Monday, June 17, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ ಬಿಗ್ ಆಪರೇಷನ್ : ಆರ್ ಅಶೋಕ್ ಕೈತಪ್ಪಲಿರುವ ಪದ್ಮನಾಭನಗರ ; ‘ಲೋಕ’ ಸಮರಕ್ಕೆ ಬಿಜೆಪಿಗೆ ದೊಡ್ಡ ಖೆಡ್ಡಾ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಬಿಜೆಪಿ ಪಕ್ಷಕ್ಕೆ ಅತಂತ್ರ ಸ್ಥಿತಿ ಎದುರಾಗಿದೆ. ಪಕ್ಷಕ್ಕೆ ಬರುವವವರಿಗಿಂತ ಪಕ್ಷದಿಂದ ದಂಡು ದಂಡಾಗಿಯೇ ಕಾಲ್ಕೀಳುವವರ ಸಂಖ್ಯೆಯೇ ಜಾಸ್ತಿಯಾಗಿದೆ. ಸಧ್ಯ ಈಗ ಬಿಜೆಪಿ ಪಕ್ಷದ ಭದ್ರಕೋಟೆಯಂತಿದ್ದ, ಆರ್.ಅಶೋಕ್ ‘ಸಾಮ್ರಾಟ’ನಂತೆ ಮೆರೆಯುತ್ತಿದ್ದ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಘಟಕದ ಆಧಾರ ಸ್ಥಂಭಗಳೇ ಈಗ ಕಾಂಗ್ರೆಸ್ ಸೇರ್ಪಡೆಯಾಗಲು ಹೊರಟಿದ್ದಾರೆ.

ಪದ್ಮನಾಭನಗರ ಬಿಜೆಪಿ ಅಸಲಿ ಕಥೆ ಇದು
ಬಿಜೆಪಿ ಪಕ್ಷದಲ್ಲಿ ಆರ್.ಅಶೋಕ್ ‘ಸಾಮ್ರಾಟ’ ಎಂಬ ಬಿರುದು ಪಡೆದುಕೊಂಡರೂ ಪದ್ಮನಾಭನಗರ ಮಾತ್ರ ನೇರವಾಗಿ ಆರ್.ಅಶೋಕ್ ಹಿಡಿತದಲ್ಲಿ ಇಲ್ಲ ಎಂಬುದು ಸ್ಪಷ್ಟ. ಯಾಕೆಂದರೆ ಇಲ್ಲಿ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಪ್ರತಿಯೊಬ್ಬ ಮುಖಂಡರೂ ತನ್ನದೇ ಆದ ವಯಕ್ತಿಕ ಹಿಡಿತ ಇಟ್ಟುಕೊಂಡವರೇ ಆಗಿದ್ದಾರೆ.

ಒಕ್ಕಲಿಗರ ಪ್ರಾಬಲ್ಯವೇ ಹೆಚ್ಚಿರುವ ಪದ್ಮನಾಭನಗರದ ಪ್ರಮುಖ ಬಿಜೆಪಿ ಮುಖಂಡ, ಆರ್.ಅಶೋಕ್ ಬಂಟನಂತಿದ್ದ ಎಲ್.ಶ್ರೀನಿವಾಸ್ ವಯಕ್ತಿಕವಾಗಿ ಪ್ರಭಾವಿ ನಾಯಕ‌. ಅವರ ರಾಜಕೀಯ ಬೆಳವಣಿಗೆ ಹಿಂದೆ ಯಾವ ಬಿಜೆಪಿ ನಾಯಕರ ಕೊಡುಗೆಯೂ ಇಲ್ಲ ಎಂಬುದು ಸ್ಪಷ್ಟ. ಅಷ್ಟೆ ಅಲ್ಲದೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು ಹಾಗೂ ಬಿಬಿಎಂಪಿ ಉಪ ಮೇಯರ್ ಕೂಡಾ ಆಗಿದ್ದಂತಹ ಎಲ್.ಶ್ರೀನಿವಾಸ್ ಅವರದ್ದು ಪದ್ಮನಾಭನಗರದಲ್ಲಿ ವಿಶೇಷವಾದ ಪ್ರಭಾವವಿದೆ. ಇಂತಹ ಪ್ರಭಾವಿ ನಾಯಕ ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಎಲ್.ಶ್ರೀನಿವಾಸ್ ಜೊತೆ ಜೊತೆಗೇ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಇನ್ನೊಬ್ಬ ಪ್ರಭಾವಿ ಜೆಡಿಎಸ್ ಮುಖಂಡರೆಂದರೆ ಕಬಡ್ಡಿ ಬಾಬು ಎಂದೇ ಜನಪ್ರಿಯರಾದ ಪ್ರಸಾದ್ ಬಾಬು. ಇವರೂ ಸಹ ಸ್ಥಳೀಯ ಮಟ್ಟದಲ್ಲಿ ಜೆಡಿಎಸ್ ಪಕ್ಷದ ವಲಯದಲ್ಲಿ ಪ್ರಭಾವಿ ನಾಯಕರೆನಿಸಿಕೊಂಡವರು. ವಯಕ್ತಿಕವವಾಗಿ ಆರ್.ಅಶೋಕ್ ಗೆ ಕಬಡ್ಡಿ ಬಾಬು ಕಾಂಗ್ರೆಸ್ ಸೇರ್ಪಡೆ ಅಷ್ಟು ಹೊಡೆತ ಅಲ್ಲದಿದ್ದರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚಲು ದೊಡ್ಡ ಕೊಡುಗೆ ಸಿಗಲಿದೆ. ಇದೂ ಸಹ ಬಿಜೆಪಿಗೆ ಪರೋಕ್ಷವಾಗಿ ದುಷ್ಪರಿಣಾಮ ಬೀರುವ ಸೇರ್ಪಡೆಯಾಗಿದೆ.

ಇವರ ಜೊತೆ ಜೊತೆಗೆ ಬಿಜೆಪಿ ಮುಖಂಡರಾದ ಅಂಜನಪ್ಪ, ಶೋಭಾ ಅಂಜನಪ್ಪ, ಕುಮಾರಸ್ವಾಮಿ ಲೇಔಟ್ ನ ಹೆಚ್.ಸುರೇಶ್, ಗಣೇಶ ಮಂದಿರ ವಾರ್ಡ್ ನ ಗೋವಿಂದರಾಜ್, ಪದ್ಮನಾಭನಗರದ ಯುವ ಮುಖಂಡ ಭರತ್, ರಂಗರಾಮೇಗೌಡ, ಚಿಕ್ಕಲಸಂದ್ರ ವಾರ್ಡ್ ನ ಸುಪ್ರಿಯಾ ಶೇಖರ್, ವೆಂಕಟಸ್ವಾಮಿ ನಾಯ್ಡು, ಹೊಸಕೆರೆಹಳ್ಳಿ ಭಾಗದ ಹೆಚ್.ನಾರಾಯಣ್ ಸೇರಿದಂತೆ ಅವರ ಎಲ್ಲಾ ಅನುಯಾಯಿಗಳು, ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಇದು ಪದ್ಮನಾಭನಗರದಲ್ಲಿ ಬಿಜೆಪಿ ಪಕ್ಷದ ಅಸ್ತಿತ್ವ ಕುಸಿಯಲು ದೊಡ್ಡ ಹೊಡೆತ ಎಂದರೆ ತಪ್ಪಾಗಲಾರದು.

ಇಷ್ಟು ಮಂದಿಯ ಆಪರೇಷನ್ ಹಿಂದೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಕೈ ಇದೆ ಎಂಬುದು ಸ್ಪಷ್ಟ. ಚುನಾವಣೆಗೂ ಮುಂಚೆ ಪದ್ಮನಾಭನಗರದಲ್ಲಿ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿ ಎಂಬ ಮಾತು ಕೇಳಿ ಬಂದಿತ್ತು. ಅಕಸ್ಮಾತ್ ಡಿ.ಕೆ.ಸುರೇಶ್ ಅಭ್ಯರ್ಥಿ ಆಗಿದ್ದರೆ ಆ ಸಂದರ್ಭದಲ್ಲೇ ಆರ್.ಅಶೋಕ್ ಸೋಲು ಕಟ್ಟಿಟ್ಟ ಬುತ್ತಿ ಆಗುತ್ತಿತ್ತು ಎಂಬುದು ಸಹ ಅಷ್ಟೆ ಸ್ಪಷ್ಟ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ರಾಜ್ಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ಇರುವ ಹಿಂದುತ್ವದ ಐಡಿಯಾಲಜಿಯಾಗಲಿ, ಬಿಜೆಪಿ ಅಥವಾ ಮೋದಿ ಪ್ರಭಾವಾಗಲಿ ಯಾವುದೂ ಈ ಕ್ಷೇತ್ರದಲ್ಲಿ ಇಲ್ಲ. ಎಲ್ಲವೂ ಸ್ಥಳೀಯ ಮುಖಂಡರ ಪ್ರಭಾವವೇ ಇಲ್ಲಿಯವವರೆಗೂ ಆರ್.ಅಶೋಕ್ ಗೆಲುವಿಗೆ ಕಾರಣವಾಗಿತ್ತು. ಹಾಗೆಯೇ ಜಾತಿ ಪ್ರಾಬಲ್ಯ ಕೂಡಾ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಒಕ್ಕಲಿಗ, ನಾಯ್ಡು ಹಾಗೂ ‌ಸ್ವಲ್ಪ ಮಟ್ಟಿಗಿನ ಲಿಂಗಾಯತರ ಪ್ರಭಾವ ಇಲ್ಲಿ ಹೆಚ್ಚೇ ಇದೆ ಎಂದರೆ ತಪ್ಪಿಲ್ಲ.

ಜೊತೆಗೆ ಕ್ಷೇತ್ರದಲ್ಲಿ ಆರ್.ಅಶೋಕ್ ಸರ್ವಾಧಿಕಾರಿ ಧೋರಣೆ, ಮೇಲೆತ್ತಿದವನ್ನೇ ಕಡೆಗಣಿಸುವುದು ಸೇರಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ಚುನಾವಣೆಯನ್ನು ತಡೆಹಿಡಿಯಲು ಮುಂದಾಗಿದ್ದು ಸಹ ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಆರ್.ಅಶೋಕ್ ಈ ಹಿಂದಿನಿಂದಲೂ ಬಿಬಿಎಂಪಿ ಟಿಕೆಟ್ ವಿಚಾರದಲ್ಲಿ ಸುಳ್ಳು ಭರವಸೆ ನೀಡುತ್ತಾ ಬಂದಿರುವ ಆರೋಪ ಎದುರಿಸುತ್ತಿದ್ದಾರೆ. ಇವೆಲ್ಲವೂ ಒಟ್ಟಾಗಿ ಅಶೋಕ್ ಸ್ಥಳೀಯ ಮಟ್ಟದಲ್ಲಿ ನಾಯಕರನ್ನು ಕಳೆದುಕೊಳ್ಳಲು ಕಾರಣ ಎಂದೇ ಮಾತುಗಳು ಕೇಳಿ ಬಂದಿವೆ.

ಲೋಕಸಭೆ ಚುನಾವಣೆಗೆ ಬಿಜೆಪಿಗೆ ದೊಡ್ಡ ಖೆಡ್ಡಾ
ಎಲ್ಲಕ್ಕಿಂತ ಗಮನಾರ್ಹ ವಿಚಾರ ಏನೆಂದರೆ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಅತಿ ಹೆಚ್ಚು ಅಂತರದ ಮತ ಗಳಿಕೆಗೆ ಕಾರಣವಾಗಿದ್ದ ಕ್ಷೇತ್ರ ಪದ್ಮನಾಭನಗರ. ಸ್ಥಳೀಯ ಸಂಸದ ತೇಜಸ್ವಿ ಸೂರ್ಯ ಈ ಕ್ಷೇತ್ರದಲ್ಲಿ ಆರ್.ಅಶೋಕ್ ಅವರನ್ನೇ ಹೆಚ್ಚು ನಂಬಿಕೊಂಡಿದ್ದ ಕಾರಣ ಈ ಭಾಗದಿಂದಲೇ ಹೆಚ್ಚು ಲೀಡ್ ಬಂದು ಸಂಸದರಾಗುವಂತೆ ಕಾರಣವಾಗಿತ್ತು. ಆದರೆ ಈಗ ಆರ್.ಅಶೋಕ್ ಗೂ ಸಿಗದಂತೆ ಈ ಕ್ಷೇತ್ರ ಕೈ ತಪ್ಪುವ ಹಂತದಲ್ಲಿದೆ.

ಸ್ಥಳೀಯವಾಗಿ ಘಟಾನುಘಟಿ ನಾಯಕರೇ ಬಿಜೆಪಿ ಬಿಟ್ಟಿರುವ ಹಂತದಲ್ಲಿ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ತಿಪ್ಪರಲಾಗ ಹಾಕಿದರೂ ತೇಜಸ್ವಿ ಸೂರ್ಯ ಅಥವಾ ಇನ್ನಾವುದೇ ಬಿಜೆಪಿ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ ಎಂದೇ ಸ್ಥಳೀಯ ಜನರ ಅಭಿಪ್ರಾಯವಾಗಿದೆ.

ಸ್ಥಳೀಯವಾಗಿ ಆರ್.ಅಶೋಕ್ ಹಿಂದೆ ಮುಖ್ಯವಾಗಿ ನಿಂತಿದ್ದಂತಹ ಇಡೀ ಬಿಜೆಪಿ ಟೀಮ್ ಈಗ ಕಾಂಗ್ರೆಸ್ ಗೆ ಹೈಜಂಪ್ ಆಗಿರುವ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಗೆ ಯಾವುದೇ ಅಭ್ಯರ್ಥಿಯ ಗೆಲುವು ತೀರಾ ಕಷ್ಟ ಎಂಬುದು ಸ್ಪಷ್ಟ. ಮೇಲಾಗಿ ಇಲ್ಲಿ ಯಾವುದೇ ಹಿಂದುತ್ವದ ಗಾಳಿಯಾಗಲಿ, ಮೋದಿ ಅಲೆಯಾಗಲಿ ಇಲ್ಲವೇ ಇಲ್ಲ. ಅಶೋಕ್ ಕೂಡಾ ಈ ನಾಯಕರ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದ ಹಿನ್ನೆಲೆಯಲ್ಲಿ ಈ ಕ್ಷಣದಲ್ಲಿ ಯಾವುದೇ ಚುನಾವಣೆ ನಡೆದರೂ ಬಿಜೆಪಿ ಸೋಲು ಶತಃಸಿದ್ದ ಎಂಬುದು ಸ್ಪಷ್ಟವಾಗಿದೆ. ಆ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈ ತಪ್ಪುವ ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಮೊದಲನೆಯದಾಗಿ ನಿಲ್ಲಲಿದೆ.

Related Articles

ಇತ್ತೀಚಿನ ಸುದ್ದಿಗಳು