ಇಸ್ಲಾಮಾಬಾದ್: ಪಾಕಿಸ್ತಾನ ತನ್ನದೇ ಜನರ ಮೇಲೆ ಬಾಂಬ್ ದಾಳಿ ನಡೆಸಿದೆ. ಸೋಮವಾರ ಖೈಬರ್ ಪಖ್ತುಂಖ್ವಾದಲ್ಲಿ ಚೀನಾದಲ್ಲಿ ತಯಾರಿಸಿದ ಜೆ-17 ಯುದ್ಧ ವಿಮಾನಗಳಿಂದ ಹಾಕಲಾದ 8 ಎಲ್‌ಎಸ್-6 ಬಾಂಬ್‌ಗಳು 30 ಜನರನ್ನು ಬಲಿ ತೆಗೆದುಕೊಂಡಿವೆ.
ಈ ಲೇಸರ್-ಗೈಡೆಡ್ ಬಾಂಬ್‌ಗಳನ್ನು ತೀರಾಹ್ ಕಣಿವೆಯ ಒಂದು ಹಳ್ಳಿಯ ಮೇಲೆ ಬೆಳಗಿನ ಜಾವ 2 ಗಂಟೆಗೆ ಎಸೆಯಲಾಗಿದೆ.
ಈ ಪ್ರದೇಶದಲ್ಲಿ ಈಗಾಗಲೇ ಭಯೋತ್ಪಾದಕ ದಾಳಿಗಳು ಹೆಚ್ಚಿದ್ದು, ಈ ಹೊಸ ದಾಳಿಯಿಂದ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ.
ಕಳೆದ ವಾರ ಸ್ವಾತ್ ಕಣಿವೆಯ ಮಿಂಗೋರಾ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿ, ಸರ್ಕಾರ ತಕ್ಷಣವೇ ಶಾಂತಿಯನ್ನು ಪುನಃಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದರು.
ಪಾಕ್‌ನ ಸಮರ್ಥನೆ ಮತ್ತು ಆಫ್ಘಾನಿಸ್ತಾನದ ಪ್ರತಿಕ್ರಿಯೆ
ಪಾಕ್ ಮಾಧ್ಯಮಗಳ ಪ್ರಕಾರ, ಖೈಬರ್ ಪಖ್ತುಂಖ್ವಾದಲ್ಲಿ ತೆಹ್ರೀಕ್-ಎ-ತಾಲೀಬಾನ್ (ಟಿಪಿಪಿ) ಉಗ್ರಗಾಮಿ ಸಂಸ್ಥೆಯು ಬಾಂಬ್‌ಗಳ ತಯಾರಿಕಾ ಕೇಂದ್ರವನ್ನು ನಡೆಸುತ್ತಿರುವುದರಿಂದ ಈ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ವಾಯುಪಡೆ ಹೇಳಿದೆ.
ಆದರೆ, ಪಾಕಿಸ್ತಾನದ ಈ ಆರೋಪಗಳನ್ನು ಆಫ್ಘಾನಿಸ್ತಾನ ಸರ್ಕಾರ ನಿರಾಕರಿಸಿದೆ. ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಅದು ಆರೋಪಿಸಿದೆ.
ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್, ತನ್ನ ‘ಎಕ್ಸ್’ (ಟ್ವಿಟರ್) ಪೋಸ್ಟ್‌ನಲ್ಲಿ ಈ ಘಟನೆ “ಪದಗಳಲ್ಲಿ ವರ್ಣಿಸಲಾಗದ ದುರಂತ” ಎಂದು ಹೇಳಿದೆ. ಇಂತಹ ಬಾಂಬ್ ಮತ್ತು ಡ್ರೋನ್ ದಾಳಿಗಳಿಂದ ದ್ವೇಷದ ಬೀಜಗಳು ಬಿತ್ತಲ್ಪಡುತ್ತವೆ ಎಂದು ಅದು ಉಲ್ಲೇಖಿಸಿದೆ.