ಪಪುವಾ: ದ್ವೀಪ ರಾಷ್ಟ್ರವಾದ ಪಪುವಾ ನ್ಯೂ ಗಿನಿಯಾದ ಎತ್ತರದ ಪ್ರದೇಶಗಳಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಗುಡ್ಡ ಕುಸಿತದಿಂದಾಗಿ 21 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿವೆ.
ಈ ಘಟನೆ ಶುಕ್ರವಾರ ತಡರಾತ್ರಿ ಎರಡು ಗಂಟೆ ಸುಮಾರಿಗೆ ಸಂಭವಿಸಿದೆ. ಎಂಗಾ ಪ್ರಾಂತ್ಯದ ಕುಕಾಸ್ ಗ್ರಾಮದಲ್ಲಿ ಜನರು ಮಲಗಿದ್ದಾಗ ಗುಡ್ಡಗಳು ಕುಸಿದು ಮನೆಗಳು ನೆಲಸಮವಾಗಿವೆ. ಈ ಅವಶೇಷಗಳ ಅಡಿಯಲ್ಲೇ ಜನರು ಸಮಾಧಿ ಆಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ABC) ವರದಿ ಮಾಡಿದೆ.
ಎಂಗಾ ಗವರ್ನರ್ ಪೀಟರ್ ಇಪಾತಾಸ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಈ ಘಟನೆಯಲ್ಲಿ 30 ಸ್ಥಳೀಯರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ ಮತ್ತು ಈಗಾಗಲೇ 18 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದಿದ್ದಾರೆ. ಆದರೆ, ಪೊಲೀಸರು ಮಾತ್ರ ಸಾವಿನ ಸಂಖ್ಯೆ 21 ಎಂದು ಮಾತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಹಾಯ ನೀಡುವ ಕುರಿತು ಪಪುವಾ ನ್ಯೂ ಗಿನಿಯಾಗೆ ವಿಶ್ವಸಂಸ್ಥೆಯ ಮಾನವೀಯ ಸಲಹೆಗಾರರಾಗಿರುವ ಮೇಟ್ ಬಾಗೋಸ್ಸಿ ಅವರು ತಕ್ಷಣ ಪ್ರತಿಕ್ರಿಯಿಸಲಿಲ್ಲ.
ಕಳೆದ ವರ್ಷ ಮೇ ತಿಂಗಳಲ್ಲಿ ಎಂಗಾದಲ್ಲಿ ಗುಡ್ಡ ಕುಸಿದಾಗ ಸುಮಾರು 670 ಗ್ರಾಮಸ್ಥರು ಮೃತಪಟ್ಟಿದ್ದರು ಎಂದು ವಿಶ್ವಸಂಸ್ಥೆ ಅಂದಾಜಿಸಿತ್ತು. ಆದರೆ, ಪಪುವಾ ನ್ಯೂ ಗಿನಿಯಾ ಸರ್ಕಾರವು ಎರಡು ಸಾವಿರಕ್ಕೂ ಹೆಚ್ಚು ಜನರು ಅವಶೇಷಗಳ ಅಡಿಯಲ್ಲಿ ಸಮಾಧಿ ಆಗಿದ್ದಾರೆ ಎಂದು ಹೇಳಿತ್ತು.
