ಸೊಲ್ಲಾಪುರ, ಡಿಸೆಂಬರ್ 3: ಮಹಾರಾಷ್ಟ್ರದ ಸೋಲಾಪುರದ ಮರ್ಕಡವಾಡಿ ಗ್ರಾಮದಲ್ಲಿ ಅನಧಿಕೃತವಾಗಿ ಮತಪತ್ರಗಳನ್ನು ಬಳಸಿ ‘ಮರು ಮತದಾನ’ ನಡೆಸಲು ಯತ್ನಿಸಿದ ಆರೋಪದ ಮೇಲೆ ಅಕ್ಕಪಕ್ಕದ 200ಕ್ಕೂ ಹೆಚ್ಚು ಜನರ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.
ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಗ್ಗೆ ತಪ್ಪು ಮಾಹಿತಿ ಹರಡಿದ ಆರೋಪವೂ ಅವರ ಮೇಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ಸಂದರ್ಭದಲ್ಲೂ ಮತಪತ್ರ ಬಳಸಿ ‘ಮರು ಮತದಾನ’ ನಡೆಸಲು ಅವಕಾಶ ಇಲ್ಲದ ಕಾರಣ ಮರ್ಕಡವಾಡಿಯ ಕೆಲ ಗ್ರಾಮಸ್ಥರು ಈ ಕ್ರಮ ಕೈಗೊಂಡಿರುವುದು ಕಾನೂನು ಬಾಹಿರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ನಾನಾ ಪಟೋಲೆ ಅವರು ಮಾರ್ಕಡವಾಡಿ ನಿವಾಸಿಗಳ ಧೈರ್ಯವನ್ನು ಶ್ಲಾಘಿಸಿದರು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟದಲ್ಲಿ ಅವರು ಮೊದಲ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಿದರು.
ಮಹಾರಾಷ್ಟ್ರದ ಮಲ್ಶಿರಾಸ್ ವಿಧಾನಸಭಾ ಕ್ಷೇತ್ರದ ಗ್ರಾಮಸ್ಥರ ಗುಂಪು ಬ್ಯಾಲೆಟ್ ಪೇಪರ್‌ಗಳ ಮೂಲಕ “ಮರು ಮತದಾನ” ಮಾಡುವಂತೆ ಒತ್ತಾಯಿಸುತ್ತಿದ್ದರು, ಆದರೆ ಪೊಲೀಸರು ಮತ್ತು ಈ ಸ್ಥಾನದಿಂದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್ಚಂದ್ರ ಪವಾರ್) ವಿಜೇತ ಅಭ್ಯರ್ಥಿ ಉತ್ತಮ್ ಜಾಂಕರ್ ಮಧ್ಯಪ್ರವೇಶದ ನಂತರ, ಗ್ರಾಮಸ್ಥರು ತಮ್ಮ ಯೋಜನೆಯನ್ನು ಕೈಬಿಟ್ಟರು.
ಈ ಹಿಂದೆ, ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ಪ್ರದೇಶದ ಮರ್ಕಡವಾಡಿ ಗ್ರಾಮದ ನಿವಾಸಿಗಳು ಇವಿಎಂಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು ಮತ್ತು ಡಿಸೆಂಬರ್ 3ರಂದು “ಮರು ಮತದಾನ” ನಡೆಸಲಾಗುವುದು ಎಂದು ಬ್ಯಾನರ್‌ಗಳನ್ನು ಹಾಕಿದ್ದರು.
ಈ ಗ್ರಾಮವು ಮಲ್ಶಿರಾಸ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ, ಅಲ್ಲಿ ನವೆಂಬರ್ 20ರಂದು ನಡೆದ ಚುನಾವಣೆಯಲ್ಲಿ ಜಾಂಕರ್ ಅವರು ಬಿಜೆಪಿಯ ರಾಮ್ ಸಾತ್ಪುತೆ ಅವರನ್ನು 13,147 ಮತಗಳಿಂದ ಸೋಲಿಸಿದರು. ನವೆಂಬರ್ 23ರಂದು ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲಾಯಿತು.