ಕೈಗಾರಿಕಾ ವಿವಾದ ಕಾಯ್ದೆಯಡಿ ಎಸ್ಮಾ ಜಾರಿ ಮಾಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಬಿಎಂಆರ್‌ಸಿಎಲ್ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ BMRCL ಸಂಪೂರ್ಣ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿದೆ ಎಂದು ಸ್ಪಷ್ಟಪಡಿಸಿದೆ. BMRCL ಅತ್ಯವಶ್ಯಕ ಸೇವೆ ವ್ಯಾಪ್ತಿಗೊಳಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಕೇಂದ್ರ ಸರ್ಕಾರವೇ ಆಡಳಿತಾತ್ಮಕ ಅಧಿಕಾರ ಹೊಂದಿದೆ ಎಂದು ತಿಳಿಸಿದೆ.
ಆ ಮೂಲಕ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠ 2017ರ ಜುಲೈ 7ರ ರಾಜ್ಯ ಸರ್ಕಾರದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಬಿಎಂಆರ್‌ಸಿಎಲ್ ಸೇವೆಗಳನ್ನು ಸಾರ್ವಜನಿಕ ಉಪಯುಕ್ತತೆ ಸೇವೆ ಎಂದು ಮತ್ತು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯ ಸೆಕ್ಷನ್ 2(1) ಅಡಿಯಲ್ಲಿ ಅಗತ್ಯ ಸೇವೆ ಎಂದು ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಬಿಎಂಆರ್‌ಸಿಎಲ್ ಪ್ರತ್ಯೇಕ ಕಂಪನಿಯಲ್ಲ, ರೈಲ್ವೆ ಕಂಪನಿ. ಹೀಗಾಗಿ ಕೇಂದ್ರ ಸರ್ಕಾರವೇ ಆಡಳಿತಾತ್ಮಕ ಅಧಿಕಾರ ಹೊಂದಿದೆ ಎಂದು ನ್ಯಾಯಾಲಯ ತಿಳಿಸಿದೆ.
BMRCL ಸಂಬಂಧಿಸಿದ ವ್ಯಾಜ್ಯಗಳು ಏರ್ಪಟ್ಟರೆ ಅದನ್ನು ಕೈಗಾರಿಕಾ ವಿವಾದಗಳ ಕಾಯಿದೆಯಡಿಯಲ್ಲಿ ಪರಿಹರಿಸುವ ಅಧಿಕಾರವು ಕೇಂದ್ರ ಸರಕಾರಕ್ಕೆ ಇದೆಯೇ ಹೊರತು ರಾಜ್ಯ ಸರಕಾರಕ್ಕಲ್ಲಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
