Friday, June 14, 2024

ಸತ್ಯ | ನ್ಯಾಯ |ಧರ್ಮ

ಕೋಮುವ್ಯಾಧಿ ಕೆರೇಹಳ್ಳಿ ಕಾರಾಗೃಹದಿಂದ ಹೊರಗೆ, ಸರಕಾರಿ ನಡೆ ಸಂದೇಹದೆಡೆಗೆ

ಕೆರೇಹಳ್ಳಿಯ ಮೇಲಿರುವುದು ಕೊಲೆ, ಕೊಲೆ ಯತ್ನ, ಕೋಮುಪ್ರಚೋದನೆಯಂತಹ ಪ್ರಕರಣಗಳು. ಇವು ಗೂಂಡಾ ಕಾಯ್ದೆಯ ಕೆಳಗೆ ಬರುತ್ತವಾ, ಕೋರ್ಟಲ್ಲಿ ನಿಲ್ಲುತ್ತವಾ ಎನ್ನುವುದನ್ನು ಪೋಲೀಸ್ ಕಮಿಷನರ್ ರವರು ಯೋಚಿಸಬೇಕಿತ್ತು. ಯಾವುದೋ ಆರೋಪಕ್ಕೆ ಇನ್ಯಾವುದೋ ಕಾಯ್ದೆಯನ್ನು ಅಪ್ಲೈ ಮಾಡುವುದು ಸೂಕ್ತವಲ್ಲವೆಂದು ಸರಕಾರದ ಕಾನೂನು ಸಲಹೆಗಾರರು ಸೂಚಿಸಬೇಕಿತ್ತು. ಕೊಲೆ ಆರೋಪಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದರೆ ಇನ್ನೇನು ತಾನೇ ಆಗಲು ಸಾಧ್ಯ?ಶಶಿಕಾಂತ ಯಡಹಳ್ಳಿ

ಈ ರೀತಿಯ ನಕಾರಾತ್ಮಕ ನಿರ್ಧಾರವನ್ನು ಯಾರೂ ನಿರೀಕ್ಷಿಸಿರಲಿಲ್ಲ. ರಾಜ್ಯದಲ್ಲಿ ಸರಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರವು ಅಪರಾಧಿಕ ಹಿನ್ನೆಲೆಯುಳ್ಳ, ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪುನೀತ್ ಕೆರೆಹಳ್ಳಿ ಎನ್ನುವ ಮತಾಂಧನ ಮೇಲಿದ್ದ ಗೂಂಡಾ ಕಾಯ್ದೆಯಡಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರಕಾರವೇ ಹಿಂಪಡೆದಿದೆ.

ರಾಷ್ಟ್ರ ರಕ್ಷಣಾ ಪಡೆಯ ಸ್ವಘೋಷಿತ ಅಧ್ಯಕ್ಷ ಕೆರೆಹಳ್ಳಿ ಗೋರಕ್ಷಣೆಯ ಹೆಸರಲ್ಲಿ ಮುಸ್ಲಿ ಸಮುದಾಯದ ಇದ್ರೀಸ್ ಪಾಷಾ ಎನ್ನುವ ವ್ಯಕ್ತಿಯನ್ನು ಹತ್ಯೆ ಮಾಡಿದ ಗುರುತರ ಆರೋಪ ಇದೆ. ಅಷ್ಟೇ ಯಾಕೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ದ ಅನೇಕ ಎಫ್ ಐ ಆರ್ ಗಳು ದಾಖಲಾಗಿವೆ. ಕೆಲವು ಪ್ರಕರಣಗಳಲ್ಲಿ ಶಿಕ್ಷೆಯೂ ಆಗಿದೆಯಂತೆ. ಮುಖ್ಯಮಂತ್ರಿಯಾಗಿರುವ ಮಾನ್ಯ ಸಿದ್ದರಾಮಯ್ಯನವರನ್ನು ಅತ್ಯಂತ ಕೀಳು ಭಾಷೆ ಬಳಸಿ ನಿಂದಿಸಿ ವೀಡಿಯೋ ಮಾಡಿ ಜಾಲತಾಣಗಳಲ್ಲಿ ಈ ವ್ಯಕ್ತಿ ಹಂಚಿಕೊಂಡು “ಏನೂ ಮಾಡಲು ಸಾಧ್ಯವಿಲ್ಲ” ಎಂದು ಬಹಿರಂಗವಾಗಿ ಚಾಲೆಂಜ್ ಹಾಕಿದ್ದನ್ನು ಈ ರಾಜ್ಯ ಸರಕಾರ ಮರೆತಿರಬಹುದು. ಆದರೆ ಜನರು ಇನ್ನೂ ಮರೆತಿಲ್ಲ.

ಅಪರಾಧಿಕ ಹಿನ್ನೆಲೆಯ ಈ ಹಿಂದುತ್ವವಾದಿ ಮತಾಂಧನ ವಿರುದ್ದ ಪೋಲೀಸ್ ಕಮಿಷನರ್ ದಯಾನಂದರವರು ಆಗಸ್ಟ್ 11 ರಂದು ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶ ಹೊರಡಿಸಿದ್ದರು. ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿ ಅವತ್ತೇ ಜೈಲಿಗೆ ಕಳುಹಿಸಿದ್ದರು.

ಆದರೆ ಅದೇನಾಯಿತೋ ಈ ಸರಕಾರಕ್ಕೆ, ತನ್ನದೇ ಪೋಲೀಸ್ ಇಲಾಖೆಯ ಆದೇಶವನ್ನು ಈಗ ಹಿಂಪಡೆದಿದೆ. ಹಾಗೆ ಹಿಂಪಡೆಯುವಂತೆ ಸಲಹಾ ಸಮಿತಿಯ ಮಾಡಿದ ಸಲಹೆ ಪುನೀತ ಕೆರೆಹಳ್ಳಿಯ ಬಿಡುಗಡೆಗೆ ಕಾರಣವಾಗಿದೆ.

ಇಷ್ಟಕ್ಕೂ ಆಗಿದ್ದೇನೆಂದರೆ. ಗೂಂಡಾ ಕಾಯ್ದೆಯಡಿಯ ತನ್ನ ಬಂಧನ ಅಕ್ರಮವೆಂದು ಆರೋಪಿಸಿದ ಕೆರೆಹಳ್ಳಿ ಹೈಕೋರ್ಟ್ ಮೊರೆ ಹೋಗಿದ್ದು ಈ ಆರೋಪದ ವಿಚಾರಣೆಯಲ್ಲಿ ಕೋರ್ಟ್ ಆದೇಶದ ಮೇರೆಗೆ ಸರಕಾರಿ ಪರ ಪ್ರಾಸಿಕ್ಯೂಶನ್ ನ್ಯಾಯಾಲಯದ ಸಲಹಾ ಸಮಿತಿ ಮಂಡಳಿ ಮುಂದೆ ತಮ್ಮ ವಾದ ಮಂಡಿಸಬೇಕಿತ್ತು. ಪೊಲೀಸರು, ಕಾನೂನು ತಜ್ಞರುಗಳು ಸರಿಯಾದ ದಾಖಲೆ ಸಾಕ್ಷಿಗಳನ್ನು ಒದಗಿಸಿ ಗಟ್ಟಿಯಾದ ವಾದಮಂಡಿಸಿದ್ದರೆ ಸರಕಾರಕ್ಕೆ ಹೀಗೆ ಮುಜುಗರ ಅನುಭವಿಸುವ ದುಸ್ಥಿತಿ ಬರುತ್ತಿರಲಿಲ್ಲ. “ಕೆರೆಹಳ್ಳಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ” ಎನ್ನುವ ಸಮಿತಿಯ (13-9-2023) ವರದಿಯನ್ನು ಆಧರಿಸಿ ಕಮಿಷನರ್ ಆದೇಶವನ್ನು ರದ್ದು ಪಡಿಸಿ ಕೆರೇಹಳ್ಳಿಯನ್ನು ಬಿಡುಗಡೆಗೊಳಿಸದೇ ಸರಕಾರಕ್ಕೆ ಬೇರೆ ದಾರಿ ಇರಲಿಲ್ಲ.

ಸಲಹಾ ಸಮಿತಿಯ ಮುಂದೆ ಹಾಗೂ ಸರಕಾರದ ಈ ನಿರ್ಧಾರದ ಹಿಂದೆ ಯಾವ ಕಾಣದ ಕೈಗಳು ಕೆಲಸ ಮಾಡಿವೆ? ಬಹಿರಂಗವಾಗಿ ನಿಂದಿಸಿ ಸವಾಲು ಹಾಕಿದ ವ್ಯಕ್ತಿಯ ವಿಡಿಯೋ ಸಾಕ್ಷ್ಯಗಳೇ ಇದ್ದರೂ ಕೇಸ್ ಬಿದ್ದು ಹೋಗಲು ಇರುವ ಕಾರಣಗಳಾದರೂ ಯಾವುವು? ಸರಿಯಾಗಿ ಸಾಕ್ಷಿಸಮೇತವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸುವಲ್ಲಿ ಸರಕಾರಿ ಪರ ಪ್ರಾಸಿಕ್ಯೂಷನ್ ನಿರ್ಲಕ್ಷ ವಹಿಸಿತೆ? ಅಥವಾ ಈ ವ್ಯವಸ್ಥೆಯಲ್ಲಿರುವ ಹಿಂದುತ್ವವಾದಿಗಳ ಪರೋಕ್ಷ ಬೆಂಬಲವೂ ಕೆರೆಹಳ್ಳಿ ಪರವಾಗಿ ಕೆಲಸ ಮಾಡಿತೇ? ಕಾರಣ ಯಾವುದೇ ಇರಲಿ ಸರಕಾರದ ಈ ಆದೇಶ ಖಂಡಿತ ಕೆರೇಹಳ್ಳಿಯವರಂತಹ ಮತಾಂಧ ಶಕ್ತಿಗಳಿಗೆ ಪ್ರಚೋದನೆ ನೀಡುವಂತಿದೆ. ಏನೇ ಮಾಡಿದರೂ, ಏನೇ ನಿಂದಿಸಿದರೂ ನಾವು ಕಾನೂನು ಹಿಡಿತದಿಂದ ಪಾರಾಗಬಲ್ಲೆವು ಎನ್ನುವ ಭರವಸೆಯನ್ನು ಸಮಾಜ ವಿರೋಧಿ ಕೋಮುವ್ಯಾಧಿಗಳಿಗೆ ಕೊಡುವಂತಿದೆ. ಹೀಗಾದರೆ ಪೊಲೀಸ್ ಹಾಗೂ ಕಾನೂನು ವ್ಯವಸ್ಥೆಯ ಬಗ್ಗೆ ಭಯ ಆತಂಕ ಇಲ್ಲದೇ ಹಿಂದುತ್ವದ ಹೆಸರಲ್ಲಿ, ಗೋರಕ್ಷಣೆಯ ಹೆಸರಲ್ಲಿ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗವಹಿಸುವ ಹುಮ್ಮಸ್ಸನ್ನು ಈ ರೀತಿಯ ಆದೇಶಗಳು ನೀಡುತ್ತವೆ. ಇದು ಖಂಡಿತಾ ಸಮರ್ಥನೀಯವಲ್ಲ. ಸಿದ್ದರಾಮಯ್ಯನವರ ಸರಕಾರದ ಈ ನಿಲುವು ಒಪ್ಪುವಂತಹುದಲ್ಲ. ಇಂತಹ ಆದೇಶಗಳಿಂದಾಗಿ ಪೊಲೀಸ್ ರ ಅತ್ಮಸ್ಥೈರ್ಯ ಕೂಡಾ ಕುಂಟಿತವಾಗುವುದರಲ್ಲಿ ಸಂದೇಹವಿಲ್ಲ.

ದನ್ನೂ ಓದಿ-ಚೈತ್ರಾ ಕುಂದಾಪುರ ಹಣ ವಂಚನೆ ಪ್ರಕರಣ: ಶಿವಮೊಗ್ಗ ABVP ಶಾಮೀಲು?

ಕೆರೇಹಳ್ಳಿಯ ವಿರುದ್ದ ಅವಸರದಲ್ಲಿ ಗೂಂಡಾ ಕಾಯ್ದೆಯನ್ನು ಹಾಕುವಾಗಲೇ ಪೊಲೀಸರು ಯೋಚಿಸಬೇಕಿತ್ತು. ಯಾಕೆಂದರೆ ಗೂಂಡಾ ಕಾಯ್ದೆಯನ್ನು ಕಳ್ಳಬಟ್ಟಿ ವ್ಯಾಪಾರಿಗಳು, ಮಾದಕವಸ್ತು ವ್ಯಾಪಾರಿಗಳು, ಗೂಂಡಾಗಳು, ಅನೈತಿಕ ವ್ಯವಹಾರಗಳ ಅಪರಾಧಿಗಳು, ಕೊಳಚೆ ಪ್ರದೇಶ ಕಬಳಿಸುವವರು, ಆಡಿಯೋ ವಿಡಿಯೋ ಪೈರಸಿಗಳಲ್ಲಿ ತೊಡಗಿರುವವರ ಮೇಲೆ ಹಾಕಿ ಜೈಲಿಗಟ್ಟಲು 1985 ಕರ್ನಾಟಕ ಅಧಿನಿಯಮದಲ್ಲಿ ಅವಕಾಶವಿದೆ. ಆದರೆ ಕೆರೇಹಳ್ಳಿಯ ಮೇಲಿರುವುದು ಕೊಲೆ, ಕೊಲೆ ಯತ್ನ, ಕೋಮುಪ್ರಚೋದನೆಯಂತಹ ಪ್ರಕರಣಗಳು. ಇವು ಗೂಂಡಾ ಕಾಯ್ದೆಯ ಕೆಳಗೆ ಬರುತ್ತವಾ, ಕೋರ್ಟಲ್ಲಿ ನಿಲ್ಲುತ್ತವಾ ಎನ್ನುವುದನ್ನು ಪೋಲೀಸ್ ಕಮಿಷನರ್ ರವರು ಯೋಚಿಸಬೇಕಿತ್ತು. ಸರಕಾರದ ಒತ್ತಡವಿದ್ದಿದ್ದರೆ ಕಾಯ್ದೆಯ ಸಾಧಕ ಬಾಧಕಗಳನ್ನು ವಿವರಿಸಿ ಹೇಳಬೇಕಿತ್ತು. ಯಾವುದೋ ಆರೋಪಕ್ಕೆ ಇನ್ಯಾವುದೋ ಕಾಯ್ದೆಯನ್ನು ಅಪ್ಲೈ ಮಾಡುವುದು ಸೂಕ್ತವಲ್ಲವೆಂದು ಸರಕಾರದ ಕಾನೂನು ಸಲಹೆಗಾರರು ಸೂಚಿಸಬೇಕಿತ್ತು. ಆದರೆ ಅವಸರದ ತೀರ್ಮಾನದಿಂದಾಗಿಯೋ, ಯಾರೋ ಹೇರಿದ ಒತ್ತಡದಿಂದಾಗಿಯೋ ಪೊಲೀಸ್ ಇಲಾಖೆ ತಪ್ಪು ನಿರ್ಧಾರ ತೆಗೆದುಕೊಂಡಿದ್ದು ಈಗ ಆರೋಪಿಯ ಬಿಡುಗಡೆಯಿಂದಾಗಿ ಸರಕಾರಕ್ಕೆ ಮುಖಭಂಗವಾಗುವಂತಾಗಿದೆ. ಕೊಲೆ ಆರೋಪಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದರೆ ಇನ್ನೇನು ತಾನೇ ಆಗಲು ಸಾಧ್ಯ? ಹೋಗಲಿ ಕೆರೆಹಳ್ಳಿಯನ್ನು ಗೂಂಡಾ ಎಂದಾದರೂ ರುಜುವಾತು ಮಾಡಬಹುದಾದ ಸಾಧ್ಯತೆಗಳಿದ್ದವು. ಬಹಿರಂಗವಾಗಿಯೇ ಒಂದು ರಾಜ್ಯದ ಮುಖ್ಯಮಂತ್ರಿಗೆ ಬೆದರಿಕೆ ಹಾಕಿದ ವಿಡಿಯೋಗಳನ್ನೇ ಪ್ರಭಲ ಸಾಕ್ಷಿಯಾಗಿಸಬಹುದಾಗಿತ್ತು. ಅದನ್ನೂ ಮಾಡಲು ಸರಕಾರಿ ಪ್ರಾಸಿಕ್ಯೂಶನ್ ವಿಫಲವಾಯ್ತು. ಬೇರೆ ಯಾರಾದರೂ ಪ್ರಧಾನಿಗಳಿಗೋ ಇಲ್ಲವೇ ಯೋಗಿಯವರಂತಹ ಮುಖ್ಯಮಂತ್ರಿಗಳಿಗೋ ಈ ಕೆರೆಹಳ್ಳಿ ಸಿದ್ದರಾಮಯ್ಯನವರಿಗೆ ಹಾಕಿದಂತಹ ಬಹಿರಂಗ ಬೆದರಿಕೆ ಹಾಕಿದ್ದರೆ ಜೈಲಿನಲ್ಲಿಯೇ ಕೊಳೆಯಬೇಕಾಗುತ್ತಿತ್ತು.‌ ಆದರೆ ಜೈಲಲ್ಲಿರಬೇಕಾದ ವ್ಯಕ್ತಿ ಈಗ ಬಿಡುಗಡೆಗೊಂಡು ಸರಕಾರದ ವಿರುದ್ದವೇ ಮಾನನಷ್ಟ ಮೊಕದ್ದಮೆ ಹಾಕುತ್ತೇನೆಂದು ಪತ್ರಿಕಾಗೋಷ್ಟಿ ಕರೆದು ಗುಡುಗುತ್ತಿದ್ದಾನೆ. ಹಾಗಾದರೆ ಈ ಸರಕಾರಕ್ಕೆ ಕೋಮುವ್ಯಾಧಿಗಳನ್ನು ಹತೋಡಿಯಲ್ಲಿಡಲು ಸಾಧ್ಯವಿಲ್ಲವೇ? ಆತುರಕ್ಕೆ ಬಿದ್ದು ಬಂಧಿಸುವುದಷ್ಟೇ ಅಲ್ಲಾ ಆ ಬಂಧನವನ್ನು ಸಾಕ್ಷಿಸಮೇತ ಸಮರ್ಥಿಸಿಕೊಂಡು ನ್ಯಾಯಾಲಯದಲ್ಲಿ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಆಗುವುದಿಲ್ಲವೇ? ಸರಕಾರಕ್ಕೆ, ಮುಖ್ಯಮಂತ್ರಿಗಳಿಗೆ ಕಾನೂನಾತ್ಮಕ ಸಲಹೆ ಕೊಡುವುದಕ್ಕಾಗಿಯೇ ಕಾನೂನು ಸಲಹೆಗಾರರ ಪಡೆಯೇ ಇದೆಯಲ್ಲಾ, ಅವರೇನು ಮಾಡುತ್ತಿದ್ದಾರೆ? ಕೋಮುವಾದವನ್ನು ಹತೋಟಿಗೆ ತಂದು ಕೋಮುವ್ಯಾಧಿಗಳನ್ನು ನಿಯಂತ್ರಿಸುತ್ತಾರೆ ಎನ್ನುವ ಭರವಸೆಯ ಮೇರೆಗೆ ಈ ನಾಡಿನ ಬಹುತೇಕ ಪ್ರಗತಿಪರರು, ಕೋಮುಸೌಹಾರ್ಧತೆ ಬಯಸುವವರು ಹಾಗೂ ಅಹಿಂಸಾವಾದಿ ಶಾಂತಿಪ್ರಿಯರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾಂಗ್ರೆಸ್ ಸರಕಾರವನ್ನು ಬೆಂಬಲಿಸಿದ್ದು ಮತ್ತು ಬೆಂಬಲಿಸುತ್ತಿರುವುದು. ಅವರೆಲ್ಲರ ನಂಬಿಕೆಯನ್ನು ಉಳಿಸಿಕೊಳ್ಳುವ ಹಾಗೂ ಈ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಿಸುವ ಜವಾಬ್ದಾರಿ ಕಾಂಗ್ರೆಸ್ ನೇತೃತ್ವದ ಸರಕಾರದ್ದಾಗಿದೆ, ಸೌಹಾರ್ದತೆಗೆ ಭಂಗತರುವ ಶಕ್ತಿಗಳನ್ನು ನಿಗ್ರಹಿಸುವ ಹೊಣೆಗಾರಿಕೆ ಮತಾಂಧತೆಯನ್ನು ವಿರೋಧಿಸುವ ಮಾನ್ಯ ಸಿದ್ದರಾಮಯ್ಯನವರದ್ದಾಗಿದೆ.

  • ಶಶಿಕಾಂತ ಯಡಹಳ್ಳಿ, ಪತ್ರಕರ್ತರು

Related Articles

ಇತ್ತೀಚಿನ ಸುದ್ದಿಗಳು