ಪಟ್ನಾ: ನೀಟ್ ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ಬಳಿಕ ತೀವ್ರ ಮುನ್ನೆಚ್ಚರಿಕೆ ಹಾಗೂ ಕಟ್ಟುನಿಟ್ಟಿನ ಭದ್ರತೆಯ ನಡುವೆ ನಡೆಸಲಾದ ನೀಟ್ ಮರುಪರೀಕ್ಷೆಯಲ್ಲೂ ಅಕ್ರಮಗಳು ಮುಂದುವರಿದಿದ್ದು, ಕೇಂದ್ರ ಸರ್ಕಾರದ ನಿರ್ವಹಣಾ ವೈಫಲ್ಯ ಮತ್ತೊಮ್ಮೆ ಬಹಿರಂಗವಾಗಿದೆ. ನಿಜವಾದ ಅಭ್ಯರ್ಥಿಗಳ ಬದಲಿಗೆ ಬೇರೆ ವ್ಯಕ್ತಿಗಳನ್ನು ಕೂರಿಸಿ ಪರೀಕ್ಷೆ ಬರೆಸಲು ಯತ್ನಿಸುತ್ತಿದ್ದ ‘ಮುನ್ನಾಭಾಯಿ’ ಶೈಲಿಯ ದೊಡ್ಡ ಜಾಲವನ್ನು ಬಿಹಾರ ಪೊಲೀಸರು ಭೇದಿಸಿದ್ದು, ಒಟ್ಟು 24 ಜನರನ್ನು ಬಂಧಿಸಿದ್ದಾರೆ.
ಬಿಹಾರದ ಲಖಿಸರಾಯ್‌ನಲ್ಲಿ ನಡೆದ ಈ ಹಗರಣವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅಸಲಿ ಅಭ್ಯರ್ಥಿಗಳ ಪರವಾಗಿ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆಯಲು ಈ ಗ್ಯಾಂಗ್ ‘ಸಾಲ್ವರ್ಸ್’ (ಬದಲಿಯಾಗಿ ಪರೀಕ್ಷೆ ಬರೆಯುವವರು) ಎಂಬ ತಂಡವನ್ನು ಸಿದ್ಧಪಡಿಸಿತ್ತು. ಬಂಧಿತ 24 ಆರೋಪಿಗಳ ಪೈಕಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಬಯೋಮೆಟ್ರಿಕ್ ಕಂಪನಿಯೊಂದರ ಉದ್ಯೋಗಿಗಳು ಸೇರಿದ್ದಾರೆ. ಈ ಹಗರಣದ ಪ್ರಮುಖ ಸೂತ್ರಧಾರ ಎನ್ನಲಾದ ಅರ್ಪಿತ್ ರಾಜ್ ಎಂಬಾತನನ್ನು ಈ ಹಿಂದೆ 2024ರ ನೀಟ್-ಪಿಜಿ ಸೋರಿಕೆ ಪ್ರಕರಣದಲ್ಲೂ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು ಎಂಬುದು ಗಮನಾರ್ಹ.
ಹಸನ್‌ಪುರ ಹೈಸ್ಕೂಲ್ ಪರೀಕ್ಷಾ ಕೇಂದ್ರಕ್ಕೆ ಮಯಾಂಕ್ ಕಶ್ಯಪ್ ಎಂಬ ಆರೋಪಿಯು ಬಯೋಮೆಟ್ರಿಕ್ ಕಂಪನಿಯ ಉದ್ಯೋಗಿಯ ಸೋಗಿನಲ್ಲಿ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರಿಗೆ ಅನುಮಾನ ಬಂದು ವಶಕ್ಕೆ ಪಡೆದಿದ್ದರು. ಆತನ ವಿಚಾರಣೆಯ ಬಳಿಕ ಈ ಇಡೀ ಜಾಲ ಬಯಲಿಗೆ ಬಂದಿದೆ. ನಂತರ ಲಖಿಸರಾಯ್‌ನ ಎರಡು ಪರೀಕ್ಷಾ ಕೇಂದ್ರಗಳಲ್ಲಿ ದಾಳಿ ನಡೆಸಿದ ಪೊಲೀಸರು ಏಳು ಜನ ನಕಲಿ ಅಭ್ಯರ್ಥಿಗಳು ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಿದರು. ಇವರಲ್ಲಿ ಅಸಲಿ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ ಮೆಡಿಕಲ್ ವಿದ್ಯಾರ್ಥಿಗಳೂ ಸೇರಿದ್ದಾರೆ.
ವೈದ್ಯಕೀಯ ಪ್ರವೇಶ ಪರೀಕ್ಷೆಗಳು ನಡೆಯುವ ಸಮಯದಲ್ಲಿ ಮೆಡಿಕಲ್ ವಿದ್ಯಾರ್ಥಿಗಳು ಕಾಲೇಜು ಬಿಟ್ಟು ಹೊರಹೋಗಬಾರದು ಎಂಬ ನಿಯಮಗಳಿದ್ದರೂ, ಅದನ್ನು ಉಲ್ಲಂಘಿಸಿ ಇಂತಹ ದಂಧೆಯಲ್ಲಿ ತೊಡಗಿರುವುದು ಈಗ ತೀವ್ರ ಕಳವಳಕ್ಕೆ ಕಾರಣವಾಗಿದೆ.
