Friday, June 14, 2024

ಸತ್ಯ | ನ್ಯಾಯ |ಧರ್ಮ

ಪ್ಯಾಲೆಸ್ಟೈನ್: ವಿಶ್ವಸಂಸ್ಥೆಯಲ್ಲಿ ಭಾರತದ ಎಡಬಿಡಂಗಿ ನೀತಿ

ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ಟೈನ್ ವಿಷಯದಲ್ಲಿ ಎಡಬಿಡಂಗಿ ನಿಲುವು, ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲ್ ಮಾಡುತ್ತಿರುವ ನರಮೇಧವನ್ನು ಸ್ಪಷ್ಟ ಪದಗಳಲ್ಲಿ ಖಂಡಿಸದಿರುವುದು, ಪ್ಯಾಲೆಸ್ಟೈನ್ ನಲ್ಲಿ ತೊಂದರೆಗೊಳಗಾದವರಿಗೆ ನೆರವು ಒದಗಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿಲ್ಲದಿರುವುದು ಇವೆಲ್ಲ ಭಾರತದ ಜಾಗತಿಕ ನಾಯಕತ್ವ ಇಮೇಜಿಗೆ ಧಕ್ಕೆ ತಂದಿರುವುದು ಖಂಡಿತಾ – ಶ್ರೀನಿವಾಸ ಕಾರ್ಕಳ (ಶ್ರೀನಿ ಕಾಲಂ)

ಪ್ಯಾಲೆಸ್ಟೈನ್ ಸಮಸ್ಯೆಗೆ ಸರಿ ಸುಮಾರು ಒಂದು ಶತಮಾನದ ಇತಿಹಾಸವಿದೆ. ನೆಲೆಯೇ ಇಲ್ಲದ ಯಹೂದಿಗಳಿಗೆ ನೆಲೆ ಒದಗಿಸಿದ ಕಾರಣ, ತಮ್ಮದೇ ನೆಲದಲ್ಲಿ ಪ್ಯಾಲೆಸ್ತೀನಿಯರು ನೆಲೆ ಕಳೆದುಕೊಂಡ ವಿಚಿತ್ರ ಮತ್ತು ದಾರುಣ ಕತೆಯದು.

ಅಧಿಕೃತವಾಗಿ ಪ್ಯಾಲೆಸ್ಟೈನ್ ಸಮಸ್ಯೆಗೆ ಸರಿಸುಮಾರು 75 ವರ್ಷಗಳ ಇತಿಹಾಸವಿದೆ. ಇಸ್ರೇಲಿನ ಯಹೂದಿಗಳ ಮೂಲಕ ಪ್ಯಾಲೆಸ್ಟೈನ್ ನಲ್ಲಿ ನರಮೇಧ ಸಂಭವಿಸಿ ಲೆಕ್ಕವಿಲ್ಲದಷ್ಟು ಸಾವುಗಳು ಮತ್ತು ಲಕ್ಷಾಂತರ ಮಂದಿ ನಿರ್ವಸಿತರಾದ ಇತಿಹಾಸವದು.  ಪ್ಯಾಲೆಸ್ತೀನಿಯರ ಸಮಾಜ, ಸಂಸ್ಕೃತಿ, ಐಡೆಂಟಿಟಿ, ರಾಜಕೀಯ ಹಕ್ಕುಗಳು ಮತ್ತು ರಾಷ್ಟ್ರೀಯ ಆಶೋತ್ತರಗಳನ್ನು ನಾಶ ಮಾಡಿದ ಅದು ನಕಬಾ (Nakba) ಎಂದೇ ಪ್ರಸಿದ್ಧವಾಗಿದೆ. ಒಂದು ಅಂದಾಜಿನ ಪ್ರಕಾರ ನಕಬಾ ಅವಧಿಯಲ್ಲಿ ಇಸ್ರೇಲಿಗಳು ಪ್ಯಾಲೆಸ್ಟೈನ್ ನ 774 ಪಟ್ಟಣಗಳು ಮತ್ತು ಗ್ರಾಮಗಳನ್ನು ವಶಪಡಿಸಿಕೊಂಡರು, 70 ನರಮೇಧ ಪ್ರಕರಣಗಳು ಸಂಭವಿಸಿ 15 ಸಾವಿರಕ್ಕೂ ಅಧಿಕ ಮಂದಿ ಹತರಾದರು.

ಇದೇ ಕಾರಣದಿಂದ ಮಹಾತ್ಮಾಗಾಂಧಿಯವರು ಪ್ಯಾಲೆಸ್ಟೈನ್ ಬಗ್ಗೆ, “ಇಂಗ್ಲೆಂಡ್ ಹೇಗೆ ಇಂಗ್ಲಿಷರಿಗೆ ಸೇರುತ್ತದೋ, ಫ್ರಾನ್ಸ್ ಹೇಗೆ ಫ್ರೆಂಚರಿಗೆ ಸೇರುತ್ತದೋ, ಹಾಗೆಯೇ ಪ್ಯಾಲೆಸ್ಟೈನ್ ಪ್ಯಾಲೆಸ್ತೀನಿಯರಿಗೆ ಸೇರುತ್ತದೆ. ಯಹೂದಿಗಳನ್ನು ಅರಬರ ಮೇಲೆ ಹೇರುವುದು ತಪ್ಪು ಮಾತ್ರವಲ್ಲ, ಅಮಾನವೀಯ ಕೂಡಾ. ಯಹೂದಿಗಳ ರಾಷ್ಟ್ರೀಯ ಮನೆ ಎಂಬಂತೆ ಪ್ಯಾಲೆಸ್ಟೈನ್ ಅನ್ನು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ಯಹೂದಿಗಳಿಗೆ ನೀಡುವುದು ಸ್ವಾಭಿಮಾನಿ ಅರಬರನ್ನು ಕುಗ್ಗಿಸುವ, ಮಾನವತೆಯ ವಿರುದ್ಧದ ಘೋರ ಅಪರಾಧ” ಎಂದಿದ್ದರು.

ಯಾಸರ್ ಅರಾಫತ್

ಹೀಗೆ, ಮಹಾತ್ಮಾ ಗಾಂಧಿಯವರಿಂದ ಹಿಡಿದು ಭಾರತದ ಬಹುತೇಕ ಎಲ್ಲ ನಾಯಕರು ಸದಾ ಕಾಲವೂ ಪ್ಯಾಲೆಸ್ತೀನಿಯನ್ನರ ಪರವಾಗಿಯೇ ವಾದಿಸುತ್ತಾ ಬಂದಿದ್ದಾರೆ.  ವಿಶ‍್ವಸಂಸ್ಥೆಯಲ್ಲಿ ಪ್ಯಾಲೆಸ್ಟೈನ್ ವಿಷಯ ಬಂದಾಗಲೆಲ್ಲ ಭಾರತದ ಹಿಂದಿನ ಸರಕಾರಗಳು ಪ್ಯಾಲೆಸ್ಟೈನ್ ಪರ ಮತ ಚಲಾಯಿಸುತ್ತಲೇ ಬಂದಿವೆ. ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (PLO) ಮುಖ್ಯಸ್ಥ ಯಾಸರ್ ಅರಾಫತ್ ಸದಾ ಕಾಲವೂ ಭಾರತದ ಆತಿಥ್ಯ ಮತ್ತು ಗೆಳೆತನ ಅನುಭವಿಸುತ್ತಾ ಬಂದವರು. ಪ್ಯಾಲೆಸ್ತೀನಿಯನ್ನರಿಗೆ ಎಲ್ಲ ಕಾಲದಲ್ಲೂ ಭಾರತವು ಪರಿಹಾರ ಸಾಮಗ್ರಿ ಸಹಿತ ಎಲ್ಲ ರೀತಿಯ ಸಹಾಯವನ್ನು ಮಾಡುತ್ತಲೇ ಬಂದಿದೆ.

ಬದಲಾದ ಪ್ಯಾಲೆಸ್ಟೈನ್ ನೀತಿ

ಬಿಜೆಪಿಯ ವಾಜಪೇಯಿ ಸರಕಾರದ ಕಾಲದಲ್ಲಿಯೂ ಬದಲಾಗಿರದಿದ್ದ ಈ ಪ್ಯಾಲೆಸ್ಟೈನ್ ನೀತಿ ಬದಲಾದುದು 2014 ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ. ಇಸ್ರೇಲ್ ಪ್ಯಾಲೆಸ್ಟೈನ್ ನಲ್ಲಿ ಮಾಡುತ್ತಿರುವ ಘೋರ ಅನ್ಯಾಯವನ್ನು ಗಣನೆಗೆ ತೆಗೆದುಕೊಳ್ಳದೆ, ಮೋದಿಯವರು ಇಸ್ರೇಲ್ ಜತೆಗೆ ಹಿಂದೆಂದೂ ಇದ್ದಿರದಂತಹ ಮಧುರ ಸಂಬಂಧ ಸ್ಥಾಪಿಸಿಕೊಂಡರು. ಅಲ್ಲಿನ ಪ್ರಧಾನಿ ನೆತನ್ಯಾಹುವನ್ನು ತನ್ನ ಫ್ರೆಂಡ್ ಎಂದೇ ಸಂಬೋಧಿಸುತ್ತಿದ್ದರು. ಯುದ್ಧೋಪಕರಣಗಳ ಆಮದು ಎಗ್ಗಿಲ್ಲದೆ ನಡೆಯಿತು. ಸಹಕಾರದ ಸ್ವರೂಪ ಯಾವ ಮಟ್ಟವನ್ನು ತಲಪಿತು ಎಂದರೆ, ಇಸ್ರೇಲ್ ನ ಕುಖ್ಯಾತ ಪೆಗಸಸ್ ತಂತ್ರಾಂಶವನ್ನು ಬಳಸಿದ್ದ ದೇಶಗಳಲ್ಲಿ ಭಾರತ ಅತ್ಯಂತ ಪ್ರಮುಖ ದೇಶ.

ಇಸ್ರೇಲ್ ನೊಂದಿಗೆ ಸ್ನೇಹ ವೃದ್ಧಿಯಾದ ಮೇಲೆ ಅದರ ಪರಿಣಾಮ ಪ್ಯಾಲೆಸ್ಟೈನ್ ಸಂಬಂಧದ ಮೇಲೆ ಬೀರಲೇ ಬೇಕಲ್ಲ. ಭಾರತೀಯ ಬಲಪಂಥ ರಾಜಕಾರಣದ ನೆಲೆಯೇ ಮುಸ್ಲಿಂ ದ್ವೇಷವಾದುದುರಿಂದ ಪ್ಯಾಲೆಸ್ಟೈನ್ ವಿಷಯದಲ್ಲಿ ಭಾರತದ ತಾತ್ಸಾರ ನಿಲುವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಇದು ಹೆಚ್ಚು ಸ್ಪಷ್ಟವಾದುದು ಇತ್ತೀಚಿನ ಹಮಾಸ್- ಇಸ್ರೇಲ್ ಸಂಘರ್ಷದ ಸಮಯದಲ್ಲಿ.

ಕಳೆದ ಅಕ್ಟೋಬರ್ 07, 2023 ರಂದು ಹಮಾಸ್ ಬಂಡುಕೋರರು ಇಸ್ರೇಲ್ ಗೆ ನುಗ್ಗಿ ಹಿಂಸಾಚಾರ ನಡೆಸಿ ಸಾವಿರಾರು ಮಂದಿಯನ್ನು ಕೊಂದ ಬೆನ್ನಿಗೇ, ಇಸ್ರೇಲ್ ತನ್ನ ಅಸಾಧಾರಣ ಸೇನಾ ಬಲ ಬಳಸಿಕೊಂಡು ಗಾಜಾಪಟ್ಟಿಯ ಮೇಲೆ ಸಮರ ಸಾರಿತು. ಉತ್ತರ ಗಾಜಾದ 13 ಲಕ್ಷ ಮಂದಿಗೆ ತಕ್ಷಣ ಮನೆ ತೊರೆದು ದಕ್ಷಿಣ ಗಾಜಾಕ್ಕೆ ತೆರಳುವಂತೆ ಆದೇಶಿಸಿತು. ಆನಂತರ ಅಲ್ಲಿನ ಮನೆಗಳು, ಶಾಲೆಗಳು, ಆಸ್ಪತ್ರೆಗಳು, ನಿರಾಶ್ರಿತ ಶಿಬಿರಗಳು ಎಲ್ಲದರ ಮೇಲೂ ಬಾಂಬಿನ ಮಳೆಗರೆಯಲಾರಂಭಿಸಿತು. ಅಂತಾರಾಷ್ಟ್ರೀಯ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ವಿಶ್ವಸಂಸ್ಥೆಯ ಸಲಹೆ, ಆದೇಶಗಳನ್ನು ಧಿಕ್ಕರಿಸಿ ಅದು ನರಮೇಧದಲ್ಲಿ ತೊಡಗಿಕೊಂಡಿತು.

ಈ ನರಮೇಧ ಅಭಿಯಾನಕ್ಕೆ ಈಗ 43 ದಿನಗಳು ಸಂದಿದ್ದು, ಇದುವರೆಗೆ ಗಾಜಾದಲ್ಲಿ ಸತ್ತವರ ಸಂಖ್ಯೆ ಸುಮಾರು 13,000 ಇದರಲ್ಲಿ ಮಕ್ಕಳ ಸಂಖ್ಯೆಯೇ ಸುಮಾರು 5,500, ಮಹಿಳೆಯರು ಸುಮಾರು 3,500, ನಾಪತ್ತೆಯಾದವರು 6,000. ನಾಪತ್ತೆಯಾದವರು ಎಂದರೆ ಕುಸಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿ ಕೊಂಡಿರುವವರು; ಬಹುತೇಕ ಸತ್ತವರು. ಅಂದರೆ ಸತ್ತವರು ಒಟ್ಟು ಸುಮಾರು 19000. ಗಾಜಾಕ್ಕೆ ನೀರು, ವಿದ್ಯುತ್, ಆಹಾರ ಸರಬರಾಜು ಎಲ್ಲವನ್ನೂ ಕತ್ತರಿಸಿ ಹಾಕಲಾಗಿದೆ. ಇರುವ ಕೆಲವೇ ಕೆಲವು ಆಸ್ಪತ್ರೆಗಳನ್ನೂ ಖಾಲಿ ಮಾಡಿಸಲಾಗಿದೆ. ಇನ್ ಕ್ಯುಬೇಟರ್ ಗಳಲ್ಲಿರುವ ಶಿಶುಗಳಿಗೂ ವಿನಾಯಿತಿ ನೀಡಿಲ್ಲ.

ವಿಶ್ವಸಂಸ್ಥೆಯಲ್ಲಿ ಮತ ಚಲಾವಣೆ, ಇಸ್ರೇಲ್ ಪರ  ಮತ

ಗಾಜಾದಲ್ಲಿ ನರಮೇಧ ಆರಂಭವಾಗುತ್ತಲೇ ವಿಶ್ವಸಂಸ್ಥೆಯ ಮಧ‍್ಯಪ್ರವೇಶಕ್ಕೆ ವಿಶ್ವದಾದ್ಯಂತ ಆಗ್ರಹ ಕೇಳಿಬಂತು. ವೀಟೋ ಅಧಿಕಾರ ಇರುವ ಚೀನಾ, ಫ್ರಾನ್ಸ್, ರಶ್ಯಾ, ಯುಕೆ, ಯುಎಸ್ ದೇಶಗಳಲ್ಲಿ ಸಮ್ಮತ ಇಲ್ಲದ ಕಾರಣ ಮೊದಲ ಹಂತದಲ್ಲಿ ಯಾವ ಪ್ರಯೋಜನವೂ ಆಗಲಿಲ್ಲ. ಹೇಳಿ ಕೇಳಿ ಇಸ್ರೇಲ್ ನ ಅತಿರೇಕಗಳಿಗೆ ಬೆಂಬಲವಾಗಿ ನಿಂತಿರುವುದೇ ಅಮೆರಿಕಾ ಆಗಿರುವಾಗ, ಬಾಂಬುಗಳನ್ನು ಸರಬರಾಜು ಮಾಡುತ್ತಿರುವುದೇ ಅಮೇರಿಕಾ ಆಗಿರುವಾಗ ಇಲ್ಲಿ ಪ್ಯಾಲೆಸ್ಟೈನ್ ಗೆ ಯಾವ ನ್ಯಾಯ ಸಿಗಲು ಸಾಧ್ಯ?!

ಹಮಾಸ್ ಕೃತ್ಯಗಳೊಂದಿಗೆ ಯಾವ ಸಂಬಂಧವೂ ಇಲ್ಲದ ಅಮಾಯಕರ ಹತ್ಯೆಯನ್ನು ತಡೆಯುವ ಯುದ್ಧ ವಿರಾಮಕ್ಕೆ ಮಾನವೀಯತೆಯಲ್ಲಿ ನಂಬಿಕೆ ಇರುವ ಯಾವುದೇ ದೇಶ ಬೆಂಬಲ ನೀಡಲೇಬೇಕು ಎಂಬುದು ಒಂದು ಉದಾತ್ತ ಆಶಯ. ಈ ನಿರ್ಣಯಕ್ಕೆ ಜಗತ್ತಿನ 120 ರಾಷ್ಟ್ರಗಳು ಬೆಂಬಲ ಸೂಚಿಸಿದವು. ನಿರೀಕ್ಷೆಯಂತೆಯೇ ಅಮೆರಿಕಾ ಮತ್ತು ಇಸ್ರೇಲ್ ನ ಪರಮಾಪ್ತ ದೇಶಗಳು ಸೇರಿ 14 ರಾಷ್ಟ್ರಗಳು ವಿರೋಧ ವ್ಯಕ್ತ ಪಡಿಸಿದವು. 45 ರಾಷ್ಟ್ರಗಳು ಗೈರು ಹಾಜರಾದವು.

ವಿಶ್ವಸಂಸ್ಥೆಯಲ್ಲಿ ಮತ ಚಲಾವಣೆ

ಹೀಗೆ ಗೈರು ಹಾಜರಾದ ದೇಶಗಳಲ್ಲಿ ಭಾರತವೂ ಸೇರಿತ್ತು ಎಂಬುದು ಜಗತ್ತಿನ ಅನೇಕರು ಹುಬ್ಬೇರಿಸಲು ಕಾರಣವಾಯಿತು. ಈ ಬಗ್ಗೆ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಅಸಮಾಧಾನ ವ್ಯಕ್ತವಾದರೆ, ದೇಶದೊಳಗೂ ಭಾರತ ಸರಕಾರ ತೀವ್ರ ಟೀಕೆಗೆ ಗುರಿಯಾಯಿತು. ಬುದ್ಧ, ಮಹಾವೀರ, ಗಾಂಧಿಯ ಶಾಂತಿ, ಅಹಿಂಸೆಯ ನಾಡು ಹೀಗೆ ಹಿಂಸೆಯ ಪರ ನಿಲ್ಲಬಹುದೇ? ತನ್ನ ವಿದೇಶಾಂಗ ನೀತಿಯನ್ನು ಭಾರತವು ಆಂತರಿಕ ರಾಜಕಾರಣದ ನೆಲೆಯಲ್ಲಿ ಬದಲಾಯಿಸಿಕೊಳ್ಳುವುದು ಸರಿಯೇ? ಎಂದು ವ್ಯಾಪಕ ಖಂಡನೆ ವ್ಯಕ್ತವಾಯಿತು.

ನಮ್ಮ ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಭೂತಾನ್, ಬಾಂಗ್ಲಾ, ಶ್ರೀಲಂಕಾ, ಮಾಲ್ದೀವ್ಸ್ ಎಲ್ಲವೂ ಶಾಂತಿಯ ಪರ ಮತ ಚಲಾಯಿಸಿದ್ದವು. ದಿ ವೈರ್ ನ ಸಿದ್ಧಾರ್ಥ ವರದರಾಜನ್ ಬೆಟ್ಟು ಮಾಡಿದಂತೆ ಜಗತ್ತಿನ ನಕಾಶೆಯ ಎಡ ತುದಿಯ ಇಸ್ರೇಲ್ ಮತ್ತು ಬಲ ತುತ್ತತುದಿಯ ಕೊರಿಯಾ ಮತ್ತು ಫಿಲಿಪ್ಪೈನ್ಸ್ ಹೊರತು ಪಡಿಸಿ, ಎಲ್ಲ ದೇಶಗಳೂ ಶಾಂತಿಯ ಪರ ಮತ ಚಲಾಯಿಸಿದವು. ಆದರೆ, ಭಾರತ ಪ್ರತ್ಯೇಕವಾಗಿ ನಿಂತುಕೊಂಡಿತು. ಒಂದು ರೀತಿಯಲ್ಲಿ ಇಡೀ ಪ್ರದೇಶದಲ್ಲಿ ಐಸೋಲೇಟ್ ಆಯಿತು. ಜಾಗತಿಕ ದಕ್ಷಿಣದ ನಾಯಕ ಎಂದು ಬಿಂಬಿಸಿಕೊಂಡಿದ್ದ ಭಾರತ ಇಂತಹ ಒಂದೇ ಒಂದು ನಿಲುವಿನಿಂದ ತನ್ನ ಇಮೇಜಿಗೆ ಅಪಾರ ಹಾನಿ ಮಾಡಿಕೊಂಡಿತು. ವಿಪರ್ಯಾಸವೆಂದರೆ, ಇಸ್ರೇಲ್ ನ ಪರಮಾಪ್ತ ರಾಷ್ಟ್ರ ಫ್ರಾನ್ಸ್ ಕೂಡ ಇಸ್ರೇಲ್ ವಿರುದ್ಧ ಅಂದರೆ ಶಾಂತಿಯ ಪರ ಮತ ಚಲಾಯಿಸಿತ್ತು!

ವಿಶ‍್ವಸಂಸ್ಥೆಯ ಯಾವುದೇ ನಿರ್ಣಯವನ್ನು ಇಸ್ರೇಲ್ ಪಾಲಿಸುವುದು ಅಷ್ಟರಲ್ಲೇ ಇತ್ತು. ಈ ಹಿಂದಿನ ಅಂತಹ ಅನೇಕ ನಿರ್ಣಯಗಳನ್ನು ಧಿಕ್ಕರಿಸಿಕೊಂಡು ಬಂದಿದೆ. ಅದು ಬೇರೆ ವಿಚಾರ.

ಮತ್ತೊಂದು ನಿರ್ಣಯ, ಇಸ್ರೇಲ್ ವಿರುದ್ಧ ಮತ

ವಿಶ್ವಸಂಸ್ಥೆ

ಆನಂತರ ವಿಶ್ವಸಂಸ್ಥೆಯಲ್ಲಿ ಇದೇ ನವೆಂಬರ್ 9 ರಂದು ಇಸ್ರೇಲ್ ಕುರಿತು ಇನ್ನೊಂದು ನಿರ್ಣಯ ಚರ್ಚೆಗೆ ಬಂತು. ಅದುವೇ ಪಶ್ಚಿಮ ದಂಡೆಯನ್ನು ಆಕ್ರಮಿಸಿಕೊಂಡು ಇಸ್ರೇಲ್ ಅಲ್ಲಿ ನಡೆಸುತ್ತಿರುವ ಅತಿಕ್ರಮ ಮತ್ತು ಅತ್ಯಾಚಾರವನ್ನು ಕುರಿತ ನಿರ್ಣಯ.

ಗಾಜಾವನ್ನು ನೆಲ, ನೀರು, ವಾಯ ಎಲ್ಲ ಗಡಿಗಳಲ್ಲೂ ನಿರ್ಬಂಧಿಸಿಟ್ಟಿರುವ ಇಸ್ರೇಲ್ ಅದನ್ನು ಭೂಮಿಯ ಮೇಲಣ ಅತಿ ದೊಡ್ಡ ಜೈಲನ್ನಾಗಿಸಿದೆಯಾದರೂ, ಅದರೊಳಗಿನಿಂದ ತನ್ನ ಸೇನೆಯನ್ನು ಅದು ಹಿಂದೆಗೆದುಕೊಂಡು ಸರಿಸುಮಾರು ಒಂದೂವರೆ ದಶಕವಾಯಿತು. ಆದರೆ ವೆಸ್ಟ್ ಬ್ಯಾಂಕ್ ಅಥವಾ ಪಶ್ಚಿಮ ದಂಡೆಯದ್ದು ಇನ್ನೂ ಶೋಚನೀಯ ಕತೆ. ಅದನ್ನು ಆಕ್ರಮಿಸಿಕೊಂಡು ಕೂತಿರುವ ಇಸ್ರೇಲ್ ಅಲ್ಲಿ ಮನ ಬಂದಂತೆ ಮನೆಗಳಿಗೆ ಧಾಳಿ ಮಾಡುತ್ತದೆ, ಜನರನ್ನು ಬಂಧಿಸಿ ಸೆರೆಮನೆಗೆ ಒಯ್ಯುತ್ತದೆ, ಇಸ್ರೇಲ್ ಸೆಟ್ಲರ್ ಗಳು ಪ್ಯಾಲೆಸ್ತೀನಿಯನ್ನರ ಮೇಲೆ ಮನ ಬಂದಂತೆ ಧಾಳಿ ಮಾಡುತ್ತಾರೆ, ಅವರ ಆಸ್ತಿ ಪಾಸ್ತಿ ವಶಪಡಿಸಿಕೊಳ್ಳುತ್ತಾರೆ. ಪಶ್ಚಿಮ ದಂಡೆಗೂ ಹಮಾಸ್ ಗೂ ಸಂಬಂಧವೇ ಇಲ್ಲದಿದ್ದರೂ ಅಕ್ಟೋಬರ್ ಧಾಳಿಯ ಬಳಿಕ ಪಶ್ಚಿಮ ದಂಡೆಯಲ್ಲಿ ಅವ್ಯಾಹತವಾಗಿ ಇಸ್ರೇ‍ಲ್ ಧಾಳಿ ನಡೆದಿದೆ. 200 ಕ್ಕೂ ಅಧಿಕ ಮಂದಿ ಸತ್ತಿದ್ದಾರೆ. ಸಾವಿರಾರು ಮಂದಿಯನ್ನು ಬಂಧಿಸಿದೆ. ಹಿಂಸೆ ಈಗಲೂ ಅಲ್ಲಿ ಮುಂದುವರಿದಿದೆ.

ಇಸ್ರೇಲ್ ನ ಈ ಕೃತ್ಯವನ್ನು ಅದರ ಗೆಳೆಯ ಅಮೆರಿಕಾ ಕೂಡಾ ಖಂಡಿಸಿದೆ. ಇದೇ ಹಿನ್ನೆಲೆಯಲ್ಲಿ ನವೆಂಬರ್ 9 ರಂದು ವಿಶ್ವಸಂಸ್ಥೆಯಲ್ಲಿ ನಿರ್ಣಯವೊಂದು ಮಂಡನೆಯಾಯಿತು. ಆ ನಿರ್ಣಯ ಆಕ್ರಮಿತ ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲ್ ವಸತಿಗಳ ವಿರುದ್ಧವಾಗಿತ್ತು. ಅಲ್ಲಿ ಇಸ್ರೇಲ್ ನ ಕಾನೂನು ಬಾಹಿರ ಚಟುವಟಿಕೆಗಳನ್ನು ಖಂಡಿಸಲಾಗಿತ್ತು. ಈ ನಿರ್ಣಯದ ಪರ 145 ಮತ ಚಲಾವಣೆಯಾದರೆ ವಿರುದ್ಧವಾಗಿ 7 ಮತ ಚಲಾವಣೆಗೊಂಡವು (ಯುಎಸ್, ಕೆನಡಾ, ಹಂಗರಿ, ಇಸ್ರೇಲ್, ಮಾರ್ಶಲ್ ಐಲೆಂಡ್ಸ್, ಮೈಕ್ರೋನೇಸಿಯಾ ಮತ್ತು ನೌರು), 18 ದೇಶಗಳು ಗೈರು ಹಾಜರಾದವು.  ನಿರ್ಣಯದ ಪರ, ಅಂದರೆ ಇಸ್ರೇಲ್ ವಿರುದ್ಧ ಮತ ಚಲಾಯಿಸಿದ 145 ದೇಶಗಳಲ್ಲಿ ಭಾರತ ಕೂಡಾ ಸೇರಿತ್ತು.

ಸ್ಥಿರತೆ ಇಲ್ಲದ ವಿದೇಶಾಂಗ ನೀತಿ

ಹೀಗೆ, ಇತ್ತೀಚಿನ ದಿನಗಳಲ್ಲಿ ಭಾರತದ ವಿದೇಶಾಂಗ ನೀತಿಯಲ್ಲಿ ಒಂದು ಸ್ಥಿರತೆ ಇಲ್ಲದಂತಾಗಿದೆ, ಅನೇಕ ಬಾರಿ ಅದು ಹಾಸ್ಯಾಸ್ಪದವೂ ಆಗಿದೆ (ಈಗಾಗಲೇ ನೆರೆಯ ಪಾಕಿಸ್ತಾನ, ನೇಪಾಳ, ಭೂತಾನ್, ಬಾಂಗ್ಲಾ, ಶ್ರೀಲಂಕಾ, ಮಾಲ್ದೀವ್ಸ್ ಭಾರತದ ಸ್ನೇಹದಿಂದ ದೂರ ಸರಿದಿವೆ).

ಭಾರತ ಮತ್ತು ಇಸ್ರೆಲ್‌ ಪ್ರಧಾನಿ

ಇಸ್ರೇಲನ್ನು ಅತಿಯಾಗಿ ಓಲೈಸ ಹೊರಡುವುದರಿಂದ ಅರಬ್ ಮತ್ತು ಮುಸ್ಲಿಂ ಜಗತ್ತಿನಲ್ಲಿ ಭಾರತಕ್ಕಾಗುವ ನಷ್ಟದ ಬಗ್ಗೆ ಮೋದಿ ಸರಕಾರ ಯೋಚಿಸಿದಂತೆ ಕಾಣುತ್ತಿಲ್ಲ. ದೇಶದೊಳಗಿನ ವಿಚಾರಗಳು ಏನೇ ಇರಲಿ, ಜಾಗತಿಕ ವಿಷಯ ಬಂದಾಗ ಅಲ್ಲಿ ಒಂದು ಸ್ಥಿರತೆ ಇರಬೇಕು. ಇಲ್ಲವಾದರೆ ದೇಶ ಅನುಭವಿಸುವ ದೂರಗಾಮಿ ಪರಿಣಾಮ  ಭೀಕರವಾದುದು.

ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ಟೈನ್ ವಿಷಯದಲ್ಲಿ ಎಡಬಿಡಂಗಿ ನಿಲುವು, ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲ್ ಮಾಡುತ್ತಿರುವ ನರಮೇಧವನ್ನು ಸ್ಪಷ್ಟ ಪದಗಳಲ್ಲಿ ಖಂಡಿಸದಿರುವುದು, ಪ್ಯಾಲೆಸ್ಟೈನ್ ನಲ್ಲಿ ತೊಂದರೆಗೊಳಗಾದವರಿಗೆ ನೆರವು ಒದಗಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿಲ್ಲದಿರುವುದು ಇವೆಲ್ಲ ಭಾರತದ ಜಾಗತಿಕ ನಾಯಕತ್ವ ಇಮೇಜಿಗೆ ಧಕ್ಕೆ ತಂದಿರುವುದು ಖಂಡಿತಾ. ಭಾರತದಲ್ಲಿರುವ ಪ್ಯಾಲೆಸ್ಟೈನ್ ರಾಯಭಾರಿ ಕೂಡಾ ‘ಭಾರತದಿಂದ ನಮಗೆ ಯಾವ ವಿಶೇಷ ನಿರೀಕ್ಷೆಯೂ ಇಲ್ಲವಾಗಿದೆ. ನಾನು ಅನೇಕ ಬಾರಿ ಭಾರತ ಸರಕಾರಕ್ಕೆ ಕರೆ ಮಾಡಿ ನೆರವಿಗೆ ಆಗ್ರಹಿಸಿದೆ, ಆದರೆ ಅಲ್ಲಿಂದ ಯಾವ ಉತ್ತರವೂ ಬಂದಿಲ್ಲ’ ಎಂದು ನಿರಾಶೆಯ ಮಾತುಗಳನ್ನು ಆಡಿದ್ದಾರೆ.

ಜಾಗತಿಕ ನಾಯಕನಾಗುವುದು ಬಿಡಿ, ತನ್ನ ‘ದೊಡ್ಡಣ್ಣ ನಿಲುವು’ಗಳಿಂದಾಗಿ ಈಗ ಭಾರತವು ತನ್ನ ನೆರೆಹೊರೆಯಲ್ಲಿಯೂ ನಾಯಕನಾಗಿ ಉಳಿದಿಲ್ಲ.

ಶ್ರೀನಿವಾಸ ಕಾರ್ಕಳ

ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಇದನ್ನೂ ಓದಿ-ಉಕ್ರೇನ್, ಪ್ಯಾಲೆಸ್ಟೈನ್: ಪಶ್ಚಿಮದ ಇಬ್ಬಗೆಯ ನೀತಿ

Related Articles

ಇತ್ತೀಚಿನ ಸುದ್ದಿಗಳು