Monday, June 17, 2024

ಸತ್ಯ | ನ್ಯಾಯ |ಧರ್ಮ

ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ: ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ ಆರೋಪದಲ್ಲಿ ಬಂಧಿತರಾದ ಮೂವರನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒದಗಿಸಲಾಗಿದ್ದು, ಈ ಕುರಿತು ತನಿಖೆ ಪ್ರಗತಿಯಲ್ಲಿದೆ.

ಈ ನಡುವೆ ಮಂಡ್ಯದ ಸಂಜಯ್ ವೃತ್ತದಲ್ಲಿ 2022ರ ಡಿಸೆಂಬರ್ 17 ರಂದು ಅಂದಿನ ಪಾಕ್‌ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ್ದ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುವಾಗ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದ ಆರೋಪದಡಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ವಿವರಗಳ ಪ್ರಕಾರ ಅಂದು ನಡೆದ ಪ್ರತಿಭಟನೆ ಸಭೆಯಲ್ಲಿ “ಪಾಕಿಸ್ತಾನ್ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್” ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದರು. ಘೋಷಣೆ ಕೂಗುವ ಬರದಲ್ಲಿ ಪಾಕಿಸ್ತಾನ ಮುರ್ದಾಬಾದ್‌ ಎಂದು ಹೇಳುವ ಬದಲು ಬಿಜೆಪಿ ಕಾರ್ಯಕರ್ತ ಪಾಕಿಸ್ತಾನ ಜಿಂದಾಬಾದ್‌ (Pakistan Zindabad) ಎಂದು ಘೋಷಣೆ ಕೂಗಿದ್ದ. ಕೂಡಲೇ ಎಚ್ಚೆತ್ತ ಕಾರ್ಯಕರ್ತರೊಬ್ಬರು ಘೋಷಣೆ ಕೂಗಿದ ಕಾರ್ಯಕರ್ತನ ಬಾಯಿ ಮುಚ್ಚಿಸಿದ್ದರು.

ಆ ಸಂದರ್ಭದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಈ ಘಟನೆ ಸದ್ದು ಮಾಡಿತ್ತಾದರೂ ನಂತರ ಅಲ್ಲಿಗೇ ತಣ್ಣಗಾಗಿತ್ತು.

ಈಗ ಬಿಜೆಪಿ ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಲಾಗಿದೆಯೆಂದು ಹೋದಲ್ಲೆಲ್ಲ ಪೀಡಿಸುತ್ತಿದ್ದು ಇದಕ್ಕೆ ಪ್ರತಿಯಾಗಿ ಹಳೆಯ ಪ್ರಕರಣಕ್ಕೆ ಮರುಜೀವ ನೀಡುವ ಮೂಲಕ ಕಾಂಗ್ರೆಸ್‌ ತನ್ನ ರಾಜಕೀಯ ದಾಳವನ್ನು ಉರುಳಿಸಿದೆ.

ಕನ್ನಂಬಾಡಿಯವರಾದ ಕುಮಾರ್‌ ಎನ್ನುವ ವ್ಯಕ್ತಿ ಈ ವಿಷಯವಾಗಿ ದೂರು ನೀಡಿದ್ದು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 153 ಬಿ(ರಾಷ್ಟ್ರೀಯ ಸಮಗ್ರತೆ ಧಕ್ಕೆ ತರುವ ಹೇಳಿಕೆ) 505 (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆ) ಆರೋಪದ ಮೇರೆಗೆ ಆರಾಧ್ಯ, ರವಿ ಮತ್ತು ಇತರರನ್ನು ಆರೋಪಿಗಳನ್ನಾಗಿ ಮಾಡಿ ಎಫ್‌ಐಆರ್‌ ದಾಖಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ಬಿಜೆಪಿ ಕಾರ್ಯಕರ್ತ ರವಿ ಎನ್ನುವನನ್ನು ವಶಕ್ಕೆ ಪಡೆದಿದ್ದಾರೆ.

ಇದೇ ವೇಳೆ ವಿಧಾನಸೌಧದಲ್ಲಿ ಘೋಷಣೆ ಕೂಗಿದ ವಿಷಯದಲ್ಲಿ ರಾಜ್ಯ ಸರ್ಕಾರ ಕ್ಷಮೆಯಾಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

“ರಾಜ್ಯ ಸರ್ಕಾರವು ದೇಶ ವಿರೋಧಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಎನ್‌ಐಎ ವಿಷಯಕ್ಕೆ ಬಂದ ನಂತರವೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ರಕ್ಷಿಸಲು ಸಚಿವರು ಮುಂದಾಗಿರುವುದು ವಿಷಾದನೀಯ. ಎಫ್‌ಎಸ್‌ಎಲ್ ವರದಿಯ ಹೊರತಾಗಿಯೂ ಆರೋಪಿಗಳ ಬಂಧನಕ್ಕೆ ವಿಳಂಬ ಮಾಡಿದ್ದಕ್ಕಾಗಿ ರಾಜ್ಯ ಸರ್ಕಾರ ರಾಜ್ಯದ ಜನರ ಕ್ಷಮೆಯಾಚಿಸಬೇಕು,” ಎಂದು ಅವರು ಹೇಳಿಕೆ ನೀಡಿದ್ದಾರೆ

ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ ಗುಜರಾತ್‌ನ ಕಟುಕ ಇನ್ನೂ ಬದುಕಿದ್ದಾನೆ ಮತ್ತು ಆತ ಭಾರತದ ಪ್ರಧಾನ ಮಂತ್ರಿ ಎಂಬ ಬಿಲಾವಲ್ ಭುಟ್ಟೋ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತ್ತು. ಈ ಸಂದರ್ಭದಲ್ಲಿ ನಡೆದ ಘಟನೆಯ ವಿಡಿಯೋ ಎಲ್ಲೆಡೆ ಹರಿದಾಡಿ ಸದ್ದು ಮಾಡಿತ್ತು. ಈಗ ಅದು ಮತ್ತೆ ಮುನ್ನೆಲೆಗೆ ಬಂದಿದ್ದು ಪ್ರಕರಣ ದಾಖಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು