Home ದೇಶ ಪಪ್ಪು ಯಾದವ್ ಸುದ್ದಿಗೋಷ್ಠಿಯಲ್ಲಿ ರಾದ್ಧಾಂತ, ನೂಕಾಟ: ಕೊಲೆ ಸಂಚಿನ ಆರೋಪ ಹೊರಿಸಿದ ಸಂಸದ

ಪಪ್ಪು ಯಾದವ್ ಸುದ್ದಿಗೋಷ್ಠಿಯಲ್ಲಿ ರಾದ್ಧಾಂತ, ನೂಕಾಟ: ಕೊಲೆ ಸಂಚಿನ ಆರೋಪ ಹೊರಿಸಿದ ಸಂಸದ

0

ಬಿಹಾರದ ಪೂರ್ಣಿಯಾ ಸಂಸದ ಪಪ್ಪು ಯಾದವ್ ಅವರು ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ದೊಡ್ಡ ಮಟ್ಟದ ರಾದ್ಧಾಂತ ಹಾಗೂ ನೂಕಾಟ-ತಳ್ಳಾಟ ನಡೆದ ಘಟನೆ ಬೆಳಕಿಗೆ ಬಂದಿದೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂಸದ ಪಪ್ಪು ಯಾದವ್, ಕಾವಿ ಧರಿಸುವ ವಿವಾದದ ಕುರಿತು ಮಾತನಾಡುತ್ತಿದ್ದಾಗ ಈ ಗಲಾಟೆ ಆರಂಭವಾಯಿತು. ಆ ವೇಳೆ ವ್ಯಕ್ತಿಯೊಬ್ಬ, “ನೀವು ಕಾವಿ ಉಟ್ಟುಕೊಂಡು ಭಗವಾನ್ ರಾಮನ ಚಿತ್ರವನ್ನು ಅಯೋಧ್ಯೆಯ ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಅವರ ಮುಂದೆ ಇಡುತ್ತಿದ್ದೀರಲ್ಲ, ಇದು ಎಂತಹ ಗೌರವ?” ಎಂದು ಪ್ರಶ್ನಿಸಿದನು.

ಇದರಿಂದ ಕೆರಳಿದ ಪಪ್ಪು ಯಾದವ್ ಬೆಂಬಲಿಗರು ಆ ವ್ಯಕ್ತಿಯನ್ನು ಹಿಡಿದು ಆತನ ಮೇಲೆ ಹಲ್ಲೆ ನಡೆಸಲು ಶುರುಮಾಡಿದರು. ಪಿಟಿಐ ವರದಿಯ ಪ್ರಕಾರ, ಈ ಘರ್ಷಣೆಯ ವೇಳೆ ದಾಳಿಕೋರರಲ್ಲಿ ಒಬ್ಬನ ಬಳಿ ಇದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.

“ನನ್ನ ಮೇಲೆ ಚಾಕುವಿನಿಂದ ದಾಳಿ ಮಾಡಲು ಬಂದಿದ್ದ”: ಪಪ್ಪು ಯಾದವ್

ಸುದ್ದಿಗೋಷ್ಠಿಯ ವೇಳೆ ನಡೆದ ಘರ್ಷಣೆಗೆ ಪ್ರತಿಕ್ರಿಯಿಸಿದ ಪಕ್ಷೇತರ ಸಂಸದ, “ನನ್ನ ಮನೆಯೊಳಗೆ ನುಗ್ಗಿ ಯಾರಾದರೂ ನನ್ನ ಮೇಲೆ ದಾಳಿ ಮಾಡಲು ಸಾಧ್ಯವೇ?… ಆತ ನನ್ನ ಮೇಲೆ ಚಾಕುವಿನಿಂದ ದಾಳಿ ನಡೆಸಲು ಬಂದಿದ್ದ,” ಎಂದಿದ್ದಾರೆ. ಆ ವೇಳೆ ಅವರ ಜೊತೆಯಲ್ಲಿದ್ದ ವ್ಯಕ್ತಿಯೊಬ್ಬರು, “ಆ ವ್ಯಕ್ತಿ ದಾಳಿ ನಡೆಸುತ್ತಿದ್ದರೂ ದೆಹಲಿ ಕಾವಲುಪಡೆ ಆತನನ್ನು ಬಚಾವ್ ಮಾಡುತ್ತಿತ್ತು,” ಎಂದು ದೂರಿದ್ದಾರೆ.

ಮುಂದುವರಿದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಪಪ್ಪು ಯಾದವ್, “ನಾವು ಈಗಾಗಲೇ ಹಲವು ದೂರುಗಳನ್ನು (ಎಫ್‌ಐಆರ್) ದಾಖಲಿಸಿದ್ದೇವೆ. ನನ್ನ ನ್ಯಾಯವಾದಿಯೂ ಇಲ್ಲಿದ್ದಾರೆ. ನಾವಂತೂ ಹೆದರುವುದಿಲ್ಲ, ಯಾರಿಗೆ ಕೊಲ್ಲಬೇಕು ಅನಿಸುತ್ತದೋ ಕೊಲ್ಲಲಿ, ನಾವು ಬೆದರುವುದಿಲ್ಲ,” ಎಂದರು. ಈ ವೇಳೆ ಪಪ್ಪು ಯಾದವ್ ಕೈಯಲ್ಲಿ ಚಾಕುವೊಂದನ್ನು ಹಿಡಿದುಕೊಂಡಿರುವುದು ಕಂಡುಬಂತು. “ಪಪ್ಪು ಯಾದವ್ ಮಾಡಿದ ತಪ್ಪಾದರೂ ಏನು, ತಪ್ಪು ಮಾಡಿದ್ದು ಗಿರಿ ಮತ್ತು ಚಂಪತ್ ರಾಯ್. ನಮ್ಮ ತಪ್ಪೇನಿದೆ, ನಾವೇನು ಕಳ್ಳತನ ಮಾಡಿದ್ದೇವೆಯೇ? ಈ ಜನ ಶಂಕರಚಾರ್ಯರ ಮೇಲೆ ಹಲ್ಲೆ ನಡೆಸಿದರೇ? ಈ ಜನ ಕಳ್ಳತನ ಮಾಡಿದ್ದಾರೆ. ಇವರು ಇನ್ನೂರು ಕಿಲೋ ಚಿನ್ನವನ್ನು ಕದ್ದಿದ್ದಾರೆ,” ಎಂದು ವಾಗ್ದಾಳಿ ನಡೆಸಿದರು.

ದೆಹಲಿ ಪೊಲೀಸರ ಸಂಚು ಬಯಲಾಗಿದೆ: ಪಪ್ಪು ಯಾದವ್ ನ್ಯಾಯವಾದಿ

ಪಪ್ಪು ಯಾದವ್ ಪರ ನ್ಯಾಯವಾದಿ ಮಾತನಾಡಿ, “ಇದು ದೆಹಲಿ ಪೊಲೀಸರ ನಿಷ್ಕ್ರಿಯತೆಯನ್ನು ಎತ್ತಿತೋರಿಸುತ್ತಿದೆ. ಆಡಳಿತ ಪಕ್ಷದ ಜೊತೆ ಸೇರಿಕೊಂಡು, ಆರು ಬಾರಿ ಆಯ್ಕೆಯಾದ ಸಂಸದರ ವಿರುದ್ಧ ಸಂಚು ರೂಪಿಸಲು ಅವರು ಹೇಗೆ ನೆರವಾಗುತ್ತಿದ್ದಾರೆ ಎಂಬುದನ್ನು ದೆಹಲಿ ಕಾವಲುಪಡೆಯ ಈ ನಡೆ ಬಯಲುಮಾಡಿದೆ. ಕಳೆದ ಎರಡು ದಿನಗಳಿಂದ ಆರು ಬಾರಿ ಆಯ್ಕೆಯಾದ ಸಂಸದರ ವಿರುದ್ಧ ನಡೆಯುತ್ತಿರುವ ಸಂಚಿನ ಕುರಿತು ನಾವು ಸತತವಾಗಿ ಮಾಹಿತಿ ನೀಡುತ್ತಾ ದೂರುಗಳನ್ನು ದಾಖಲಿಸುತ್ತಿದ್ದೇವೆ,” ಎಂದರು.

ಮುಂದುವರಿದು, “ಅವರ ತಲೆ ಕಡಿದು ತಂದವರಿಗೆ 51 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಜಾಲತಾಣಗಳಲ್ಲಿ ಬಹಿರಂಗವಾಗಿ ಬರೆಯಲಾಗುತ್ತಿದೆ. ದೆಹಲಿ ಪೊಲೀಸರಿಗೆ ಹಲವು ದೂರುಗಳನ್ನು ನೀಡಿದರೂ ಮತ್ತು ಪೂರ್ಣ ಕಾವಲಿನ ಭರವಸೆ ಸಿಕ್ಕಿದ್ದರೂ, ಇಷ್ಟೊಂದು ದೊಡ್ಡ ಗುಂಪನ್ನು ನಿಭಾಯಿಸಲು ಅವರು ಕೇವಲ ಮೂರ್ನಾಲ್ಕು ಕಾವಲುಗಾರರನ್ನು ಮಾತ್ರ ನಿಯೋಜಿಸಿದ್ದರು. ಅವರಲ್ಲಿ ಒಬ್ಬರು ಮಾತ್ರ ಇನ್ಸ್‌ಪೆಕ್ಟರ್ ಹಂತದ ಅಧಿಕಾರಿಯಾಗಿದ್ದರು. ಸುದ್ದಿಗಾರರು ಇದ್ದಾಗ್ಯೂ ಈ ಜನ ಚಾಕುಗಳನ್ನು ಬೀಸಿ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಇದನ್ನು ಪೂರ್ಣವಾಗಿ ಖಂಡಿಸಲೇಬೇಕು, ಇದು ಅಮಾನವೀಯ. ನಾವು ಮುಂದೆ ಕಾನೂನು ಹೋರಾಟ ನಡೆಸಲಿದ್ದೇವೆ,” ಎಂದರು.

ಪಪ್ಪು ಯಾದವ್ ಅವರ ಬೆಂಬಲಿಗರೊಬ್ಬರು ಮಾತನಾಡಿ, “ಪಪ್ಪು ಯಾದವ್ ಸತತವಾಗಿ ಜನಸೇವೆ ಮಾಡುತ್ತಿದ್ದಾರೆ. ಆ ದಾಳಿಕೋರ ಹಿಂದಿನಿಂದ ಚಾಕು ತೆಗೆಯುತ್ತಿದ್ದಂತೆಯೇ ನಾವೆಲ್ಲರೂ ಸೇರಿ ತಕ್ಷಣ ಆತನನ್ನು ಹಿಡಿದು ಹತೋಟಿಗೆ ತಂದೆವು. ಆ ಹೊತ್ತಿನಲ್ಲಿ ನಾವೇನಾದರೂ ಆತನನ್ನು ತಡೆಯದೇ ಇದ್ದಿದ್ದರೆ, ಇವತ್ತು ನಮ್ಮ ಪಪ್ಪು-ಜಿ ನಮ್ಮಿಡನೆ ಇರುತ್ತಿರಲಿಲ್ಲವೇನೋ,” ಎಂದಿದ್ದಾರೆ.

ಘಟನೆಯ ವೇಳೆ ಅಲ್ಲೇ ಇದ್ದ ಮತ್ತೊಬ್ಬ ಬೆಂಬಲಿಗ, “ಅವರು ಕುಳಿತು ಸುದ್ದಿಗೋಷ್ಠಿ ನಡೆಸುತ್ತಿದ್ದರು, ಅಷ್ಟರಲ್ಲಿ ತಟ್ಟನೆ ಮೂರ್ನಾಲ್ಕು ಜನ ಅಲ್ಲಿಗೆ ಬಂದರು. ಅವರು ತಕ್ಷಣ ಚಾಕುವಿನಿಂದ ದಾಳಿ ಮಾಡಿದರು. ಚಾಕು ಬೀಸಿದ ತಕ್ಷಣ ನಾನು ಯಾವುದೇ ಆಲೋಚನೆ ಮಾಡದೆ ನನ್ನ ಕೈಯನ್ನು ಅಡ್ಡ ಇಟ್ಟೆ, ಚಾಕುವಿನ ಅಂಚು ನನ್ನ ಬೆರಳಿಗೆ ತಾಗಿತು. ಅವರು ದಾಳಿ ಮಾಡುತ್ತಲೇ ಇದ್ದರು. ಜನ ಒಬ್ಬರ ಮೇಲೊಬ್ಬರು ಬಿದ್ದು ಉಂಟಾದ ತಳ್ಳಾಟದಿಂದ ನಾನು ತೀವ್ರ ಸುಸ್ತಾಗಿದ್ದೇನೆ,” ಎಂದು ಆತಂಕ ತೋಡಿಕೊಂಡಿದ್ದಾರೆ.

You cannot copy content of this page

Exit mobile version