Home ದೇಶ ‘ಮುಸ್ಲಿಮರಿಗೆ ಧಾರ್ಮಿಕ ಸ್ವಾತಂತ್ರ್ಯ ಅನ್ವಯಿಸುವುದಿಲ್ಲವೇ?’: ಯುಪಿಯ ಸಹಾರನ್‌ಪುರ ಮಸೀದಿ ಧ್ವಂಸಕ್ಕೆ ಒವೈಸಿ ತೀವ್ರ ಆಕ್ರೋಶ

‘ಮುಸ್ಲಿಮರಿಗೆ ಧಾರ್ಮಿಕ ಸ್ವಾತಂತ್ರ್ಯ ಅನ್ವಯಿಸುವುದಿಲ್ಲವೇ?’: ಯುಪಿಯ ಸಹಾರನ್‌ಪುರ ಮಸೀದಿ ಧ್ವಂಸಕ್ಕೆ ಒವೈಸಿ ತೀವ್ರ ಆಕ್ರೋಶ

0

ಲಖನೌ: ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲಾಧಿಕಾರಿ ಕಚೇರಿ (ಕಲೆಕ್ಟರೇಟ್) ಆವರಣದಲ್ಲಿದ್ದ ಶತಮಾನಕ್ಕೂ ಹಳೆಯದಾದ ಮಸೀದಿಯನ್ನು ಮುಂಜಾನೆ ಬುಲ್ಡೋಜರ್ ಮೂಲಕ ನೆಲಸಮಗೊಳಿಸಿರುವುದನ್ನು ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಒವೈಸಿ ತೀವ್ರವಾಗಿ ಖಂಡಿಸಿದ್ದಾರೆ.ಭಾರತೀಯ ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ದೇಶದ ಮುಸ್ಲಿಮರಿಗೆ ಅನ್ವಯಿಸುವುದಿಲ್ಲವೇ ಎಂದು ಅವರು ಬಿಜೆಪಿ ಮತ್ತು ಯೋಗಿ ಆದಿತ್ಯನಾಥ್ ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದ್ದಾರೆ.

ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡದೆ ಮುಂಜಾನೆ 5 ಗಂಟೆಯ ಸುಮಾರಿಗೆ ಆಡಳಿತ ಮಂಡಳಿ ಏಕಾಏಕಿ ಈ ಕಾರ್ಯಾಚರಣೆ ನಡೆಸಿರುವುದರ ಔಚಿತ್ಯವನ್ನು ಒವೈಸಿ ಪ್ರಶ್ನಿಸಿದ್ದಾರೆ.“ಕೇವಲ ನಿಮಗೆ ಕಿರಿಕಿರಿ ಅನ್ನಿಸಿತು ಎಂಬ ಕಾರಣಕ್ಕೆಲ್ಲಾ ನಮ್ಮ ಮಸೀದಿಗಳನ್ನು ಬುಲ್ಡೋಜರ್ ಹಚ್ಚಿ ಕೆಡವಲು ಸಾಧ್ಯವಿಲ್ಲ. ನೈಸರ್ಗಿಕ ನ್ಯಾಯದ ತತ್ವಗಳ ಪ್ರಕಾರ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡಬೇಕಿತ್ತು. ಆದರೆ ಪ್ರಕರಣವು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ತಲುಪುವುದನ್ನು ತಡೆಯುವ ಉದ್ದೇಶದಿಂದಲೇ ಯೋಗಿ ಸರ್ಕಾರ ಈ ಅವಸರದ ಕ್ರಮ ಕೈಗೊಂಡಿದೆ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಐತಿಹಾಸಿಕ ದಾಖಲೆಗಳ ಪ್ರಕಾರ ಈ ಮಸೀದಿಯು 1911 ಅಥವಾ ಅದಕ್ಕಿಂತ ಮುಂಚಿನಿಂದಲೂ ಅಸ್ತಿತ್ವದಲ್ಲಿದ್ದು, ನಂತರದ ದಿನಗಳಲ್ಲಿ ಕಲೆಕ್ಟರೇಟ್ ಕಚೇರಿಯನ್ನು ನಿರ್ಮಿಸಲಾಗಿದೆ ಎಂದು ಒವೈಸಿ ವಾದಿಸಿದ್ದಾರೆ. ಮುಸ್ಲಿಂ ದಾನಿಯೊಬ್ಬರು ನೀಡಿದ ಜಾಗದಲ್ಲಿ ನಿರ್ಮಾಣವಾಗಿರುವ ಈ ಮಸೀದಿಗೆ ‘ಬಳಕೆಯ ಮೂಲಕ ವಕ್ಫ್’ (Waqf by User) ಹಾಗೂ ‘ಅಡ್ವರ್ಸ್ ಪೊಸೆಷನ್’ ನಿಯಮಗಳ ಅಡಿಯಲ್ಲಿ ಕಾನೂನುಬದ್ಧ ರಕ್ಷಣೆ ಇದೆ; ಆದರೂ ಅಧಿಕಾರಿಗಳು ಈ ಎಲ್ಲಾ ಸಾಂವಿಧಾನಿಕ ಹಕ್ಕುಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದ್ದಾರೆ.

ದರ್ಗಾ, ಖಬರಸ್ಥಾನ್ ಹಾಗೂ ಮಸೀದಿಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಧ್ವಂಸಗೊಳಿಸಲಾಗುತ್ತಿದೆ ಎಂದಿರುವ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ರೂಪಿಸಿದ ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆ ಮುಸ್ಲಿಮರಿಗೆ ಅನ್ವಯಿಸುವುದಿಲ್ಲವೇ ಎಂದು ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಅವರಿಗೆ ಪ್ರಶ್ನೆ ಎಸೆದಿದ್ದಾರೆ.

ಈ ಹಿಂದೆ ಸಹಾರನ್‌ಪುರ ಸಿಟಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಸೀದಿಯು ಸುಮಾರು 315 ಚದರ ಮೀಟರ್ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ ಎಂದು ಆದೇಶಿಸಿ, ₹6.41 ಕೋಟಿ ದಂಡ ವಿಧಿಸಿ ತೆರವುಗೊಳಿಸುವಂತೆ ಸೂಚಿಸಿತ್ತು.ಈ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗಷ್ಟೇ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿತ್ತು.ಆ ತೀರ್ಪಿನ ಬೆನ್ನಲ್ಲೇ ಭಾರಿ ಪೊಲೀಸ್ ಭದ್ರತೆಯಲ್ಲಿ ಆಡಳಿತ ಮಂಡಳಿಯು ಕಟ್ಟಡವನ್ನು ನೆಲಸಮಗೊಳಿಸಿದೆ. ಸಂತ್ರಸ್ತ ಮಸೀದಿ ಆಡಳಿತ ಮಂಡಳಿಗೆ ಅಗತ್ಯವಿರುವ ಎಲ್ಲಾ ಕಾನೂನು ಹಾಗೂ ರಾಜಕೀಯ ನೆರವನ್ನು ನೀಡಲು ತಮ್ಮ ಪಕ್ಷ ಸಿದ್ಧವಿದೆ ಎಂದು ಒವೈಸಿ ಭರವಸೆ ನೀಡಿದ್ದಾರೆ.

You cannot copy content of this page

Exit mobile version