದ್ಯಾರ್ಥಿ ಅಲ್ಲ. ಆದರೆ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುವವನು. ಕನ್ನಡ ಕರ್ನಾಟಕದಲ್ಲಿ ಸಾರ್ವಭೌಮ‌ ಭಾಷೆ ಆಗಬೇಕು ಎನ್ನುವ ದಿಕ್ಕಿನಲ್ಲಿ ಬೇಷರತ್ ಬದ್ಧತೆ ಇಟ್ಟುಕೊಂಡು ನಾನು ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page