Tuesday, November 5, 2024

ಸತ್ಯ | ನ್ಯಾಯ |ಧರ್ಮ

ನವೆಂಬರ್ 25ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: ಕೇಂದ್ರ‌ ಘೋಷಣೆ

ಸಂಸತ್ತಿನ ಚಳಿಗಾಲದ ಅಧಿವೇಶನದ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ. ನವೆಂಬರ್ 25ರಿಂದ ಅಧಿವೇಶನ ಪ್ರಾರಂಭವಾಗಲಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಗಳವಾರ ಹೇಳಿದ್ದಾರೆ.

ಡಿಸೆಂಬರ್ 20ರವರೆಗೆ ಈ ಅಧಿವೇಶನ ನಡೆಯಲಿವೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳನ್ನು ಕರೆಯುವ ಸರ್ಕಾರದ ಪ್ರಸ್ತಾವನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ.

ಅದೇ ರೀತಿ ನವೆಂಬರ್ 26ಕ್ಕೆ ಭಾರತೀಯ ಸಂವಿಧಾನ ಅಂಗೀಕಾರಗೊಂಡು 75 ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ಅಂದು ಸಂಸತ್ತಿನ ವಿಶೇಷ ಜಂಟಿ ಅಧಿವೇಶನ ನಡೆಯಲಿದೆ ಎಂದು ಕಿರಣ್ ರಿಜುಜು ತಿಳಿಸಿದ್ದಾರೆ. ನವೆಂಬರ್ 26, 1949ರಂದು, ಸಂವಿಧಾನ ಸಭೆಯು ಹೊಸದಿಲ್ಲಿಯ ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ನಮ್ಮ ಸಂವಿಧಾನವನ್ನು ಅಂಗೀಕರಿಸಲಾಯಿತು, ಅಲ್ಲಿ ಉಭಯ ಸದನಗಳ ಸದಸ್ಯರು ಸಭೆ ಸೇರಲಿದ್ದಾರೆ. ಇಲ್ಲಿಯವರೆಗೆ ನವೆಂಬರ್ ತಿಂಗಳ 26ನೇ ದಿನವನ್ನು ರಾಷ್ಟ್ರೀಯ ನ್ಯಾಯ ದಿನವನ್ನಾಗಿ ಆಚರಿಸಲಾಗುತ್ತಿತ್ತು. ಆದರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತಿಯನ್ನು ಆಚರಿಸಲು ಕೇಂದ್ರ ಸರಕಾರ 2015ರಿಂದ ನವೆಂಬರ್ 26ರಂದು ಸಂವಿಧಾನ ದಿನವನ್ನಾಗಿ ಘೋಷಿಸಿದೆ.

ಇನ್ನೊಂದೆಡೆ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಏಕಕಾಲಿಕ ಚುನಾವಣೆ, ವಕ್ಫ್ ತಿದ್ದುಪಡಿ ವಿಧೇಯಕ ಇತ್ಯಾದಿಗಳು ಸದನದ ಮುಂದೆ ಬರಲಿವೆ. ಈ ಸಭೆಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗಾಗಲೇ ಘೋಷಿಸಿದ್ದಾರೆ. ಗುರುಗಾಂವ್ ಚುನಾವಣಾ ಪ್ರಚಾರದಲ್ಲೂ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.

ಮತ್ತೊಂದೆಡೆ, ವಿರೋಧ ಪಕ್ಷಗಳು ಏಕಕಾಲದ ಚುನಾವಣೆ ಮತ್ತು ವಕ್ಫ್ ತಿದ್ದುಪಡಿ ಮಸೂದೆ-2024 ಅನ್ನು ಬಲವಾಗಿ ವಿರೋಧಿಸುತ್ತಿವೆ. ಇದರೊಂದಿಗೆ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಮತ್ತು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಸದಸ್ಯರ ನಡುವೆ ಬಿಸಿ ಬಿಸಿ ಚರ್ಚೆ ನಡೆಯುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page