ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದ್ದ ‘ಬೃಹತ್ ಪೋಷಕ-ಶಿಕ್ಷಕರ ಸಭೆ’ಗೆ ಅಭೂತಪೂರ್ವ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇನ್ನು ಮುಂದೆ ಪ್ರತಿ ಎರಡು ತಿಂಗಳಿಗೊಮ್ಮೆ ಇಂತಹ ಸಭೆಗಳನ್ನು ನಡೆಸುವುದನ್ನು ಕಡ್ಡಾಯಗೊಳಿಸಿದೆ.
ಈ ಕುರಿತು ಇಲಾಖೆಯು ಈಗಾಗಲೇ ಅಧಿಕೃತ ಸುತ್ತೋಲೆಯನ್ನು ಹೊರಡಿಸಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಅನುಸರಿಸಬೇಕಾದ ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಮಕ್ಕಳ ಶೈಕ್ಷಣಿಕ ಸಾಧನೆ, ಪಠ್ಯೇತರ ಚಟುವಟಿಕೆಗಳಲ್ಲಿನ ಪ್ರಗತಿ ಮತ್ತು ಸುಧಾರಿಸಿಕೊಳ್ಳಬೇಕಾದ ಅಂಶಗಳ ಬಗ್ಗೆ ಪೋಷಕರಿಗೆ ನಿಯಮಿತವಾಗಿ ಮಾಹಿತಿ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಮಗುವಿನ ಪ್ರಗತಿಯಲ್ಲಿ ಪೋಷಕರ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಡುವುದು ಮತ್ತು ಪೋಷಕರು ಹಾಗೂ ಶಿಕ್ಷಕರ ನಡುವೆ ಸೌಹಾರ್ದಯುತ ಸಂಬಂಧವನ್ನು ಬೆಳೆಸುವ ಮೂಲಕ ಉತ್ತಮ ಕಲಿಕಾ ಪರಿಸರವನ್ನು ನಿರ್ಮಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಪೋಷಕ-ಶಿಕ್ಷಕರ ಸಭೆಯು ಸಾಮಾನ್ಯವಾಗಿದ್ದರೂ, ಸರ್ಕಾರಿ ಶಾಲೆಗಳಲ್ಲಿ ಈ ಪರಿಕಲ್ಪನೆಯು ಹೊಸದಾಗಿದ್ದು, ಗ್ರಾಮೀಣ ಭಾಗದ ಪೋಷಕರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುತ್ತಿದೆ. ಒಂದು ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಐದು ಸಭೆಗಳನ್ನು ನಡೆಸಲು ಇಲಾಖೆಯು ಯೋಜಿಸಿದೆ.
ಇತ್ತೀಚೆಗೆ ನಡೆದ ಮೆಗಾ ಸಭೆಯ ಸಂದರ್ಭದಲ್ಲಿ ಶಾಲೆಗೆ ಬಂದ ಪೋಷಕರಿಗೂ ಮಧ್ಯಾಹ್ನದ ಬಿಸಿಯೂಟವನ್ನು ನೀಡಲು ಸರ್ಕಾರ ಸೂಚಿಸಿತ್ತು. ಈ ಕ್ರಮವು ಪೋಷಕರನ್ನು ಶಾಲೆಗೆ ಆಕರ್ಷಿಸಲು ಸಹಕಾರಿಯಾಯಿತು ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ನಡೆಯಲಿರುವ ದ್ವೈಮಾಸಿಕ ಸಭೆಗಳಲ್ಲಿ ಪೋಷಕರಿಗೆ ಬಿಸಿಯೂಟದ ವ್ಯವಸ್ಥೆಯನ್ನು ಮುಂದುವರಿಸುವ ಕುರಿತು ಶಿಕ್ಷಣ ಇಲಾಖೆಯು ಇನ್ನೂ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.
